ಮೋದಿ ವಾರ್ ಘೋಷಣೆ
Team Udayavani, Feb 8, 2018, 8:15 AM IST
ಹೊಸದಿಲ್ಲಿ: ಭಾರತ ವಿಭಜಿಸಿದ್ದು ಯಾರು? ದೇಶಕ್ಕೆ ಪ್ರಜಾತಂತ್ರದ ಕಲ್ಪನೆ ರೂಪಿಸಿಕೊಟ್ಟದ್ದು ಯಾರು? ತುರ್ತು ಪರಿಸ್ಥಿತಿ ಹೇರಿದ್ದು ಯಾರು…? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಲೇ ಸದ್ಯದಲ್ಲೇ ಎದುರಾಗ ಲಿರುವ ಕರ್ನಾಟಕ ಸಹಿತ ವಿವಿಧ ಅಸೆಂಬ್ಲಿ ಚುನಾವಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದಿಂದಲೇ ರಣಕಹಳೆ ಊದಿ ದ್ದಾರೆ. ಇದಷ್ಟೇ ಅಲ್ಲ, ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಪ್ರಸ್ತಾವಿಸಿದ ಮೋದಿ ಅವರು, ಒಟ್ಟಿಗೆ ಚುನಾವಣೆ ನಡೆದರೆ ಹಣಕಾಸಿನ ದೃಷ್ಟಿ ಯಷ್ಟೇ ಅಲ್ಲ, ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆ ಯಾಗಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ತನ್ನ ಪ್ರತಿ ಮಾತಿನಲ್ಲೂ ಕಾಂಗ್ರೆಸನ್ನು ತೀಕ್ಷ್ಣವಾಗಿ ತಿವಿದಿದ್ದಾರೆ. 70 ವರ್ಷಗಳ ಅನಂತರವೂ ದೇಶ ಇದೇ ರೀತಿ ಇರಲು ನೀವೇ ಕಾರಣ ಎಂದು ಹೇಳುತ್ತಲೇ, ಎನ್‌ಡಿಎ ಸರಕಾರ ತಂದ ಬದಲಾವಣೆಗಳನ್ನೂ ಪಟ್ಟಿ ಮಾಡಿದ್ದಾರೆ. ಮೋದಿ ಮಾತು ಆರಂಭಿಸಿದ್ದೇ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಶಾಯರಿ ಉಲ್ಲೇಖೀಸಿ.
ಮಂಗಳವಾರವಷ್ಟೇ ಖರ್ಗೆ ಉಲ್ಲೇಖೀಸಿದ್ದ ಉರ್ದು ಕವಿ ಬಶೀರ್ ಬದ್ರ್ ಅವರ ಶಾಯಿರಿಯ ಅರ್ಥವನ್ನೇ ವಿವರಿಸಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. ಅಷ್ಟೇ ಅಲ್ಲ, ಈ ಶಾಯಿರಿ ಯನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೇಳಿಸಿಕೊಳ್ಳಬೇಕು ಎಂದರು. ಕರ್ನಾಟಕದ ಚುನಾವಣೆ ಮುಗಿದ ಅನಂತರ ಖರ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುತ್ತೀರೋ ಇಲ್ಲವೋ ಗೊತ್ತಿಲ್ಲ. ಮಂಗಳವಾರದ ಅವರ ಮಾತೇ ವಿದಾಯದ ಭಾಷಣವೂ ಆಗಿರಬಹುದು ಎಂದು ಟಾಂಗ್ ನೀಡಿದರು.
