ಹುಣ್ಣಿಮೆ ಬೆಳಕಲ್ಲಿ ನಡೆದಿತ್ತು ಹೋರಾಟ
Team Udayavani, Jan 28, 2018, 6:20 AM IST
ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡಿದ ಕನ್ನಡಿಗ ಮೇಜರ್ ಪ್ರದೀಪ್ ಶೌರಿ ಆರ್ಯಗೆ ಈ ಬಾರಿಯ ಶೌರ್ಯ ಪುರಸ್ಕಾರ ಲಭಿಸಿದೆ. ಬೆಂಗಳೂರಿನಲ್ಲಿ ಚುನಾವಣೆ ಪರಿವೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು “ಉದಯವಾಣಿ’ಯೊಂದಿಗೆ ಮಾತಿಗಿಳಿದಿದ್ದಾರೆ…
ಜಮ್ಮು ಕಾಶ್ಮೀರದಲ್ಲಿ ನೀವು ನಡೆಸಿದ ಕಾರ್ಯಾಚರಣೆಯ ಬಗ್ಗೆ ಹೇಳಿ. ಇದೇ ಕಾರ್ಯಾಚರಣೆಯಲ್ಲಿನ ಯಶಸ್ಸು ನಿಮಗೆ ಶೌರ್ಯ ಪುರಸ್ಕಾರವನ್ನು ತಂದುಕೊಟ್ಟಿತು.
ಜಮ್ಮು ಕಾಶ್ಮೀರದ ಚಬುಕ್ ಪ್ರದೇಶದಲ್ಲಿ ತಡರಾತ್ರಿ ಲಷ್ಕರ್ ಉಗ್ರರು ಒಳನುಸುಳಲು ಪ್ರಯತ್ನಿಸಿದ ಸುಳಿವು ನಮಗೆ ಸಿಕ್ಕಿತ್ತು. ಈ ಸಮಯದಲ್ಲಿ ನಮ್ಮ ತಂಡ ಸಕ್ರಿಯವಾಯಿತು. ರಾತ್ರಿ ಹುಣ್ಣಿಮೆ ಬೆಳಕು… ಈ ವೇಳೆ ಉಗ್ರರು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಉಗ್ರರು ಅಡಗಿಕೊಂಡ ಜಾಗ ತಿಳಿಯುತ್ತಿದ್ದಂತೆಯೇ ನಾವು ಅವರನ್ನು ಸುತ್ತುವರಿಯಲು ಅರಂಭಿಸಿದೆವು. ಈ ವೇಳೆ ಹಠಾತ್ತನೆ ನನ್ನ ಬಳಿಯೇ ಇಬ್ಬರು ಉಗ್ರರು ಬಿದ್ದ ಮರವೊಂದರ ಕೆಳಗೆ ಅವಿತಿದ್ದರು. ಅವರ ಗಮನಕ್ಕೆ ನಾನು ಬರುವ ಮೊದಲೇ ನಾನು ಗುಂಡು ಹಾರಿಸಬೇಕಿತ್ತು. ಒಂದು ಕ್ಷಣ ತಡವರಿಸಿದರೂ ಅವರು ನನ್ನ ಮೇಲೆ ಗುಂಡು ಹಾರಿಸುತ್ತಿದ್ದರು. ನಾನು ತಕ್ಷಣ ಗುಂಡು ಹಾರಿಸಿ ಇಬ್ಬರು ಉಗ್ರರನ್ನು ಹತ್ಯೆಗೈದೆ.
ಗಡಿಯಲ್ಲಿ ನಿಮಗೆ ಸಾಮಾನ್ಯವಾಗಿ ಎದುರಾಗುವ ಸವಾಲುಗಳೇನು?
ಗಡಿಯಲ್ಲಿ ಎಂದಿಗೂ ಅನಿರೀಕ್ಷಿತತೆ ಇರುತ್ತೆ. ಶೆಲ್ ದಾಳಿ ನಡೆಯುತ್ತಿರುತ್ತೆ. ಒಮ್ಮೊಮ್ಮೆ ಹಠಾತ್ತಾಗಿ ತುಂಬಾ ಹೊತ್ತು ಮೌನ ಆವರಿಸುತ್ತದೆ. ನಿಜವಾದ ಸವಾಲು ಇದು. ಈ ಮೌನ ಯೋಧರ ಮೇಲೆ ಮಾನಸಿಕ ಒತ್ತಡ ಉಂಟುಮಾಡುತ್ತದೆ. ಮುಂದೇನಾಗುತ್ತದೆ ಎಂದು ಕುತೂಹಲ ಯೋಧರಲ್ಲಿ ಶುರುವಾಗುತ್ತದೆ. ವಿರುದ್ಧ ದಿಕ್ಕಿನಿಂದ ಯಾವ ರೀತಿ ದಾಳಿ ನಡೆಯುತ್ತದೆ ಎಂದು ನಿರೀಕ್ಷೆ ಹುಟ್ಟುತ್ತದೆ. ಹೀಗಾಗಿ ನಾವು ದಿನದ 24 ಗಂಟೆಯೂ ತಯಾರಾಗಿಯೇ ಇರಬೇಕಾಗುತ್ತದೆ.
