ಎರಡು ತಾಲೂಕುಗಳಲ್ಲಿ ವೃದ್ಧಿ; ಮೂರರಲ್ಲಿ ತೀವ್ರ ಕುಸಿತ !
Team Udayavani, Feb 8, 2018, 8:15 AM IST
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದ್ದು, 2016ನೇ ವರ್ಷಕ್ಕೆ ಹೋಲಿಸಿದರೆ 2017ರಲ್ಲಿ 0.78 ಮೀ.ನಷ್ಟು ಕೆಳಜಾರಿದೆ.
ಜಿಲ್ಲಾ ಅಂತರ್ಜಲ ಕಚೇರಿಯು ಪ್ರತೀ ತಿಂಗಳು ನಡೆಸುವ ಮೌಲ್ಯಮಾಪನದ ಆಧಾರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿಯುತ್ತಿರುವ ಬಗ್ಗೆ ಅನೇಕ ವರದಿಗಳು ಉಲ್ಲೇಖೀಸಿದ್ದು, ಭೂ ವಿಜ್ಞಾನಿಗಳು ಈ ಅಪಾಯದ ಕುರಿತು ಎಚ್ಚರಿಸಿದ್ದರು. ಕಳೆದ ವರ್ಷಕ್ಕಿಂತ ಈ ವರ್ಷ ನೀರಿನ ಮಟ್ಟ ಕುಸಿತ ಕಂಡಿರುವುದು ಆತಂಕದ ಸಂಗತಿಯೆನಿಸಿದೆ. ಜಿಲ್ಲೆಯ ಐದು ತಾಲೂಕುಗಳ ಪೈಕಿ ಸುಳ್ಯ ಮತ್ತು ಬಂಟ್ವಾಳ ತಾಲೂಕಿನಲ್ಲಿ ಮಾತ್ರ ಅಂತರ್ಜಲದ ಮಟ್ಟ ಕಳೆದ ವರ್ಷಕ್ಕಿಂತ ಮೇಲ್ಮಟ್ಟದಲ್ಲಿದ್ದರೆ, ಉಳಿದ ಮೂರು ತಾಲೂಕುಗಳಲ್ಲಿ ಇಳಿಕೆಯ ಹಾದಿಯಲ್ಲಿದೆ.
ಮಂಗಳೂರಿನಲ್ಲಿ ಅಧಿಕ ಕುಸಿತ
ಐದು ತಾಲೂಕುಗಳ ಪೈಕಿ ಮಂಗಳೂರಿನಲ್ಲಿ ಅಂತರ್ಜಲದ ಮಟ್ಟ ಅತಿಹೆಚ್ಚು ಕುಸಿದಿದೆ. ದಿನೇದಿನೇ ಅಭಿವೃದ್ಧಿಗೊಳ್ಳುತ್ತಿರುವ ಮಂಗಳೂರಿನಲ್ಲಿ ಅಂತರ್ಜಲ ಕುಸಿತ ಕಂಡಿರುವುದು ಅಚ್ಚರಿಯ ಸಂಗತಿ. ಜಲ ಮರುಪೂರಣ ವೈಫಲ್ಯ, ಮಳೆ ಪ್ರಮಾಣ ಕುಸಿತ, ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಇಳಿಮುಖ ಆಗಿರುವುದು, ನೀರನ್ನು ಭುವಿಗೆ ಇಂಗಿಸುತ್ತಿದ್ದ ಬಾವಿ, ಕೆರೆಗಳು ಮುಚ್ಚಿರುವುದು, ಗದ್ದೆ ಬೇಸಾಯ ಕಡಿಮೆ ಆಗಿರುವುದು ಈ ಕುಸಿತಕ್ಕೆ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ.
ಕಳೆದ ಮೂರು ವರ್ಷದಲ್ಲಿ ಮಂಗಳೂರು ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕ್ರಮವಾಗಿ 12.18 ಮೀ., 12.96 ಮೀ. ಮತ್ತು 15.33 ಮೀ.ನಲ್ಲಿ ಇದ್ದು, ವರ್ಷದಿಂದ ವರ್ಷಕ್ಕೆ ಕುಸಿತದ ಹಾದಿಯಲ್ಲಿರುವುದನ್ನು ದೃಢಪಡಿಸಿದೆ. ಅಂತರ್ಜಲ ಮಟ್ಟ ಕುಸಿತದ ಕಡೆಗೆ ಸಾಗಿರುವ ತಾಲೂಕುಗಳ ಪೈಕಿ ಮಂಗಳೂರಿನ ಅನಂತರದ ಸ್ಥಾನದಲ್ಲಿ ಬೆಳ್ತಂಗಡಿ ಮತ್ತು ಪುತ್ತೂರು ಗುರುತಿಸಿಕೊಂಡಿವೆ.
