ಸಾಹಿತ್ಯ- ಸಂಗೀತ ಮಿಲನ: ವಾದಿರಾಜ – ಕನಕದಾಸ ಸಂಗೀತೋತ್ಸವ
Team Udayavani, Jan 19, 2018, 2:42 PM IST
ಕಳೆದ ಡಿ.15,16 ರಂದು ನಡೆದ ವಾದಿರಾಜ – ಕನಕದಾಸ ಸಂಗೀತೋತ್ಸವ ಅರ್ಥಪೂರ್ಣ ಕಾರ್ಯಕ್ರಮವಾಗಿ ರೂಪುಗೊಂಡಿತು. ಈ ಸಂತದ್ವಯರ ಬದುಕು, ರಚನೆಗಳು, ಅವುಗಳ ತಾತ್ವಿಕತೆ, ಸಂದೇಶಗಳು ಮಾತ್ರವಲ್ಲದೆ ಸಂಗೀತದ ರಾಗ, ಲಯಗಳೊಂದಿಗೆ ಆ ರಚನೆಗಳ ಅವಿನಾಭಾವ ಸಂಬಂಧಗಳ ಕುರಿತಾದ ವಿಚಾರ ಸಂಕಿರಣ ನಡೆಯಿತು. ಕೆ.ಪಿ. ರಾವ್, ಉದ್ಯಾವರ ಮಾಧವಾಚಾರ್, ಪಾದೆಕಲ್ಲು ವಿಷ್ಣುಭಟ್ ಮತ್ತು ಅರವಿಂದ ಹೆಬ್ಟಾರ್ ಪಾಲ್ಗೊಂಡರು. ಈಶ್ವರಯ್ಯ ಅಧ್ಯಕ್ಷತೆ ವಹಿಸಿದರು.
ಮೊದಲ ದಿನದ ದ್ವಂದ್ವಗಾಯನ ಉಡುಪಿಯ ಅರ್ಚನಾ ಮತ್ತು ಸಮನ್ವಿ ಇವರಿಂದ. ಗಣಪತಿ ಶ್ಲೋಕದ ಅನಂತರ ಹಾಡಲಾದ ಆರಭಿ , ಲತಾಂಗಿ ರಚನೆ ಮತ್ತು ಅದರ ಸ್ವರವಿನಿಕೆಗಳು ಸಭೆಯನ್ನು ಸಿದ್ಧಗೊಳಿಸಿದವು. ಪರ್ಯಾಯವಾಗಿ ಹಾಡಲಾದ ಆಭೋಗಿ ಆಲಾಪನೆಯಲ್ಲಿ ರಾಗದ ಸುಂದರ ಸಂಚಾರಗಳನ್ನು ಪೋಣಿಸಿದರು. ಪ್ರಧಾನ ರಾಗ ತೋಡಿ. ಗಮಕ ಯುಕ್ತವಾದ ಆಲಾಪನೆ, ಕೃತಿ ನಿರೂಪಣೆ, ಪ್ರಬುದ್ಧವಾದ ಸ್ವರಗಳ ನೇಯ್ಗೆಗಳು ತೂಕದ್ದಾಗಿದ್ದವು. ಆಭೇರಿ ಮತ್ತು ಕಾಪಿ ರಾಗಗಳಲ್ಲಿ ಹಾಡಿದ ದೇವರನಾಮಗಳು ರಂಜಿಸಿದವು. ಮೃದಂಗದಲ್ಲಿ ಮಹೇಶ್ ಕುಮಾರ್ ಮತ್ತು ಪಿಟೀಲಿನಲ್ಲಿ ಶುಭಶ್ರೀ ಶಂಕರ್ ಸಹಕರಿಸಿದರು.
