ಕಾಶಿನಾಥ್ ಎಂಬ ರಿಯಲ್ ಕಿಂಗ್ ಮೇಕರ್
Team Udayavani, Jan 19, 2018, 5:41 AM IST
ಉಳಿದುಕೊಳ್ಳಲು ನನಗೆ ಕಾಶಿನಾಥ್ ಅವರು ತಮ್ಮ ಮನೆಯಲ್ಲೇ ಜಾಗ ಕೊಟ್ಟರು. ಅವರ ಮೂರು ಜನ ಸಹೋದರರ ಜೊತೆಗೆ ನನ್ನನ್ನೂ ಒಬ್ಬ ತಮ್ಮನಂತೆ ಕಂಡರು. ಅವರ ಮನೆಯಲ್ಲಿ ಸುಮಾರು ಏಳೆಂಟು ವರ್ಷಗಳ ಕಾಲ ಊಟ, ತಿಂಡಿ ಕೊಟ್ಟು, ಮಲಗಲು ಜಾಗ ಕೊಟ್ಟರು. ಆ ದಿನಗಳಲ್ಲಿ ಯಾರು ತಾನೇ ಅಷ್ಟೆಲ್ಲಾ ಮಾಡೋಕೆ ಸಾಧ್ಯ? ನನ್ನನ್ನು ತಮ್ಮೊಂದಿಗೆ ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಿದ್ದರು. ಸಿನಿಮಾ ಬಗ್ಗೆ ಮಾತುಕತೆ, ಚರ್ಚೆ ಮಾಡುತ್ತಿದ್ದರು. ಆಗ ಉಪೇಂದ್ರ ಮತ್ತು ಹಂಸಲೇಖ ಅವರ ಪರಿಚಯವೂ ಆಯ್ತು. ಅವರ ಗರಡಿಯಲ್ಲಿ ನಾನು, ಉಪೇಂದ್ರ ಮತ್ತು ಸುನೀಲ್‌ಕುಮಾರ್ ದೇಸಾಯಿ ಪಳಗಿದೆವು.
ನಾನು ಕಾಲೇಜು ಮುಗಿಸಿದ ಬಳಿಕ ಮುಂದೇನು ಮಾಡಬೇಕು ಎಂದು ಯೋಚಿಸುತ್ತಿರುವಾಗ, ನನ್ನ ಕಣ್ಣ ಮುಂದೆ ಬಂದದ್ದು ಸಿನಿಮಾ. ಆ ಬಗ್ಗೆ ಅದಾಗಲೇ ಆಸಕ್ತಿ ಬೆಳೆಸಿಕೊಂಡಿದ್ದೆ. ನೂರಾರು ಕನಸು ಕಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಬಂದಾಗ ಮೊದಲು ಪರಿಚಯವಾಗಿದ್ದು “ಶಂಖನಾದ’ ಅರವಿಂದ್. ನಾನು ಆ ದಿನಗಳಲ್ಲೇ “ಅಪರಿಚಿತ’ ಚಿತ್ರ ನೋಡಿ ಸಖತ್ ಫೀಲ್ ಆಗಿದ್ದೆ. ಆ ಚಿತ್ರದಲ್ಲಿ ಅವರು ಅದ್ಭುತ ಪಾತ್ರ ನಿರ್ವಹಿಸಿದ್ದರು. ನಾನು ಆಗ “ಜನವಾಹಿನಿ’ ಪತ್ರಿಕೆಯಲ್ಲಿ ಕಾಟೂìನಿಸ್ಟ್ ಮತ್ತು ಪ್ರೂಫ್ರೀಡರ್ ಆಗಿ ಕೆಲಸ ಮಾಡುತ್ತಿದ್ದೆ. ಒಮ್ಮೆ “ಶಂಖನಾದ’ ಅರವಿಂದ್ ಅವರು ನಮ್ಮ ಕಚೇರಿಗೆ ಬಂದಿದ್ದರು. ಆಗ ನಾನು, ಸರ್ ನಿಮ್ಮ ಚಿತ್ರ ನೋಡಿದೆ. ನಿಮ್ಮ ಅಭಿನಯ ಚೆನ್ನಾಗಿತ್ತು. ನನಗೆ ಹೇಗಾದರೂ ಮಾಡಿ ನಿರ್ದೇಶಕ ಕಾಶಿನಾಥ್ ಅವರನ್ನು ಪರಿಚಯಿಸಿಕೊಡಿ ಅಂದೆ. ಆಗ ಕಾಶಿನಾಥ್ ಅವರನ್ನು ಭೇಟಿ ಮಾಡಬೇಕು ಎಂಬ ಹುಚ್ಚು ಹೆಚ್ಚಾಗಿತ್ತು. ನನ್ನ ಮಾತಿಗೆ ಒಪ್ಪಿಕೊಂಡ “ಶಂಖನಾದ’ ಅರವಿಂದ್ ಅವರು, ಗಾಂಧಿಬಜಾರ್‌ಗೆ ಬನ್ನಿ ಎಂದು ಹೇಳಿ ಹೋದರು. ಮರುದಿನವೇ ಅವರು ಗಾಂಧಿಬಜಾರ್‌ನಲ್ಲಿ ಕಾಶಿನಾಥ್ ಅವರನ್ನು ಭೇಟಿ ಮಾಡಿಸಿ, ಪರಿಚಯಿಸಿದರು. ಅದಕ್ಕೂ ಮುನ್ನ, ಛಾಯಾಗ್ರಾಹಕ ಸುಂದರ್‌ನಾಥ್ ಸುವರ್ಣ ಅವರು ಒಮ್ಮೆ “ಜನವಾಹಿನಿ’ ಕಚೇರಿಗೆ ಬಂದಾಗ, ಸರ್ ನಾನು ಹಾಡುಗಳನ್ನು ಬರೆಯುತ್ತೇನೆ. ನನಗೊಂದು ಅವಕಾಶ ಕೊಡಿಸಿ ಅಂತ ಕೇಳಿಕೊಂಡಿದ್ದೆ. ಆಗಷ್ಟೇ ಕಾಶಿನಾಥ್ ಅವರು “ಅನುಭವ’ ಚಿತ್ರ ಮಾಡುತ್ತಿದ್ದರು. ಅವರಿಗೆ ಸುಂದರ್‌ನಾಥ್ ಸುವರ್ಣ ಅವರು, ಒಬ್ಬರು ತುಂಬ ಚೆನ್ನಾಗಿ ಹಾಡು ಬರೆಯುತ್ತಾರೆ ಅವಕಾಶ ಇದ್ದರೆ ಕೊಡಿ ಅಂತ ಕಾಶಿನಾಥ್ ಅವರಿಗೆ ಹೇಳಿದ್ದರು. ಅವರ ಮಾತಿಗೆ ಬೆಲೆ ಕೊಟ್ಟ ಕಾಶಿನಾಥ್ ಅವರು, ಸರಿ, ಅವರನ್ನು ಕರೆಸಿ ಅಂತ ಹೇಳಿದ ಕೂಡಲೇ ನನಗೆ ಕರೆ ಬಂತು. ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೆಯೇ ನಾನು ನೇರವಾಗಿ ಅವರನ್ನು ಭೇಟಿ ಮಾಡಿದೆ. ಟ್ಯೂನ್‌ಗೆ ಹಾಡು ಬರೆಯುತ್ತೀಯೆನಪ್ಪಾ ಅಂತ ಕೇಳಿದರು. ನಾನೂ ಕೂಡ ಬರೆಯುತ್ತೇನೆ ಸರ್ ಅಂದೆ. ವುಡ್‌ಲ್ಯಾಂಡ್ಸ್‌ನಲ್ಲಿ ಸಂಗೀತ ನಿರ್ದೇಶಕ ವೈದ್ಯನಾಥನ್ ಅವರು ಟ್ಯೂನ್ ಕಂಪೋಸ್ ಮಾಡುತ್ತಿದ್ದರು. ಅಲ್ಲೇ ಆ ರಾಗ ಕೇಳಿಸಿದರು. ಕಥೆ ವಿವರಿಸಿ, ಹಾಡಿನ ಸಂದರ್ಭ ಹೇಳಿದರು. ಆಗ ಬರೆದದ್ದೇ “ಹೋದೆಯ ದೂರ ಓ ಜೊತೆಗಾರ..’ ಹಾಡು. ಅದು ಹಿಟ್ ಆಯ್ತು. ಅವರೂ ಖುಷಿಗೊಂಡರು.
ಬದುಕು ಕಲಿಸಿಕೊಟ್ಟವರು..
1985ರಲ್ಲಿ ನಾನು ಅವರ ಜತೆ ಫುಲ್‌ಟೈಮ್ ವರ್ಕ್ ಮಾಡೋಕೆ ಶುರುಮಾಡಿದೆ. “ಅನುಭವ’ ಚಿತ್ರದ ಚಿತ್ರೀಕರಣ ವೇಳೆಯಲ್ಲೇ ನಾನು ಅವರೊಂದಿಗೆ ಒಡನಾಟ ಬೆಳೆಸಿಕೊಂಡಿದ್ದೆ. “ಅನಾಮಿಕ’ ಚಿತ್ರದ ಬಳಿಕ ನಾನು ಇದ್ದ ಕೆಲಸ ಬಿಟ್ಟು, ಅವರೊಂದಿಗೆ ಪಕ್ಕಾ ಶಿಷ್ಯನಾಗಿ ಕೆಲಸ ಶುರುಮಾಡಿದೆ. ಸಿನಿಮಾ ರಂಗದ ಮೊದಲ ಗುರು ಅವರು. ನನಗೆ ನಟನೆ ಕಲಿಸಿಕೊಟ್ಟು, ಅವಕಾಶ ಕಲ್ಪಿಸಿ ಕೊಟ್ಟರು. ಅಷ್ಟೇ ಅಲ್ಲ, ನಾನು ಅಮ್ಮನನ್ನು ಕಳೆದುಕೊಂಡಿದ್ದೆ. ಅಕ್ಕನ ಮನೆಯಲ್ಲೇ ಇದ್ದೆ. ಉಳಿದುಕೊಳ್ಳಲು ನನಗೆ ಕಾಶಿನಾಥ್ ಅವರು ತಮ್ಮ ಮನೆಯಲ್ಲೇ ಜಾಗ ಕೊಟ್ಟರು. ಅವರ ಮೂರು ಜನ ಸಹೋದರರ ಜೊತೆಗೆ ನನ್ನನ್ನೂ ಒಬ್ಬ ತಮ್ಮನಂತೆ ಕಂಡರು. ಅವರ ಮನೆಯಲ್ಲಿ ಸುಮಾರು ಏಳೆಂಟು ವರ್ಷಗಳ ಕಾಲ ಊಟ, ತಿಂಡಿ ಕೊಟ್ಟು, ಮಲಗಲು ಜಾಗ ಕೊಟ್ಟರು. ಆ ದಿನಗಳಲ್ಲಿ ಯಾರು ತಾನೇ ಅಷ್ಟೆಲ್ಲಾ ಮಾಡೋಕೆ ಸಾಧ್ಯ. ಅವರ ಮನೆಯಲ್ಲೇ ಇದ್ದ ನನ್ನನ್ನು ಅವರೊಂದಿಗೆ ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಿದ್ದರು. ಸಿನಿಮಾ ಬಗ್ಗೆ ಮಾತುಕತೆ, ಕಥೆಗಳ ಕುರಿತು ಚರ್ಚೆ ಮಾಡುತ್ತಿದ್ದರು. ಆಗ ಉಪೇಂದ್ರ ಮತ್ತು ಹಂಸಲೇಖ ಅವರ ಪರಿಚಯವೂ ಆಯ್ತು. ಅವರ ಗರಡಿಯಲ್ಲಿ ನಾನು, ಉಪೇಂದ್ರ ಮತ್ತು ಸುನೀಲ್‌ಕುಮಾರ್ ದೇಸಾಯಿ ಪಳಗಿದೆವು. ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ನಿರ್ದೇಶಕರನ್ನು ತಯಾರು ಮಾಡಿದರು. ಸಾಕಷ್ಟು ತಿಳಿವಳಿಕೆ ಹೇಳಿ, ಚಿತ್ರರಂಗಕ್ಕೆ ಪರಿಚಯಿಸಿದರು.
