ಭಾರತ-ಇಸ್ರೇಲ್ ಸಂಬಂಧ ಇನ್ನೂ ದೃಢ: ನೆತನ್ಯಾಹು ಭೇಟಿ
Team Udayavani, Jan 16, 2018, 9:27 AM IST
ಪ್ರಸ್ತುತ ಇಸ್ರೇಲ್ ಮತ್ತು ಭಾರತದ ನಡುವಿನ ವಾಣಿಜ್ಯ ವ್ಯವಹಾರ 4 ಬಿಲಿಯ ಡಾಲರ್ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ವರ್ಧಿಸಲಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತ ಭೇಟಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನೊಂದು ಮಜಲಿಗೊಯ್ದಿದೆ. ಭಾರತಕ್ಕಾಗಮಿಸಿದ ಇಸ್ರೇಲ್‌ನ ಎರಡನೇ ಪ್ರಧಾನಿ ನೆತನ್ಯಾಹು. ಅದರಲ್ಲೂ ಬರೋಬ್ಬರಿ 15 ವರ್ಷಗಳ ಬಳಿಕ ಇಸ್ರೇಲ್ ಪ್ರಧಾನಿಯೊಬ್ಬರು ಭಾರತಕ್ಕಾಗಮಿಸಿದ್ದಾರೆ. 2003ರಲ್ಲಿ ಏರಿಯಲ್ ಶರೋನ್ ಬಂದಿರುವುದು ಬಿಟ್ಟರೆ ಬೇರೆ ಯಾರೂ ಆಗಮಿಸಿರಲಿಲ್ಲ. 2003ರಿಂದ 2018ರ ನಡುವೆ ಭಾರತದ ರಾಜಕೀಯದಲ್ಲಿ ಹಲವಾರು ಮಾರ್ಪಾಡುಗಳಾಗಿವೆ. ಅಂತೆಯೇ ಜಾಗತಿಕ ಮಟ್ಟದಲ್ಲಿ ಭಾರತವೀಗ ನಿರ್ಣಾಯಕ ಶಕ್ತಿ ಎಂದೆನಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಭಾರತ ನಡುವಿನ ಹೆಚ್ಚುತ್ತಿರುವ ಮಧುರ ಬಾಂಧವ್ಯವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಇದು ಎರಡು ದೇಶಗಳು ವ್ಯಾಪಾರ, ವ್ಯವಹಾರ ಅಭಿವೃದ್ಧಿಗಾಗಿ ನಡೆಸುತ್ತಿರುವ ಕೊಡು ಕೊಳ್ಳುವಿಕೆ ಅಲ್ಲ ಬದಲಾಗಿ ಇದಕ್ಕಿಂತ ಮಿಗಿಲಾದ ಅಜೆಂಡಾ ಇದೆ. ವಿಶ್ವಸಂಸ್ಥೆಯ ಮಹಾಧೀವೇಶನದಲ್ಲಿ ಜೆರುಸಲೇಮನ್ನು ಇಸ್ರೇಲ್‌ನ ರಾಜಧಾನಿ ಎಂದು ಪರಿಗಣಿಸುವ ನಿರ್ಣಯದ ವಿರುದ್ಧ ಭಾರತ ಮತ ಹಾಕಿದೆ. ಇದರ ಹೊರತಾಗಿಯೂ ನೆತನ್ಯಾಹು ಭಾರೀ ದೊಡ್ಡ ನಿಯೋಗದೊಂದಿಗೆ ಭಾರತಕ್ಕಾಗಮಿಸಿರುವುದು ಗಮನಾರ್ಹ ಅಂಶ. ಪ್ರಧಾನಿ ಮೋದಿ ಮತ್ತು ನೆತನ್ಯಾಹು ನಡುವೆ ಇರುವ ರಾಜತಾಂತ್ರಿಕತೆಗಿಂತ ಮಿಗಿಲಾಗಿರುವ ಆತ್ಮೀಯ ಸಂಬಂಧ ಉಭಯ ದೇಶಗಳನ್ನು ಬಿಗಿಯಾಗಿ ಬೆಸೆದಿದೆ.
