ಶಿಸ್ತಿನ ಪಥದಲ್ಲಿ ಗಣತಂತ್ರ ದಿನ
Team Udayavani, Jan 27, 2018, 12:43 PM IST
ಬೆಂಗಳೂರು: ಶಿಸ್ತುಬದ್ಧ ಕವಾಯತು, ಮೈ ನವಿರೇಳಿಸುವ ಬೈಕ್ ಸಾಹಸ, ಕಳರಿಪಯಟ್ಟು, ಕುದುರೆ ಸವಾರಿ, ಜನಮನಗೆದ್ದ ಪುಟಾಣಿಗಳ ನೃತ್ಯ ರೂಪಕಗಳಿಗೆ ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನ ವೇದಿಕೆ ಒದಗಿಸಿತು.
ಗಣರಾಜೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಲಯ-1ರ ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆಯ 650 ವಿದ್ಯಾರ್ಥಿಗಳು “ಪುಣ್ಯಭೂಮಿ ಭಾರತ’ ಪರಿಕಲ್ಪನೆಯಡಿ ಪ್ರದರ್ಶಿಸಿದ ನೃತ್ಯ ರೂಪಕ ಗಮನಸೆಳೆಯಿತು.
ಮಹತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ, ದೇಶದ ಸಾಂಸ್ಕೃತಿಕ ವೈಭವಕ್ಕೆ ಕನ್ನಡ ನಾಡು ನುಡಿಯ ಕೊಡುಗೆ, ಜಾತಿ, ಭಾಷೆ, ಮತ ಧರ್ಮಗಳ ವಿಭಿನ್ನ ಸಂಸ್ಕೃತಿಯ ಶ್ರೇಷ್ಠ ಭಾರತವನ್ನು ಪುಟಾಣಿಗಳು 9 ನಿಮಿಷದಲ್ಲಿ ಕಣ್ಣ ಮುಂದೆ ತಂದರು.
ಬೆಂಗಳೂರು ದಕ್ಷಿಣ ವಲಯ-4ರ ಹೂಡಿ ಸರ್ಕಾರಿ ಪ್ರೌಢಶಾಲೆ, ಮಾದರಿ ಪ್ರಾಥಮಿಕ ಶಾಲೆ, ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್‌ನ 682 ವಿದ್ಯಾರ್ಥಿಗಳು ಸೇರಿ “ನಾವು ಪ್ರಚಂಡ ಭಾರತೀಯರು-ವಿಶಾಲ ಹೃದಯದವರು’ ಎಂಬ ಪರಿಕಲ್ಪನೆಯಡಿ, ಭಾರತೀಯರ ಹೃದಯವಂತಿಕೆ, ಡಾ.ಬಿ.ಆರ್.ಅಂಬೇಡ್ಕರ್‌ರ ಬಾಲ್ಯ ಮತ್ತು ಸಾಧನೆಗಳನ್ನು ನೃತ್ಯ ರೂಪಕದ ಮೂಲಕ ತೆರೆದಿಟ್ಟರು.
