![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 31, 2018, 11:07 AM IST
ತಲಪಾಡಿ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ತಲಪಾಡಿ ಗ್ರಾಮವನ್ನು ಹೊರಗಿಟ್ಟಿರುವ ವಿಚಾರ ಮತ್ತು ತಲಪಾಡಿ ಹೆದ್ದಾರಿ ಟೋಲ್ ಸುಂಕ, ರಸ್ತೆ ಅಭಿವೃದ್ಧಿ, ಮಹಿಳಾ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಗೈರು ಸೇರಿದಂತೆ ಮಂಗಳವಾರ ತಲಪಾಡಿ ಶಾಲಾ ಮೈದಾನದಲ್ಲಿ ನಡೆದ ತಲಪಾಡಿ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ಚರ್ಚೆ ನಡೆದಿದ್ದು, ಬಹುಗ್ರಾಮ ಕುಡಿಯುವ ನೀಡಿನ ವಿಚಾರದಲ್ಲಿ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಒಗ್ಗಟ್ಟಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಎಂಟು ವರ್ಷಗಳ ಹಿಂದಿನಿಂದ ಬಹುಗ್ರಾಮ ಕುಡಿಯುವ ನೀರಿನ 119 ಕೋಟಿಯ ರೂ. ಯೋಜನೆ ರೂಪಿಸಿದ್ದು, ಇದರಲ್ಲಿ ತಲಪಾಡಿ ಗ್ರಾಮದ ಹೆಸರಿಲ್ಲ ಎಂದು ಈ ವಿಚಾರದಲ್ಲಿ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಧ್ವನಿಗೂಡಿಸಿದರೆ, ಗ್ರಾಮ ಪಂಚಾಯತ್ ಸದಸ್ಯರು ಒಟ್ಟಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿ.ಪಂ.ಗೆ ತಲುಪಿದೆ
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ ಬಹುಗ್ರಾಮ ಕುಡಿಯುವ ನೀರಿನ ವಿಚಾರದಲ್ಲಿ ಉತ್ತರ ನೀಡಿ ಹಿಂದಿನ ಗ್ರಾಮಸಭೆಯ ನಿರ್ಣಯ ಓದುವ ಸಂದರ್ಭ ಬಹುಗ್ರಾಮ ಕುಡಿಯುವ ನೀರಿನ ವಿಚಾರ ಪ್ರಸ್ತಾಪವಾಯಿತು. ಈ ಸಂದರ್ಭ ಅಬ್ಟಾಸ್ ಉಚ್ಚಿಲ್ ಹಾಗೂ ಸಂಶುದ್ದೀನ್ ಉಚ್ಚಿಲ್ ಅವರು ಯೋಜನೆ ಸೇರ್ಪಡೆ ಬಗ್ಗೆ ಮಾಹಿತಿ ಕೇಳಿದ್ದರು. ಈ ವಿಷಯದ ಕಡತ ಈಗಾಗಲೇ ಪಂಚಾಯತ್‌ನಿಂದ ಜಿಲ್ಲಾ ಪಂಚಾಯತ್ ತಲುಪಿದೆ ಎಂದರು.
ಇನ್ನಷ್ಟು ಮಾಹಿತಿಗೆ ಗ್ರಾಮಸ್ಥರು ಒತ್ತಾಯಿಸಿದಾಗ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ನಿತಿನ್ ಮಾತನಾಡಿ, ಈಗಾಗಲೇ ಈ ಯೋಜನೆಯಲ್ಲಿ ತಲಪಾಡಿ, ಕೋಟೆಕಾರ್, ಕುರ್ನಾಡು, ಉಳ್ಳಾಲ ಸಹಿತ ಮಂಗಳೂರು ಕ್ಷೇತ್ರದ ಎಲ್ಲ ಗ್ರಾಮಗಳನ್ನು ಸೇರಿಸಲಾಗಿದ್ದು, ಯೋಜನೆ ಬಗ್ಗೆ ಎಸ್‌ಎಸ್‌ಸಿಸಿ ಸಭೆಯಲ್ಲೂ ಚರ್ಚಿಸಲಾಗಿದೆ ಎಂದರು.
