ಕೇಂದ್ರ ಬಜೆಟ್‌ನಲ್ಲಿ ಕೃಷಿ ಸಾಲ ಮನ್ನಾ ನಿರೀಕ್ಷೆ
Team Udayavani, Feb 1, 2018, 5:35 PM IST
ಮಂಡ್ಯ: ಕೇಂದ್ರ ಬಜೆಟ್‌ನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಬಗ್ಗೆ ನಿರೀಕ್ಷೆ ಹೊಂದಲಾಗಿದೆ. ಕೃಷಿ ಕ್ಷೇತ್ರಕ್ಕೆ ಸಿಗಬಹುದಾದ ಮಹತ್ವ, ಮೀಸಲಿಡುವ ಹಣದ ಪ್ರಮಾಣ, ಜಾರಿಯಾಗುವ ಹೊಸ ಯೋಜನೆಗಳ ಬಗ್ಗೆ ಸ್ವಲ್ಪಮಟ್ಟಿನ ಕುತೂಹಲವಿದೆ.
ರೈಲ್ವೆ ಮತ್ತು ಕೇಂದ್ರ ಬಜೆಟ್‌ನಲ್ಲೇ ಸೇರ್ಪಡೆಗೊಂಡಿರುವುದರಿಂದ ಹಾಲಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಜೋಡಿ ರೈಲು ಮಾರ್ಗ ಪೂರ್ಣಗೊಂಡು ರೈಲುಗಳು ಸಂಚಾರ ಆರಂಭಿಸಿವೆ. ವಿದ್ಯುತ್ ರೈಲು ಮಾರ್ಗದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ಅಧಿಕೃತವಾಗಿ ಸಂಚಾರ ಆರಂಭವಾಗಬೇಕಿದೆ.
ರೈತರ ಸಾಲ ಮನ್ನಾ ಆಗುವುದೇ? ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿದ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದು, ಇದೀಗ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲ ಮನ್ನಾ ಮಾಡುವ ಸವಾಲನ್ನು ಕೇಂದ್ರದ ಮುಂದಿಟ್ಟಿದೆ. ಆದರೆ, ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವುದಕ್ಕೆ ಹಿಂದೇಟು ಹಾಕುತ್ತಲೇ ಬಂದಿದೆ.
ಇದೀಗ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ರೈತರಿಗೆ ಸಾಲ ಮನ್ನಾ ಕೊಡುಗೆ ನೀಡಿ ಓಲೈಸುವ ಪ್ರಯತ್ನ
ನಡೆಸಲಿದೆಯೇ ಎಂಬ ಕುತೂಹಲವಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲದ ಪ್ರಮಾಣ 52 ಸಾವಿರ ಕೋಟಿ ರೂ. ಇದೆ. ಸಹಕಾರ ಸಂಘದಲ್ಲಿ ರೈತರು ಮಾಡಿದ್ದ 50 ಸಾವಿರ ರೂ.ವರೆಗಿನ 10 ಸಾವಿರ ಕೋಟಿ ರೂ.ನಷ್ಟು ಹಣವನ್ನು ಮಾತ್ರ ರಾಜ್ಯದ ಕಾಂಗ್ರೆಸ್ ಸರ್ಕಾರ ಮನ್ನಾ ಮಾಡಿದೆ.
ಕೃಷಿಗೆ ಪ್ರಾಮುಖ್ಯತೆ ನಿರೀಕ್ಷೆ: ಕೃಷಿ ಪ್ರಧಾನ ದೇಶದಲ್ಲಿ ಶೇ.60 ಮಂದಿ ಕೃಷಿಯನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಕಳೆದ ಸಾಲಿನ ಬಜೆಟ್‌ನಲ್ಲಿ ಶೇ.15 ಹಣವನ್ನಷ್ಟೇ ಕೃಷಿ ಕ್ಷೇತ್ರಕ್ಕೆ ನೀಡಲಾಗಿತ್ತು. ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಶೈತ್ಯಾಗಾರ, ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಬಗ್ಗೆಯೂ ಹಲವು ದಶಕಗಳಿಂದ ರೈತರು ಕೂಗಿಡುತ್ತಿದ್ದಾರೆ. ಇದರ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ದೃಷ್ಟಿ ಹರಿಸುವುದೇ ಎಂಬ ನಿರೀಕ್ಷೆ ಇದೆ.
