ಕಸಾಪ ಜಿಲ್ಲಾಧ್ಯಕ್ಷರ ಏಕಪಕ್ಷೀಯ ನಡೆಗೆ ಅಸಮಾಧಾನ!
Team Udayavani, Jan 16, 2018, 3:42 PM IST
ಮಾನ್ವಿ: ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಜ.19, 20ರಂದು ನಡೆಯಲಿರುವ 9ನೇ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳ ಆಯ್ಕೆ, ಸಮ್ಮೇಳನಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಕಸಾಪ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಜಿಲ್ಲಾಧ್ಯಕ್ಷರ ವಿರುದ್ಧ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ್ ಬೆಟ್ಟದೂರು ಅವರ ಏಕಪಕ್ಷೀಯ ನಡೆಯಿಂದಾಗಿ ಆಮಂತ್ರಣ ಪತ್ರ ವಿತರಣೆ ಹಾಗೂ ಪ್ರಚಾರದ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದ ಸಾಹಿತ್ಯಿಕ ವಲಯದಲ್ಲೇ ಅಪಸ್ವರ ಕೇಳಿಬರುತ್ತಿದೆ. ಆರಂಭದಿಂದಲೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ್ ಬೆಟ್ಟದೂರು ಅವರ ಏಕಪಕ್ಷೀಯ ನಡೆಗೆ ವಿರೋಧ ವ್ಯಕ್ತವಾಗುತ್ತಲೇ ಇದೆ. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮ ಆಯ್ಕೆ ಮಾಡುವಾಗ, ಸಮ್ಮೇಳನಾಧ್ಯಕ್ಷರನ್ನಾಗಿ ಕಥೆಗಾರ ಡಾ| ರಾಜಶೇಖರ ನೀರಮಾನ್ವಿ ಅವರನ್ನು ಆಯ್ಕೆ ಮಾಡುವಾಗ, ಸಮಿತಿಗಳ ರಚನೆ ಮಾಡುವಾಗಲೂ ಜಿಲ್ಲಾಧ್ಯಕ್ಷರು ಯಾವುದೇ ಪೂರ್ವಭಾವಿ ಸಭೆಗಳಲ್ಲಿ ಚರ್ಚಿಸದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಸಾಹಿತ್ಯಾಸಕ್ತರು ಹಾಗು ಆಜೀವ ಸದಸ್ಯರ ವಿರೋಧಕ್ಕೆ ಕಾರಣವಾಗಿದೆ.
ಪೋತ್ನಾಳ ಮತ್ತು ಮಾನ್ವಿಯ ಪ್ರಾದೇಶಿಕ ಕಸಾಪ ಆಜೀವ ಸದಸ್ಯರಲ್ಲಿ ಅನೇಕರಿಗೆ ಇದುವರೆಗೂ ಆಮಂತ್ರಣ ಪತ್ರಿಕೆಗಳು ತಲುಪಿಲ್ಲ. ಜಿಲ್ಲಾಧ್ಯಕ್ಷರು ಕೇವಲ ತಮ್ಮ ಹಿಂಬಾಲಕರಿಗೆ ಆದ್ಯತೆ ನೀಡುತ್ತಿದ್ದಾರೆ. ಅಲ್ಲದೆ ಸಾಹಿತಿಗಳು, ಸಾಹಿತ್ಯಾಸಕ್ತರನ್ನು ಸಹ ಯಾವುದೆ ಸಭೆಗೆ ಕರೆದಿಲ್ಲ. ಕಳೆದ ಎರಡು ದಿನಗಳಿಂದ ಹೆಚ್ಚುತ್ತಿರುವ ವಿರೋಧಕ್ಕೆ ಎಚ್ಚೆತ್ತುಕೊಂಡಿರುವ ಜಿಲ್ಲಾಧ್ಯಕ್ಷರು ಆಗಿರುವ ತಪ್ಪುಗಳಿಗೆ ತೇಪೆ ಹಚ್ಚಲು ಮುಂದಾಗುತ್ತಿದ್ದಾರೆನ್ನಲಾಗಿದೆ.