ಈ ಪ್ರಶ್ನೆಗೆ ಅಬ್ಟಾಸ್ ಉಚ್ಚಿಲ್ ಆಕ್ಷೇಪಿಸಿ, ತನ್ನ ಬಳಿ ದಾಖಲೆಗಳಿದ್ದು, ಸುಳ್ಳು ಮಾಹಿತಿ ನೀಡಬೇಡಿ. ನಿಮ್ಮಲ್ಲಿರುವ ದಾಖಲೆಗಳನ್ನು ನೀಡಿ ಎಂದಾಗ ಎಂಜಿನಿಯರ್ ನಿತಿನ್, ಉತ್ತರಿಸಿ ಇತ್ತೀಚೆಗಷ್ಟೇ ಯೋಜನೆಯನ್ನು ಸೇರಿಸಲಾಗಿದ್ದು, ಬಂಟ್ವಾಳ ವಿಭಾಗದಲ್ಲಿ ದಾಖಲೆಗಳಿರುವುದರಿಂದ ತನ್ನಲ್ಲಿಲ್ಲ. 15 ದಿನದ ಹಿಂದೆ ಪ್ರಕ್ರಿಯೆ ನಡೆದಿದ್ದು, ಈಗಿನ ದಾಖಲೆಗಳಲ್ಲಿ ಸ್ಪಷ್ಟ ಮಾಹಿತಿ ಸಿಗಲಿದೆ ಎಂದರು.
ಉಡಾಫೆ ಉತ್ತರಕ್ಕೆ ಕೆರಳಿದ ಗ್ರಾಮಸ್ಥರು
ತಲಪಾಡಿಯ ಟೋಲ್ ಪ್ಲಾಝಾದಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ಸುಂಕ ರಿಯಾಯಿತಿ ಇದೆ. ಈ ಬಗ್ಗೆ ಗುರುತು ಚೀಟಿ ತೋರಿಸಿದರೂ ಸಿಬಂದಿ ನೂರೆಂಟು ದಾಖಲೆ ಕೇಳುತ್ತಾರೆ. ಕೆಲ ಸಿಬಂದಿ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಗ್ರಾಮಸ್ಥರು ಆಕ್ಷೇಪಿಸಿದರು.ಇದಕ್ಕೆ ಟೋಲ್ ಗೇಟ್ ಸಂಸ್ಥೆಯ ಅಧಿಕಾರಿ ಶಿವಪ್ರಸಾದ್ ಪ್ರತಿಕ್ರಿಯಿಸಿ ಸ್ಥಳೀಯರಿಗೆ ಟೋಲ್ ಸುಂಕದಲ್ಲಿ ರಿಯಾಯಿತಿ ನೀಡಬೇಕೆನ್ನುವ ನಿಯಮ ಹೆದ್ದಾರಿ ಪ್ರಾಧಿಕಾರ ಮಾಡಿಲ್ಲ, ಅಲ್ಲದೆ ನಿಮಗೆ ಉಚಿತವಾಗಿ ಬಿಡಬೇಕು ಎಂದೇನೂ ಇಲ್ಲ ಎಂದು ಹೇಳಿದಾಗ ಕೆರಳಿದ ಗ್ರಾಮಸ್ಥರು ಶಿವಪ್ರಸಾದ್ ವಿರುದ್ಧ ಸಿಡಿದೆದ್ದರು. ಸುರತ್ಕಲ್‌ನಲ್ಲಿ ಕೆ.ಎ-19 ಇರುವ ಎಲ್ಲ ವಾಹನಗಳಿಗೆ ಟೋಲ್ ಸುಂಕ ರಿಯಾಯಿತಿ ಇದೆ. ಇಲ್ಲೂ ಹಾಗೇ ಮಾಡಬಹುದಿತ್ತು. ಆದರೆ ಕೇರಳದವರಿಗಾಗಿ ಐದು ಕಿ.ಮೀ. ಅಂತರದವರಿಗೆ ರಿಯಾಯಿತಿ ಕೇಳಿದ್ದೇವೆ. 90ಶೇ. ಹೆದ್ದಾರಿ ಕಾಮಗಾರಿ ಮುಗಿದಿದೆ ಎನ್ನುವುದು ಸುಳ್ಳಲ್ಲವೇ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಗ್ರಾಮಸ್ಥರ ವಾದವನ್ನು ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಸಮರ್ಥಿಸಿದರು.