ಗಡಿಯಲ್ಲಿ ಕೆಲಸ ಮಾಡುವವರಿಗೆ ಕುಟುಂಬದ ಬೆಂಬಲ ಹಾಗೂ ಸಹಕಾರ ಅತ್ಯಂತ ಅಗತ್ಯ. ಈ ನಿಟ್ಟಿನಲ್ಲಿ ನಿಮ್ಮ ಕುಟುಂಬ ಹೇಗೆ ಸಹಕಾರ ನೀಡುತ್ತದೆ?
ನನ್ನ ಅಣ್ಣ ಹಾಗೂ ತಮ್ಮ ಬೆಂಗಳೂರಿನಲ್ಲಿ ಇರುತ್ತಾರೆ. ಅವರೊಂದಿಗೆ ನನ್ನ ಸಂಸಾರವೂ ವಾಸಿಸುತ್ತಿದೆ. ನನ್ನ ಪತ್ನಿ ಹಾಗೂ ಇಬ್ಬರು ಪುತ್ರಿಯರು ಬೆಂಗ ಳೂರಿನಲ್ಲಿಯೇ ಇದ್ದಾರೆ. ನಾನು ಅವಿಭಕ್ತ ಕುಟುಂಬದಲ್ಲಿ ಇರುವುದರಿಂದ ಮನೆಯ ಬಗ್ಗೆ ಚಿಂತೆ ಮಾಡಬೇಕಿಲ್ಲ. ಬೆಂಗಳೂರಿನಲ್ಲಿದ್ದಾಗ ಎಷ್ಟು ಸಾಧ್ಯವೋ ಅಷ್ಟು ಸಮಯ ಕುಟುಂಬದ ಜತೆ ಕಳೆಯುತ್ತೇನೆ. ಐಆರ್‌ಎಸ್‌ನಲ್ಲಿ ಮಾತ್ರ ಇದ್ದರೆ ನನಗೆ ಕುಟುಂಬದ ಜತೆ ಕಳೆಯಲು ತುಂಬಾ ಸಮಯ ಸಿಗುತ್ತಿತ್ತು. ಆದರೆ ನಾನು ಐಆರ್‌ಎಸ್ ಹಾಗೂ ಸೇನೆಯೆರಡ ರಲ್ಲೂ ಕೆಲಸ ಮಾಡುವುದರಿಂದ ವರ್ಷದ 365 ದಿನವೂ ನಾನು ಬ್ಯುಸಿ ಇರುತ್ತೇನೆ. ಆದರೆ ನನ್ನ ಕುಟುಂಬ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಪತ್ನಿ-ಮಕ್ಕಳ ನಿರಂತರ ಬೆಂಬಲವಿದೆ.
ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹೇಳಿ…
ನನ್ನ ವಿದ್ಯಾಭ್ಯಾಸ ಬಹುತೇಕ ಬೆಂಗಳೂರಿನಲ್ಲೇ ಮಾಡಿದ್ದೇನೆ. ನ್ಯಾಷನಲ್ ಕ್ಯಾಲೇಜ್‌ನಲ್ಲಿ ಪಿಯು ಮಾಡಿ, ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಮಾಡಿದೆ. ಎಲ್‌ಎಲ್‌ಬಿ- ಪಿಎಚ್‌ಡಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಡಿದೆ.
ಸೇನೆಗೆ ಸೇರಿದ್ದು ಹೇಗೆ?
