ಮನೆನಿವೇಶನ ನೀಡುವಾಗ ರಸ್ತೆ ಸಂಪರ್ಕ ಕಡ್ಡಾಯ
Team Udayavani, Jan 29, 2018, 11:12 AM IST
ಮಂಗಳೂರು: ಸರಕಾರದ ವತಿಯಿಂದ ಮನೆ ನಿವೇಶನಗಳನ್ನು ನೀಡುವಾಗ ಆ ಪ್ರದೇಶಕ್ಕೆ ಜಿಲ್ಲಾಡಳಿತವು ರಸ್ತೆ ಸಂಪರ್ಕವನ್ನು ಕಲ್ಪಿಸಬೇಕು ಎಂದು ಕರ್ನಾಟಕ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚಿಸಿದರು.
ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ರವಿವಾರ ಜರಗಿದ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿಗೆ ಸಂಬಂಧಪಟ್ಟಂತೆ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ಸಾರ್ವಜನಿಕ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮದಲ್ಲಿ ಸರಕಾರದಿಂದ ಮಂಜೂರಾಗಿರುವ ಮನೆನಿವೇಶನಗಳಿಗೆ ರಸ್ತೆ ಸಂಪರ್ಕ ಇಲ್ಲದಿರುವ ಬಗ್ಗೆ ಬಂದ ದೂರು ವಿಚಾರಣೆ ನಡೆಸಿ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಇದೊಂದು ಪ್ರಮುಖ ಸಮಸ್ಯೆಯಾಗಿದೆ. ಫಲಾನುಭವಿಗಳಿಗೆ ಸರಕಾರಿ ಜಾಗದಲ್ಲಿ ಮನೆ ನಿವೇಶನಗಳನ್ನು ಮಂಜೂರು ಮಾಡಲಾಗುತ್ತದೆ. ಆದರೆ ಅಲ್ಲಿಗೆ ಸಂಪರ್ಕ ರಸ್ತೆಗಳು ಇರುವುದಿಲ್ಲ. ಪಟ್ಟಾ ಜಾಗದವರು ರಸ್ತೆಗೆ ಜಾಗ ಬಿಟ್ಟು ಕೊಡುವುದಿಲ್ಲ. ಕೆಲವು ಕಡೆ ಆರಂಭದಲ್ಲಿ ಮತ್ತು ಕೊನೆಯಲ್ಲಿ ಸರಕಾರಿ ರಸ್ತೆ ಇರುತ್ತದೆ. ಮಧ್ಯೆ ಪಟ್ಟಾ ಜಾಗ ಇರುತ್ತದೆ. ಹೀಗಿರುವಾಗ ಸರಕಾರದಿಂದ ಮಂಜೂರಾಗಿರುವ ನಿವೇಶನಗಳಲ್ಲಿರುವವರು ತಮ್ಮ ಮನೆಗಳಿಗೆ ಹೇಗೆ ಹೋಗಲು ಸಾಧ್ಯ ಎಂದರು. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಅವಶ್ಯವಿರುವ ಕಡೆ ಭೂಸ್ವಾಧೀನ ಮಾಡಿ ರಸ್ತೆ ಸಂಪರ್ಕ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರಿಗೆ ಸೂಚಿಸಿದರು.
