ಮಸ್ತ್ ಗಮ್ಮತ್ ನಮ್ಮೂರ ಹಬ್ಬ
Team Udayavani, Jan 20, 2018, 3:36 PM IST
ಬೆಂಗಳೂರು, ಕೇವಲ ಒಂದು ಊರಲ್ಲ. ಅದು ಸಾವಿರ ನದಿಗಳು ಬಂದು ಸೇರುವ ದೊಡ್ಡ ಸಮುದ್ರ. ರಾಜ್ಯ, ಹೊರರಾಜ್ಯದಿಂದ ಇಲ್ಲಿಗೆ ಬರುವವರು ಕ್ರಮೇಣ ಇಲ್ಲಿನವರೇ ಆಗಿಬಿಡುತ್ತಾರೆ. ಕಡಲಿನಲ್ಲಿ ಸಂಪೂರ್ಣ ಲೀನವಾಗುವ ನದಿಗಳಂತೆ. ಆದರೆ, ಹಾಗೆ ಬಂದವರು ತಮ್ಮ ಮೂಲ ಬೇರನ್ನು, ತಮ್ಮತನವನ್ನು ಉಳಿಸಿಕೊಳ್ಳುತ್ತಾ, ಈ ನೆಲದಲ್ಲೂ ತಮ್ಮೂರಿನ ಕಂಪನ್ನು ಪಸರಿಸುವ ಪ್ರಯತ್ನ ಮಾಡುತ್ತಾರೆ. ಅಂಥ ಒಂದು ಯಶಸ್ವೀ ಪ್ರಯತ್ನವೇ ಕರಾವಳಿಯವರು ನಡೆಸುವ ಈ “ನಮ್ಮೂರು ಹಬ್ಬ’…
ಚಂಡೆ- ಮದ್ದಳೆಯ ಸಪ್ಪಳ, ಭಾಗವತಿಕೆ, ವೇಷ ತೊಟ್ಟ ಮಕ್ಕಳು, ಮೀನಿನಡುಗೆಯ ಪರಿಮಳ, ಗೋಳಿಬಜೆಯ ಘಮ, ಹುಲಿವೇಷ, ಹಗ್ಗಜಗ್ಗಾಟ, ಕಿವಿಗೆ ಬೀಳುವ ತುಳು ಭಾಷೆ, ಕುಂದಗನ್ನಡ… ಇಷ್ಟನ್ನೆಲ್ಲಾ ಒಟ್ಟಿಗೆ ಅನುಭವಿಸಲು, ಕರಾವಳಿಗೇ ಹೋಗ್ಬೇಕು ಅಂತೇನಿಲ್ಲ. ಇಲ್ಲಿದ್ದುಕೊಂಡೇ ಉಡುಪಿ- ಕುಂದಾಪುರ- ಪುತ್ತೂರು- ಮಂಗಳೂರನ್ನು ಒಟ್ಟಿಗೆ ನೋಡಬಹುದು.
ಕರಾವಳಿಯ ಸಂಸ್ಕೃತಿ, ಜನಜೀವನ, ಆಹಾರ ಶೈಲಿಯನ್ನು ಬಿಂಬಿಸುವ “ನಮ್ಮೂರ ಹಬ್ಬ’ ಈ ಬಾರಿಯೂ ನಡೆಯುತ್ತಿದ್ದು, ಅಲ್ಲಿಗೆ ಹೋದರೆ ನಿಮಗೆ ಈ ಎಲ್ಲವೂ ಒಟ್ಟಿಗೇ ಸಿಗಲಿದೆ. ಕರಾವಳಿಯವರೆಲ್ಲಾ ಸೇರಿ ಸ್ಥಾಪಿಸಿರುವ ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕಳೆದ ನಾಲ್ಕು ವರ್ಷಗಳಿಂದ ಈ “ನಮ್ಮೂರ ಹಬ್ಬ’ ನಡೆಯುತ್ತಿದೆ. ಪ್ರತಿವರ್ಷವೂ ಒಂದೊಂದು ಪರಿಕಲ್ಪನೆಯಲ್ಲಿ ನಡೆಯುವ ಹಬ್ಬದ ಈ ವರ್ಷದ ಥೀಮ್ “ಯಕ್ಷಗಾನ’. ಇಡೀ ಹಬ್ಬದ ಸಂಭ್ರಮವನ್ನು ಯಕ್ಷಗಾನದ ಕಲ್ಪನೆಯಲ್ಲಿ ನಡೆಸಲಾಗುತ್ತಿದೆ.