ಪ್ರಜಾತಂತ್ರ ಬಸವಣ್ಣನವರ ಕೂಸು: ಕರ್ನಾಟಕದ ಬಗ್ಗೆ ಹಲವಾರು ಬಾರಿ ಪ್ರಸ್ತಾವಿಸಿದ ಮೋದಿ, ಪ್ರಜಾಪ್ರಭುತ್ವವನ್ನು ಜಾರಿಗೆ ತಂದದ್ದು ನೆಹರೂ ಎಂದು ಕಾಂಗ್ರೆಸಿಗರು ಆಗಾಗ ಹೇಳುತ್ತಲೇ ಇರುತ್ತಾರೆ. ಆದರೆ ಅವರು ಇತಿಹಾಸ ಮರೆತಿದ್ದಾರೆ. ಪ್ರಜಾತಂತ್ರ ರೂಪಿತವಾಗಿದ್ದು 12ನೇ ಶತಮಾನ ದಲ್ಲಿ. ಆಗ ಬಸವೇಶ್ವರರು ಅನುಭವ ಮಂಟಪದ ಮೂಲಕ ಪ್ರಜಾತಂತ್ರ ವ್ಯವಸ್ಥೆ ಜಾರಿ ಮಾಡಿದರು. ಇದಷ್ಟೇ ಅಲ್ಲ, ಈ ಮಂಟಪದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಿದ್ದರು ಎಂದು ಕಾಂಗ್ರೆಸ್‌ಗೆ ಎದಿರೇಟು ನೀಡಿದರು. ಕರ್ನಾಟಕ ಹಾಗೂ ರೈಲ್ವೇ ಬಗ್ಗೆ ಖರ್ಗೆ ಮಾತನಾಡಿದ್ದಾರೆ. ಬೀದರ್- ಕಲಬುರಗಿ ರೈಲ್ವೇ ಮಾರ್ಗದ ವಾಸ್ತವ ಸ್ಥಿತಿಯನ್ನು ನಿಮಗೆ ಹೇಳುತ್ತೇನೆ. ವಾಜಪೇಯಿ ಸರಕಾರವಿದ್ದಾಗ ಈ ಯೋಜನೆಗೆ ಅನುಮೋದನೆ ನೀಡಲಾಯಿತು. 2004ರಿಂದ 2013ರವರೆಗೂ ಯಾವ ಕೆಲಸವನ್ನೂ ಮಾಡಿಲ್ಲ. ಯಡಿ ಯೂರಪ್ಪ ನೇತೃತ್ವದ ಬಿಜೆಪಿ ಸರಕಾರವಿದ್ದಾಗ ಕಾಮಗಾರಿ ಗಾಗಿ ಭೂಮಿ ನೀಡಲಾಗಿತ್ತು ಎಂದು ಹೇಳಿದರು.
ರಾಜೀವ್‌ಗಾಂಧಿಯಿಂದ ಆಂಧ್ರಕ್ಕೆ ಅವಮಾನ: ಆಂಧ್ರ ಪ್ರದೇಶದಲ್ಲಿ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿರುವ ತೆಲುಗು ದೇಶಂ ಪಕ್ಷ ಮೆಚ್ಚಿಸುವ ಬಗ್ಗೆ ಮಾತನಾಡಿದ ಮೋದಿ, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ನೀಲಂ ಸಂಜೀವ ರೆಡ್ಡಿ ಅವರಿಗೆ ಮಾಡಿದ ಅವಮಾನದ ಬಗ್ಗೆ ಪ್ರಸ್ತಾವಿಸಿದರು. ಇದಾದ ಅನಂತರ ಆಂಧ್ರಕ್ಕಾದ ಅವಮಾನ ಗಮನಿಸಿಯೇ ಎನ್.ಟಿ. ರಾಮರಾವ್ ಅವರು ತೆಲಗುದೇಶಂ ಪಕ್ಷ ಕಟ್ಟಿದರು ಎಂದರು. ವಿಶೇಷವೆಂದರೆ, ಮೋದಿ ಅವರ ಈ ಮಾತು ಅಲ್ಲೇ ಕುಳಿತಿದ್ದ ಟಿಡಿಪಿ ಸಂಸದರಿಗೆ ಅಪಾರ ಖುಷಿ ತಂದುಕೊಟ್ಟಿತು.
ಪಕ್ಷದೊಳಗೇ ಪ್ರಜಾಪ್ರಭುತ್ವವಿಲ್ಲ: ಡಿಸೆಂಬರ್‌ನಲ್ಲಿ ನಡೆದಿದ್ದು ಚುನಾವಣೆಯೋ ಅಥವಾ ಕಾಂಗ್ರೆಸ್ ಅಧ್ಯಕ್ಷರ ಪಟ್ಟಾಭಿಷೇಕವೋ? ಒಬ್ಬ ಯುವಕ ಧ್ವನಿ ಎತ್ತಿದರು. ಆದರೆ ಅವರನ್ನು ನಿರ್ಲಕ್ಷಿಸಲಾಯಿತು ಎಂದು ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಆರಿಸಿದ ರೀತಿಯ ಬಗ್ಗೆ ಕಿಡಿಕಾರಿದರು. ಪಕ್ಷದೊಳಗೇ ಪ್ರಜಾಪ್ರಭುತ್ವವನ್ನು ಆಚರಿಸುವುದಿಲ್ಲ. ಇನ್ನು ದೇಶದ ಕಥೆಯೇನಾದೀತು ಎಂದರು. ಈ ಸಂದರ್ಭದಲ್ಲೇ ಔರಂಗಜೇಬ್ ಅವರ ಪಟ್ಟಾಭಿಷೇಕದ ಬಗ್ಗೆಯೂ ಉಲ್ಲೇಖೀಸಿದರು. ಅಲ್ಲದೆ ಕಾಂಗ್ರೆಸ್‌ನಂತೆ ಬಿಜೆಪಿ ಆಡಳಿತ ನಡೆಸಿಲ್ಲ. ಕೆಲಸ ರೀತಿಯನ್ನು ದೇಶದಲ್ಲಿ ಎನ್‌ಡಿಎ ಸರಕಾರ ಬದಲಿಸಿತು ಎಂದಿರುವ ಅವರು, ಎನ್‌ಡಿಎ ಸರಕಾರದ ಯೋಜನೆಗಳು ಹಾಗೂ ಸಾಧನೆಗಳನ್ನು ಪ್ರಸ್ತಾವಿಸಿದರು.
