ದೇವರ ಆರಾಧನೆಯಿಂದ ಲೋಕಕಲ್ಯಾಣ: ಪೇಜಾವರ ಶ್ರೀ
Team Udayavani, Jan 19, 2018, 10:21 AM IST
ಉಡುಪಿ: ಧುರ್ಯೋಧನ ಶ್ರೀಕೃಷ್ಣನನ್ನು ಕಟ್ಟಿಹಾಕಲು ಯತ್ನಿಸಿದ, ಆಗಲಿಲ್ಲ. ಯಶೋದೆ ಕಟ್ಟಲು ಯತ್ನಿಸಿದಾಗ ಎರಡು ಅಂಗುಲ ಹಗ್ಗ ಕಡಿಮೆಯಾಯಿತು. ಆಚಾರ್ಯ ಮಧ್ವರ ಭಕ್ತಿಗೆ ಒಲಿದ ಕಾರಣ ಶ್ರೀಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಸಾಧ್ಯವಾಯಿತು. ದೇವರ ಆರಾಧನೆಯಿಂದ ಲೋಕಕಲ್ಯಾಣ ಸಾಧ್ಯವಾಗುತ್ತದೆ ಎಂದು ಪರ್ಯಾಯ ಪೀಠದಿಂದ ನಿರ್ಗಮಿಸಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.
ಪಲಿಮಾರು ಶ್ರೀಗಳ ಅಭಿನಂದನೆಗೆ ಪ್ರತಿಕ್ರಿಯೆ ನೀಡಿದ ಅವರು, “ಯತಿಕುಲ ಚಕ್ರವರ್ತಿ’ ಬಿರುದು ಅಗತ್ಯವಿಲ್ಲ. ಇದು ಪುರುಷೋತ್ತಮ ಎಂಬ ಹೆಸರು ಇಟ್ಟುಕೊಳ್ಳುವಂತೆ. ವಾಸ್ತವದಲ್ಲಿ ಪುರುಷರಲ್ಲಿ ಉತ್ತಮ ಆಗಿರುತ್ತೇವೋ? ಕೃಷ್ಣನ ಕಾರುಣ್ಯದಿಂದ ಐದು ಪರ್ಯಾಯಗಳಲ್ಲಿ ಪೂಜೆ ಮಾಡುವ ಅವಕಾಶ ಸಿಕ್ಕಿತು ಅಷ್ಟೆ ಎಂದರು.
ಜ್ಞಾನ, ಭಕ್ತಿ, ವೈರಾಗ್ಯದ ತಿರುವು ಮುರುವು!
ಯಶೋದೆಗೆ ಕೃಷ್ಣನ ಮೇಲೆ ಪ್ರೇಮವಿತ್ತು. ಜ್ಞಾನವೂ ಇರಲಿಲ್ಲ, ವೈರಾಗ್ಯವೂ ಇರಲಿಲ್ಲ. ಹೀಗಾಗಿ ಕೃಷ್ಣನನ್ನು ಕಟ್ಟುವಾಗ ಹಗ್ಗ ಎರಡು ಅಂಗುಲ ಕಡಿಮೆಯಾಯಿತು. ವಾದಿರಾಜರು ಇದನ್ನು “ನಮಗೂ ಜ್ಞಾನ, ಭಕ್ತಿ, ವೈರಾಗ್ಯವಿದೆ. ಆದರೆ ಅದಲು ಬದಲು ಆಗಿದೆ. ದ್ರವ್ಯ ಸಂಪಾದನೆಯಲ್ಲಿ ಜ್ಞಾನ, ಸಂಸಾರದಲ್ಲಿ ಭಕ್ತಿ, ದೇವರಲ್ಲಿ ವೈರಾಗ್ಯವಿದೆ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಪ್ರಪಂಚದ ಮೇಲೆ ವೈರಾಗ್ಯ, ದೇವರಲ್ಲಿ ಭಕ್ತಿ ಮತ್ತು ಜ್ಞಾನ ಇರಬೇಕಾಗಿದೆ.
ಪೇಜಾವರ ಶ್ರೀಗಳು
ದೇವಸ್ಥಾನಗಳಿಂದ ಗೌರವ
ಉಡುಪಿ: ತಿರುಪತಿ ತಿರುಮಲ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಲ್, ಜಂಟಿ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್. ಶ್ರೀನಿವಾಸರಾಜು ಅವರು ಅರ್ಚಕ ವರ್ಗದವರೊಂದಿಗೆ ಪ್ರಸಾದ, ಶಾಲುಗಳನ್ನು ಪರ್ಯಾಯ ಸ್ವಾಮೀಜಿಯವರಿಗೆ ಸಮರ್ಪಿಸಿ ದರು. ಅದೇ ರೀತಿ ಮಂತ್ರಾಲಯ, ಧರ್ಮಸ್ಥಳ, ಮುಳುಬಾಗಿಲು, ಭದ್ರಾಚಲ, ಶ್ರೀಮುಷ್ಣಂ, ಕಾಂಚಿ ವರದರಾಜಸ್ವಾಮಿ ದೇವಸ್ಥಾನ, ಅಹೋಬಲ ದೇವಸ್ಥಾನ ಹೀಗೆ ವಿವಿಧ ದೇವಸ್ಥಾನಗಳಿಂದ ಪ್ರಸಾದವನ್ನು ಸಮರ್ಪಿಸಲಾಯಿತು.