ಶನಿವಾರ ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಪದ್ಮಶ್ರೀ ಪುರಸ್ಕೃತ ಜನಪದ ಕಲಾವಿದೆ ಸುಕ್ರಿ ಬೊಮ್ಮನಗೌಡ ಉಪಸ್ಥಿತಿಯಲ್ಲಿ, ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಎರಡು ದಿನಗಳ ಕಾಲ ಕಣ್ಮನಗಳಿಗಷ್ಟೇ ಅಲ್ಲ, ನಿಮ್ಮ ಹೊಟ್ಟೆಗೂ ಕರಾವಳಿಯ ಸುಗ್ರಾಸ ಭೋಜನ ಲಭ್ಯ.
ಈ ಮಕ್ಕಳ್ ಯಾಸ ನೋಡಿ!: ಮಕ್ಕಳು ಬಣ್ಣ ಬಣ್ಣದ ಬಟ್ಟೆ ಧರಿಸಿಕೊಂಡು, ಪುಟುಪುಟು ಓಡಾಡಿದರೇನೇ ಹಬ್ಬಕ್ಕೊಂದು ಕಳೆ. ನಮ್ಮೂರ ಹಬ್ಬದ ಕೇಂದ್ರಬಿಂದುವೂ ಇಂಥ ಮಕ್ಕಳೇ. ಶನಿವಾರ ಮಧ್ಯಾಹ್ನ 3ರಿಂದ “ಮಕ್ಕಳ್ ಯಾಸ’ ಎಂಬ ಛದ್ಮವೇಷ ಸ್ಪರ್ಧೆ ನಡೆಯಲಿದ್ದು, ಐದು ವರ್ಷದೊಳಗಿನ ಮುದ್ದು ಮಕ್ಕಳು ಇದರಲ್ಲಿ ಪಾಲ್ಗೊಳ್ಳಬಹುದು. ಮುಗ್ಧ ಮುಖಕ್ಕೆ ಒಂದಷ್ಟು ಬಣ್ಣ ಹಚ್ಚಿಕೊಂಡು, ವಿಧ ವಿಧ ವೇಷ ತೊಟ್ಟ ಅವರನ್ನು ನೋಡುವುದೇ ಚೆಂದ.
ಹಾಡು-ನೃತ್ಯ-ಯಕ್ಷಗಾನ: ಶನಿವಾರ ಸಂಜೆಯ “ಸಾಂಸ್ಕೃತಿಕ ರಸೋಲ್ಲಾಸ’ದಲ್ಲಿ, ಸುಬ್ರಹ್ಮಣ್ಯ ಚಿಟ್ಟಾಣಿ ಮತ್ತು ತಂಡದಿಂದ ಯಕ್ಷ ಪದ ಧ್ವನಿ, ಮಂಗಳೂರಿನ ಓಶನ್ ಕಿಡ್ಸ್‌ನವರಿಂದ ನೃತ್ಯೋತ್ಸವ ನಡೆಯಲಿದೆ. ಅಷ್ಟೇ ಅಲ್ಲ, ಜೀ ಸರಿಗಮಪ ಖ್ಯಾತಿಯ ಸಂಚಿತ್ ಹೆಗಡೆ, ದೀಕ್ಷಾ ರಾಮಕೃಷ್ಣ, ರಚನಾ ಚಂದ್ರಶೇಖರ್, ಸಾನ್ವಿ ಶೆಟ್ಟಿ, ಧನುಷ್ ಹೆಗಡೆ ಸುಮಧುರ ಗೀತೆಗಳಿಗೆ ದನಿಯಾಗಲಿದ್ದಾರೆ. ಭಾನುವಾರ ಇದೇ ವೇದಿಕೆಯಲ್ಲಿ ರವಿ ಬಸೂರ್, ಸುಪ್ರಿಯಾ ಲೋಹಿತ್, ರಾಮಚಂದ್ರ ಹಡಪದ್, ನಕುಲ್ ಅಭ್ಯಂಕರ್, ಲಹರಿ ಕೋಟ್ಯಾನ್‌ರ ಹಾಡುಗಳನ್ನು ಕೇಳಬಹುದು. ಪಟ್ಲ ಸತೀಶ್ ಶೆಟ್ಟಿ ಮತ್ತು ತಂಡದಿಂದ ಯಕ್ಷ ಪದ ಧ್ವನಿ ನಡೆಯಲಿದೆ. ಮನು ಹಂದಾಡಿ ಮತ್ತು ತಂಡದವರು ನಗೆ ಅಟ್ಟುಳಿ ಎಂಬ ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಆಟಕ್ಕೆ ಬರ್ತೀರಾ?: ನಾವು ಸಣ್ಣವರಿದ್ದಾಗ ಏನೇನೆಲ್ಲಾ ಆಡ್ತಿದ್ವಿ ಗೊತ್ತಾ… ಅಂತ ಮೊಬೈಲ್ ಹಿಡಿದ ಮಕ್ಕಳನ್ನು ನೋಡಿ ಹಳೆಯ ದಿನಗಳನ್ನು ಮೆಲುಕು ಹಾಕುವವರಿದ್ದಾರೆ. ಬಾಲ್ಯದ ಓಣಿಯಲ್ಲಿ ಬಿಟ್ಟು ಬಂದ ಆಟಗಳನ್ನು ಮತ್ತೆ ಆಡೋದಕ್ಕೂ ಇಲ್ಲಿ ಅವಕಾಶವಿದೆ. 17-50 ವರ್ಷದ ಸ್ತ್ರೀ-ಪುರುಷರಿಗಾಗಿ ಹಗ್ಗ ಜಗ್ಗಾಟ, ಸೈಕಲ್ ಚಕ್ರ ಓಡಿಸುವುದು ಮುಂತಾದ ಗ್ರಾಮೀಣ ಕ್ರೀಡೆಗಳು ನಡೆಯಲಿವೆ. ಮತ್ತೇಕೆ ತಡ, ತೋಳೇರಿಸಿಕೊಂಡು ಮೈದಾನಕ್ಕೆ ಬನ್ನಿ. ಅಷ್ಟೇ ಅಲ್ಲ, ದಂಪತಿಗಳಿಗೂ ವಿಶೇಷ ಮನರಂಜನಾ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ.
ಚಿತ್ರ ಬಿಡಿಸೋಕೆ ಬನ್ನಿ…: ಭಾನುವಾರ ಮಧ್ಯಾಹ್ನ 3- 4ರವರೆಗೆ ಮಕ್ಕಳಿಗಾಗಿ ಎರಡು ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. 5-10 ವರ್ಷದೊಳಗಿನವರಿಗೆ “ನಮ್ಮೂರು’ ಹಾಗೂ 10-16 ವರ್ಷದ ಮಕ್ಕಳಿಗೆ “ಯಕ್ಷಗಾನ’ ಅನ್ನೋ ವಿಷಯ ನೀಡಲಾಗಿದೆ. ಬೆಳಗ್ಗೆಯಿಂದಲೇ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಮೊದಲು ಬಂದ ಮಕ್ಕಳಿಗೆ ಆದ್ಯತೆ.
ಶರಸೇತು ಬಂಧನ: ಈ ಬಾರಿಯ ಹಬ್ಬದ ವಿಶೇಷ ಆಕರ್ಷಣೆಯೇ “ಶರಸೇತು ಬಂಧನ’ ತಾಳಮದ್ದಳೆ. ಭಾನುವಾರ ಮಧ್ಯಾಹ್ನ 2.30ರಿಂದ ಜಬ್ಟಾರ್ ಸುಮೋ ಮತ್ತು ಹಿರಿಯ ಕಲಾವಿದರು ಇದನ್ನು ನಡೆಸಿಕೊಡಲಿದ್ದಾರೆ. ಸಂಜೆಯ ಕಾರ್ಯಕ್ರಮದಲ್ಲಿ ಯಕ್ಷಪ್ರಿಯರಿಗಾಗಿ ಕರಾವಳಿ ಮತ್ತು ಪಾಶ್ಚಾತ್ಯ ವಾದ್ಯಗಳ ಜುಗಲ್‌ಬಂದಿ ಸಹ ನಡೆಯಲಿದೆ.
ಹಬ್ಬದೂಟ ಮಾಡಿ…: ಹಬ್ಬ ಅಂದ ಮೇಲೆ ಒಳ್ಳೆಯ ಊಟ ಇಲ್ಲದಿದ್ದರೆ ಹೇಗೆ ಹೇಳಿ? ಈ ಬಾರಿ ಕರಾವಳಿಯಿಂದ 40-50 ಬಾಣಸಿಗರು, ಹಬ್ಬದಡುಗೆ ಮಾಡಲೆಂದೇ ರಾಜಧಾನಿಗೆ ಬಂದಿದ್ದಾರೆ. ಇಲ್ಲಿನ ಆಹಾರ ಮಳಿಗೆಗಳಲ್ಲಿ ಕರಾವಳಿ ಶೈಲಿಯ ನೀರ್‌ದೋಸೆ, ಗೋಲಿಬಜೆ, ಪತ್ರೊಡೆ, ಸುಕ್ಕಿನುಂಡೆ, ಮೀನು ಹಾಗೂ ಮತ್ತಿತರ ಸೀ ಫುಡ್‌ಗಳನ್ನು ಸವಿಯಬಹುದು.
ಕರಾವಳಿಯ ಜನಜೀವನವನ್ನು ಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಇತರ ಆಕರ್ಷಣೆಗಳು ನಮ್ಮೂರ ಹಬ್ಬದಲ್ಲಿವೆ. ಸೆಲ್ಫಿಪ್ರಿಯರಿಗಾಗಿ ಸೆಲ್ಫಿ ಕೌಂಟರ್ ಕೂಡ ಇದೆ. ಮೊದಲ ಬಾರಿಗೆ ಈ ಹಬ್ಬ ನಡೆದಾಗ ಸುಮಾರು 30 ಸಾವಿರ ಜನ ಸೇರಿದ್ದರು, ಆ ಸಂಖ್ಯೆ ಕಳೆದವರ್ಷ ಒಂದೂವರೆ ಲಕ್ಷಕ್ಕೇರಿತ್ತು. ಈ ವರ್ಷ ಅದಕ್ಕೂ ಮೀರಿ ಜನ ಸೇರುವ ನಿರೀಕ್ಷೆಯಿದೆ.
ಕಾರ್ಟೂನು ಹಬ್ಬ: ಈ ಬಾರಿಯ ನಮ್ಮೂರ ಹಬ್ಬದ ಇನ್ನೊಂದು ಪ್ರಮುಖ ಆಕರ್ಷಣೆ “ಕಾರ್ಟೂನು ಹಬ್ಬ’. ಖ್ಯಾತ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಮತ್ತು ತಂಡದ ನೇತೃತ್ವದಲ್ಲಿ ಈ ಹಬ್ಬ ನಡೆಯುತ್ತಿದೆ. ಕಾರ್ಟೂನ್‌ಗಳ ಪ್ರದರ್ಶನ, ಮಿನಿ ಕಾರ್ಟೂನು ಕಾರ್ಯಾಗಾರ, ಸ್ಥಳದಲ್ಲಿಯೇ ಕ್ಯಾರಿಕೇಚರ್ ಬಿಡಿಸುವುದು, ವ್ಯಂಗ್ಯಚಿತ್ರಕ್ಕೆ ಸಂಬಂಧಪಟ್ಟ ಕ್ವಿಜ್ ಮುಂತಾದವು ಮನಸ್ಸಿಗೆ ಕಚಗುಳಿ ಇಡಲಿವೆ.
“ಕಿರೀಟ’ ಧಾರಣೆ: ಚಿತ್ರ ನಟ- ನಿರ್ದೇಶಕ ಉಪೇಂದ್ರ ಮತ್ತು ಮಣಿಪಾಲ ವಿ.ವಿಯ ನಿವೃತ್ತ ಉಪಕುಲಪತಿಗಳಾದ ಡಾ. ಬಿ.ಎಂ. ಹೆಗಡೆ ಅವರಿಗೆ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ವಾರ್ಷಿಕ ಪ್ರಶಸ್ತಿ, “ಕಿರೀಟ’ ನೀಡಿ ಗೌರವಿಸಲಾಗುವುದು.