ಬಂಟ್ವಾಳ ತಹಶೀಲ್ದಾರ್ಗೆ ತರಾಟೆ
ಬಂಟ್ವಾಳ ತಹಶೀಲ್ದಾರ್ ಅವರನ್ನು ಪ್ರತಿವಾದಿ ಯನ್ನಾಗಿ ಮಾಡಿ ಸಲ್ಲಿಸಿರುವ ದೂರುಗಳ ಸಂಖ್ಯೆ ಅಧಿಕ ಇರುವುದು ಹಾಗೂ ಕೆಲವು ಪ್ರಕರಣಗಳಲ್ಲಿ ತಹಶೀಲ್ದಾರ್ ಅವರಿಂದ ಲೋಪವಾಗಿರುವುದನ್ನು ಗಮನಿಸಿದ ಉಪ ಲೋಕಾಯುಕ್ತರು ತಹಶೀಲ್ದಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದೇ ಮನೆಗೆ ಎರಡು ಡೋರ್ ನಂಬ್ರ ನೀಡುವುದು, ಒಂದೇ ಜಾಗಕ್ಕೆ ಎರಡು ಖಾತೆ ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಲೋಕಾಯುಕ್ತ ಉಪನಿಬಂಧಕರಾದ ಬಿ. ಶಿವಪ್ಪ, ಜಿ.ಪಂ. ಸಿಇಒ ಡಾ| ಎಂ.ಆರ್. ರವಿ, ಮಂಗಳೂರು ಡಿಸಿಪಿ ಉಮಾ ಪ್ರಶಾಂತ್, ಲೋಕಾ ಯುಕ್ತ ಎಸ್ಪಿ ಜಗದೀಶ್ ಉಪಸ್ಥಿತರಿದ್ದರು.
ಮತ್ತೆ ಕುಸಿದ ಅಧಿಕಾರಿ?
ಅಂಗನವಾಡಿ ಕಾರ್ಯಕರ್ತೆಯ ಪಿಂಚಣಿ ಸಮಸ್ಯೆ ಕುರಿತಂತೆ ಸಲ್ಲಿಕೆಯಾಗಿರುವ ದೂರು ಬಗ್ಗೆ ಉಪ ಲೋಕಾಯುಕ್ತರು ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಉತ್ತರ ನೀಡುತ್ತಿದ್ದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಅವರು ಕುಸಿದು ಬಿದ್ದ ಘಟನೆ ನಡೆಯಿತು. ಸಭೆಯಲ್ಲಿದ್ದ ವೈದ್ಯೆಯೋರ್ವರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಸುಂದರ ಪೂಜಾರಿಯವರು ಈ ಹಿಂದೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಆಯೋಗದ ಅಧ್ಯಕ್ಷ ಉಗ್ರಪ್ಪ ಅವರು ಮಂಗಳೂರಿನಲ್ಲಿ ನಡೆಸಿದ್ದ ಎರಡು ಸಭೆಗಳಲ್ಲಿ ಕೂಡ ಕುಸಿದು ಬಿದ್ದಿದ್ದರು.
ಪ್ರಾಥಮಿಕ ವರದಿಗೆ ಉಪಲೋಕಾ ಆದೇಶ
ಮಂಗಳೂರು ನಗರದ ಅತ್ತಾವರ ಮತ್ತು ಜೆಪ್ಪಿನಮೊಗರು ಪ್ರದೇಶದಲ್ಲಿನ ಭೂಮಿಯನ್ನು ಮಂಗಳೂರು ಬಿಷಪ್ ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ 20 ದಿನಗಳ ಒಳಗಾಗಿ ಪ್ರಾಥಮಿಕ ವರದಿಯನ್ನು ನೀಡಬೇಕು ಎಂದು ಉಪಲೋಕಾಯುಕ್ತ ಸುಭಾಷ್ ಅಡಿ ಅವರು ಮಂಗಳೂರು ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಅವರಿಗೆ ಆದೇಶಿಸಿದರು. ಅತ್ತಾವರ ಹಾಗೂ ಜಪ್ಪಿನಮೊಗರು ಗ್ರಾಮದ ಜಮೀನಿನಲ್ಲಿ ವಾಸವಿರುವವರನ್ನು ಒಕ್ಕಲೆಬ್ಬಿಸಿ, ಭೂಮಿಯನ್ನು ಒತ್ತುವರಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಉಪಲೋಕಾಯುಕ್ತರ ಮುಂದೆ ದೂರು ಸಲ್ಲಿಸಲಾಗಿತ್ತು. ಈ ಪ್ರಕರಣ ಲೋಕಾಯುಕ್ತ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಮಂಗಳೂರು ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಪ್ರಾಥಮಿಕ ವರದಿ ನೀಡಬೇಕು ಎಂದು ಉಪಲೋಕಾಯುಕ್ತರು ಆದೇಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.