ನಾನು 2004ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ. ಅದಕ್ಕೆ ಆಯ್ಕೆಯಾದಾಗ ನನಗೆ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಬಯಕೆಗೆ ಒಂದು ದಾರಿ ಸಿಕ್ಕಿತು. ಯಾವುದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೂ, ಅದೇ ಸಮಯದಲ್ಲಿ ಸೇನೆಯಲ್ಲೂ ಸೇವೆ ಸಲ್ಲಿಸುವುದಕ್ಕಾಗಿ ಒಂದು ವಿಭಾಗ ಇದೆ. ಅದನ್ನು ಟೆರಿಟೋರಿಯಲ್ ಆರ್ಮಿ ಅಂತಾರೆ. ಕೇಂದ್ರದ ಅನುಮತಿ ಪಡೆದು ಪರೀಕ್ಷೆ ಬರೆಯಬಹುದು. ಟ್ರೇನಿಂಗ್ ಮುಗಿಸಿ ಹೊರಬಂದು ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೂ ವರ್ಷಕ್ಕೆ ಕನಿಷ್ಠ 2 ತಿಂಗಳು ಸೇನೆಯಲ್ಲಿ ಕೆಲಸ ಮಾಡಬೇಕಿರುತ್ತದೆ. ಅಲ್ಲಿ ವಿಶೇಷ ಕಾರ್ಯಾಚರಣೆ ಮಾಡುವ ಪ್ಯಾರಾಶೂಟ್ ರೆಜಿಮೆಂಟ್‌ಗೆ ನಾನು ಸೇರಿಕೊಂಡಿದ್ದೇನೆ.
ಕರ್ನಾಟಕದಲ್ಲಿ ಚುನಾವಣೆ ವೇಳೆ ನೀವು ಪರಿವೀಕ್ಷಕರಾಗಿ ನೇಮಕಗೊಂಡಿದ್ದಿರಿ. ಅಲ್ಲಿ ನಿಮ್ಮ ಪರಿಶ್ರಮಕ್ಕೆ ರಾಷ್ಟ್ರಪತಿ ಪುರಸ್ಕಾರವೂ ಲಭ್ಯವಾಗಿತ್ತು. ಆ ಅನುಭವ ಹೇಗಿತ್ತು?
2014ರ ಚುನಾವಣೆ ಸಮಯದಲ್ಲಿ ನಾನು ಕರ್ನಾಟಕದ ಚುನಾವಣಾ ಆಯೋಗಕ್ಕೆ ಕೆಲಸ ಮಾಡಿದ್ದೇನೆ. ನಾವು ಯಾವುದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮನ್ನು ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗ ಬಳಸಿಕೊಳ್ಳುತ್ತದೆ. ಈ ಸಮಯದಲ್ಲಿ ನಾನು ಕರ್ನಾಟಕದಲ್ಲಿ ಕೆಲಸ ಮಾಡಿದೆ. ನಾಗಾಲ್ಯಾಂಡ್‌ನಲ್ಲೂ ಚುನಾವಣೆ ಪರಿವೀಕ್ಷ ಕನಾಗಿ ಹೋಗಿದ್ದೆ. ಈ ವೇಳೆ ನನ್ನ ಕೆಲಸ ಮೆಚ್ಚಿ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಚುನಾವಣಾ ಆಯೋಗ ಸಾಮಾನ್ಯ ವಾಗಿ ಮೂರು ರೀತಿಯ ಪರಿವೀಕ್ಷಕರನ್ನು ನೇಮಿಸಿಕೊಳ್ಳು ತ್ತದೆ. ಐಆರ್‌ಎಸ್ ಅಧಿಕಾರಿಗಳನ್ನ ಚುನಾವಣಾ ಖರ್ಚು ವೆಚ್ಚದ ಪರಿವೀಕ್ಷಕರನ್ನಾಗಿ, ಐಪಿಎಸ್ ಅಧಿಕಾರಿಗಳನ್ನು ಭದ್ರತಾ ಪರಿವೀಕ್ಷಕರನ್ನಾಗಿ ಹಾಗೂ ಇತರರನ್ನು ಸಾಮಾನ್ಯ ಪರಿವೀಕ್ಷಕರನ್ನಾಗಿ ನೇಮಿಸಿಕೊಳ್ಳುತ್ತದೆ. ರಾಜಕೀಯ ಪಕ್ಷಗ ಳಾಗಲೀ, ಅಭ್ಯರ್ಥಿಗಳಾಗಲೀ ವೆಚ್ಚದ ಮಿತಿಯನ್ನ ಪಾಲಿಸುತ್ತಾರೆಯೇ, ವೆಚ್ಚದ ದಾಖಲೆಯನ್ನು ಸರಿಯಾಗಿ ಇಡುತ್ತಾರೆಯೇ, ಮತಕ್ಕಾಗಿ ಹಣ ನೀಡುತ್ತಾರೆಯೇ ಎಂಬುದನ್ನು ನಾವು ಗಮನಿಸುತ್ತೇವೆ. ದೂರು ಕೇಳಿಬಂದರೆ ಇದನ್ನು ಚುನಾವಣಾ ಆಯೋಗಕ್ಕೆ ವರದಿ ಮಾಡುತ್ತೇವೆ. ನಂತರ ಅದರ ಸೂಚನೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ನಾಗಾಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ವ್ಯಕ್ತಿಯೊಬ್ಬ ಚುನಾವಣೆ ಸಮಯದಲ್ಲಿ ಸುಮಾರು 2 ಕೋಟಿ ರೂ. ನಗದನ್ನು ಹೆಲಿಕಾಪ್ಟರ್‌ನಲ್ಲಿ ಹೊತ್ತೂಯ್ಯುತ್ತಿದ್ದ. ಈ ಬಗ್ಗೆ ಸುಳಿವು ಸಿಕ್ಕಿದ್ದರಿಂದ, ನಾನು ಕಾರ್ಯಾಚರಣೆ ನಡೆಸಿದೆ. ಇದು ನನಗೆ ರಾಷ್ಟ್ರೀಯ ಪುರಸ್ಕಾರ ತಂದುಕೊಟ್ಟಿತು.