ಸಂಜೆಯ ಹಿಂದುಸ್ತಾನಿ ಹಾಡುಗಾರಿಕೆ ಮಣಿಪಾಲದ ರವಿಕಿರಣ್ ಅವರಿಂದ. ಎರಡು ರಾಗಗಳನ್ನು ಆಯ್ದುಕೊಂಡು ಮೊದಲು ಮುಲ್ತಾನಿಯ ಗಾಂಭೀರ್ಯಕ್ಕೆ ಇಂಬು ನೀಡುತ್ತ, ಔನ್ನತ್ಯಕ್ಕೆ ಸಾಗಿದರು. ಮುಂದೆ ಬೆಹಾಗ್‌ನ ಲಾಲಿತ್ಯದ ಹರಹು ಮತ್ತು ರಾಗವಿಸ್ತಾರದ ಅನಂತ ಮಿತಿಯನ್ನು ರಸಿಕರ ಮುಂದೆ ತೆರೆದಿಟ್ಟರು. ಈ ಮೇಲಿನ ಎರಡು ಪ್ರಸ್ತುತಿಗಳಲ್ಲೂ ವಿಲಂಬಿತ ಮತ್ತು ದ್ರುತ್ ಗತಿಗಳಲ್ಲಿ, ಮೂರು ಕಾಲಗಳಲ್ಲಿ ತಾನ, ಮತ್ತು ಬೋಲ್‌ತಾನ್‌ಗಳನ್ನು ಶ್ರುತಿಲೀನತೆ ಮತ್ತು ಸ್ವರಸ್ಥಾನ ನಿರೂಪಿಸಿದರು.ಮುಂದೆ ವಾಹಾಡಿ, ಲಲಿತ್, ದುರ್ಗಾ, ಭೈರವಿ ಮುಂತಾದ ರಾಗಗಳಲ್ಲಿ ದಾಸರ ರಚನೆಗಳೊಂದಿಗೆ ಕಛೇರಿ ಸಂಪನ್ನಗೊಂಡಿತು. ತಬಲಾದಲ್ಲಿ ಭಾರವಿ ದೇರಾಜೆ ಮತ್ತು ಹಾರ್ಮೋನಿಯಂನಲ್ಲಿ ಶಶಿಕಿರಣ್ ಸಹಕರಿಸಿದರು.
ಡಿ.16ರಂದು ಮಣಿಪಾಲದ ದಿವ್ಯಶ್ರೀಯವರು ಶ್ರೀ ರಂಜನಿ ವರ್ಣ ಮತ್ತು ಷಣ್ಮುಖೀಪ್ರಿಯ ಪ್ರಸ್ತುತಿಯ ನಂತರ ವಾಗಧೀಶ್ವರಿಯನ್ನು ಎತ್ತಿಕೊಂಡು ಆರಭಿಯ ಕಣಿಯ ಕೇಳಲು ಬಂದ ರಚನೆಯನ್ನು ಐದು ನಡೆಗಳಲ್ಲಿ ಹಾಡಿದರು. ಪ್ರಧಾನ ರಾಗ ಕಾಂಭೋಜಿಯಲ್ಲಿ ಆಲಾಪನೆ, ನೆರವಲ್, ಕುರೈಪ್ಪುಗಳು, ಪೂರುತ್ತಂ ಮತ್ತು ಲೆಕ್ಕಾಚಾರದ ಮುಕ್ತಾಯಗಳಿದ್ದವು.ಆಹಿರ್ ಭೈರವ್ ಮತ್ತು ರಾಗಮಾಲಿಕೆ ಲಘು ಪ್ರಸ್ತುತಿಗಳೊಂದಿಗೆ ಹಾಡುಗಾರಿಕೆ ಕೊನೆಗೊಂಡಿತು. ವಸಂತಿ ರಾಮಭಟ್ ವಯಲಿನ್‌ನಲ್ಲಿ ಮತ್ತು ಶ್ರೀನಾಥ್ ವಿಶ್ವನಾಥನ್ ಮೃದಂಗದಲ್ಲಿ ಸಹಕರಿಸಿದರು.
