ಎಕ್ಕಾರು ಗ್ರಾಮಸಭೆ
Team Udayavani, Jan 26, 2018, 11:49 AM IST
ಎಕ್ಕಾರು : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ಅರಸುಪದವಿನ ಸರಕಾರಿ ಜಾಗದಲ್ಲಿ ಅಕ್ರಮ ಕೆಂಪು ಕಲ್ಲು ಕೋರೆಯಲ್ಲಿ ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲೂ ಕಲ್ಲು ತೆಗೆಯುತ್ತಿದ್ದು ಈ ಬಗ್ಗೆ ಇಲಾಖೆ ಮೌನ ವಹಿಸಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ಎಕ್ಕಾರು ಗ್ರಾಮ ಸಭೆಯಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖಾಧಿಕಾರಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕ ಎಕ್ಕಾರು ಮತ್ತು ಬಡಗ ಎಕ್ಕಾರು ಗ್ರಾಮಗಳಿಗೆ ಸಂಬಂಧಿಸಿದ 2017-18ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.
ಗ್ರಾಮ ಪಂಚಾಯತ್‌ನಲ್ಲಿ ಸರಕಾರಿ ಜಾಗ ಎಷ್ಟಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ವಿಜೇತ್ ಅವರಲ್ಲಿ ಕೇಳಿದ ಕಸ್ತೂರಿ ಪಂಜ, ಖಾಸಗಿ ಜಾಗದಲ್ಲಿ ಕಾನೂನು ಬದ್ಧವಾಗಿದ್ದ ಕೋರೆಗಳಿಗೆ ತನ್ನ ಆಕ್ಷೇಪವಿಲ್ಲ. ಆದರೆ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಕೋರೆ ನಡೆಸುವವರ ವಿರುದ್ಧ ಕಠಿನ ಕಾನೂನುಕ್ರಮ ತೆಗೆದುಕೊಳ್ಳಬೇಕು ಈ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳು ಕಾರ್ಯನಿರತರಾಗಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ದೀಪಿಕಾ, ಈಗಾಗಲೇ 12 ಪ್ರಕರಣದಲ್ಲಿ ಸಾಕ್ಷಿಯಾಗಿ ತಮ್ಮನ್ನು ಹಾಕಲಾಗಿದೆ. ನ್ಯಾಯಾಲಯಕ್ಕೆ ಹೋಗಬೇಕಾಗಿದೆ. ಅಕ್ರಮ ಕೋರೆಯ ಬಗ್ಗೆ ಗಣಿ, ಕಂದಾಯ, ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿದೆ ಎಂದರು.
ಗ್ರಾಮಸ್ಥರಿಗೆ ನಕ್ಷೆ ತೋರಿಸಿ
ಅರಣ್ಯ ಇಲಾಖೆಯ 139ರಲ್ಲಿ 60 ಎಕರೆ ಜಾಗ ಅರಣ್ಯ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಆ ಜಾಗದಲ್ಲಿ 4 ಕೋರೆಗಳು ಇಲ್ಲ. ಖಾಸಗಿ ಜಾಗದವರು ನಕ್ಷೆ ತೋರಿಸಿದ್ದಾರೆ.
ಅದರಲ್ಲಿ ನಮ್ಮ ಜಾಗ ಬರುವುದಿಲ್ಲ. ಕೋರೆಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ನಮಗೆ ಅಧಿಕಾರಿ ಇಲ್ಲ ಈ ಬಗ್ಗೆ ಮೇಲಾಧಿಕಾರಿಯವರಿಗೆ ತಿಳಿಸುತ್ತೇನೆ ಎಂದು ಅರಣ್ಯ ಇಲಾಖಾಧಿಕಾರಿ ಹೇಳಿದರು. ಇದಕ್ಕೆ ಗರಂ ಆದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ನಿಮ್ಮ ಅಸಂಬದ್ಧ ಉತ್ತರ ಬೇಡ ಮುಂದಿನ ಗ್ರಾಮ ಸಭೆಗೆ 139 ಸರ್ವೇ ನಂಬ್ರದ 60 ಎಕರೆ ಜಾಗದ ಸರ್ವೆ ಮಾಡಿ ನಕ್ಷೆ ಗ್ರಾಮಸ್ಥರಿಗೆ ತೋರಿಸಬೇಕು ಎಂದರು.
ಈ ಕೆಲಸ ಆಗದಿದ್ದರೆ ಮುಂದಿನ ಗ್ರಾಮ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. 10 ಎಕರೆ ಅಗ್ನಿ ಶಾಮಕ ದಳದ ಜಾಗದಲ್ಲಿ ಅಕ್ರಮ ಕೋರೆ ನಡೆಸುತ್ತಿದ್ದರು. ಇಲಾಖೆ ಎಚ್ಚೆತ್ತು ಅವರ ಮೇಲೆ ಕ್ರಮ ತೆಗೆದುಕೊಂಡಿದೆ ಎಂದು ಸಭೆಯಲ್ಲಿ ಗ್ರಾಮಲೆಕ್ಕಾಧಿಕಾರಿ ವಿಜೇತ್ ಸಭೆಯಲ್ಲಿ ತಿಳಿಸಿದರು.
ಕಟ್ಟಡ ವರ್ಗಾವಣೆ
ಎಕ್ಕಾರು ಪಂಚಾಯತ್ ನ ಸಮೀಪವಿರುವ ಕೃಷಿ ಇಲಾಖೆಗೆ ಸಂಬಂಧಪಟ್ಟ ಕಟ್ಟಡ ಪಶು ಸಂಗೋಪನ ಇಲಾಖೆಗೆ ವರ್ಗಾವಣೆ ಯಾಗಲಿದೆ. ಈ ಬಗ್ಗೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ವೈದ್ಯಾಧಿಕಾರಿ ಡಾ| ಪ್ರಭಾಕರ ಸಭೆಯಲ್ಲಿ ತಿಳಿಸಿದರು. ಮೊಲಿ ಬೆನ್ನಿ ಪ್ರದೇಶದಲ್ಲಿ ಹೊಸ ವಿದ್ಯುತ್ ಪರಿವರ್ತಕ ಬೇಡಿಕೆ ಮಾಡಲಾಗಿದ್ದು ಇನ್ನೂ ಆಗಿಲ್ಲ ಎಂದು ಮೆಸ್ಕಾಂ ಇಲಾಖಾಧಿಕಾರಿಯವರಲ್ಲಿ ತಮ್ಮ ಬೇಡಿಕೆಯನ್ನು ಗ್ರಾಮಸ್ಥರು ತಿಳಿಸಿದರು.
ಪಂಚಾಯತ್ ಸಿಸಿ ಕೆಮರಾದಿಂದ ಕಳ್ಳನ ಪತ್ತೆ
ಪಂಚಾಯತ್‌ನಲ್ಲಿ ಅಳವಡಿಸಲಾದ ಸಿಸಿ ಕೆಮರಾದಿಂದ ಮಚ್ಚಾರಿನಲ್ಲಿ ನಡೆದ ಸರಕಳ್ಳತನದ ಬಗ್ಗೆ ಸರಿಯಾದ ಮಾಹಿತಿ ಹಾಗೂ ಕಳ್ಳನನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಗ್ರಾಮದಲ್ಲಿ ಶಾಂತಿ, ಸಾಮರಸ್ಯದಿಂದ ಇದ್ದರೆ ಒಳ್ಳೆಯದು. ಒಂಟಿ ಮಹಿಳೆಯರಿರುವ ಮನೆಗಳಲ್ಲಿ ಜಾಗ್ರತೆಯಾಗಿರಿ, ವಿಳಾಸ ಕೇಳಿ ಬಂದವರ ಬಗ್ಗೆ ನಿಗಾ ವಹಿಸಿ, ವಾಹನ,ಅಭರಣದ ಬಗ್ಗೆ ಜಾಗರೂಕತೆ ವಹಿಸಿ ಎಂದು ಬಜಪೆ ಪೊಲೀಸ್ ಠಾಣೆಯ ಎಸ್.ಐ. ರಾಜಾರಾಮ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.