ಬೈಕ್ ಸಾಹಸ: ಭಾರತೀಯ ಸೇನಾ ಪೊಲೀಸ್‌ನ ಶ್ವೇತ್ ಅಶ್ವದಳದ ಯೋಧರು ಬೈಕ್ ಮೂಲಕ ಸಾಹಸ ಮೆರೆದರು. ವೇಗವಾಗಿ ಓಡುತ್ತಿರುವ ಬೈಕ್‌ನಲ್ಲಿ ಸೈನಿಕರಿಂದ ಸುದರ್ಶನ ಚಕ್ರ, ಕ್ರಿಸ್ಮಸ್ ಟ್ರೀ, ಸೀಜರ್ ಕ್ರಾಸಿಂಗ್, ಡೈಮಂಡ್ ಕ್ರಾಸಿಂಗ್, ಒನ್ ಲೆಗ್ ರೈಡಿಂಗ್, ಸೈಡ್ ಬ್ಯಾಲೆನ್ಸಿಂಗ್, ಸ್ವಿಮಿಂಗ್, ಪ್ಲವರ್, ವಿವಿಧ ವ್ಯಾಯಾಮ, ಏಣಿ ಹತ್ತುವುದು, ಪೈರ್ ಜಂಪ್, ಟ್ಯೂಬ್‌ಲೈಟ್ ಜಂಪ್, ಎದೆಯ ಮೇಲೆ ಬೈಕ್ ಓಡಿಸುವುದು, ವ್ಹೀಲಿಂಗ್, ಬೈಕ್ ಸ್ಕಿಡ್ಡಿಂಗ್, ಪಿರಮಿಡ್ ಆಕೃತಿಯಲ್ಲಿ ಬೈಕ್ ರೈಡಿಂಗ್ ಹೀಗೆ ಎನ್.ಕೆ.ತಿವಾರಿ ನೇತೃತ್ವದ 33 ಯೋಧರ ತಂಡ ನೀಡಿದ 15 ನಿಮಿಷದ ಸಾಹಸ ಪ್ರದರ್ಶನಕ್ಕೆ ಪ್ರೇಕಕರು ರೋಮಾಂಚನಗೊಂಡರು.
ಕಳರಿಪಯಟ್ಟು: ಮದ್ರಾಸ್ ರೆಜಮೆಂಟ್ ಸೆಂಟರ್‌ನ ಹಾವ್ ಉನ್ನಿ ನೇತೃತ್ವದ ತಂಡ, ಕಳರಿ ಪಯಟ್ಟು ಕಲೆಯ ವಿವಿಧ ಕೌಶಲ್ಯಗಳನ್ನು ಪ್ರಬುದ್ಧವಾಗಿ ಪ್ರದರ್ಶಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಯಿತು. ಕತ್ತಿ ಹಿಡಿದು ಹೋರಾಡುವುದು, ಲಾಠಿ ತಿರುಗಿಸುವುದು, ಉದ್ದನೆಯ ಕತ್ತಿ ಜಳಪಿಸುವುದು, ಸಮೂಹವನ್ನು ಒಬ್ಬಂಟಿಯಾಗಿ ಎದುರಿಸುವುದು ಹೀಗೆ ಸೈನಿಕರ ನಾನಾ ರೀತಿಯ ಸಾಹಸಗಳು ಬೆರಗಾಗಿಸುವಂತಿದ್ದವು.
ಕುದುರೆ ಸವಾರಿ: ನಗರದ ಎಎಸ್‌ಸಿ ಕೇಂದ್ರ ಮತ್ತು ಕಾಲೇಜಿನ ಅಂತಾರಾಷ್ಟ್ರೀಯ ಕುದುರೆ ಸವಾರ ಹವಾಲ್ದಾರ್ ಪೀಯರ್‌ಸಿಂಗ್, ಎನ್.ಸಿ.ಡಾಕಾ, ನಾಯ್ಕ ಲಿಯಾಖತ್ ಖಾನ್, ಮುಖೇಶ್ ಗುಜ್ಜಾರ್ ವೇಗವಾಗಿ ಕುದುರೆ ಓಡಿಸುತ್ತಾ ವಿವಿಧ ರೀತಿಯ ಸಾಹಸ ಕೌಶಲ್ಯಗಳನ್ನು ಪ್ರದರ್ಶಿಸಿದರು.