ದರ್ಬಾರ್ ಸಮ್ಮಾನಿತರು
ಕಟೀಲಿನ ಕೆ. ವಾಸುದೇವ ಆಸ್ರಣ್ಣ, ಮೂಡಬಿದಿರೆಯ ಡಾ| ಮೋಹನ ಆಳ್ವ, ನಿಟ್ಟೆ ವಿನಯ ಹೆಗ್ಡೆ, ಉದ್ಯಮಿಗಳಾದ ನೇರಂಬಳ್ಳಿ ರಾಘವೇಂದ್ರ ರಾವ್, ಕಿಶೋರ್ ಆಳ್ವ, ಕೆ. ರಾಮ ಪ್ರಸಾದ್ ಭಟ್ ಚೆನ್ನೈ, ಬಿ.ಆರ್. ಶೆಟ್ಟಿ, ಮಯೂರ ಶ್ರೀನಿವಾಸ ರಾವ್, ಕೆ. ನಾಗರಾಜ ಪುರಾಣಿಕ, ಅಡ್ಕ ರಾಘವೇಂದ್ರ ರಾವ್, ಜಲತಜ್ಞ ಡಾ| ರಾಜೇಂದ್ರ ಸಿಂಗ್, ಬೆಂಗಳೂರು ಇಸ್ಕಾನ್ ಅಧ್ಯಕ್ಷ ಮಧುಪಂಡಿತ್ ದಾಸ್, ಸಮಾಜಸೇವಕ ಅಪ್ಪಣ್ಣ ಹೆಗ್ಡೆ, ಶಿಕ್ಷಣತಜ್ಞ ಗೋಪಾಲ್ ಮೊಗೆರಾಯ ಅವರನ್ನು ಪರ್ಯಾಯ ದರ್ಬಾರ್‌ನಲ್ಲಿ ಸಮ್ಮಾನಿಸಲಾಯಿತು.
ಸಚಿವ ಪ್ರಮೋದ್ ಮಧ್ವರಾಜ್, ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ|ಮೂ| ದಿನೇಶ ಕುಮಾರ್, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಶಾಸಕರಾದ ವಿನಯ ಕುಮಾರ ಸೊರಕೆ, ಕ್ಯಾ| ಗಣೇಶ ಕಾರ್ಣಿಕ್, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಎಂ.ಎಸ್. ಮಹಾಬಲೇಶ್ವರ, ಚಿತ್ತೂರು ಶಾಸಕಿ ಸತ್ಯಪ್ರಭಾ, ಸಿಂಡಿಕೇಟ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಎಸ್. ಕೃಷ್ಣ, ಕೆನರಾ ಬ್ಯಾಂಕ್ ಅಧಿಕಾರಿ ಸಿ.ಎಸ್. ವಿಜಯಲಕ್ಷ್ಮೀ, ವಿಜಯ ಬ್ಯಾಂಕ್ ಡಿಜಿಎಂ ನಾಗರಾಜ್, ಎಸ್ಪಿ ಲಕ್ಷ್ಮಣ್ ನಿಂಬರ್ಗಿ, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಉಪಕಾರ್ಯದರ್ಶಿ ರಾಯ್ಕರ್, ಮುಖ್ಯಯೋಜನಾಧಿಕಾರಿ ಶ್ರೀನಿವಾಸ ರಾವ್, ಪೌರಾಯುಕ್ತ ಮಂಜುನಾಥಯ್ಯ ಮೊದಲಾದವರನ್ನು ಸಮ್ಮಾನಿಸಲಾಯಿತು.
