12 ವರ್ಷಗಳ ಭಗೀರಥ ಯತ್ನ: ನೀರಿನ ಸಮಸ್ಯೆ ಮಾಯ
Team Udayavani, Jan 17, 2018, 4:43 PM IST
ಪುಣಚ: ಕೆರೆ ಬಾವಿಯ ನೀರು ಎಪ್ರಿಲ್, ಮೇ ತಿಂಗಳಲ್ಲಿ ತೋಟಕ್ಕೆ ಸಾಲದು. ಕೊಳವೆ ಬಾವಿ ಕೊರೆದರೂ ಅಂತರ್ಜಲದ ಸುಳಿವಿಲ್ಲ. ಧೂಳು ಹಾರುತ್ತದಷ್ಟೇ. ಆರ್ಥಿಕ ನಷ್ಟ, ಸಂಕಷ್ಟ. ತಮ್ಮ ಈ ಸಮಸ್ಯೆಗೆ ಪುಣಚ-ಇರ್ದೆ-ಬಲ್ನಾಡು ಗ್ರಾಮಗಳ ಕೃಷಿಕರೇ ಪರಿಹಾರ ಕಂಡುಕೊಂಡಿದ್ದಾರೆ. ನದಿಗೆ ತಾತ್ಕಾಲಿಕ ಅಣೆಕಟ್ಟು ನಿರ್ಮಿಸಿ, ತಮ್ಮ 100 ಎಕರೆ ಕೃಷಿ ಭೂಮಿಯನ್ನು ಸಮೃದ್ಧವಾಗಿಸಿಕೊಂಡಿದ್ದಾರೆ.
ನದಿಗೆ ದಶಕಗಳಿಂದ ತಾತ್ಕಾಲಿಕ ಅಣೆಕಟ್ಟು ನಿರ್ಮಿಸಲಾರಂಭಿಸಿದ ಸ್ಥಳೀಯರು, ಒಗ್ಗಟ್ಟಿನ ಶ್ರಮದ ಫಲವಾಗಿ ಪುಣಚ-ಇರ್ದೆ-ಬಲ್ನಾಡು ಗ್ರಾಮಗಳ ಸಂಗಮ ಸ್ಥಳದಲ್ಲಿ ನೀರಿನ ಸಮಸ್ಯೆ ದೂರ ಮಾಡಿಕೊಂಡಿದ್ದಾರೆ.
ಹಿಂದೆ ಕೆರೆಯೇ ಇತ್ತು
ಇರ್ದೆ ಪರಿಸರದ ಕೃಷಿಕರು ಹಿಂದಿನಿಂದಲೂ ಬಾವಿ ಹಾಗೂ ಕೆರೆಯ ನೀರು ಬಳಸಿಕೊಂಡು ಕೃಷಿ ಮಾಡುತ್ತಿದ್ದರು. ಆದರೆ ಬರಬರುತ್ತ ಕೆರೆಯ ನೀರು ಕೃಷಿಗೆ ಸಾಕಾಗಾದೆ ಕೊಳವೆ ಬಾವಿಯನ್ನು ಕೊರೆಸುವಂತೆ ಮಾಡಿತು. ಆದರೆ ಇದು
ಹೆಚ್ಚಿನ ಕಡೆಗಳಲ್ಲಿ ಯಶಸ್ವಿಯಾಗಲಿಲ್ಲ. ತೋಟಕ್ಕೆ ನೀರಿಲ್ಲದೆ ಕೃಷಿ ನಾಶವಾಗುವ ಭೀತಿ ಆವರಿಸಿತ್ತು.
