ಕುಡಿಯುವ ನೀರಿಗೆ ತೆಂಕಿಲದಲ್ಲಿ ಟ್ಯಾಂಕ್
Team Udayavani, Jan 20, 2018, 2:13 PM IST
ಪುತ್ತೂರು: ಕುಡಿಯುವ ನೀರು ಪೂರೈಸುವ ಜಾಗದ ಸಮಸ್ಯೆಗೆ ತೆರೆ ಎಳೆಯಲಾಗಿದೆ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಪುತ್ತೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ತೆಂಕಿಲ ಕರ್ನಾಟಕ ವಸತಿ ನಿಗಮದ ಜಾಗದಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಲು ತೀರ್ಮಾನಿಸಲಾಯಿತು.
ಬೈಪಾಸ್‌ನ ತೆಂಕಿಲ ಕರ್ನಾಟಕ ವಸತಿ ನಿಗಮದ ನಿವೇಶನ ಹಾಗೂ ನೆಹರೂ ನಗರ ಬಳಿಯ ಸೀಟಿ ಗುಡ್ಡೆ ಬಳಿಯಲ್ಲಿ 2 ಜಾಗಗಳನ್ನು ಗುರುತಿಸಲಾಗಿತ್ತು. ಸೀಟಿಗುಡ್ಡೆ ಜಾಗದ ಮಾಲಕರು ಭೂಸ್ವಾಧೀನಕ್ಕೆ ಹೆಚ್ಚಿನ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ತೆಂಕಿಲದ ಜಾಗವನ್ನೇ ಅಂತಿಮ ಮಾಡಲಾಯಿತು. ಉಪ್ಪಿನಂಗಡಿಯ ನೆಕ್ಕಿಲಾಡಿ ಪಂಪ್‌ಹೌಸ್‌ನಲ್ಲಿ ನೀರು ಶುದ್ಧೀಕರಣವಾಗಿ, ಬೊಳುವಾರು ಬೈಪಾಸ್ ಮೂಲಕ ತೆಂಕಿಲದ ಟ್ಯಾಂಕ್‌ಗೆ ಸಂಗ್ರಹವಾಗಲಿದೆ. ಇಲ್ಲಿಂದ ಪುತ್ತೂರು ನಗರಸಭೆ ವ್ಯಾಪ್ತಿಯ ನಿವಾಸಿಗಳಿಗೆ 24×7 ಮಾದರಿಯಲ್ಲಿ ನೀರು ಪೂರೈಕೆಯಾಗಲಿದೆ.
ನೀರು ಪೂರೈಕೆಗೆ ಸಂಬಂಧಪಟ್ಟಂತೆ ತಾಂತ್ರಿಕ ಸಲಹೆಗಾರರು ಲೆಕ್ಕಾಚಾರ ಮಾಡಿಯೇ ಯೋಜನೆಯ ವಿನ್ಯಾಸ ಸಿದ್ಧಪಡಿಸಿದ್ದಾರೆ. ಇದರ ಪ್ರಕಾರ ಕಾಮಗಾರಿ ನಡೆಯಲಿದೆ. ಈ ವಿನ್ಯಾಸವನ್ನು ಸ್ಥಳೀಯವಾಗಿ ಬದಲಾಯಿಸಿಕೊಂಡರೆ ಸಮಸ್ಯೆ ಎದುರಾಗುತ್ತದೆ. ಎಲ್ಲ ಪ್ರದೇಶಕ್ಕೂ ನೀರು ಪೂರೈಕೆ ಮಾಡುವುದು ಕಷ್ಟ ಆಗಬಹುದು. ಆದ್ದರಿಂದ ವಿನ್ಯಾಸದಲ್ಲಿ ತೊಂದರೆ, ತಾಂತ್ರಿಕ ತೊಂದರೆ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ನಗರಸಭೆ ಸದಸ್ಯರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ನೀರು ಪೂರೈಕೆ ಅಸಾಧ್ಯ
ನಗರಸಭೆ ಸದಸ್ಯ ಜೀವಂಧರ್ ಜೈನ್ ಮಾತನಾಡಿ, ಕಳೆದ ಅವಧಿಯಲ್ಲಿ ನೀಡಿರುವ ಕುಡಿಯುವ ನೀರು ಪೂರೈಕೆಯ ಯೋಜನೆಯನ್ನೇ ಈ ಬಾರಿಯೂ ಬಳಸಿಕೊಳ್ಳಲಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಕುಡ್ಸೆಂಪ್ ಯೋಜನೆಯಲ್ಲಿ ನೀರು ಪೂರೈಸಲು ಸೀಟಿ ಗುಡ್ಡೆಯಲ್ಲಿ ಟ್ಯಾಂಕ್ ನಿರ್ಮಿಸಿದ್ದು, ಇದನ್ನೇ ಈ ಯೋಜನೆಗೂ ಬಳಸಿಕೊಳ್ಳಲಾಗಿದೆ. ಇದರಿಂದ ಎಲ್ಲ ಕಡೆ ನೀರು ಪೂರೈಕೆ ಮಾಡುವುದು ಕಷ್ಟವಾಗಲಿದೆ ಎಂದು ತಿಳಿಸಿದರು.