ತರಕಾರಿ ಮಳಿಗೆ: ಕರಾವಳಿಯ ರೈತರು ತಾವು ಬೆಳೆದ ತರಕಾರಿಗಳನ್ನು ತಂದು ಇಲ್ಲಿ ಮಾರಾಟಕ್ಕಿರಿಸಿದ್ದಾರೆ. ತಾಜಾ ತಾಜಾ ತರಕಾರಿ ಬೇಕಿದ್ದವರೂ ಇಲ್ಲಿಗೆ ಬರಬಹುದು. ಅಷ್ಟೇ ಅಲ್ಲದೆ ಕರಾವಳಿಯಲ್ಲಿ ಮಾತ್ರ ಸಿಗುವ ಕೆಲವು ವಸ್ತು, ಪದಾರ್ಥಗಳ ಮಳಿಗೆಗಳೂ ಇಲ್ಲಿವೆ.
120-130 ವರ್ಷಗಳ ಹಿಂದೆಯೇ ಕರಾವಳಿಯ ಜನ ಬೆಂಗಳೂರು, ಮುಂಬೈನತ್ತ ಮುಖ ಮಾಡಿದ್ದರು. ಹಾಗೆ ವಲಸೆ ಹೋದವರಲ್ಲಿ ಎಷ್ಟೋ ಜನರಿಗೆ ತಮ್ಮ ಸಂಸ್ಕೃತಿ, ಜನಜೀವನದ ನಂಟು ಬಿಟ್ಟು ಹೋಗುತ್ತಿದೆ. ಕೆಲವೊಂದಷ್ಟು ಜನ ಇನ್ನೂ ಅವುಗಳನ್ನೆಲ್ಲ ನೆನಪಿಟ್ಟುಕೊಂಡಿದ್ದಾರೆ. ಮುಂಬೈನಲ್ಲಿ ಕರಾವಳಿಗರಿಗೆ ಒಂದು ಸಾಂಸ್ಥಿಕ ರೂಪವಿದೆ. ಅದೇ ರೀತಿ ನಾವು, ಅನ್ನ ಕೊಟ್ಟ ಬೆಂಗಳೂರಿನಲ್ಲಿ ನಮ್ಮ ಕರಾವಳಿಯ ಕಂಪನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ ಕಾಂಚನ್ ಅವರ ಕಲ್ಪನೆ ಇದು. ಸುಮಾರು 200 ಜನರು ತಂಡ ಅವರ ಜೊತೆ ಸೇರಿ ಟ್ರಸ್ಟ್‌ನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ತಿಂಗಳ ಬೆಳಕು, ಗುಲ್‌ಮೊಹರ್, ಬೆಳಕು ಕಾರ್ಯಕ್ರಮಗಳ ಮುಂದುವರಿದ ಭಾಗವೇ ಈ ಹಬ್ಬ. ಇಂಥ ಹಬ್ಬವನ್ನು ಮಲೆನಾಡಿನವರು, ಉತ್ತರ ಕರ್ನಾಟಕದವರು, ಮೈಸೂರು ಭಾಗದವರು ಎಲ್ಲರೂ ಆಚರಿಸಬೇಕು. ಆಗ ಒಂದು ಪ್ರದೇಶದ ಸಂಸ್ಕೃತಿ, ಆಚಾರ-ವಿಚಾರಗಳ ಅರಿವು ಇತರರಿಗೆ ಆಗುತ್ತದೆ.
-ಭಾಸ್ಕರ್ ಬಂಗೇರ, ಟ್ರಸ್ಟ್‌ನ ಸದಸ್ಯ
ಎಲ್ಲಿ?: ಚಂದ್ರಗುಪ್ತ ಮೌರ್ಯ ಕ್ರೀಡಾಂಗಣ (ಶಾಲಿನಿ ಗ್ರೌಂಡ್), ಜಯನಗರ 5ನೇ ಬ್ಲಾಕ್
ಯಾವಾಗ?: ಜ. 20-21 ಶನಿವಾರ- ಭಾನುವಾರ ಬೆಳಗ್ಗೆ 10ರಿಂದ ರಾತ್ರಿ 10
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.