ಈ ಬಾರಿ 445 ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧ!
Team Udayavani, Feb 5, 2018, 10:10 AM IST
ಸುಳ್ಯ: ವರ್ಷದಿಂದ ವರ್ಷಕ್ಕೆ ಎಸೆಸೆಲ್ಸಿ ಶೈಕ್ಷಣಿಕ ಶಿಸ್ತಿನಲ್ಲಿ ತುಳು ಭಾಷೆ ಕಲಿಕೆಯತ್ತ ಆಸಕ್ತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ; ಈ ಬಾರಿ ದ.ಕ. ಜಿಲ್ಲೆಯ 22 ಶಾಲೆಗಳ 445 ವಿದ್ಯಾರ್ಥಿಗಳು ತೃತೀಯ ಭಾಷೆಯಾಗಿ ತುಳುವನ್ನು ಆಯ್ದುಕೊಂಡು ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.
ಎಸೆಸೆಲ್ಸಿಯಲ್ಲಿ ತೃತೀಯ ಭಾಷೆಯಾಗಿ ತುಳು ಪರಿಚಯಗೊಂಡ 3ನೇ ವರ್ಷವಾದ 2016-17ನೇ ಸಾಲಿನಲ್ಲಿ 12 ಶಾಲೆಗಳ 283 ವಿದ್ಯಾರ್ಥಿಗಳು ತುಳುವನ್ನು ಆಯ್ದುಕೊಂಡಿದ್ದರು, ಪರೀಕ್ಷೆ ಬರೆದು ಶತ ಪ್ರತಿಶತ ಫಲಿತಾಂಶ ಗಳಿಸಿದ್ದರು. ಈ ಬಾರಿ 20 ಶಾಲೆಗಳ 445 ಮಂದಿ ವಿದ್ಯಾರ್ಥಿಗಳು ತೃತೀಯ ಭಾಷೆ ತುಳು ಪರೀಕ್ಷೆಗೆ ಉತ್ತರಿಸಲಿದ್ದಾರೆ.
ಸಂಖ್ಯೆ ಹೆಚ್ಚಳ: ಕಳೆದ 4 ವರ್ಷಗಳ ಅಂಕೆಸಂಖ್ಯೆಯನ್ನು ಗಮನಿಸಿದರೆ, ಈ ವರ್ಷ ಎಸೆಸೆಲ್ಸಿಯಲ್ಲಿ ತುಳುವನ್ನು ಒಂದು ಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ. ತೃತೀಯ ಭಾಷೆಯಾಗಿ ತುಳು ಪರಿಚಯ ಗೊಂಡ 2014-15ನೇ ಸಾಲಿನಲ್ಲಿ 18 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 2015-16ರಲ್ಲಿ 25, 2016-17ರಲ್ಲಿ 283 ಮಂದಿ ತುಳು ಭಾಷಾ ಪರೀಕ್ಷೆ ಬರೆದಿದ್ದರು. ಮಾರ್ಚ್‌ನಲ್ಲಿ ನಡೆಯುವ ಈ ಸಾಲಿನ ಪರೀಕ್ಷೆಯಲ್ಲಿ 445 ಮಂದಿ ಪರೀಕ್ಷೆ ಬರೆಯಲಿದ್ದಾರೆ.
ತೃತೀಯ ಭಾಷೆ: 2010ರಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಬೋಧಿಸಲು ಸರಕಾರ ಆದೇಶ ನೀಡಿ ಉಡುಪಿ ಮತ್ತು ದ. ಕ. ಜಿಲ್ಲೆಯಲ್ಲಿ 6ರಿಂದ 10ನೇ ತರಗತಿ ತನಕ ತುಳು ಕಲಿಕೆಗೆ ಅವಕಾಶ ಕಲ್ಪಿಸಿತ್ತು. 2011ರಲ್ಲಿ ಮಂಗಳೂರಿನ ಪೊಂಪೈ ಶಾಲೆಯಲ್ಲಿ 11 ಮಕ್ಕಳು ತೃತೀಯ ಭಾಷೆಯನ್ನಾಗಿ ತುಳು ಆರಿಸಿಕೊಂಡದ್ದು ತುಳು ಕಲಿಕೆಯ ಪ್ರಥಮ ಹೆಜ್ಜೆ. ಪ್ರಸ್ತುತ ದ.ಕ. ಹಾಗೂ ಉಡುಪಿ ಜಿಲ್ಲೆಯ 35 ಶಾಲೆಗಳಲ್ಲಿ 1,647ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತುಳುವನ್ನು ತೃತೀಯ ಭಾಷೆಯನ್ನಾಗಿ ಆಯ್ದುಕೊಂಡಿದ್ದಾರೆ.
ಪುತ್ತೂರಿನಲ್ಲಿ ಗರಿಷ್ಠ: ಈ ಬಾರಿ ತುಳು ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪುತ್ತೂರು ತಾ.ನಲ್ಲಿ ಗರಿಷ್ಟ ಸಂಖ್ಯೆಯಲ್ಲಿದ್ದಾರೆ. ಪುತ್ತೂರಿನಲ್ಲಿ 247, ಸುಳ್ಯ 35, ಬೆಳ್ತಂಗಡಿ 91, ಬಂಟ್ವಾಳ 57, ಮಂಗಳೂರಿನಲ್ಲಿ 15 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅರ್ಹತೆ ಹೊಂದಿದ್ದಾರೆ.
ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಒಂದೂವರೆ ಪಟ್ಟು ಹೆಚ್ಚಿದೆ. 6ರಿಂದ 10ನೇ ತರಗತಿ ತನಕದ ವಿದ್ಯಾರ್ಥಿಗಳ ಕಲಿಕೆ ಇರುವ ಶಾಲೆಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಮಂಗಳೂರಿನಲ್ಲಿ ತುಳು ಪಠ್ಯದ ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿಸಲು ಕಾರ್ಯಾಗಾರ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ.
– ಚಂದ್ರಹಾಸ ರೈ, ರಿಜಿಸ್ಟ್ರಾರ್, ತುಳು ಅಕಾಡೆಮಿ
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.