ಉಡುಪಿಯ ಮಹಾಬಲೇಶ್ವರ ಭಾಗವತ್ ಹಿಂದುಸ್ಥಾನಿ ಕಛೇರಿ ನೀಡಿದರು. ಶುದ್ಧ ಸಾರಂಗ್ ಮತ್ತು ಕಮಾಚ್ ರಾಗದ ಬಂದಿಶ್‌ಗಳನ್ನು ಆಯ್ದುಕೊಂಡು ವಿಸ್ತರಿಸಿ, ತಾನ್ ಮತ್ತು ಬೋಲ್‌ತಾನ್‌ಗಳಿಂದ ಸಿಂಗರಿಸಿದರು. ಭೂಪ್, ಭೀಂಪಲಾಸ್, ಕಲಾವತಿ ಮುಂತಾದ ರಾಗಗಳಲ್ಲಿ ಹಾಡುಗಾರಿಕೆ ಸಂಪನ್ನಗೊಂಡಿತು.ದಿನೇಶ್ ಶೆಣೈ ತಬಲಾದಲ್ಲಿ , ಶಂಕರ ಶೆಣೈ ಹಾರ್ಮೋನಿಯಂನಲ್ಲಿ ಸಹಕರಿಸಿದರು.
ವಾರಿಜಾಕ್ಷಿ ಭಟ್ ಪರಂಪರಾಗತ ಪದ್ಧತಿಯನ್ನು ಉಳಿಸಿಕೊಂಡು, ಸಂಪ್ರದಾಯದ ಚೌಕಟ್ಟಿನೊಳಗೆ ಶುದ್ಧ ಕಛೇರಿ ನಡೆಸಿಕೊಟ್ಟರು. ರಾಗಮಾಲಿಕೆಯಲ್ಲಿ ಕನಕದಾಸರ ಉಗಾಭೋಗಗಳ ನಂತರ ಕಲ್ಯಾಣಿ ಮತ್ತು ಹಿಂದೋಳ ಪ್ರಸ್ತುತಿಗಳು ಹೃದ್ಯವಾಗಿದ್ದವು. ಬಿಲಹರಿ ಮತ್ತು ಷಣ್ಮುಖಪ್ರಿಯ ಪ್ರಧಾನ ರಾಗಗಳಾಗಿದ್ದವು. ವಯಲಿನ್‌ನಲ್ಲಿ ವಸಂತಿ ರಾಮಭಟ್ ಮತ್ತು ಮೃದಂಗದಲ್ಲಿ ಬಾಲಚಂದ್ರ ಆಚಾರ್ಯ ಸಹಕರಿಸಿದರು. ಮೋಹನ ರಾಗದ ರಚನೆಯೊಂದಿಗೆ ಕಛೇರಿ ಸಮಾಪನಗೊಂಡಿತು.
ಕೊನೆಯ ಕಾರ್ಯಕ್ರಮ ಮಣಿಪಾಲದ ಕೆ.ಆರ್. ರಾಘವೇಂದ್ರ ಆಚಾರ್ಯ ಇವರಿಂದ. ಶಾಸ್ತ್ರೀಯ, ಲಘು ಶಾಸ್ತ್ರೀಯದಲ್ಲಿ ಪರಿಶ್ರಮವನ್ನು ಹೊಂದಿರುವ ಅವರು ಉತ್ತರಾದಿ ಛಾಯೆಯಿರುವಂತಹ ರಕ್ತಿ ರಾಗಗಳಲ್ಲಿ ಸಂತದ್ವಯರ ರಚನೆಗಳನ್ನು ಹಾಡಿದರು. ಮಾಧವ ಆಚಾರ್ಯ ತಬಲಾದಲ್ಲಿ , ಶಂಕರ ಶೆಣೈ ಹಾರ್ಮೋನಿಯಂನಲ್ಲಿ ಸಹಕರಿಸಿದರು.
ಸರೋಜಾ ಆರ್. ಆಚಾರ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.