ಗುರಿಕಾರರು ನಾವು: ರಾಜ್ಯಸಭೆಯಲ್ಲಿನ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮೋದಿ ಸರ್ಕಾರ ನೇಮ್ ಚೇಂಜರ್ ಸರಕಾರ ಎಂಬ ಟೀಕೆಗೆ ಪ್ರತಿಕ್ರಿಯೆ ನೀಡಿದ ಮೋದಿ “ನಮ್ಮ ಸರಕಾರ ನೇಮ್ ಚೇಂಜರ್ ಅಥವಾ ಗೇಮ್ ಚೇಂಜರ್ ಅಲ್ಲ, ನಮ್ಮದೇನಿದ್ದರೂ ಏಮ್ ಚೇಸರ್ (ಗುರಿಯನ್ನು ಬೆಂಬತ್ತುವ) ಸರಕಾರ ಎಂದು ಹೇಳಿದರು.ಆದರೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷ ತಡೆದಿರುವ ತ್ರಿವಳಿ ತಲಾಖ್ ಮಸೂದೆಯ ಬಗ್ಗೆ ಕಟುವಾಗಿಯೇ ಮಾತನಾಡಿದರು. ಒಬ್ಬ ಹಿಂದೂ ಪುರುಷ ಎರಡು ವಿವಾಹವಾದರೆ ಆತನನ್ನು ಖುಷಿಯಾಗಿ ಜೈಲಿಗೆ ಕಳುಹಿಸುತ್ತೀರಿ, ಆದರೆ ಅದೇ ಮುಸ್ಲಿಂ ವ್ಯಕ್ತಿ ಎರಡು ಮದುವೆಯಾದರೆ ಆತನನ್ನು ರಕ್ಷಿಸಬೇಕು ಎಂದು ಹೇಳುತ್ತೀರಿ. ಇದು ಯಾವ ನ್ಯಾಯ ಎಂದು ಕಾಂಗ್ರೆಸ್‌ಗೆ ತಿವಿದರು.
ರೇಣುಕಾ ನಗೆಯೂ… ರಾಮಾಯಣವೂ..!: ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಜೋರಾಗಿ ನಕ್ಕಾಗ ರಾಮಾಯಣದಲ್ಲಿನ ಸಂದರ್ಭಕ್ಕೆ ಹೋಲಿಸಿದ ಸನ್ನಿವೇಶವೂ ರಾಜ್ಯಸಭೆಯಲ್ಲಿ ನಡೆಯಿತು. ಮೋದಿ ಮಾತನಾಡುತ್ತಿರುವ ವೇಳೆ ರೇಣುಕಾ ಚೌಧರಿ ದೊಡ್ಡ ಧ್ವನಿಯಲ್ಲಿ ನಕ್ಕಿದ್ದಕ್ಕೆ ಸಭಾಪತಿ ವೆಂಕಯ್ಯ ನಾಯ್ಡು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಸಭಾಪತಿಯವರೇ, ರೇಣುಕಾಜೀಯವರಿಗೆ ಏನನ್ನೂ ಹೇಳಬೇಡಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ರಾಮಾಯಣ ಸೀರಿಯಲ್ ಅನಂತರ ಇಂಥಾ ನಗು ಕೇಳುವ ಸೌಭಾಗ್ಯ ನಮಗೆ ಲಭಿಸಿದೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಮೆಚ್ಚಿ ಸ್ವಾಗತಿಸಿದ್ದು ಕಂಡುಬಂತು.
ಸರ್ದಾರ್ ಪ್ರಧಾನಿಯಾಗಬೇಕಿತ್ತು
ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ನೆನಪಿಸಿಕೊಂಡರು. ಇದು ಖುಷಿ ವಿಚಾರವೇ. ಆದರೆ, ದೇಶದ ಮೊದಲ ಪ್ರಧಾನಿಯಾಗಬೇಕಾಗಿದ್ದವರು ಪಟೇಲರು. ಆಗ ಅವರೇನಾದರೂ ಪ್ರಧಾನಿಯಾಗಿದ್ದಿದ್ದರೆ ಕಾಶ್ಮೀರದ ಸಮಸ್ಯೆ ಇರುತ್ತಲೇ ಇರಲಿಲ್ಲ. ಅದು ಸಂಪೂರ್ಣವಾಗಿ ಭಾರತದ್ದೇ ಆಗಿರುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.