12 ವರ್ಷಗಳ ಶ್ರಮ
ಮೂರು ಗ್ರಾಮಗಳ 15ಕ್ಕೂ ಅಧಿಕ ಕೃಷಿಕರು ಸೇರಿ 12 ವರ್ಷಗಳ ಭಗೀರಥ ಯತ್ನದಿಂದ ಅಣೆಕಟ್ಟು ನಿರ್ಮಿಸಿದ್ದರಿಂದ
ಸುಮಾರು 100 ಎಕ್ರೆಗೂ ಅಧಿಕ ಭೂಮಿಯಲ್ಲಿ ಇಂದು ನೀರಿನ ಸಮಸ್ಯೆ ನಿವಾರಣೆಯಾಗಿದೆ. ಇರ್ದೆ – ಪುಣಚ – ಬಲ್ನಾಡು ಮೂರು ಗ್ರಾಮಗಳಿಗೂ ದರ್ಬೆ ನದಿಯೇ ನೀರಿನ ಮೂಲವಾಗಿದೆ. ನೀರಿನ ಹರಿವನ್ನು ಗಮನಿಸಿಕೊಂಡು ಬೃಹತ್ ಅಣೆಕಟ್ಟು ನಿರ್ಮಿಸಿ, ಸಮುದ್ರ ಸೇರುವ ನೀರನ್ನು ಭೂಮಿಗೆ ಇಂಗಿಸುವ ಇಲ್ಲಿನ ರೈತರಿಗೆ ಮಳೆಗಾಲದ ವರೆಗಿನ ನೀರಿನ ಬೇಡಿಕೆಯನ್ನು ಪೂರೈಸುತ್ತಿದೆ.
ಪ್ಲಾಸ್ಟಿಕ್ ಬಳಕೆ
ಸುಮಾರು 170 ಅಡಿ ಅಗಲದ ನದಿಯಲ್ಲಿ ಹಿಟಾಚಿ ಮೂಲಕ ಮರಳನ್ನು ರಾಶಿ ಮಾಡಿ 10 ಅಡಿ ಎತ್ತರದ ಅಣೆಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಅಡಿಪಾಯ ಸುಮಾರು 15 ಅಡಿ ದಪ್ಪವಿದ್ದರೆ, ಮೇಲ್ಭಾಗಕ್ಕೆ ಬಂದಾಗ 2ರಿಂದ 3 ಅಡಿ ದಪ್ಪವಾಗಿರುತ್ತದೆ. ಮರಳನ್ನು ಮೇಲಿನಿಂದ ಸುರಿದಾಗ ಹರಡಿ ನಿಂತುಕೊಳ್ಳುತ್ತದೆ. ಇದಕ್ಕೆ 18 ಅಡಿ ಅಗಲ, 200 ಅಡಿ ಉದ್ದದ ಪ್ಲಾಸ್ಟಿಕನ್ನು ನೀರಿನ ಹರಿವಿನ ಭಾಗಕ್ಕೆ ಇಳಿಬಿಡಲಾಗುತ್ತದೆ. ನೀರನ್ನು ಪ್ಲಾಸ್ಟಿಕ್ ತಡೆದು ನಿಲ್ಲಿಸಿದರೆ, ಪ್ಲಾಸ್ಟಿಕ್‌ಗೆ ಮರಳಿನ ದಿಬ್ಬ ಬಲ ನೀಡುತ್ತದೆ.
ಪ್ರಗತಿಪರ ಕೃಷಿಕ ಶ್ರೀಹರಿ ದರ್ಭೆ ಅವರ ಪ್ರಕಾರ 35 ವರ್ಷಗಳ ಹಿಂದೆ ಈ ಭಾಗದಲ್ಲಿ ಮಣ್ಣು ಹಾಗೂ ಮರಳನ್ನು ಬಳಸಿಕೊಂಡು ಅಣೆಕಟ್ಟೆ ನಿರ್ಮಿಸಲಾಗುತ್ತಿತ್ತು. ಬಳಿಕ ಕಾರ್ಮಿಕರ ಕೊರತೆಯಿಂದ ಅದು ಸ್ಥಗಿತ ವಾಯಿತು. ಈಗ ಮತ್ತೆ ಅಂತರ್ಜಲದ ಸಮಸ್ಯೆಯನ್ನು ಮನಗಂಡು ಯಂತ್ರಗಳನ್ನು ಬಳಸಿ, ಅಣೆಕಟ್ಟೆ ನಿರ್ಮಿಸಲಾಗುತ್ತಿದೆ.