ಜಿಲ್ಲಾವಾರು ಕುಸಿತ
ಕಳೆದ ಮೂರು ವರ್ಷಗಳ ವಾರ್ಷಿಕ ಅಂಕಿ ಅಂಶದ ಪ್ರಕಾರ ಸಮಗ್ರವಾಗಿ ದ.ಕ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅಂತರ್ಜಲ ಮಟ್ಟ 2015ರಲ್ಲಿ 9.12 ಮೀ., 2016ರಲ್ಲಿ 9.79 ಮೀ. ಇದ್ದುದು 2017ರಲ್ಲಿ 10.57 ಮೀ. ಆಗಿದೆ. ಅಂದರೆ ವರ್ಷದಿಂದ ವರ್ಷಕ್ಕೆ ಇದು ಕೆಳಕ್ಕೆ ಇಳಿಯುತ್ತಿರುವುದನ್ನು ಗಮನಿಸಬಹುದು. ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸುವ ಪ್ರಕ್ರಿಯೆ ಅಧಿಕ ಆಗಿರುವುದು ಇದಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರತೀ ತಾಲೂಕಿನಲ್ಲಿ ಕಿಂಡಿ ಅಣೆಕಟ್ಟುಗಳ ಸಂಖ್ಯೆ ಸರಾಸರಿ 20ರಿಂದ 30ರಷ್ಟು ಹೆಚ್ಚಾಗಿರುವುದು ಅಂತರ್ಜಲ ವೃದ್ಧಿಗೆ ಪೂರಕವೆನಿಸಿದೆ. ಫೆಬ್ರವರಿಯ ಬಳಿಕ ಈ ಕಿಂಡಿ ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರು ಕಡಿಮೆ ಯಾದರೆ ಆಗ ಅಂತರ್ಜಲ ಮಟ್ಟದಲ್ಲಿಯೂ ಬದ ಲಾವಣೆ ಉಂಟಾಗುವ ಸಾಧ್ಯತೆ ಇದೆ ಎಂದು ಜಲತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕೊಳವೆಬಾವಿ ನಿಷೇಧ
ಕಳೆದ ವರ್ಷ ರಾಜ್ಯ ಅಂತರ್ಜಲ ನಿರ್ದೇಶನಾಲಯ ರಾಜ್ಯದೆಲ್ಲೆಡೆ ನಡೆಸಿದ ಸರ್ವೆ ಆಧಾರದಲ್ಲಿ 20 ಜಿಲ್ಲೆಗಳ 65 ತಾಲೂಕು ಮಾತ್ರ ಅಂತರ್ಜಲ ಬಳಕೆಗೆ ಸುರಕ್ಷಿತ ಎಂದು ವರದಿ ನೀಡಿತ್ತು. ಅದೇ ಆಧಾರದಲ್ಲಿ ಉಳಿದ ಎಲ್ಲ ತಾಲೂಕಿನಲ್ಲಿ ಕೊಳವೆಬಾವಿ ಕೊರೆಯಲು ನಿಷೇಧ ಹೇರಲಾಗಿತ್ತು. ದ.ಕ. ಜಿಲ್ಲೆಯ ಪುತ್ತೂರು ತಾಲೂಕು ನಿಷೇಧಿತ ಪಟ್ಟಿಗೆ ಸೇರ್ಪಡೆಗೊಂಡಿತ್ತು. ಉಳಿದ ನಾಲ್ಕು ತಾಲೂಕುಗಳಲ್ಲಿ ಅಂತರ್ಜಲ ಬಳಕೆಗೆ ಯೋಗ್ಯ ಎನ್ನಲಾಗಿತ್ತು. ರಾಜ್ಯದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಸುವ ಅಂತರ್ಜಲ ಮೌಲ್ಯ ಮಾಪನ ಆಧಾರದಲ್ಲಿ, 2013ರ ಅನುಮೋದಿತ ಅಂತರ್ಜಲ ಮೌಲ್ಯಮಾಪನ ವರದಿ ಆಧಾರದಲ್ಲಿ ಈ ಆದೇಶ ನೀಡಲಾಗಿತ್ತು. ಈಗ ಹೊಸ ಮೌಲ್ಯ ಮಾಪನ ನಡೆದರೆ ಸಮಗ್ರ ದ.ಕ. ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯಲು ನಿಷೇಧ ಹೇರುವ ಆದೇಶ ಬಂದರೂ ಅಚ್ಚರಿಯೇನಿಲ್ಲ ಅನ್ನುತ್ತಿದೆ ಇಲ್ಲಿನ ಅಂತರ್ಜಲದ ಮಟ್ಟ.
