10 ವರ್ಷ ದಾಟಿದರೂ ದುರಸ್ತಿ ಕಾಣದ ಕಿಂಡಿ ಅಣೆಕಟ್ಟು
Team Udayavani, Jan 21, 2018, 2:18 PM IST
ಸುಳ್ಯ : ಈ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡು 19 ವರ್ಷ. ಅದು ಕುಸಿದು ಬಿದ್ದು 10 ವರ್ಷ ಸಂದಿದೆ. ದುರಸ್ತಿ ಪಡಿಸಿ ಎಂದು ಸ್ಥಳೀಯರು ಇಟ್ಟ ಬೇಡಿಕೆಗಂತೂ ಲೆಕ್ಕವೇ ಇಲ್ಲ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ಪರಿಣಾಮ, ಬೇಸಗೆಯಲ್ಲಿ ಕೆಲ ಮನೆಗಳಿಗೆ ಕುಡಿಯಲು ನೀರಿಲ್ಲ, ನೂರಾರು ಎಕರೆ ತೋಟಕ್ಕೆ ನೀರಿನ ಬರವೂ ತಪ್ಪಿಲ್ಲ!
ಪೆರುವಾಜೆ ಗ್ರಾಮದ ಅಡ್ಯತಕಂಡ ಕಿಂಡಿ ಅಣೆಕಟ್ಟಿನ ದುಃಸ್ಥಿತಿಯ ಕಥೆಯಿದು. ಹತ್ತು ವರ್ಷಗಳ ಬೇಡಿಕೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಜನರು ಈ ಕಟ್ಟ ಮತ್ತೆ ದುರಸ್ತಿಯಾಗಬಹುದು ಎಂಬ ಆಸೆ ಕೈಬಿಟ್ಟಿದ್ದಾರೆ. ಬಿರು ಬೇಸಗೆಯಲ್ಲಿ ಅಣೆಕಟ್ಟ ಇದ್ದೂ, ನೀರಿನ ಬರ ಎದುರಿಸಬೇಕಾದ ಅಸಹಾಯಕತೆ ಇಲ್ಲಿನದು.
ಕಿಂಡಿ ಅಣೆಕಟ್ಟ
1999ರಲ್ಲಿ ಪೆರುವಾಜೆಯಲ್ಲಿ ಹಾದು ಹೋಗುವ ಗೌರಿ ಹೊಳೆಗೆ ಅಡ್ಯತಕಂಡ ಬಳಿ ಸಣ್ಣ ನೀರಾವರಿ ಇಲಾಖೆ ಮೂಲಕ 20 ಲಕ್ಷ ರೂ. ವೆಚ್ಚದಲ್ಲಿ ಅಣೆಕಟ್ಟು ಮಂಜೂರುಗೊಂಡಿತ್ತು. ಗುತ್ತಿಗೆ ಪಡೆದುಕೊಳ್ಳುವ ವಿಚಾರದಲ್ಲಿ ಹೊಯ್ದಾಟ ನಡೆದು, ಕೊನೆಗೂ ಅಣೆಕಟ್ಟ ನಿರ್ಮಾಣವಾಗಿತ್ತು. ಆದರೆ ಆರಂಭದಿಂದಲೇ ಹಲಗೆ, ಅಡಿಪಾ ಯದಿಂದ ನೀರು ಸೋರಿಕೆ ಆಗುತ್ತಲೇ ಇತ್ತು. ಸೋರಿಕೆ ಮಧ್ಯೆಯೂ ನಿಂತ ನೀರಿನಿಂದ ಮಾರ್ಚ್ ತನಕ 50ಕ್ಕೂ ಅಧಿಕ ಕುಟುಂಬದ ಕೃಷಿ ತೋಟಕ್ಕೆ ಆಧಾರವಾಗಿತ್ತು.