ಶಿಸ್ತಿನ ಪಥ ಸಂಚಲನ: ಭಾರತೀಯ ಸೇನೆ, ಏರ್‌ಫೋರ್ಸ್, ಬಿಎಸ್‌ಎಫ್, ಸಿಆರ್‌ಪಿಫ್, ಗೋವಾ ರಾಜ್ಯ ಪೊಲೀಸ್, ಸಿಎಆರ್, ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಫ್, ಹೋಮ್ ಗಾರ್ಡ್ಸ್, ಎನ್‌ಸಿಸಿ ಬಾಯ್ಸ, ಅಗ್ನಿಶಾಮಕ ದಳ, ಅಬಕಾರಿ ದಳ, ಟ್ರಾಫಿಕ್ ವಾರ್ಡನ್ಸ್, ಕೆಎಸ್‌ಆರ್‌ಟಿಸಿ ಸೆಕ್ಯೂರಿಟಿ, ಕೆಎಸ್‌ಎಸ್‌ಎ, ಸಿವಿಲ್ ಡಿಫೆನ್ಸ್, ಭಾರತ್ ಸ್ಕೌಟ್ ಮತ್ತು ಗೈಡ್ಸ್, ಸೇಂಟ್ ಜಾನ್ಸ್ ಆ್ಯಂಬುಲೆನ್ಸ್, ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್, ಇಂಡಿನ್ ರೆಡ್‌ಕ್ರಾಸ್, ಫೈರ್ ವಾರ್ಡನ್, ಮಿತ್ರಾ ಅಕಾಡೆಮಿ ಸೇರಿ ವಿವಿಧ ಸಂಸ್ಥೆಗಳಿಂದ ಶಿಸ್ತುಬದ್ಧ ಪಥಸಂಚಲ ನಡೆಯಿತು. ಜತೆಗೆ ಸಮರ್ಥನಂ ಮತ್ತು ರಮಣ ಮಹರ್ಷಿ ವಿಕಲಚೇತನ ಸಂಸ್ಥೆಯ ಮಕ್ಕಳ ಪಥಸಂಚಲನ ಮೆಚ್ಚುಗೆಗೆ ಪಾತ್ರವಾದರೆ, ಶ್ವಾನದಳವೂ ಗಮನಸೆಳೆಯಿತು.
ಹೂವಿನ ಅಲಂಕಾರ: ರಾಷ್ಟ್ರಧ್ವಜ ಸ್ತಂಭದ ಆವರಣದ ಸುತ್ತ ಹೂವಿನ ಅಲಂಕಾರ ಮಾಡಲಾಗಿತ್ತು. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಪ್ರವೇಶ ದ್ವಾರವನ್ನು ಹೂಗಳಿಂದ ಸಿಂಗರಿಸಲಾಗಿತ್ತು. ರಾಜ್ಯಪಾಲರು ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ಭಾರತೀಯ ವಾಯುಪಡೆ ಹೆಲಿಕಾಪಟ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಲಾಯಿತು. ನಂತರ ರಾಜ್ಯಪಾಲರು ತೆರೆದ ಜೀಪ್‌ನಲ್ಲಿ ಪೆರೇಡ್ ಪರೀಕ್ಷಣೆ ಮಾಡಿ, ಗೌರವ ರಕ್ಷೆ ಸ್ವೀಕರಿಸಿದರು. ಪೆರೇಡ್ ಕಮಾಂಡರ್ ಮೇಜರ್ ಕೆ. ಅರವಿಂದ್ ಹಾಗೂ ಸೆಕೆಂಡ್ ಇನ್ ಕಮಾಂಡರ್ ಮೇಜರ್ ಪದ್ಮಾಕರ್ ನಾಗೀರೆಡ್ಡಿಯವರ ಮುಂದಾಳತ್ವದಲ್ಲಿ ಪೆರೇಡ್ ನಡೆಯಿತು.
ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ: ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಆಪ್ತ ಶಾಖೆಯ ಜಮೇದಾರ್ ನರಸಿಂಹಲು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಶಾಖಾಧಿಕಾರಿ ಜಿ.ಆರ್.ಸುದೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಶಾಖೆಯ ದಲಾಯತ್ ಸುಭಾಷ್‌ಚಂದ್ರ ರೆಡ್ಡಿ,
ಲೋಕೋಪಯೋಗಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿಯವರ ಆಪ್ತ ಶಾಖೆ ಜಮೇದಾರ್ ಡಿ.ಆರ್.ರಾಜು, ಉತ್ತರ ಕನ್ನಡ ಜಿಲ್ಲೆಯ ಉಪ ಕೃಷಿ ನಿರ್ದೇಶಕ ಟಿ.ಎಚ್.ನಟರಾಜ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಪರ ನಿರ್ದೇಶಕ ಡಾ.ಎಂ.ಟಿ.ಮಂಜುನಾಥ್, ಸಾರಿಗೆ ಆಯುಕ್ತರ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್. ಪ್ರೇಮಲತಾ ಸೇರಿ 12 ಮಂದಿಗೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು 2017-18ನೇ ಸಾಲಿನ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿದರು.