ಇಸ್ರೇಲ್ ಜತೆಗಿನ ಬಾಂಧವ್ಯ ವೃದ್ಧಿಯಲ್ಲಿ ದೃಢ ಹೆಜ್ಜೆಯಿಟ್ಟದ್ದು ಮೋದಿ. ಕಳೆದ ಜುಲೈಯಲ್ಲಿ ಮೋದಿ ಕೈಗೊಂಡ ಇಸ್ರೇಲ್ ಪ್ರವಾಸ ಐತಿಹಾಸಿಕ ವಾಗಿತ್ತು. ಸ್ವಾತಂತ್ರ್ಯ ಸಿಕ್ಕಿದ 70 ವರ್ಷಗಳಲ್ಲಿ ಯಾವ ಪ್ರಧಾನಿಯೂ ಇಡದ ದಿಟ್ಟ ನಡೆಯೊಂದನ್ನು ಈ ಮೂಲಕ ಮೋದಿ ಇಟ್ಟಿದ್ದರು. ಹೀಗಾಗಿ ಈ ಭೇಟಿ ಜಾಗತಿಕವಾಗಿ ಗಮನ ಸೆಳೆದಿತ್ತು. ಈ ಸಂದರ್ಭದಲ್ಲಿ ಇಸ್ರೇಲ್ ಮೋದಿ ಯನ್ನು ಸ್ವಾಗತಿಸಿದ ರೀತಿಯೇ ಭಾರತದ ಜತೆಗೆ ಬಾಂಧವ್ಯ ಹೊಂದಲು ಆ ಪುಟ್ಟ ರಾಷ್ಟ್ರ ಎಷ್ಟು ಕಾತರದಿಂದಿದೆ ಎನ್ನುವುದನ್ನು ಸೂಚಿ ಸಿತ್ತು. ಇದರ ಮುಂದುವರಿದ ಭಾಗವಾಗಿ ನೆತನ್ಯಾಹು ಭಾರತಕ್ಕಾಗಮಿಸಿ ದ್ದಾರೆ. ಮೋದಿಗೆ ಇಸ್ರೇಲ್ ನೀಡಿದಂತಹ ಸ್ವಾಗತವನ್ನೇ ಭಾರತ ಸರಕಾರ ನೆತನ್ಯಾಹುಗೆ ನೀಡಿದೆ. ಈ ಭೇಟಿಯ ಸಂದರ್ಭದಲ್ಲಿ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಸರಕಾರದ ವಿದೇಶಾಂಗ ನೀತಿಯ ಕುರಿತು ಅಥವ ಇತರ ಯಾವುದೇ ಮುಖ್ಯ ವಿಚಾರದ ಕುರಿತು ಟೀಕೆಗಳನ್ನು ಮಾಡಿದ್ದರೆ ಒಪ್ಪಿಕೊಳ್ಳ ಬಹುದಿತ್ತು. ಆದರೆ ಮೋದಿಯ ಅಪ್ಪುಗೆ ರಾಜತಾಂತ್ರಿಕೆಯನ್ನು ಬಾಲಿಶವಾಗಿ ಟೀಕಿ ಸುವ ಮೂಲಕ ತನ್ನ ಬೌದ್ಧಿಕ ಮಿತಿ ಇಷ್ಟೆ ಎಂಬುದನ್ನು ಜಾಹೀರುಪಡಿಸಿಕೊಂಡಿದೆ.
ಪ್ರಸ್ತುತ ಭಾರತ ಮತ್ತು ಇಸ್ರೇಲ್ ನಡುವೆ ಕೃಷಿ, ಜಲ, ರಕ್ಷಣೆ, ಆರೋಗ್ಯ, ನವ್ಯೋ ದ್ಯಮ, ಬಾಹ್ಯಾಕಾಶ ಮತ್ತು ಶಿಕ್ಷಣ ಕ್ಷೇತ್ರ ಗಳಲ್ಲಿ ಸಹಭಾಗಿತ್ವವಿದೆ. ಈ ಕ್ಷೇತ್ರಗಳಲ್ಲಿ ಭಾರತದ ಅನುಭವ ಮತ್ತು ಇಸ್ರೇಲ್‌ನ ತಂತ್ರಜ್ಞಾನ ಜತೆಯಾದರೆ ಅದ್ಭುತ ಪ್ರತಿಫಲ ಸಿಗಲಿದೆ. ಮೋದಿಯ ಭೇಟಿಯ ಸಂದರ್ಭದಲ್ಲೇ ಕೃಷಿ, ಜಲ ಮತ್ತು ನವ್ಯೋ ದ್ಯಮ ಕ್ಷೇತ್ರಗಳಲ್ಲಿ ತಾನು ಸಾಧಿಸಿರುವ ಪರಿಣತಿಯನ್ನು ಹಂಚಿಕೊ ಳ್ಳಲು ಇಸ್ರೇಲ್ ಒಪ್ಪಿತ್ತು. ಆ ಸಾಲಿಗೆ ಈಗ ಇನ್ನೂ ಹಲವು ಕ್ಷೇತ್ರಗಳನ್ನು ಸೇರಿಸಿಕೊಳ್ಳಲಾಗಿದೆ. ಅದರಲ್ಲೂ ಕೃಷಿ ಮತ್ತು ಜಲ ಸಂರಕ್ಷಣೆಯಲ್ಲಿ ಇಸ್ರೇಲ್ ಹೊಂದಿರುವ ಪರಿಣತಿಯನ್ನು ನೋಡಿ ಜಗತ್ತೇ ನಿಬ್ಬೆರಗಾಗಿದೆ. ಈ ತಂತ್ರಜ್ಞಾನದ ಪ್ರಯೋಜನ ಪಡೆದುಕೊಂಡು ಕೃಷಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ ಕೃಷಿಯನ್ನು ಲಾಭದಾಯಕ ಉದ್ಯಮ ಮಾಡುವುದು ಮೋದಿಯ ಗುರಿ. ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಕುಡಿಯಲು ಬಳಸುವ ತಂತ್ರಜ್ಞಾನವೂ ಭಾರತಕ್ಕೆ ಲಭ್ಯವಾಗಲಿದೆ.