ಪ್ರಚಾರ ಕೊರತೆ: ಸಮ್ಮೇಳನಕ್ಕೆ ಪ್ರಚಾರದ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ರಾಯಚೂರು ಜಿಲ್ಲಾ ಸಮ್ಮೇಳನವಾಗಿದ್ದರೂ, ಕೇವಲ ಮಾನ್ವಿ ಹಾಗೂ ಪೋತ್ನಾಳಗೆ ಮಾತ್ರ ಸೀಮಿತವಾಗಿದೆ. ಗೋಡೆ ಬರಹ, ಭಿತ್ತಿಪತ್ರಗಳು ಎಲ್ಲೆಡೆ ವಿತರಣೆಯಾಗಿಲ್ಲ. ಜಿಲ್ಲೆಯ ಇತರೆ ತಾಲೂಕುಗಳಾದ ಸಿಂಧನೂರು, ಲಿಂಗಸುಗೂರು, ದೇವದುರ್ಗ ತಾಲೂಕುಗಳಲ್ಲಿ ಸಮ್ಮೇಳನದ ಕುರಿತು ಯಾವುದೆ ಪ್ರಚಾರ ಕೈಗೊಂಡಿಲ್ಲ. ಕಾಟಾಚಾರಕ್ಕೆ ಎಂಬಂತೆ ಕಸಾಪ ತಾಲೂಕು ಘಟಕಗಳಿಗೆ ಮಾಹಿತಿ ನೀಡಲಾಗಿದೆಯಷ್ಟೆ. ಅಲ್ಲದೆ ತಾಲೂಕಿನ ಗ್ರಾಮೀಣ ಭಾಗದಲ್ಲಿನ ಜನಕ್ಕೆ ಪೋತ್ನಾಳದಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವ ಬಗ್ಗೆ ಮಾಹಿತಿ ಇಲ್ಲ.
ಜಿಲ್ಲಾ ಸಮ್ಮೇಳನ ನಮ್ಮ ತಾಲೂಕಿನಲ್ಲಿ ನಡೆಯುತ್ತಿದೆ ಎನ್ನುವ ಕಾರಣಕ್ಕೆ ಅಡ್ಡಿಪಡಿಸದೆ ಸುಮ್ಮನಿದ್ದೇವೆ. ನಮ್ಮ ತಾಲೂಕಿಗೆ ಕೆಟ್ಟ ಹೆಸರು ಬರಬಾರದು ಎಂದು ಕಾರ್ಯಕ್ರಮಕ್ಕೆ ದುಡಿಯುತ್ತಿದ್ದೇವೆ ಎನ್ನುತ್ತಿದ್ದಾರೆ ಅಸಮಾಧಾನಗೊಂಡವರು. ಇನ್ನಾದರೂ ಜಿಲ್ಲಾಧ್ಯಕ್ಷರು ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಳ್ಳುವ ಕಾರ್ಯವಾಗಬೇಕಿದೆ.
ಸಮ್ಮೇಳನ ಕುಟುಂಬಕ್ಕೆ ಸೀಮಿತ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ್‌ರ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಡಾ| ಬಸವಪ್ರಭು ಪಾಟೀಲ್‌ರ ತಂದೆ ಚೆನ್ನಬಸಪ್ಪ ಬೆಟ್ಟದೂರು ಅವರ ಹೆಸರನ್ನು ವೇದಿಕೆಗೆ ಇಡಲಾಗಿದೆ. ದೊಡ್ಡಪ್ಪನವರಾದ ಶಂಕರಗೌಡ ಬೆಟ್ಟದೂರು ಅವರ ಹೆಸರನ್ನು ದ್ವಾರಕ್ಕೆ ಇಡಲಾಗಿದೆ. ಸಹೋದರರಾದ ಚಾಮರಸ ಪಾಟೀಲ್ ಬೆಟ್ಟದೂರು ಹಾಗೂ ಅಲ್ಲಮಪ್ರಭು ಬೆಟ್ಟೂದೂರು ಅವರು ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಲಿದ್ದಾರೆ. ಇವರು ಕಳೆದ ವರ್ಷ ರಾಯಚೂರಿನಲ್ಲಿ ನಡೆದ ಅ.