ಪಿಲ್ಲರ್, ತಡೆಗೋಡೆ ಕುಸಿತ
ಹತ್ತು ವರ್ಷದ ಹಿಂದೆ ಬೇಸಗೆ ಕಾಲದಲ್ಲಿ ಕಟ್ಟಕ್ಕೆ ಹಲಗೆ ಜೋಡಿಸಲಾಗಿತ್ತು. ನೀರಿನ ಮಟ್ಟ ಇಳಿಕೆಯಾಗಿ ಹಲಗೆ ತೆಗೆಯಲು ಒಂದೆರಡು ದಿನ ಬಾಕಿ ಇತ್ತು. ಆಗ ಹೊಳೆಯಲ್ಲಿ ಹರಿದು ಬಂದ ಮಳೆ ನೀರಿನ ಪ್ರವಾಹಕ್ಕೆ ಅಣೆಕಟ್ಟಿನ ಮೂರು ಪಿಲ್ಲರ್, ಒಂದು ಬದಿಯ ತಡೆಗೋಡೆ ಕೊಚ್ಚಿಕೊಂಡು ಹೋಗಿತ್ತು. ಅದಾದ ಬಳಿಕ ಕಿಂಡಿ ಅಣೆಕಟ್ಟಿಗೆ ದುರಸ್ತಿ ಭಾಗ್ಯ ಸಿಕ್ಕಿಲ್ಲ. ಹತ್ತಾರು ಮನವಿಗಳು ಜನಪ್ರತಿನಿಧಿಗಳಿಗೆ, ಇಲಾಖೆಗಳಿಗೆ ಸಂದರೂ ಅದರಿಂದ ಕಿಂಚಿತ್ತು ಪ್ರಯೋಜನ ಕಂಡಿಲ್ಲ ಅನ್ನುತ್ತಾರೆ ಸ್ಥಳೀಯ ಕೃಷಿಕರು.
ಗುದ್ದಲಿ ಪೂಜೆ
ಕುಸಿದು ಹೋದ ಕಿಂಡಿ ಅಣೆಕಟ್ಟಿನಿಂದ 1.5 ಕಿ.ಮೀ. ಮೇಲ್ಭಾಗದ ಚೆನ್ನಾವರ ಸೇತುವೆ ಬಳಿ ಹೊಸ ಅಣೆಕಟ್ಟು ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆ ಮೂಲಕ ಕಳೆದ ವರ್ಷ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ತತ್‌ಕ್ಷಣವೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಇಲಾಖೆಯ ಎಂಜಿನಿಯರ್ ಹೇಳಿದ್ದರು. ಅದಾಗಿ ಒಂದು ವರ್ಷ ಕಳೆಯಿತು. ಅಲ್ಲಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದರಿಂದ ಹಳೆ ಕಟ್ಟ ದುರಸ್ತಿ ಆಗದ ಕಥೆಯಂತೆ, ಹೊಸ ಕಟ್ಟದ ಕಥೆಯೂ ಗುದ್ದಲಿಪೂಜೆಗೆ ಸೀಮಿತವಾಗುವ ಅನುಮಾನ ಮೂಡಿದೆ.
ಅಭಿಯಾನಕ್ಕಿಲ್ಲ ಅರ್ಥ
ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದ ಬಗ್ಗೆ ಗಂಟೆಗಟ್ಟಲೇ ಚರ್ಚೆ ನಡೆಯುತ್ತದೆ. ಊರೂರು ಜಲಜಾಗೃತಿ ಅಭಿಯಾನವೂ ಆಗುತ್ತಿದೆ. ಇಂತಿಷ್ಟು ದಿನದಲ್ಲಿ ಹಲಗೆ ಹಾಕಿ ಎಂಬ ಸೂಚನೆಯನ್ನು ಅಧಿಕಾರಿಗಳು ನೀಡುತ್ತಾರೆ. ಕಳೆದ ವರ್ಷ ಮಂಗಳೂರಿನ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗೆ ಗ್ರಾಮಸ್ಥರು ಕರೆ ಮಾಡಿ, ಕುಸಿದ ಕಿಂಡಿ ಅಣೆಕಟ್ಟು ಪರಿಶೀಲಿಸಲು ಮನವಿ ಮಾಡಿದ್ದರು. ಬರುತ್ತೇನೆಂದೂ ಹೇಳಿದ ಅಧಿಕಾರಿ ಈ ತನಕವೂ ಬಂದಿಲ್ಲ ಅನ್ನುತ್ತಾರೆ ಸ್ಥಳೀಯರು.