ಮಣ್ಣು ಪರೀಕ್ಷೆಗೇ ಸ್ಥಗಿತ: ಬೆಂಗಳೂರು-ಮಳ ವಳ್ಳಿ-ಕೊಯಮತ್ತೂರು ರೈಲ್ವೆ ಮಾರ್ಗದ ಸಮೀಕ್ಷೆ ನಡೆದು ಐದು ವರ್ಷಗಳೇ ಕಳೆದಿವೆ. ಸೇತುವೆ, ಕೆಳ ಸೇತುವೆಗಳನ್ನು ನಿರ್ಮಿಸುವ ಜಾಗಗಳಲ್ಲಿ ಮಣ್ಣು ಪರೀಕ್ಷೆ ಕಾರ್ಯ ನಡೆಸಿದ್ದು ಅಲ್ಲಿಗೇ ಸ್ಥಗಿತಗೊಂಡಿದೆ. ಆದರೆ, ಯೋಜನೆಯ ಕಾಮಗಾರಿ ಆರಂಭ ಯಾವಾಗ ಎಂಬುದು ಮಾತ್ರ ಗೊತ್ತಾಗಿಲ್ಲ. ಇದರಿಂದ ಆ ಮಾರ್ಗದ ರೈಲ್ವೆ ಪ್ರಯಾಣಿಕರು ರೈಲು ಬರುವ ಎಂಬ ನಿರೀಕ್ಷೆಯಲ್ಲೇ ಪ್ರತಿ ವರ್ಷದ ಬಜೆಟ್ ನಲ್ಲಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ರೈಲು ಯೋಜನೆಗಳಿಗೆ ಚಾಲನೆ ನೀಡಿ ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗ ಪೂರ್ಣಗೊಂಡು ರೈಲುಗಳು ಸಂಚರಿಸುತ್ತಿವೆ. ವಿದ್ಯುತ್ ರೈಲು ಮಾರ್ಗದ ಪ್ರಾಯೋಗಿಕ ಸಂಚಾರವೂ ಪೂರ್ಣಗೊಂಡಿದ್ದು, ಈ ವರ್ಷದೊಳಗೆ ಸಂಚರಿಸುವ ಸಾಧ್ಯತೆಗಳಿವೆ. ಅಲ್ಲದೆ, ಶ್ರೀರಂಗಪಟ್ಟಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳನ್ನು ನಿಲುಗಡೆಗೊಳಿಸಬೇಕೆಂಬ ಪ್ರಯಾಣಿಕರ ಬೇಡಿಕೆ ಅಲ್ಪ ಮಟ್ಟಿಗೆ ಈಡೇರಿದೆ. ಬಾಗಲಕೋಟೆ-ಮೈಸೂರು ಎಕ್ಸ್‌ಪ್ರೆಸ್ ರೈಲು ನಿಲುಗಡೆಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳು ನಿಲುಗಡೆಗೊಳ್ಳುವ ಸಾಧ್ಯತೆಗಳಿವೆ. ಇನ್ನು ಬೆಂಗಳೂರು-ಶ್ರವಣಬೆಳಗೊಳ ಮಾರ್ಗದಲ್ಲೂ ರೈಲು ಸಂಚಾರ ಶುರುವಾಗಿದೆ.
ಕನಸಾಗೇ ಉಳಿದ ಬುಲೆಟ್ ಟ್ರೆ„ನ್: ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸಮಯದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ರೈಲ್ವೆ ಮಂತ್ರಿಯಾದರು. ಮೊದಲ ಬಜೆಟ್‌ನಲ್ಲಿ ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿ ಮೈಸೂರುವರೆಗೆ ಬುಲೆಟ್ ಟ್ರೆ„ನ್ ಸಂಚಾರ ಆರಂಭಿಸುವುದಾಗಿ ಘೋಷಿಸಿದ್ದರು.