“ಅನುಭವ’ ಮತ್ತು “ಅನಂತನ ಅವಾಂತರ’ ಸಿನಿಮಾ ಮಾಡಿದಾಗ ಸಾಕಷ್ಟು ಟೀಕೆಗಳು ಬಂದವು. ಆದರೆ, ಕಾಶಿನಾಥ್ ಅವರು ಎಂದಿಗೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಜನಸಾಮಾನ್ಯರ ಮನೋ ಭಾವ ನೋಡಿ ಸಿನಿಮಾ ಮಾಡಿದರೆ ಗೆಲುವು ಸಿಗುತ್ತೆ ಎಂದು ನಂಬಿದ್ದರು. ಅವರು ಜನಸಾಮಾನ್ಯರ ಪ್ರತಿನಿಧಿಯಾಗಿ ಇರಬೇಕು ಅಂತ ಬಯಸುತ್ತಿದ್ದವರು. ಜನರ ನೋವು, ನಲಿವು ಮತ್ತು ಅವರ ಆಶೋತ್ತರಗಳಿಗೆ ಸ್ಪಂದಿಸುವಂತಹ ಚಿತ್ರ ಮಾಡುವ ತುಡಿತ ಅವರಲ್ಲಿತ್ತು.
ಸ್ವಾಭಿಮಾನಿಯಾಗಿ ಸ್ವಾಭಿಮಾನ ಕಲಿಸಿದವರು
ಅವರಲ್ಲಿ ಒಂದು ವಿಶೇಷ ಗುಣವಿತ್ತು. ಯಾರೇ ತಪ್ಪು ಮಾಡಿ ದರೂ ಒಂದಷ್ಟೂ ಕೋಪಿಸಿಕೊಳ್ಳುತ್ತಿರಲಿಲ್ಲ. ಎಷ್ಟೋ ಸಲ, ನಾನು ಅವರ ಮೇಲೆ ಕೋಪಿಸಿಕೊಳ್ಳುತ್ತಿದ್ದೆ. ಆಗ, ಅವರೇ, ಬೇರೆ ಹುಡುಗರನ್ನು ನನ್ನ ಬಳಿ ಕಳುಹಿಸಿ, ಹೋಗ್ರಪ್ಪ, ಮನೋಹರ ಯಾಕೋ ಮುನಿಸಿಕೊಂಡಿದ್ದಾನೆ. ಅವನನ್ನು ಕರೆದುಕೊಂಡು ಬನ್ನಿ ಅನ್ನುತ್ತಿದ್ದರು. ನಾನು ಅವರ ಬಳಿ ಹೋದಾಗ, “ಬನ್ರೀ, ಅದೇನ್ರಿ ನಿಮ್ಮ ಸಮಸ್ಯೆ ಹೇಳಿ ಈಗ’ ಅಂತ ಸಮಾಧಾನವಾಗಿ ಕೇಳ್ಳೋರು. ಕೊನೆಗೆ ಎಲ್ಲವನ್ನೂ ತಿಳಿದುಕೊಂಡು, ತಿದ್ದಿ, ಬುದ್ಧಿ ಹೇಳುತ್ತಿದ್ದರು. ನಾನು ಕಾಶಿನಾಥ್ ಅವರನ್ನು ಕೋಪ ಮಾಡಿಕೊಂಡಿದ್ದು ನೋಡಿಯೇ ಇಲ್ಲ. ಅವರಲ್ಲಿ ಅನೇಕ ಒಳ್ಳೆಯ ಗುಣಗಳಿದ್ದವು. ಪಾಸಿಟಿವ್ ಮತ್ತು ಮೈನಸ್ ಬಗ್ಗೆ ಹೇಳುವುದಾದರೆ, ಅವರು ಒಂದು ಸಿನಿಮಾ ನಂತರ ಇನ್ನೊಂದು ಸಿನಿಮಾ ಮಾಡೋಕೆ ಗ್ಯಾಪ್ ತೆಗೆದುಕೊಳ್ಳುತ್ತಿದ್ದರು. ನಾವುಗಳು ಎಷ್ಟೋ ಸಲ, “ಸರ್, ಫಾಸ್ಟ್ ಆಗಿ ಸಿನಿಮಾ ಮಾಡೋಣ’ ಅಂದಾಗ, “ಸುಮ್ನೆ ಇರೊÅà, ಮಾಡುವ ಕೆಲಸಾನ ಎಂಜಾಯ್ ಮಾಡಿಕೊಂಡು, ನಿಧಾನವಾಗಿ ತೃಪ್ತಿ ಆ ಗುವ ತನಕ ಮಾಡಬೇಕು’ ಅಂತ, ಯಾರನ್ನೂ ಕಾಯದೆ ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದರು. ನಿಧಾನ ಅನ್ನೋದಷ್ಟೇ ಅವರ ಮೈನಸ್ ಅನ್ನುವುದು ಬಿಟ್ಟರೆ, ಅವರಲ್ಲಿ ಪರೋಪಕಾರ ಬುದ್ಧಿ ಇತ್ತು. ಎಂಥದ್ದೇ ನೋವಿದ್ದರೂ, ಕಷ್ಟ ಬಂದರೂ, ಬೇರೆಯವರ ಬಳಿ ಹೇಳಿಕೊಳ್ಳುತ್ತಿರಲಿಲ್ಲ. ಅಂತಹ ನೋವಲ್ಲಿದ್ದರೂ ಸಹ, ಅನ್ಯರಿಗೆ ಸಮಸ್ಯೆ ಇದೆ ಅಂತ ಗೊತ್ತಾದರೆ, ಸಾಧ್ಯ ವಾದಷ್ಟು ಸಹಾಯ ಮಾಡುತ್ತಿದ್ದರು. ಕಷ್ಟದಲ್ಲೂ, ಸ್ವಾಭಿ ಮಾನಿಯಾಗಿರುತ್ತಿದ್ದರು. ನಮಗೂ ಆ ಸ್ವಾಭಿಮಾನ ಕಲಿಸಿದ್ದರು. ಇತ್ತೀಚೆಗೆ ಅವರನ್ನು ಭೇಟಿ ಮಾಡಿದ್ದೆ. ಆಗಲೂ ಸಹ, “ಆರೋಗ್ಯ ಸರಿ ಇಲ್ಲವಲ್ಲ ಸರ್, ಏನಾಗಿದೆ? ಆಸ್ಪತ್ರೆಗೆ ಹೋಗಿ’ ಅಂತ ಹೇಳಿದಾ ಗಲೂ, “ಏನೂ ಇಲ್ಲ ಬಿಡಪ್ಪ, ಕೆಮ್ಮು ಇದೆ, ಸರಿ ಹೋಗುತ್ತೆ’ ಅಂದಿ ದ್ದರು. ಕೊನೆಯ ದಿನಗಳಲ್ಲಿ ನಮ್ಮಲ್ಲಷ್ಟೇ ಅಲ್ಲ, ಅವರ ಕುಟುಂಬ ದವರಿಗೆ ಸಹೋದರರಿಗೂ ಏನನ್ನೂ ಹೇಳಿಕೊಂಡಿರಲಿಲ್ಲ.