ಎತ್ತಿನಹೊಳೆ ಯೋಜನೆ ಕಂಟಕ
ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಬರಿದುಗೊಳಿಸುವ ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಯೋಜನೆ ಜಾರಿಗೆ ಮೊದಲೇ ಕರಾವಳಿ ಬರ ಎದುರಿಸುತ್ತಿದೆ. ಅವೈಜ್ಞಾನಿಕವಾಗಿ ಘಟ್ಟಭಾಗಕ್ಕೆ ನೀರು ಕೊಂಡೊಯ್ಯುವುದು ಆರಂಭವಾದರೆ ಇಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುವುದು ನಿಶ್ಚಿತ ಎನ್ನುತ್ತಾರೆ ತಜ್ಞರು.
ಕುಸಿತ ಕಂಡಿದೆ
ಈ ಹಿಂದಿನ ವರ್ಷದ ಅಂಕಿಅಂಶ ಅವಲೋಕಿಸಿದರೆ, ಕಳೆದ ವರ್ಷ ಜಿಲ್ಲಾವಾರು ಅಂತರ್ಜಲದ ಮಟ್ಟ ಕುಸಿತ ಕಂಡಿದೆ. ಆದರೆ 2018ರ ಜನವರಿಯಲ್ಲಿ ನಡೆದ ಮಾಪನದಲ್ಲಿ 2017ರ ಜನವರಿಗಿಂತ ಅಂತರ್ಜಲ ಮಟ್ಟ ಹೆಚ್ಚಿರುವುದು ಕಂಡುಬಂದಿದೆ. ಇದು ಕಿಂಡಿ ಅಣೆಕಟ್ಟುಗಳ ಸದ್ಬಳಕೆಯ ಪರಿಣಾಮ ಆಗಿರಬಹುದು.
ಜಾನಕಿ, ಭೂ ವಿಜ್ಞಾನಿ, ಅಂತರ್ಜಲ ವಿಭಾಗ ಭೂ ವಿಜ್ಞಾನ ಇಲಾಖೆ, ಮಂಗಳೂರು
ಹೊಸ ವರ್ಷದ ಭರವಸೆ
ಕುಸಿತದ ಮಧ್ಯೆ ಆಶಾದಾಯಕ ಸಂಗತಿ ಅಂದರೆ, 2018ರ ಜನವರಿಯ ಅಂತರ್ಜಲದ ಮಟ್ಟ. ಕಳೆದ ವರ್ಷದ ಜನವರಿಗೆ ಹೋಲಿಸಿದರೆ ಈ ವರ್ಷ ಎಲ್ಲ ತಾಲೂಕುಗಳಲ್ಲಿ ಅಂತರ್ಜಲ ಮೇಲ್ಮಟ್ಟದಲ್ಲಿದೆ. 2017ರ ಜನವರಿ ಯಲ್ಲಿ ಬಂಟ್ವಾಳದಲ್ಲಿ 10.84 ಮೀ., ಬೆಳ್ತಂಗಡಿಯಲ್ಲಿ 12.55 ಮೀ., ಮಂಗಳೂರಿನಲ್ಲಿ 18.00 ಮೀ., ಪುತ್ತೂರಿ ನಲ್ಲಿ 8.46 ಮೀ. ಮತ್ತು ಸುಳ್ಯದಲ್ಲಿ 12.36 ಮೀ.ಗಳಲ್ಲಿತ್ತು. 2018ರ ಜನವರಿಯಲ್ಲಿ ಇದು ಕ್ರಮವಾಗಿ 7.89 ಮೀ., 11.6 ಮೀ., 16.08 ಮೀ., 7.86 ಮೀ., 10.9 ಮೀ.ನಲ್ಲಿ ಇದೆ.
ಅಂತರ್ಜಲ ಮಟ್ಟ
ತಾಲೂಕು ವರ್ಷ 2015 2016 2017
ಬಂಟ್ವಾಳ 8.85 ಮೀ. 9.53 ಮೀ. 9.20 ಮೀ.
ಬೆಳ್ತಂಗಡಿ 7.53 ಮೀ. 8.67 ಮೀ. 10.72 ಮೀ.
ಮಂಗಳೂರು 12.18 ಮೀ. 12.96 ಮೀ. 15.33 ಮೀ.
ಪುತ್ತೂರು 6.76 ಮೀ. 7.12 ಮೀ. 7.65 ಮೀ.
ಸುಳ್ಯ 10.22 ಮೀ. 10.68 ಮೀ. 9.94 ಮೀ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.