ಕೀಟಬಾಧೆಗೆ ಸೋಲಾರ್ ದೀಪ
Team Udayavani, Jan 22, 2018, 11:54 AM IST
ಬೆಂಗಳೂರು: “ಬೆಳೆಗಳಿಗೆ ಕೀಟಬಾಧೆಯೇ? ಹಾಗಿದ್ದರೆ, ಸೋಲಾರ್ ದೀಪ ಅಳವಡಿಸಿ’ ಅಂತಾರೆ ದಾವಣಗೆರೆಯ ಎಂ.ಜಿ. ಕರಿಬಸಪ್ಪ. ಹೌದು, ಕೀಟಬಾಧೆಗೆ ಔಷಧ ಸಿಂಪಡಿಸುವಂತೆ ತಜ್ಞರು ಸಲಹೆ ಮಾಡುವುದು ಸಾಮಾನ್ಯ. ಆದರೆ, ಈ ಕೀಟಗಳ ಹಾವಳಿ ನಿಯಂತ್ರಣಕ್ಕೆ ಕರಿಬಸಪ್ಪ ಅವರು ಸೋಲಾರ್ ಕೀಟನಾಶಕ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.
ಇದು ಈಗ ಎಲ್ಲರ ಗಮನಸೆಳೆದಿದ್ದು, ನೆರೆ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ.ಇದು ಅತ್ಯಂತ ಸುಲಭ ಉಪಾಯ. ಕಬ್ಬಿಣದ ಗೂಟ, ಅದಕ್ಕೆ ಹೊಂದಿಕೊಂಡಂತೆ ಸೋಲಾರ್ ಪ್ಯಾನೆಲ್ ಮತ್ತು ಅದರ ಕೆಳಗೆ ಸೌರಬ್ಯಾಟರಿ ಆಧಾರಿತ ದೀಪ.
ಅದರ ಬುಡದಲ್ಲೇ ಒಂದು ಸಣ್ಣ ಬುಟ್ಟಿ. ಅದರಲ್ಲಿ ನೀರು ಹಾಕಿ, ನಾಲ್ಕು ಹನಿ ಶಾಂಪೂ ಮಿಶ್ರಣ ಮಾಡಿದರೆ ಸಾಕು. ಸಂಜೆ ಜಮೀನಿನಲ್ಲಿ ಶತ್ರುಕೀಟಗಳ ಹಾವಳಿ ಶುರುವಾಗುತ್ತಿದ್ದಂತೆಯೇ ಸ್ವಯಂಪ್ರೇರಿತವಾಗಿ ಈ ಸೋಲಾರ್ ದೀಪ ಹೊತ್ತಿಕೊಂಡು, ಬೆಳೆಗಳನ್ನು ಹಾಳುಮಾಡುವ ಆ ಕೀಟಗಳನ್ನು ತನ್ನತ್ತ ಆಕರ್ಷಿಸುತ್ತದೆ.
ಶೇ.80ರಷ್ಟು ಕೀಟ ನಿಯಂತ್ರಣ: ಈ ಉಪಾಯದಿಂದ ಶೇ.80ರಷ್ಟು ಕೀಟಗಳ ಹಾವಳಿ ನಿಯಂತ್ರಿಸಬಹುದು. ಇದರಿಂದ ಒಂದೆಡೆ ರೈತರಿಗೆ ಕೀಟನಾಶಕದ ಖರ್ಚು ಉಳಿದರೆ, ಜನರಿಗೆ ರಾಸಾಯನಿಕಮುಕ್ತ ಆಹಾರ ದೊರೆಯುತ್ತದೆ. ಇಳುವರಿ ಪ್ರಮಾಣ ಕೂಡ ಶೇ.10ರಿಂದ 15ರಷ್ಟು ಏರಿಕೆ ಆಗುತ್ತದೆ ಎಂದು ಲಕ್ಷ್ಮೀ ಏಜೆನ್ಸಿಸ್‌ನ ಕರಿಬಸಪ್ಪ ತಿಳಿಸುತ್ತಾರೆ.
ಕೃಷಿ ಇಲಾಖೆ ಅಧಿಕಾರಿಗಳು ಈ ಯಂತ್ರವನ್ನು ಮೆಚ್ಚಿಕೊಂಡಿದ್ದು, ಗದಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಯಂತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಲ್ಲದೆ, ಯಂತ್ರಕ್ಕೆ ಎರಡು ತಿಂಗಳ ಹಿಂದಷ್ಟೇ ಪೇಟೆಂಟ್ ಸಿಕ್ಕಿದ್ದು, ಮುಂಬೈ, ಪುಣೆ, ಆಂಧ್ರಪ್ರದೇಶ, ಗೋವಾ ಸೇರಿದಂತೆ ವಿವಿಧೆಡೆಯಿಂದ ಬೇಡಿಕೆ ಬಂದಿದೆ ಎಂದು ಹೇಳಿದರು.
ಯಂತ್ರಕ್ಕಾಗಿ ಮೊ: 98809 73218 ಸಂಪರ್ಕಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.