ಕಟ್ಟಡ ಕಾಮಗಾರಿಗೆ ಶೀಘ್ರ ಚಾಲನೆ
Team Udayavani, Jan 30, 2018, 3:04 PM IST
ಮಹಾನಗರ : ಮಹಾನಗರ ಪಾಲಿಕೆ ಕಟ್ಟಡದ ಹಿಂಭಾಗದ ಪಾಳುಬಿದ್ದ ಸ್ಥಳದಲ್ಲಿ ಇದೀಗ ಪಾಲಿಕೆಯ ವಿಸ್ತರಿತ ಕಟ್ಟಡ ನಿರ್ಮಾಣಕ್ಕೆ ಯೋಚಿಸಲಾಗಿದೆ. ಸುಮಾರು 2 ಕೋ.ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ.
ಮಂಗಳೂರಿನಲ್ಲಿ ಅನುಷ್ಠಾನವಾಗಲಿರುವ ಸ್ಮಾರ್ಟ್ ಸಿಟಿ ಯೋಜನೆಗೆ ಪೂರಕ ಕಚೇರಿ ಸೇರಿದಂತೆ ಪಾಲಿಕೆಯಲ್ಲಿ ಸ್ಥಳದ ಒತ್ತಡ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಆವಶ್ಯಕ ಕೆಲವು ಇಲಾಖೆಯನ್ನು ವಿಸ್ತರಿತ ಕಟ್ಟಡಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಪ್ರಾರಂಭಿಕ ಕೆಲಸಗಳನ್ನು ನಡೆಸಲಾಗುತ್ತಿದೆ. ಕೆಲವೇ ದಿನದಲ್ಲಿ ಕಟ್ಟಡ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ಪ್ರಸ್ತುತ ಪಾಲಿಕೆ ಮುಖ್ಯ ಕಚೇರಿಯ ಹಿಂಭಾಗದ ಸುತ್ತ ಕಬ್ಬಿಣದ ಗ್ರಿಲ್ ಅಳವಡಿಸಿದ ಸುಂದರ ಆವರಣ ಗೋಡೆ ಕಟ್ಟಲಾಗಿದೆ. ದೊಡ್ಡ ಗೇಟ್, ಗೇಟ್ ಪಕ್ಕದಲ್ಲಿ ಕಾವಲುಗಾರನ ಕೊಠಡಿ ನಿರ್ಮಿಸಲಾಗಿದೆ. ಇಲ್ಲಿನ ಅಂಗಳಕ್ಕೆ ಪೂರ್ಣ ಇಂಟರ್‌ಲಾಕ್ ಅಳವಡಿಸಲಾಗಿದೆ. ಅವಕಾಶವಿರುವಲ್ಲಿ ಗಾರ್ಡನ್ ವ್ಯವಸ್ಥೆ ಕೂಡ ಈಗಾಗಲೇ ಮಾಡಲಾಗಿದೆ. ಹಿಂಭಾಗದಲ್ಲಿದ್ದ ಕೆಲವು ತಾತ್ಕಾಲಿಕ ನಿರ್ಮಾಣಗಳನ್ನು ತೆರವುಗೊಳಿಸಿ, ಇಂಟರ್‌ಲಾಕ್ ಅಳವಡಿಸುವ ಮೂಲಕ ಪರಿಸರವನ್ನು ಸ್ವಚ್ಛ ಹಾಗೂ ಸುಂದರಗೊಳಿಸಲಾಗಿದೆ.
ಹೊಸ ಸ್ವರೂಪ
ಈ ಮೂಲಕ, ಹೊಂಡ, ಗುಂಡಿ, ಕಿತ್ತುಹೋದ ಇಂಟರ್‌ಲಾಕ್‌ನಿಂದ ಅವ್ಯವಸ್ಥೆಯ ಆಗರವಾಗಿದ್ದ ಮನಪಾ ಕಚೇರಿಯ ಹಿಂಬದಿ ಆವರಣ ಹೊಸ ಲುಕ್‌ನೊಂದಿಗೆ ಬದಲಾವಣೆಗೊಳ್ಳುತ್ತಿದೆ. ಕಚೇರಿಯ ಹಿಂಭಾಗದಲ್ಲಿ ವಿಶಾಲ ಸ್ಥಳವಿದ್ದರೂ ಅದು ಯಾವುದೇ ಬಳಕೆಗೆ ದೊರಕದೆ ನಿಷ್ಪ್ರಯೋಜಕ ಸ್ಥಿತಿಯಲ್ಲಿತ್ತು. ಗಾರ್ಡನ್ ಸಮರ್ಪಕ ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು. ಇದೀಗ ಹಳೆ ಕಟ್ಟಡಕ್ಕೆ ಹೊಂದಿಕೊಂಡು ವಿಸ್ತರಿತ ಕಟ್ಟಡ ನಿರ್ಮಿಸಲಾಗುತ್ತಿರುವುದರಿಂದ ಈ ಎಲ್ಲ ಜಾಗ ಪೂರ್ಣ ಬಳಕೆಗೆ ಲಭ್ಯವಾಗಲಿದೆ.