ವೈದ್ಯರು ಸ್ಪಂದಿಸುತ್ತಿಲ್ಲ
ಕೋಟೆಕಾರು ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರೊಬ್ಬರು ಆಳಲು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಕೇಂದ್ರದ ವೈದ್ಯಾಧಿಕಾರಿ ಈ ಘಟನೆ ನಡೆದಾಗ ಕರ್ತವ್ಯದ ಮೇರೆಗೆ ಬೇರೆ ಕಡೆ ಹೋಗಿದ್ದು, ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರಿದ್ದರು ಎಂದರು.
ಹಕ್ಕುಪತ್ರ ದೊರಕುವ ನಿರೀಕ್ಷೆ
94 ಸಿಸಿಗೆ ಅರ್ಜಿ ಸಲ್ಲಿಸಲು ಫೆ.3 ಕೊನೆಯ ದಿನಾಂಕ ಅದಕ್ಕಿಂತ ಮೊದಲು ಅರ್ಜಿ ಸಲ್ಲಿಸಿ. ಹಣ ಕಟ್ಟಲು ಬಂದಿದ್ದರೆ ಬೇಗ ಪಾವತಿಸಿ. ಶೀಘ್ರ ಹಕ್ಕುಪತ್ರ ದೊರಕುವ ನಿರೀಕ್ಷೆ ಇದೆ ಎಂದು ಗ್ರಾಮಕರಣಿಕರು ಸಭೆಯಲ್ಲಿ ಮಾಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಅಧ್ಯಕ್ಷತೆ ವಹಿಸಿದ್ದರು. ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಇಲಾಖೆಯ ಶ್ಯಾಮಲಾ ಭಾಗವಹಿಸಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ ಸ್ವಾಗತಿಸಿದರು. ಪಂ. ಕಾರ್ಯದರ್ಶಿ ಶಾಂತಿ ಹಿಂದಿನ ಗ್ರಾಮಸಭೆಯ ನಿರ್ಣಯಗಳನ್ನು ಓದಿದರು. ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಅಧಿಕಾರಿಗಳ ಅಸಡ್ಡೆ
ಸಾಮಾನ್ಯ ಗ್ರಾಮಸಭೆಗೆ ಅಧಿಕಾರಿಗಳು ಹಾಜರಾಗುತ್ತಾರೆ. ಆದರೆ ಮಹಿಳಾ ಗ್ರಾಮ ಸಭೆಗೆ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಅಸಡ್ಡೆ ತೋರಿಸುತ್ತಾರೆ. ನಮ್ಮ ಅನೇಕ ಸಮಸ್ಯೆಗಳಿರುತ್ತದೆ ಆದರೆ ಅಧಿಕಾರಿಗಳ ಗೈರು ಹಾಜರಿಯಿಂದ ಸಮಸ್ಯೆ ತಿಳಿಸಲು ಅನಾನುಕೂಲ ಆಗುತ್ತದೆ ಈ ನಿಟ್ಟಿನಲ್ಲಿ ಗ್ರಾಮ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
You seem to have an Ad Blocker on.
To continue reading, please turn it off or whitelist Udayavani.