ಮಾಚಿದೇವ, ಚೌಡಯ್ಯ ಜಯಂತಿ ಆಚರಣೆ
Team Udayavani, Feb 2, 2018, 1:36 PM IST
ಮಹಾನಗರ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಡಿವಾಳ ಮಾಚಿದೇವ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆಯಿತು. ಮಾಚಿದೇವ ಕುರಿತು ಉಪನ್ಯಾಸ ನೀಡಿದ ಸಾಹಿತಿ ಸದಾನಂದ ನಾರಾವಿ, ವಚನ ಸಾಹಿತ್ಯ ಉಳಿಸಿ ಬೆಳೆಸುವಲ್ಲಿ ಮಡಿವಾಳ ಮಾಚಿದೇವರ ಪಾತ್ರ ಮಹತ್ವದ್ದು ಎಂದರು.
354 ವಚನಗಳು ದೊರಕಿವೆ
ಮಾಚಿದೇವ ಅವರು 3 ಲಕ್ಷಕ್ಕೂ ಅಧಿಕ ವಚನಗಳನ್ನು ಬರೆದಿದ್ದಾರೆಂದು ಹೇಳಲಾಗುತ್ತಿದೆ. ಅವೆಲ್ಲವೂ ಅಲಭ್ಯವಾದರೂ ‘ಕಲಿದೇವರ ದೇವ’ ಅಂಕಿತದಲ್ಲಿ ಅವರು ಬರೆದ 354 ವಚನಗಳು ದೊರಕಿವೆ ಎಂದು ಅವರು ಹೇಳಿದರು.
ಅಸಮಾನತೆ, ಜಾತಿ, ವರ್ಗ, ವರ್ಣ ಭೇದವನ್ನು ತಮ್ಮ ವಚನಗಳ ಮೂಲಕ ವಿರೋಧಿಸುವ ಪ್ರಯತ್ನವನ್ನು ಮಾಚಿದೇವ ಮಾಡಿದ್ದಾರೆ. ಅವರ ಸಂದೇಶ, ಉಪದೇಶಗಳು ಸರ್ವ ಕಾಲಕ್ಕೂ ಮಾದರಿ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಎಚ್. ಖಾದರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ. ಆರ್. ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ., ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಭರತ್ ಕುಮಾರ್ ಎರ್ಮಾಳ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾ ಕೋಳ್ಯೂರು ನಿರೂಪಿಸಿದರು. ಮಾಚಿದೇವ ಹಾಗೂ ಅಂಬಿಗರ ಚೌಡಯ್ಯ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು.
ಸಾಮಾಜಿಕ ಪರಿವರ್ತನೆ
ಅಂಬಿಗರ ಚೌಡಯ್ಯರ ಬಗ್ಗೆ ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಡಾ| ನಾಗಪ್ಪ ಗೌಡ ಆರ್., ಈ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ನಡೆದ ಸಾಮಾಜಿಕ ಪರಿವರ್ತನೆ ಮಾನವ ಧರ್ಮವನ್ನು ಪ್ರತಿಪಾದಿಸುವಂಥದ್ದು. ಅಂಬಿಗರ ಚೌಡಯ್ಯರಂತಹ ವಚನಕಾರರು ಪ್ರತಿಪಾದಿಸಿದ ಮಾನವ ಧರ್ಮದ ತತ್ತ್ವವನ್ನು ಈಗಿನ ಸಮಾಜ ಅರ್ಥೈಸಿ ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.