‘ಸೆಂಟ್ರಲ್ ಕಮಾಂಡ್ ಸೆಂಟರ್’
ನಗರದ ರಸ್ತೆಯಲ್ಲಿ ಹೆಜ್ಜೆಗೊಂದರಂತೆ ಸಿಸಿ ಕೆಮರಾಗಳು, ಸಂಚಾರ ವ್ಯವಸ್ಥೆಗೆ ಧಕ್ಕೆ ತಂದರೆ ಆಟೊಮೆಟಿಕ್ ಕ್ರಮ, ನಳ್ಳಿಯಲ್ಲಿ ನೀರು ಬಾರದಿದ್ದರೆ ಅದನ್ನು ಪತ್ತೆ ಹಚ್ಚಲು ತಂತ್ರಜ್ಞಾನದ ಕಣ್ಗಾವಲು, ನಳ್ಳಿಯಲ್ಲಿ ನೀರು ಸೋರುತ್ತಿದ್ದರೆ ತಂತ್ರಜ್ಞಾನದ ಮೂಲಕವೇ ಹುಡುಕಾಟ, ಬಸ್‌ಗಳ ಟ್ರ್ಯಾಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ, ತುರ್ತು ಪಬ್ಲಿಕ್ ರೆಸ್ಪಾನ್ಸ್ ಬಟನ್ ಅಳವಡಿಕೆ….ಹೀಗೊಂದು ಬದಲಾವಣೆಗೆ ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ಮಂಗಳೂರು ತೆರೆದುಕೊಳ್ಳಲಿದೆ. ಇದರ ನಿರ್ವಹಣೆಯ ನೆಲೆಯಲ್ಲಿ ‘ಸೆಂಟ್ರಲ್ ಕಮಾಂಡ್ ಸೆಂಟರ್’ ಮುಖ್ಯ ಪಾತ್ರ ನಿರ್ವಹಿಸಲಿದೆ. ಪಾಲಿಕೆಯ ವಿಸ್ತರಿತ ಕಟ್ಟಡದಲ್ಲಿಯೇ ಈ ಸೆಂಟರ್ ಬರಲಿದೆ. ಜತೆಗೆ ಇದೇ ಕಟ್ಟಡದಲ್ಲಿ ಸುಸಜ್ಜಿತ ರೆಕಾರ್ಡ್ ರೂಮ್ ಕೂಡ ಆರಂಭವಾಗಲಿದೆ.
ಪಾರ್ಕಿಂಗ್ ವ್ಯವಸ್ಥೆ
ಪಾಲಿಕೆ ಮುಂಭಾಗದಲ್ಲಿ ಮಾತ್ರ ಇಂಟರ್ ಲಾಕ್ ಅಳವಡಿಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇಲ್ಲಿ ಸೀಮಿತ ಸಂಖ್ಯೆಯ ವಾಹನಗಳಿಗೆ ಮಾತ್ರ ಸ್ಥಳಾವಕಾಶವಿದೆ. ಜತೆಗೆ ಪಾಲಿಕೆಯ ಮುಂಭಾಗದ ರಸ್ತೆಯ ಬದಿಯಲ್ಲಿ ವಾಹನ
ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಪಾರ್ಕಿಂಗ್‌ಗೆ ಇಷ್ಟು ಪ್ರದೇಶ ಇದ್ದರೂ ಕೂಡ ಪಾಲಿಕೆ ಮುಂಭಾಗ ವಾಹನ ನಿಲ್ಲಿಸಲು ಕೆಲವೊಮ್ಮೆ ಪರದಾಡಬೇಕಾಗುತ್ತದೆ. ಇದೀಗ ಪಾಲಿಕೆಯ ಹಿಂಭಾಗದಲ್ಲಿ ನೂತನವಾಗಿ ಪಾರ್ಕಿಂಗ್‌ಗೆ ಕೂಡ ವಿಶಾಲ ಜಾಗ ಕಲ್ಪಿಸಿದಂತಾಗುತ್ತದೆ.
ಇಂಟರ್‌ಲಾಕ್ ಅಳವಡಿಕೆ
ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ಹಿಂಭಾಗದ ಆವರಣ ಗೋಡೆ, ಸೆಕ್ಯೂರಿಟಿ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ. ಮಧ್ಯ ಭಾಗದಲ್ಲಿ ಹೂ ಗಿಡಗಳನ್ನು ನೆಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿ, ಮೆಸ್ಕಾಂ ಕಚೇರಿ, ಮನಪಾ ಕ್ಯಾಂಟೀನ್‌ಗಳು ಮನಪಾ ಕಚೇರಿ ಕಟ್ಟಡದ ಹಿಂಭಾಗದಲ್ಲಿದೆ. ಇದರ ಸುತ್ತ ಮುತ್ತದ ಆವರಣ ಹೊಂಡ, ಗುಂಡಿಗಳಿಂದ ತುಂಬಿದ್ದು , ವಾಹನ ಚಲಾಯಿಸಲು ಪರದಾಡುವ ಸ್ಥಿತಿ ಇತ್ತು. ಈಗ ಪೂರ್ಣ ಇಂಟರ್‌ಲಾಕ್ ಅಳವಡಿಕೆ ಮಾಡಲಾಗಿದೆ.
ವಿಸ್ತರಿತ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿ
ಮುಖ್ಯಮಂತ್ರಿಗಳ 100 ಕೋಟಿ ರೂ. ವಿಶೇಷ ಅನುದಾನದಡಿ ಪಾಲಿಕೆ ಕಚೇರಿ ಆವರಣದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ವಿಸ್ತರಿತ ಕಟ್ಟಡ ಈ ಹಿಂದೆಯೇ ಮಂಜೂರಾಗಿದ್ದು, ಪ್ರಸ್ತುತ ಕಾಮಗಾರಿ ನಡೆಯುತ್ತಿದೆ. ಕಟ್ಟಡ ಪೂರ್ಣಗೊಂಡ ಬಳಿಕ ಕಚೇರಿಗೆ ಸಾಕಷ್ಟು ಸ್ಥಳಾವಕಾಶ ಲಭ್ಯವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಇನ್ನಷ್ಟು ಸೇವೆ ಕಲ್ಪಿಸಲು ಸುಲಭವಾಗಬಹುದು.
– ಕವಿತಾ ಸನಿಲ್, ಮೇಯರ್ ಮಂಗಳೂರು
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.