ಪ್ರಯೋಗಗಳ ಸಾಹಸಿ
ಆ ದಿನಗಳಲ್ಲಿ ಅವರ ಜತೆ ಕೆಲಸ ಮಾಡುತ್ತಿದ್ದಾಗ, ಸಾಕಷ್ಟು ತಮಾಷೆ ನಡೆಯುತ್ತಿತ್ತು. “ಅನಾಮಿಕ’ ಮತ್ತು “ಅನಂತನ ಅವಾಂತರ’ ಚಿತ್ರೀಕರಣ ವೇಳೆಯಲ್ಲಿ ನಮಗೆ ಯಾವುದೇ ಬೇಸರ ಬರದಂತೆ ನೋಡಿಕೊಳ್ಳುತ್ತಿದ್ದರು. ಕೆಲಸವನ್ನು ಕಲಿಸುವುದಷ್ಟೇ ಅಲ್ಲ, ಯಾರೊಂದಿಗೆ ಹೇಗೆಲ್ಲಾ ಇರಬೇಕು, ಗೌರವಿಸಬೇಕು ಎಂಬು ದನ್ನು ಹೇಳಿಕೊಡುತ್ತಿದ್ದರು. ಚಿತ್ರೀಕರಣ ಸಮಯದಲ್ಲಿ ಕೋಪಿಸಿಕೊಂಡಿದ್ದು ನೋಡಿಯೇ ಇಲ್ಲ, ಬೇರೆಯವರು ವಿನಾಕಾರಣ ಕೋಪಿಸಿಕೊಂಡರೆ, ಅವರನ್ನು ಕರೆದು, ಸಮಸ್ಯೆ ಏನು ಅಂತ ಕೇಳಿ, ಅವರನ್ನು ಸಮಾಧಾನಪಡಿಸಿ ಸರಿಪಡಿಸುತ್ತಿದ್ದರು. ಹಾಡುಗಳಲ್ಲೇನಾದರೂ, ಡಬ್ಬಲ್ ಮೀನಿಂಗ್ ಇದ್ದರಂತೂ, ನಾವು ಅದೆಲ್ಲಾ ಬೇಡ ಸಾರ್, ಆ ಡೈಲಾಗ್‌ನಲ್ಲಿ ಡಬ್ಬಲ್ ಮೀನಿಂಗ್ ಇದೆ ಅದು ಬೇಕಾ ಸಾರ್ ಅಂದಾಗಲಂತೂ, ಅದಕ್ಕೊಂದು ಅರ್ಥ ಕೊಟ್ಟು, ಹೇಗೋ ಸುಮ್ಮನಿರಿಸಿಬಿಡುತ್ತಿದ್ದರು. ಸಿನಿಮಾ ರಿಲೀಸ್ ಆದಾಗ, ಜನರು ಅದನ್ನೇ ಇಷ್ಟಪಡುತ್ತಿದ್ದರು. ಆಗ ಗೊತ್ತಾಗು ತ್ತಿತ್ತು, ಜನರ ನಾಡಿಮಿಡಿತವನ್ನು ಅವರು ಎಷ್ಟೊಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು ಎಂಬುದು.
ಕಾಶಿನಾಥ್ ಕೇವಲ ಒಬ್ಬ ನಿರ್ದೇಶಕರಾಗಿ, ನಟರಾಗಿ ಇಂಡಸ್ಟ್ರಿ ಯಲ್ಲಿ ಗುರುತಿಸಿಕೊಳ್ಳಲಿಲ್ಲ. ಇಡೀ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದರು. ಮಡಿವಂತಿಕೆಯನ್ನು ಬಿಟ್ಟು ಹೊಸದೊಂದನ್ನು ಕೊಟ್ಟರು. ಜನರು ಅವರ ಕೆಲಸ ಒಪ್ಪಿಕೊಂಡರು. ಸ್ಟಾರ್‌ಗಿರಿ ಇದ್ದಾಗಲೂ, ಸ್ಟಾರ್ ಎನಿಸುವ ಚಿತ್ರ ಕಟ್ಟಿಕೊಟ್ಟರು. ಆಗೆಲ್ಲಾ ಅವರ ಚಿತ್ರಗಳಿಗೆ ಮಿಶ್ರ ಪ್ರತಿಕ್ರಿಯೆಗಳು ಬಂದರೂ, ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರಂತಹ ಸಜ್ಜನ ನಿರ್ದೇಶಕರ ಜತೆ ನಾನು ಹಲವು ವರ್ಷಗಳನ್ನು ಸವೆಸಿದ್ದು ಖುಷಿಕೊಟ್ಟಿದೆ. ಅವರೊಂದಿಗಿನ ಕೆಲಸದ ಅನುಭವ ಅನನ್ಯ. ಅವರು ಹೊಸಬರನ್ನು ಸ್ವಾಗತಿಸುತ್ತಿದ್ದ ರೀತಿ ಅದ್ಭುತವಾಗಿತ್ತು. ಸ್ಕ್ರಿಪ್ಟ್ ಹೇಗಿರಬೇಕು, ಹೇಗೆಲ್ಲಾ ಮಾಡಿಕೊಂಡು, ಜನರ ಆಶಯಗಳಿಗೆ ಸ್ಪಂದಿಸಬೇಕು. ಚಿತ್ರಗಳ ಮೂಲಕ ಸಾಮಾಜಿಕ ಸಮಸ್ಯೆಯನ್ನು ಹೇಗೆ ಹೇಳ ಬೇಕು. ಸಿನಿಮಾ ಮೂಲಕ ಹೊಸತನ್ನು ಹೇಗೆ ಸೃಷ್ಟಿಸಬೇಕೆಂಬುದು ಅವರಿಗೆ ಗೊತ್ತಿತ್ತು. ಅಂತಹ ಪ್ರಯತ್ನ, ಪ್ರಯೋಗಗಳ ಮೊದಲ ಸಾಹಸಿ ಎನ್ನುವುದರಲ್ಲಿ ತಪ್ಪಿಲ್ಲ. ಅವರು ನಮಗೆ ಕೆಲಸ ವನ್ನಷ್ಟೇ ಕಲಿಸಲಿಲ್ಲ. ಸಮಯ ಪ್ರಜ್ಞೆ ಮತ್ತು ಹಣ ಉಳಿತಾಯ ಕುರಿತು ಹೇಳಿಕೊಟ್ಟರು. ಅನಾವಶ್ಯಕವಾಗಿ ಯಾವುದಕ್ಕೂ ವೇಸ್ಟ್ ಮಾಡಬಾರದು ಎಂಬುದನ್ನು ತಿಳಿಹೇಳಿದವರು.
ಅನೇಕರಿಗೆ ಸಿನೆಮಾದಲ್ಲಿ ಜನ್ಮ ಕೊಟ್ಟವರು
ಎಷ್ಟೋ ಜನರು ಕಾಶಿನಾಥ್ ಅವರಿಗೆ ಮರೆವು ಜಾಸ್ತಿ ಎನ್ನುತ್ತಿದ್ದರು. ಅದಕ್ಕೆ ಕಾರಣ, ಅವರು ಸದಾ ಕಥೆಗಳ ಮತ್ತು ಪಾತ್ರಗಳ ಗುಂಗಲ್ಲಿ ಇರುತ್ತಿದ್ದರು. ಒಂದು ಸ್ಥಳಕ್ಕೆ ಹೋದರೆ, ಅಲ್ಲಿ ಯಾವ ದೃಶ್ಯ ಮಾಡಬಹುದು, ಅಲ್ಲಿ ಏನೆಲ್ಲಾ ತೋರಿಸಬಹುದು ಎಂಬುದನ್ನೇ ಯೋಚಿಸುತ್ತಿದ್ದರು. ಅಕ್ಕಪಕ್ಕದವರು ಮಾತಾಡಿಸಿ ದರೂ, ಕಥೆ ಮತ್ತು ಪಾತ್ರಗಳ ಬಗ್ಗೆಯೇ ಹೇಳುತ್ತಿದ್ದರು. ಆ ಕ್ಷಣಕ್ಕೆ ಅವರಿಗೆ ಆ ಗುಂಗಿನಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಆಗ, ಪರಿಚಯದವರನ್ನೂ ಹೆಚ್ಚು ಮಾತಾಡಿಸದೆ ಸುಮ್ಮನಾಗುತ್ತಿ ದ್ದರು. ಅದು ದುರಂಹಕಾರ ಅಥವಾ ಅಹಂಕಾರವಾಗಿರುತ್ತಿರಲಿಲ್ಲ. ಅವರನ್ನು ಹುಡುಕಿ ಬರುವ ಯಾರನ್ನೇ ಇರಲಿ, ಚೆನ್ನಾಗಿಯೇ ಮಾತಾಡಿಸುತ್ತಿದ್ದರು. ಅವರು ಮಾತನಾಡಿಸಿ ಹೋದಾಗ ಬಂದವರ ಬಗ್ಗೆ ಗಮನಕೊಡದೆ, ಪುನಃ ತಮ್ಮ ಕಥೆ, ಪಾತ್ರಗಳ ಬಗ್ಗೆಯೇ ಯೋಚಿಸುತ್ತಿದ್ದರು. “ನನಗೆ ಮರೆವು ಜಾಸ್ತಿ. ಮರೆತುಬಿಡುತ್ತೇನೆ. ನೀವೇ ಪರಿಚಯ ಮಾಡಿಕೊಳ್ಳಿ’ ಎಂದು ಮೊದಲೇ ಹೇಳಿಬಿಡು ತ್ತಿದ್ದರು. ಆದರೆ, ಗೊತ್ತಿಲ್ಲದವರು, ಗೊತ್ತಿದ್ದವರು ಯಾರೇ ಬಂದರೂ, ಅದೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.
ನನ್ನಂತಹ ಅದೆಷ್ಟೋ ಜನರಿಗೆ ಈ ರಂಗದಲ್ಲಿ ಅವರು ಜನ್ಮ ಕೊಟ್ಟಿದ್ದಾರೆ. ಹೊಸಬರನ್ನು ಪ್ರೋತ್ಸಾಹಿಸುತ್ತಲೇ ಅಪರೂಪದ ಅತಿಥಿಯಾದವರು. ಎಷ್ಟೋ ಜನರ ಕಷ್ಟಕ್ಕೆ ಸ್ಪಂದಿಸಿದ್ದ ಅವರು, ಕೊನೆಯ ದಿನಗಳಲ್ಲಿ ನೋವಿದ್ದರೂ ಯಾರ ಬಳಿಯೂ ಹೇಳಿ ಕೊಳ್ಳಲಿಲ್ಲ. ಅಂತಹ ಗುರು ಸಿಗುವುದು ಕಷ್ಟ. ನಮಗೆಲ್ಲ ಸ್ವಂತ ಕಾಲ ಮೇಲೆ ನಿಲ್ಲುವುದನ್ನು ಕಲಿಸಿಕೊಟ್ಟರು. ಎಷ್ಟೋ ಸಲ ನಾವು “ಸರ್, ನಮಗೆ ಅವರು ಮೋಸ ಮಾಡಿಬಿಟ್ಟರು’ ಅಂದಾಗ, “ಅವರ ಬಗ್ಗೆ ಹಾಗೆಲ್ಲ ಮಾತನಾಡಬೇಡಿ. ಅವರು ಮೋಸ ಮಾಡಿಲ್ಲ. ನೀವೇ ಎಚ್ಚರ ತಪ್ಪಿ ಮೋಸ ಹೋಗಿದ್ದೀರಿ’ ಎನ್ನುತ್ತಿದ್ದರು. ಬದುಕನ್ನು ಚೆನ್ನಾಗಿ ಪ್ರೀತಿಸಿ ಎಂದು ಹೇಳಿದವರು ಈಗ ಬದುಕನ್ನೇ ಬಿಟ್ಟು ಹೋಗಿದ್ದಾರೆ. ರಿಯಲ್ ಕಿಂಗ್ ಮೇಕರ್ ಅಂದರೆ ಕಾಶಿನಾಥ್ ಒಬ್ಬರೇ. ಅವರಿಗೆ ಅವರೊಬ್ಬರೇ ಸಾಟಿ.
ವಿ. ಮನೋಹರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.