ಕರ್ನಾಟಕದಲ್ಲಿ ಸ್ಥಳೀಯನಾಗಿದ್ದು ನಿಮಗೆ ಚುನಾವಣೆ ಸಮಯದಲ್ಲಿ ಸಹಾಯ ಮಾಡಿತೆ?
ನಾನು ಇಲ್ಲಿನವನೇ ಆಗಿದ್ದ ರಿಂದ ಮಾಹಿತಿ ಸಾಕಷ್ಟು ಸಿಕ್ಕಿತು. ಚುನಾವಣೆ ಸಮಯದಲ್ಲಿ ನಾನು ತುಂಬಾ ರೇಡ್ ಮಾಡಿದೆ. ಈ ದಾಳಿ ಯಶಸ್ವಿಯಾಗಿದ್ದಕ್ಕೆ ನಾನು ಸ್ಥಳೀಯನಾಗಿರುವುದೇ ಕಾರಣ. ಜನರೇ ಬಂದು ನನಗೆ ಹೇಳುತ್ತಿದ್ದರು… ನೋಡಿ ಇಲ್ಲಿ ಕ್ಯಾಶ್ ಇದೆ, ಅಲ್ಲೇನೋ ಮೂವ್‌ಮೆಂಟ್ ಆಗ್ತಿದೆ ಅಂತ. ಬಹಳಷ್ಟು ಸಾರಿ ತಪ್ಪು ಮಾಹಿತಿಯೂ ಬರುತ್ತಿತ್ತು. ತನ್ನ ವಿರೋಧಿಯ ಮೇಲೆ ಸುಳ್ಳು ಸುದ್ದಿ, ಮಾಹಿತಿ ನೀಡುವ ಕೆಲಸವನ್ನೂ ವಿಪಕ್ಷಗಳು, ವಿರೋಧಿ ಅಭ್ಯರ್ಥಿಗಳು ಮಾಡುತ್ತಾರೆ. ಆದರೆ ಇದನ್ನು ಸರಿಯಾಗಿ ವಿಶ್ಲೇಷಣೆ ಮಾಡಿ ಕೆಲಸ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಪುನಃ ಕೆಲಸ ಮಾಡಲು ನನಗೆ ಖುಷಿ. ನನ್ನನ್ನು ನೇಮಿಸಿಕೊಳ್ಳುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ.
ರಕ್ಷಣೆ-ಹಣಕಾಸು ಕ್ಷೇತ್ರದಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡುತ್ತಿದ್ದೀರಿ. ಎರಡರ ಕಾರ್ಯಕ್ಷೇತ್ರ ವಿಭಿನ್ನ. ಕಷ್ಟವಲ್ಲವೇ?