ಭಾ.ಕ.ಸಾಹಿತ್ಯ ಸಮ್ಮೇಳನದಲ್ಲಿಯೂ ಭಾಗವಹಿಸಿದ್ದರು. ಶರಣಬಸವ ಬೆಟ್ಟದೂರು ಅವರನ್ನು ಜಿಲ್ಲಾ ಘಟಕದಲ್ಲಿ ಗೌರವ ಸಂಘಟನಾ ಕಾರ್ಯದರ್ಶಿ ಎಂದು ನೇಮಿಸಲಾಗಿದೆ. ಇದಲ್ಲಕ್ಕಿಂತ ಹೆಚ್ಚಾಗಿ ಸಮ್ಮೇಳನಾಧ್ಯಕ್ಷರಾಗಿರುವ ಡಾ| ರಾಜಶೇಖರ ನೀರಮಾನ್ವಿ ಕೂಡ ಸಹ ಹತ್ತಿರದ ಸಂಬಂಧಿಯಾಗಿದ್ದಾರೆ. ಇವರ ಬದಲಾಗಿ ಇತರರಿಗೆ ಅವಕಾಶ ನೀಡಬೇಕಾಗಿತ್ತು ಎಂಬುದು ಸಾರ್ವಜನಿಕರು ಮತ್ತು ಸಾಹಿತ್ಯಿಕ ವಲಯದಲ್ಲೇ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸಮ್ಮೇಳನವು ಏಕಪಕ್ಷೀಯವಾಗಿ ನಡೆಯುತ್ತಿದೆ. ಕುಟುಂಬಕ್ಕೆ ಸೀಮಿತವಾಗಿದೆ. ಅಲ್ಲದೆ ಕಸಾಪಕ್ಕೆ ದುಡಿದ ಜಿಲ್ಲಾಧ್ಯಕ್ಷರಾಗಿದ್ದ ಪಂಪಯ್ಯ ಶೆಟ್ಟಿ, ಎಸ್. ಶರಣೇಗೌಡ, ಅಯ್ಯಪ್ಪ ತುಕ್ಕಾಯಿಯಂಥ ಹಿರಿಯರನ್ನು ಕಡೆಗಣಿಸಲಾಗಿದೆ. ಸೌಜನ್ಯಕ್ಕೂ ಇವರನ್ನು ಪರಿಗಣಿಸಿಲ್ಲ. ಕಸಾಪ ತಾಲೂಕು ಅಧ್ಯಕ್ಷರಾಗಿದ್ದ ದಿ| ಹನುಮನಗೌಡ ನಲ್ಗಂದಿನ್ನಿಯವರ ಹೆಸರನ್ನು ದ್ವಾರ ಬಾಗಿಲಿಗೆ ಇಡಬಹುದಿತ್ತು.
ತಾಯಪ್ಪ ಬಿ. ಹೊಸೂರು, ಕಸಾಪ ಮಾಜಿ ತಾಲೂಕು ಅಧ್ಯಕ್ಷರು, ಮಾನ್ವಿ
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಏಕಪಕ್ಷೀಯ ನಡೆ ಬೇಸರ ತರಿಸಿದೆ. ಕನ್ನಡಪರ ಸಂಘಟನೆಗಳನ್ನು ನಿರ್ಲಕ್ಷಿಸಲಾಗಿದೆ. ಸಮ್ಮೇಳನ ಸ್ಥಳ ನಿಗದಿ, ಸಮ್ಮೇಳನಾಧ್ಯಕ್ಷರ ಆಯ್ಕೆ, ಪೂರ್ವಭಾವಿ ಸಭೆಗಳ ಕುರಿತು ಯಾವುದೇ ಸಂಘಟನೆಗಳಿಗೆ ಮಾಹಿತಿ ನೀಡಿಲ್ಲ. ಬೆರಳೆಣಿಕೆಯಷ್ಟು ಹಿಂಬಾಲಕರಿಗೆ ಕಾರ್ಯಕ್ರಮ ಸೀಮಿತವಾಗಿದೆ.
ಡಿ.ಬಸನಗೌಡ, ತಾಲೂಕು ಅಧ್ಯಕ್ಷರು, ಕರವೇ ನಾರಾಯಣಗೌಡ ಬಣ
ರವಿ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.