ಬೋರ್‌ವೆಲ್ ಗತಿ
ನಗರಸಭೆ ಸದಸ್ಯ ರಾಜೇಶ್ ಬನ್ನೂರು ಮಾತನಾಡಿ, ನೀರಾವರಿಗಾಗಿ ಕುಡ್ಸೆಂಪ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಬೇಸಗೆಯಲ್ಲಿ ಜನರಿಗೆ ಕುಡಿಯಲು ನೀರು ಸಿಗುತ್ತಿರುವುದು ಬೋರ್‌ವೆಲ್ ಗಳಿಂದ ಮಾತ್ರ. ಟ್ಯಾಂಕರ್‌ಗೆ ತುಂಬಿಸಿ ಕೆಲ ಪ್ರದೇಶಗಳಿಗೆ ಪೂರೈಕೆ ಮಾಡಿದ್ದೂ ಇದೆ. ವಿದ್ಯುತ್ ನಿಲುಗಡೆಯಾದ ಸಂದರ್ಭ ಬೋರ್‌ವೆಲ್, ಟ್ಯಾಂಕರ್ ಮೂಲಕವೂ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಪ್ರಭಾರ ಸಹಾಯಕ ಆಯುಕ್ತೆ ಪ್ರಮೀಳಾ, ಕುಡ್ಸೆಂಪ್‌ನ ಪ್ರಭಾಕರ ಶರ್ಮ, ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ಮಹಮ್ಮದ್ ಆಲಿ, ಯಶೋದಾ ಹರೀಶ್, ಜೋಹರಾ ನಿಸಾರ್, ಚಂದ್ರ ಸಿಂಗ್, ಬಾಲಚಂದ್ರ, ಶಕ್ತಿ ಸಿನ್ಹಾ, ಮುಖೇಶ್ ಕೆಮ್ಮಿಂಜೆ, ಜೆಸಿಂತಾ ಮಸ್ಕರೇನಸ್, ಜಯಲಕ್ಷ್ಮೀ ಸುರೇಶ್, ರಾಮಣ್ಣ ಗೌಡ, ಉಷಾ, ಸ್ವರ್ಣಲತಾ ಹೆಗ್ಡೆ, ಅನ್ವರ್ ಖಾಸಿಂ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಗುಡ್ಡ ಪ್ರದೇಶಕ್ಕೆ ಸಂಪ್
ಜನಸಂಖ್ಯೆ ಅಧಿಕವಾಗಿರುವ ಪ್ರದೇಶಗಳಿಗೆ ಆದ್ಯತೆ ನೀಡಬೇಕಿದೆ. ಬೇಸಗೆ ಕಾಲದಲ್ಲಿ ಇದೇ ಭಾಗದ ಜನರು ನೀರಿಗೆ ಹೆಚ್ಚಿನ ಬವಣೆ ಪಡುತ್ತಾರೆ. ಆದ್ದರಿಂದ ಗುಡ್ಡಗಾಡು ಪ್ರದೇಶಗಳಿಗೆ ಸಂಪ್ ನಿರ್ಮಿಸಿ, ಅಲ್ಲಿಂದ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.