ಆನಂತರ ಈ ಮಾರ್ಗದಲ್ಲಿ 136 ತಿರುವುಗಳಿವೆ ಎಂಬ ಕಾರಣಕ್ಕೆ ಕೈಬಿಡಲಾಯಿತು. ಹಾಗಾಗಿ ಈ ಮಾರ್ಗದಲ್ಲಿ ಬುಲೆಟ್ ಟ್ರೆ„ನ್ ಸಂಚರಿಸುವುದು ಕನಸಾಗಿಯೇ ಉಳಿಯಿತು. ಬೆಂಗಳೂರು ಸಿಟಿ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಗ್ಗಲಿಪುರ – ಹಾರೋಹಳ್ಳಿ ಹಾಗೂ ರಾಮನಗರ ಜಿಲ್ಲೆಯ ಕನಕಪುರ-ಸಾತನೂರು ಮಂಡ್ಯ ಜಿಲ್ಲೆಯ
ಹಲಗೂರು-ಹಾಡ್ಲಿ-ಮಳವಳ್ಳಿ-ಕಿರುಗಾವಲು ಹಾಗೂ ಮೈಸೂರು ಜಿಲ್ಲೆಯ ಬನ್ನೂರು- ತಿ.ನರಸೀಪುರ-ಮೂಗೂರು ಹಾಗೂ ಚಾಮರಾಜನಗರ ಜಿಲ್ಲೆಯ ಸಂತೇಮಾರನಹಳ್ಳಿ ಮಾರ್ಗವಾಗಿ ಅಂತಿಮವಾಗಿ ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸಲಿದೆ.
ಈ ರೈಲು ಮಾರ್ಗ ನಿರ್ಮಾಣಕ್ಕೆ ಬೇಕಾಗುವ ಭೂಮಿಯನ್ನು ಗುರುತಿಸಿ ಸ್ವಾಧೀನಪಡಿಸಿಕೊಳ್ಳಲು ನೀಲ ನಕ್ಷೆ ಸಿದ್ದಗೊಂಡಿದ್ದು, ಸರ್ವೆ ಕಾರ್ಯವೂ ಅಂತಿಮ ಹಂತ ತಲುಪಿದೆ. ಆದರೆ, ಯೋಜನೆಗೆ ಬಜೆಟ್‌ನಲ್ಲಿ ಹಸಿರು ನಿಶಾನೆ ತೋರಿಲ್ಲ. ಹೀಗಾಗಿ ಮಳವಳ್ಳಿ ಭಾಗದ ಜನರಿಗೆ ರೈಲಿನಲ್ಲಿ ಸಂಚರಿಸುವ ಭಾಗ್ಯ ಇನ್ನೂ ಕೂಡಿ ಬರದಂತಾಗಿದೆ.
ಇತ್ತೀಚೆಗಷ್ಟೇ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಮೈನ್‌ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್ (ಮೆಮು) ರೈಲು ಆಂಧ್ರದ ಕುಪ್ಪಂ-ಬೆಂಗಳೂರು- ರಾಮನಗರ ಮಾರ್ಗದಲ್ಲಿ ಸಂಚರಿಸಲು ಹಸಿರು ನಿಶಾನೆ ದೊರಕಿದೆ. ಈ ರೈಲು ಮಂಡ್ಯವರೆಗೆ ವಿಸ್ತರಣೆಯಾಗ ಬೇಕೆಂಬುದು ಇಲ್ಲಿನ ಜನರ ಆಗ್ರಹವಾಗಿದೆ. ವಿದ್ಯುತ್ ಮಾರ್ಗದ ಲೈನ್ ಮಂಡ್ಯದವರೆಗೂ ಮುಕ್ತಾಯ ಗೊಂಡಿರುವುದರಿಂದ ಮೆಮು ರೈಲು ಇಲ್ಲಿಯವರೆಗೂ ಬರಲಿದೆ ಎನ್ನುವುದು ಸ್ಥಳೀಯರ ಆಶಯವಾಗಿದೆ.