ಮೂರು ಗ್ರಾಮಗಳ ಕೃಷಿಕರಾದ ಶ್ರೀಹರಿ ದರ್ಭೆ, ಮಹಾಬಲ ಭಟ್ ದರ್ಭೆ, ಚಂದ್ರಶೇಖರ ಭಟ್ ದರ್ಭೆ, ಮಹೇಶ್
ಡಿ.ಕೆ., ವೆಂಕಟ್ರಮಣ ಭಟ್ ನಡುತುಂಡು, ಗಿರೀಶ್ ಭಟ್ ತೋಟದಮೂಲೆ, ಶಿವರಾಮ ಶಾಸ್ತ್ರಿ, ಮಹಮ್ಮದ್, ಬಪ್ಪ ಕುಂಞಿ, ಕೃಷ್ಣ ಭಟ್, ಗೋಪಾಲ ಶೆಟ್ಟಿ, ಶಂಭು ಶರ್ಮ ಮತ್ತಿತರರು ಒಗ್ಗಟ್ಟಾಗಿ ಅಣೆಕಟ್ಟೆ ನಿರ್ಮಿಸುತ್ತಿದ್ದಾರೆ.
ಅಣೆಕಟ್ಟು ಅನಿವಾರ್ಯ
ಹೊಳೆಯ ನೀರೇ ಕೃಷಿಗೆ ಮೂಲವಾಗಿದ್ದು, ಮಾರ್ಚ್ ಬಳಿಕ ಹೊಳೆಯಲ್ಲಿ ನೀರಿಲ್ಲ. ಅಣೆಕಟ್ಟೆ ನಿರ್ಮಿಸಿದಲ್ಲಿ ಮಳೆಗಾಲದವರೆಗೆ ನೀರು ಇರುತ್ತದೆ. ಇಲ್ಲಿ ಅಣೆಕಟ್ಟು ಅನಿವಾರ್ಯವಾಗಿದೆ. ಸುಮಾರು 2 ಕಿ.ಮೀ. ದೂರದ ವರೆಗೆ ಸರಾಸರಿ 5 ಅಡಿ ಎತ್ತರ 150 ಅಡಿ ಅಗಲಕ್ಕೆ ನೀರು ಶೇಖರವಾಗುತ್ತದೆ.
–ಗಿರೀಶ್ ಭಟ್ ತೋಟದಮೂಲೆ,
ಕೃಷಿಕರು
ಸರಕಾರದ ಅಣೆಕಟ್ಟಿಗೆ ಇನ್ನೂ ಹಲಗೆ ಬಂದಿಲ್ಲ!
ಬಲ್ನಾಡು ಹಾಗೂ ಇರ್ದೆ ಗ್ರಾಮಗಳಿಗೆ ಹೊಂದಿಕೊಂಡು ರಸ್ತೆ ಸಂಪರ್ಕ ಹಾಗೂ ಅಣೆಕಟ್ಟೆಯನ್ನು ಸರಕಾರದ ಅನುದಾನದಿಂದಲೂ ನಿರ್ಮಿಸಲಾಗಿದೆ. ಆದರೆ ಇದುವರೆಗೆ ಗ್ರಾಮಸ್ಥರಿಗೆ ಹಲಗೆ ಪೂರೈಕೆ ಮಾಡಿಲ್ಲ. ಇದರಿಂದ ಅಣೆಕಟ್ಟೆ ಇದ್ದೂ ಇಲ್ಲದಂತಾಗಿದೆ. ಮಾತುಕತೆ ಮೂಲಕ ಎಲ್ಲರೂ ಒಟ್ಟಾಗಿ ಕಾಮಗಾರಿ ಆರಂಭಿಸುತ್ತೇವೆ. ಈ ವರ್ಷ ಸುಮಾರು 5,200 ರೂ.ನ ಟರ್ಪಾಲ್ ಬೇಕಾಗಿದ್ದು, ಹಿಟಾಚಿ ಕೆಲಸಕ್ಕೆ 19 ಸಾವಿರ ರೂ. ಖರ್ಚಾಗಿದೆ. ಅಣೆಕಟ್ಟೆಯ ಒಂದು ಭಾಗದಲ್ಲಿ ಮಾದು (ಕಣಿವೆ) ನಿರ್ಮಿಸಿ ಹೆಚ್ಚುವರಿ ನೀರು ಹೋಗುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅಣೆಕಟ್ಟೆಯ ಮೇಲೆ ಓಡಾಡಲು ಮತ್ತು ನೀರಿನಲ್ಲಿ ಈಜಾಡಲು ಅವಕಾಶ ನೀಡುವುದಿಲ್ಲ.
– ಅರವಿಂದ ದರ್ಬೆ,ಕೃಷಿಕ
ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.