ರಕ್ಷಣಾ ಕ್ಷೇತ್ರದಲ್ಲಿ ನಮಗೆ ಬೇಕಿರುವುದು ಯೋಧನ ಕೌಶಲ. ಮಾಡು ಇಲ್ಲವೇ ಮಡಿ ಎಂಬಂತಹ ಮನಸ್ಥಿತಿ. ನಮಗೆ ಧೈರ್ಯ ಮುಖ್ಯ. ಹಣಕಾಸು ಕ್ಷೇತ್ರದಲ್ಲಿನ ನನ್ನ ಅನುಭವ ರಕ್ಷಣಾ ಕ್ಷೇತ್ರಕ್ಕೂ ಅನುಕೂಲವಾಗಿದೆ. ಆರ್ಥಿಕ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಒಂದು ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಲ್ಲಿ ಹಲವು ದಾರಿಗಳಿರುತ್ತವೆ. ನೀವು ಪರಿಹಾರ ಕಂಡುಕೊಂಡಿಲ್ಲ ಎಂದರೆ ಶ್ರಮ ವಹಿಸಿಲ್ಲ ಎಂದರ್ಥ. ಹೀಗಾಗಿ ಆರ್ಥಿಕ ಕ್ಷೇತ್ರ ನಮಗೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಕಲಿಸುತ್ತದೆ. ನಾನು ಕರ್ನಾಟಕ ಮತ್ತು ನಾಗಾಲ್ಯಾಂಡ್ ಚುನಾವಣೆ ಕಾರ್ಯದಲ್ಲಿ ಯಶಸ್ವಿಯಾಗಿದ್ದಕ್ಕೆ ಸೇನೆಯಲ್ಲಿ ನನಗೆ ಸಿಕ್ಕ ಅನುಭವವೇ ಮೂಲ ಕಾರಣ. ಅದರಲ್ಲೂ ನಾನು ಜಕ್ಕೂರು ಏರ್‌ಬೇಸ್‌ನಲ್ಲಿ ಪೈಲಟ್ ತರಬೇತಿ ಪಡೆದಿದ್ದಂತೂ, ನಾಗಾಲ್ಯಾಂಡ್ ಚುನಾವಣೆ ವೇಳೆ ಸಹಾಯಕ್ಕೆ ಬಂತು. ಹಣ ಹಂಚುವುದಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ಕೊಂಡೊಯ್ಯುತ್ತಿದ್ದಾಗ, ನನ್ನ ವಿಮಾನಯಾನದ ಅನುಭವ ತಕ್ಷಣದ ಕಾರ್ಯಾಚರಣೆಗೆ ಸಹಾಯಮಾಡಿತು. ಇನ್ನೊಂದೆಡೆ ಆರ್ಥಿಕ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ವ್ಯವಸ್ಥೆಯೊಳಗೆ ಶತ್ರುಗಳು ಇರುವುದಿಲ್ಲ. ಆದರೆ ಗಡಿಯಲ್ಲಿ ಶತ್ರುಗಳ ಜೊತೆಯೇ ಹೋರಾಡಬೇಕು. ಅಲ್ಲಿ ಮಾಹಿತಿ ಸಂಗ್ರಹ, ಕಾರ್ಯಾಚರಣೆ ದೊಡ್ಡ ಸವಾಲು. ಮಾಹಿತಿ ಸಂಗ್ರಹ, ಅದರ ವಿಶ್ಲೇಷಣೆ ವಿಚಾರದಲ್ಲಿ ಆರ್ಥಿಕ ಕ್ಷೇತ್ರದಲ್ಲಿನ ನನ್ನ ಅನುಭವ ಉಪಯೋಗಕ್ಕೆ ಬಂತು. ಮಾಹಿತಿ ಸಂಗ್ರಹದ ಮೂಲ ಬೇರೆಯಾದರೂ, ವಿಧಾನ ಒಂದೇ ಆಗಿರುತ್ತದೆ. ಅಲ್ಲದೆ ಅದರ ವಿಶ್ಲೇಷಣೆ ಎರಡೂ ಕ್ಷೇತ್ರಗಳಲ್ಲೂ ಒಂದೇ ಆಗಿದೆ. ನಾನು ಕೇವಲ ಸೇನೆಯಲ್ಲಿದ್ದರೆ/ ಐಆರ್‌ಎಸ್ ಅಧಿಕಾರಿಯಾಗಿದ್ದರೆ ಯಶಸ್ವಿ ಆಗುತ್ತಿರಲಿಲ್ಲವೇನೋ. ಆದರೆ ಇವರೆಡೂ ಅನುಭವ ನನ್ನ ಕೌಶಲ್ಯವನ್ನು ವೃದ್ಧಿಸಿದೆ. ಇದನ್ನು ಪ್ರತಿ ಕೆಲಸದಲ್ಲೂ ನಾನು ಬಳಸಿಕೊಳ್ಳುತ್ತೇನೆ. ನನ್ನ ಯಶಸ್ಸಿಗೆ ನಾನು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇ ಕಾರಣ.
ಮೇಜರ್ ಶೌರಿ ಆರ್ಯ ಅವರಿಗೆ ನೀವೂ ಅಭಿನಂದಿಸಿ [email protected]
– ಕೃಷ್ಣ ಭಟ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.