25 ವರ್ಷದ ಹಿಂದೆ ಇಸ್ರೇಲ್ ಮತ್ತು ಭಾರತದ ನಡುವೆ ಇದ್ದ ವಾಣಿಜ್ಯ ವ್ಯವಹಾರ ಬರೀ 200 ಮಿಲಿಯ ಡಾಲರ್ ಆಗಿತ್ತು. ಪ್ರಸ್ತುತ ಅದು 4 ಬಿಲಿಯ ಡಾಲರ್ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ವರ್ಧಿಸಲಿದೆ. ಆದರೆ ಬಳಕೆದಾರರ ಸರಕುಗಳ ಬೃಹತ್ ಮಾರುಕಟ್ಟೆಯಾಗಿರುವ ಭಾರತ ಇತರ ದೇಶಗಳ ಜತೆಗೆ ಹೊಂದಿರುವ ವಾಣಿಜ್ಯ ವ್ಯವಹಾರಕ್ಕೆ ಹೋಲಿಸಿದರೆ ಇಸ್ರೇಲ್ ಜತೆಗಿನ ವ್ಯವಹಾರ ಕಡಿಮೆ ಎಂದೇ ಹೇಳಬ ಹುದು. ವಾಣಿಜ್ಯ ವ್ಯವಹಾರವನ್ನು ಹೆಚ್ಚಿಸುವ ಇರಾದೆ ಎರಡೂ ದೇಶಗಳಿ ಗಿದ್ದು, ಹೀಗಾಗಿಯೇ ನೆತನ್ಯಾಹು ತನ್ನ ಜತೆಗೆ 102 ಕಂಪೆನಿಗಳ ಮುಖ್ಯಸ್ಥ ರನ್ನು ಕರೆದುಕೊಂಡು ಬಂದಿದ್ದಾರೆ. ವಾಣಿಜ್ಯ, ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಮಾತ್ರವಲ್ಲದೆ ಪರಸ್ಪರ ಸಾಂಸ್ಕೃತಿಕ ವಿನಿಮಯವೂ ಈ ಭೇಟಿಯ ಕಾರ್ಯಸೂಚಿಯಲ್ಲಿದೆ. ಇಸ್ರೇಲ್ ಶತಮಾನಗಳ ಹಿಂದಿನ ಮೂಲ ಸಂಸ್ಕೃತಿಯನ್ನು ಜತನದಿಂದ ಕಾಪಿಟ್ಟುಕೊಂಡಿರುವ ಯೆಹೂದಿ ರಾಷ್ಟ್ರ. ಅವರ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾಳಜಿ ಬದುಕಿನ ಜತೆಗೆ ಅನನ್ಯವಾಗಿ ಬೆರೆತುಕೊಂಡಿದೆ. ಎರಡೂ ದೇಶಗಳ ಸಂಸ್ಕೃತಿಯಲ್ಲಿ ಹಲವು ಸಾದೃಶ್ಯ ಗಳಿದ್ದು, ಇದು ಕೂಡ ಉಭಯ ದೇಶಗಳ ನಡುವಿನ ಸಹಜ ಸಂಬಂಧಕ್ಕೆ ಕಾರಣವಾಗಿದೆ ಎನ್ನಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.