ಅನ್ನಪ್ರಸಾದ
ಉಡುಪಿ: ಪರ್ಯಾಯೋತ್ಸವದಲ್ಲಿ ಗುರುವಾರ ಶ್ರೀಮಠದ ವಿವಿಧ ಕಡೆ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ತಾಯಿಗೆ ಸನ್ಯಾಸಿಯ ಸಾಷ್ಟಾಂಗ ಪ್ರಣಾಮ
ಉಡುಪಿ: ಪಲಿಮಾರು ಸ್ವಾಮೀಜಿಯವರ ತಾಯಿ ಕಸ್ತೂರಿ ಅಮ್ಮ ಅವರು ಪರ್ಯಾಯ ದರ್ಬಾರ್‌ಗೆ ಆಗಮಿಸಿದ್ದರು. ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಲು ವೇದಿಕೆ ಮೇಲೇರಿದಾಗ ಸ್ವಾಮೀಜಿಯವರು ತಾಯಿಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸಿದರು. ನಿಯಮಾನುಸಾರ ಮಗ ಸನ್ಯಾಸಿಯಾಗಿದ್ದರೆ ತಂದೆಗೆ ನಮಸ್ಕರಿಸುವುದಿಲ್ಲ, ಆದರೆ ತಾಯಿಗೆ ಮಾತ್ರ ಸನ್ಯಾಸಿಯಾಗಿದ್ದರೂ ನಮಸ್ಕರಿಸುತ್ತಾರೆ. ಮಾತೃ ಋಣ ತೀರಿಸಲು ಆಗುವುದಿಲ್ಲ ಎನ್ನುವುದಕ್ಕೆ ಪ್ರಾಯಃ ಇದು ಪೂರಕ.
ಅಖಂಡ ಭಜನೆ ಉದ್ಘಾಟನೆ
ಕನಕಗೋಪುರದ ಬಳಿ ನಿರ್ಮಿಸಿದ ಆಕರ್ಷಕ, ಚಿಕ್ಕ ವೇದಿಕೆಯಲ್ಲಿ ಇನ್ನೆರಡು ವರ್ಷ ನಡೆಯುವ ನಿರಂತರ ಭಜನೆ ಕಾರ್ಯಕ್ರಮವನ್ನು ಅಷ್ಟ ಮಠಾಧೀಶರು ಗುರುವಾರ ಬೆಳಗ್ಗೆ ಉದ್ಘಾಟಿಸಿದರು. ಪ್ರತಿ ಎರಡು ಗಂಟೆಗಳಿಗೊಮ್ಮೆ ಸರದಿಯಂತೆ ಭಜನೆ ನಡೆಸಲಾಗುತ್ತದೆ. ಎರಡು ವರ್ಷವೆಂದರೆ 730 ದಿನಗಳು. ಪ್ರತಿ ಮೂರು ದಿನಗಳಲ್ಲಿ ಆರು ಭಜನ ತಂಡಗಳು ಕಾರ್ಯನಿರ್ವಹಿಸಲಿವೆ. ಇವುಗಳಲ್ಲಿ ಒಂದು ತಂಡ ಎರಡು ಗಂಟೆ ಭಜನೆ ಮಾಡಿದ ಬಳಿಕ ಇನ್ನೊಂದು ತಂಡ, ಬಳಿಕ ಮತ್ತೂಂದು ತಂಡ ಭಜನೆ ಮಾಡಲಿವೆ. ಒಂದು ತಂಡಕ್ಕೆ ನಾಲ್ಕು ಗಂಟೆಗಳ ವಿಶ್ರಾಂತಿ ದೊರಕುತ್ತದೆ. ಆರು ತಂಡಗಳು ಮೂರು ದಿನ ಇಲ್ಲಿದ್ದು ಭಜನ ಸೇವೆಯನ್ನು ನಡೆಸಿಕೊಡಲಿವೆ.
4 ಪುಸ್ತಕ ಬಿಡುಗಡೆ
ಉಡುಪಿ: ಪಲಿಮಾರು ಮಠದಿಂದ ಪ್ರಕಾಶನಗೊಳ್ಳುತ್ತಿರುವ “ಸರ್ವಮೂಲ’ ಮಾಸ ಪತ್ರಿಕೆಯ ವಿಶೇಷ ಸಂಚಿಕೆ, ವಿಷ್ಣುಸಹಸ್ರನಾಮಾವಲೀ, ಮಂಗಲಾಷ್ಟಕ, ಮಹಾಭಾರತದ ಉದ್ಯೋಗ ಪರ್ವದಲ್ಲಿ 11, 12, 14ನೇ ಸಂಪುಟಗಳನ್ನು ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ಇದರಲ್ಲಿ “ಮಂಗಲಾಷ್ಟಕ’ದ ಕುರಿತು “ಉದಯವಾಣಿ’ ಪರ್ಯಾಯ ಸಂಚಿಕೆಯಲ್ಲಿ ಪ್ರಕಟಿಸಿತ್ತು.
ಪರ್ಯಾಯ ಮೆರವಣಿಗೆ ಮುಂದೆ ಸಾಗುತ್ತಿದ್ದಂತೆ ಹಿಂದೆಯೇ ಪೌರಕಾರ್ಮಿಕರು ಮತ್ತು ಸ್ವಯಂಸೇವಕರು ರಸ್ತೆಯನ್ನು ಸ್ವತ್ಛಗೊಳಿಸುತ್ತಿದ್ದುದು ಸರ್ವತ್ರ ಪ್ರಶಂಸೆಗೆ ಪಾತ್ರವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.