ಗೆದ್ದಲು ಹಿಡಿಯುತ್ತಿವೆ
ಕಿಂಡಿ ಅಣೆಕಟ್ಟಿಗೆ ಅಳವಡಿಸುವ ಹಲಗೆ ಗೆದ್ದಲು ಹಿಡಿಯುತ್ತಿದೆ. ಶೇ. 90ಕ್ಕೂ ಅಧಿಕ ಮರದ ಹಲಗೆಗಳು ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿವೆ. ಇದನ್ನು ಸಂರಕ್ಷಿಸಲು ಇಲಾಖೆಗೂ ಸಾಧ್ಯವಾಗಿಲ್ಲ. ಒಂದು ಬದಿಯ ತಡೆಗೋಡೆ ಕುಸಿದ ಪರಿಣಾಮ, ಆ ಭಾಗದಲ್ಲಿ 300ಕ್ಕೂ ಅಧಿಕ ಅಡಿಕೆ ಗಿಡಗಳು ಜಲಸಮಾಧಿಯಾಗಿವೆ. ಪ್ರತಿ ವರ್ಷದ ಮಳೆಗೂ, ಮಣ್ಣಿನ ಸವೆತ ಹೆಚ್ಚುತ್ತಿದ್ದು, ಅದರಿಂದ ರಕ್ಷಣೆ ಸಾಧ್ಯವಾಗಿಲ್ಲ. ತಡೆಗೋಡೆ ನಿರ್ಮಿಸುವ ಕಾರ್ಯವೂ ಆಗಿಲ್ಲ.
ದಲಿತ ಕುಟುಂಬಕಿಲ್ಕ ನೀರು
ಕಿಂಡಿ ಅಣೆಕಟ್ಟು ಇದ್ದ ಸಂದರ್ಭದಲ್ಲಿ ಚೆನ್ನಾವರ, ಕುಂಡಡ್ಕ ಇತರೆ ಪರಿಸರದ ಮನೆಗಳ ಬಾವಿಗಳಲ್ಲಿಯು ಅಂತರ್ಜಲದ ಮಟ್ಟ ಹೆಚ್ಚಾಗಿತ್ತು. ಆದರೆ ಅಣೆಕಟ್ಟು ಕುಸಿದ ಅನಂತರ ಬಾವಿಗಳ ನೀರಿನ ಮಟ್ಟವೂ ಕುಸಿದಿದೆ. ಚೆನ್ನಾವರ ಪರಿಸರದ ಐದಾರು ದಲಿತ ಕುಟುಂಬಗಳಿಗೆ 15 ದಿನ ದಾಟಿದರೆ ಕುಡಿಯಲು ನೀರು ಇಲ್ಲ. ಅಣೆಕಟ್ಟು ದುರಸ್ತಿ ಮಾಡಿ ನಮಗೆ ಕುಡಿಯಲು ನೀರು ಕೊಡಿ ಎಂಬ ಅವರ ಕೂಗಿಗೆ ಸ್ಪಂದನೆಯೇ ಸಿಕ್ಕಿಲ್ಲ.
ನೀರಿನ ಬವಣೆ
ಹಳೆ ಅಣೆಕಟ್ಟು ದುರಸ್ತಿ ಆಗಿಲ್ಲ. ಹೊಸ ಅಣೆಕಟ್ಟು ನಿರ್ಮಾಣ ಆಗುತ್ತಿಲ್ಲ. ಇಲ್ಲಿ ಕೆಲ ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆಯಿದ್ದರೆ, ಕೃಷಿಗೆ ನೀರು ಸಾಲುತ್ತಿಲ್ಲ. ದುರಸ್ತಿಗೆ ಮನವಿ ಮಾಡಿ ಸಾಕಾಗಿದೆ.
– ಇಕ್ಬಾಲ್ ಚೆನ್ನಾವರ
ಸ್ಥಳೀಯ ನಿವಾಸಿ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.