ಕೃಷಿ ರಂಗಕ್ಕೆ ವೇತನ ಆಯೋಗ
ಕೃಷಿ ರಂಗಕ್ಕೆ ವೇತನ ಆಯೋಗ ಜಾರಿಗೊಳಿಸಬೇಕು. ಆದಾಯ ಖಾತ್ರಿ ಕೃಷಿ ನೀತಿ ಜಾರಿಯಾದಾಗ ದೇಶದ ಉದ್ಧಾರ ಸಾಧ್ಯ. ನಗರೀಕರಣ ನಿಲ್ಲಿಸಿ, ಕೃಷಿ ಭೂಮಿ ಮಾರಾಟ ತಡೆಯಬೇಕಿದೆ. ಸಮಗ್ರ ಹಳ್ಳಿಗಳ ಪುನಃಶ್ಚೇತನ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ
ರೂಪಿಸಬೇಕು. ರೈತರಿಗೆ ಆರ್ಥಿಕ ಭದ್ರತೆ ಒದಗಿಸುವುದು. ನಿರುದ್ಯೋಗ ನಿವಾರಿಸಲು ಗ್ರಾಮೀಣ ಯುವಕರಿಗೆ ಹೊಸ ಸಾಲ ನೀತಿ ಪ್ರಕಟಿಸಬೇಕು. ಗುಡಿ ಕೈಗಾರಿಕೆಗೆ ಉತ್ತೇಜನ ನೀಡಬೇಕು.
ಕೆ.ಎಸ್.ಪುಟ್ಟಣ್ಣಯ್ಯ, ಶಾಸಕ
ರೈತರ ಸಾಲ ಮನ್ನಾ ಮಾಡಲಿ
ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಉದ್ಯೋಗ ಸೃಷ್ಟಿ ಭರವಸೆ ಈ ಬಜೆಟ್‌ನಲ್ಲಾದರೂ ಅಗತ್ಯ ಹಣಕಾಸನ್ನು ಮೀಸಲಿಡಬೇಕು. ದೇಶಾದ್ಯಂತ ಜಲ ವಿವಾದಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲು ಅಂತಾರಾಜ್ಯಗಳ ನದಿ ಜೋಡಣೆಗೆ ಹಣ ತೆಗೆದಿರಿಸುವುದು. ಉದ್ಯಮಿಗಳಿಗೆ ರಿಯಾಯಿತಿ ಘೋಷಿಸುವುದನ್ನು ನಿಲ್ಲಿಸಿ, ಸರ್ಕಾರಿ ಸ್ವಾಮ್ಯದ ಕಂಪನಿಗಳ ಆರಂಭ ಒತ್ತು ನೀಡುವುದು, ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಶೀತಲೀಕರಣ ಕೇಂದ್ರ ಪ್ರಾರಂಭಿಸಬೇಕು.
ಎಂ.ಕೃಷ್ಣಮೂರ್ತಿ, ಬಿಎಸ್ಪಿ ಮುಖಂಡ
ಸ್ವಾಮಿನಾಥನ್ ವರದಿ ಜಾರಿಗೊಳಿಸಲಿ
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕಬೇಕಾದರೆ ಸ್ವಾಮಿನಾಥನ್ ವರದಿ ಜಾರಿಗೊಳಿಸುವ ಅಗತ್ಯವಿದೆ. ರೈತರ ಸಾಲ ಮನ್ನಾ ವಿಚಾರದಲ್ಲಿ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ. ಸತತ ಬರಗಾಲದಿಂದ ಸಂಕಷ್ಟಕ್ಕೊಳಗಾಗಿರುವ ರೈತರನ್ನು ರಕ್ಷಣೆ ಮಾಡಲು ಕೂಡಲೇ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು. 2022ರ ವೇಳೆಗೆ ರೈತರ ಆರ್ಥಿಕಮಟ್ಟವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದು ಅದನ್ನು ಬಜೆಟ್‌ನಲ್ಲಿ ತೋರಿಸಬೇಕಿದೆ.
ಶಂಭೂನಹಳ್ಳಿ ಸುರೇಶ್, ರೈತ ಮುಖಂಡ
ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.