ಪೆರೇಡ್ ಬಹುಮಾನ: ಗಣರಾಜ್ಯೋತ್ಸವ ಪಥಸಂಚಲನದ 1ನೇ ಗುಂಪಿನಲ್ಲಿ ಸೇನಾ ತಂಡ ಪ್ರಥಮ ಹಾಗೂ ಬಿಎಸ್‌ಎಫ್ ತಂಡ ದ್ವಿತೀಯ ಬಹುಮಾನ ಪಡೆಯಿತು. 2ನೇ ಗುಂಪಿನಲ್ಲಿ ಅಬಕಾರಿ ತಂಡ ಹಾಗೂ ಕೆಎಎಸ್ ತಂಡ ಕ್ರಮವಾಗಿ ಮೊದಲೆರೆಡು ಬಹುಮಾನಕ್ಕೆ ಪಾತ್ರವಾದರೆ, 3ನೇ ಗುಂಪಿನಲ್ಲಿ ಮಿತ್ರಾ ಅಕಾಡೆಮಿ ಹಾಗೂ ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್, 4ನೇ ಗುಂಪಿನಲ್ಲಿ ಬೆಂಗಳೂರು ಇಂಟರ್‌ನ್ಯಾಷನಲ್ ಅಕಾಡೆಮಿ ಹಾಗೂ ಲಿಲ್ಲಿ ರೋಸ್ ಬಾಯ್ಸ,
5ನೇ ಗುಂಪಿನಲ್ಲಿ ಲಿಟಲ್ ಫ್ಲವರ್ ಪಬ್ಲಿಕ್ ಸ್ಕೂಲ್ ಹಾಗೂ ಪೊಲೀಸ್ ಪಬ್ಲಿಕ್ ಸ್ಕೂಲ್ ಕ್ರಮವಾಗಿ ಮೊದಲೆರಡು ಬಹುಮಾನ ಗಳಿಸಿದವು. ಗೋವಾ ಪೊಲೀಸರಿಗೆ ವಿಶೇಷ ಪ್ರಶಸ್ತಿ ಹಾಗೂ ಸಮರ್ಥನಂ ಮತ್ತು ರಮಣ ಮಹರ್ಷಿ ಸಂಸ್ಥೆಯ ಮಕ್ಕಳಿಗೂ ಪ್ರಶಸ್ತಿ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಥಮ ಬಹುಮಾನವನ್ನು ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆ ಮಕ್ಕಳು ಮುಡಿಗೇರಿಸಿಕೊಂಡರು.
ಭಾರತೀಯ ಸೇನಾ ಪೊಲೀಸ್‌ನ ಶ್ವೇತ್ ಅಶ್ವದಳ 1952ರಿಂದ ಪ್ರತಿ ವರ್ಷ ಸಾಹಸ ಪ್ರದರ್ಶನ ನೀಡುತ್ತಿದೆ. ಈ ಬಾರಿ ಬೆಂಗಳೂರಿನಲ್ಲೇ ಅವಕಾಶ ಸಿಕ್ಕಿರುವುದು ಖುಷಿತಂದಿದೆ. ಸೇನಾ ತರಬೇತಿ ನಂತರ ಸ್ವಯಂ ಪ್ರೇರಿತವಾಗಿ ಈ ತಂಡ ಸೇರಿದ್ದೇವೆ. ತಂಡದಲ್ಲಿ 16 ಮಂದಿ ಕನ್ನಡಿಗರಿದ್ದು, ನಿತ್ಯ ತಾಲೀಮಿನಿಂದ ಮಾತ್ರ ಇಂಥ ಸಾಹಸ ಸಾಧ್ಯವಾಗಿದೆ.
-ನಾಯ್ಕ ಎಂ. ಕುಮಾರ್, ಸೇನಾಪೊಲೀಸ್ ಶ್ವೇತ್ ಅಶ್ವದಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.