ವಾಸ್ತವ, ಜನಪರಬಜೆಟ್ ಮಂಡನೆಗೆ ಪಾಲಿಕೆ ಸಿದ್ಧತೆ
Team Udayavani, Feb 10, 2018, 12:07 PM IST
ಬೆಂಗಳೂರು: ಬಿಬಿಎಂಪಿಯಲ್ಲಿ ಮೂರನೇ ಅವಧಿಗೆ ಬಜೆಟ್ ಮಂಡನೆ ಹೊಸ್ತಿಲಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ, ಈ ಬಾರಿ ವಾಸ್ತವಿಕ ಹಾಗೂ ಜನಪರವಾದ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ.
ಪಾಲಿಕೆಯ ಹಣಕಾಸು ವಿಭಾಗದ ಅಧಿಕಾರಿಗಳು ಇತ್ತೀಚೆಗೆ ಕರಡು ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿರುವ ಮೈತ್ರಿ ಆಡಳಿತ, ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಜನಪರವಾದ ಆಯವ್ಯಯ ಮಂಡಿಸಲು ತೀರ್ಮಾನಿಸಿವೆ.
ಜನಪರ ಕಾರ್ಯಕ್ರಮಗಳ ಜತೆಗೆ, ನಾಗರಿಕರಿಗೆ ಪಾರದರ್ಶಕ ಹಾಗೂ ಸುಲಭ ಆಡಳಿತ ನೀಡಲು ಆನ್‌ಲೈನ್ ಸೇವೆಗಳಿಗೆ ಹೆಚ್ಚು ಒತ್ತು ನೀಡಲು ತೀರ್ಮಾನಿಸಿದ್ದು, ಈಗಾಗಲೇ ಘೋಷಣೆಯಾಗಿರುವ ಯೋಜನೆಗಳೊಂದಿಗೆ ಕೆಲವೊಂದು ಹೊಸ ಯೋಜನೆಗಳ ಘೋಷಣೆ ಮಾಡಿ, ಹಳೆಯ ಯೋಜನೆಗಳ ಜಾರಿಗೆ ಒತ್ತು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಎಲೆಕ್ಟ್ರಿಕಲ್ ಬೈಕ್ ಹಾಗೂ ಕಾರುಗಳನ್ನು ಪರಿಚಯಿಸಲು ಪಾಲಿಕೆ ಮುಂದಾಗಿದೆ. ಜತೆಗೆ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಏರ್ ಆ್ಯಂಬುಲೆನ್ಸ್ ಸೇವೆ ಆರಂಭಿಸಲು ಚಿಂತನೆ ನಡೆಸಿದೆ.
ಜತೆಗೆ ಈಗಾಗಲೇ ನಗರದಲ್ಲಿ ನಿರ್ಮಿಸಲಾಗಿರುವ 13 ಜೈವಿಕ ಅನಿಲ ಘಟಕಗಳ ಪುನರಾರಂಭ, ಪಾಲಿಕೆಯಿಂದಲೇ ನಗರದಲ್ಲಿ ತ್ಯಾಜ್ಯದಿಂದ ವಿದ್ಯುತ್ ತಯಾರಿಕಾ ಘಟಕ ನಿರ್ಮಿಸಲು 250 ಕೋಟಿ ರೂ. ಮೀಸಲಿಡುವುದು, ಜಾಗ ಲಭ್ಯವಿರುವ ವಾರ್ಡ್‌ಗಳಲ್ಲಿ ತ್ಯಾಜ್ಯದಿಂದ ವಿದ್ಯುತ್ ತಯಾರಿಕಾ ಘಟಕಗಳ ನಿರ್ಮಾಣಕ್ಕೂ ಅನುದಾನವಿಡಲು ಚಿಂತನೆ ನಡೆದಿದೆ.
ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಮಧ್ಯಮ ವರ್ಗದವರ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಅವರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಿದ್ದಾರೆ. ಅದರಂತೆ ಕಳೆದ ಬಾರಿ ಘೋಷಣೆ ಮಾಡಿದಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸುವುದು, ಜತೆಗೆ ಬಡ ಹಾಗೂ ಮಧ್ಯಮ ವರ್ಗ ಜನತೆಯ ಆರೋಗ್ಯ ರಕ್ಷಣೆಗಾಗಿ ಮಹತ್ವಾಕಾಂಕ್ಷಿ ಯೋಜನೆಯೊಂದು ಘೋಷಿಸಲಾಗುತ್ತದೆ ಎನ್ನಲಾಗಿದೆ.
ಮೇಯರ್, ಉಪಮೇಯರ್ ಅನುದಾನ ಹೆಚ್ಚಳ?: ಬಜೆಟ್‌ನಲ್ಲಿ ಬಿಬಿಎಂಪಿ ಮೇಯರ್, ಉಪಮೇಯರ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರ ನಿಧಿಯ ಅನುದಾನ ಹೆಚ್ಚಿಸಲು ಚಿಂತನೆ ನಡೆದಿದೆ. ಇದರೊಂದಿಗೆ ಪಾಲಿಕೆಯ ಎಲ್ಲ 12 ಸ್ಥಾಯಿ ಸಮಿತಿಗಳಿಗೆ ನೀಡುವ ಅನುದಾನವನ್ನು ಹೆಚ್ಚಿಸಬೇಕೆಂಬ ಮನವಿಗಳು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಬಂದಿವೆ.
10 ಸಾವಿರ ಕೋಟಿ ದಾಟಲಿರುವ ಬಜೆಟ್: ಕಳೆದ ಎರಡು ಅವಧಿಗಳಲ್ಲಿ ವಾಸ್ತವಿಕ ಬಜೆಟ್ ನೀಡಲಾಗಿದ್ದರೂ ಬಜೆಟ್ ಗಾತ್ರ 10 ಸಾವಿರ ಕೋಟಿ ರೂ. ದಾಟಿತ್ತು. ಅದರಂತೆ ಪ್ರಸಕ್ತ ಸಾಲಿನ ಬಜೆಟ್‌ನ ಗಾತ್ರವೂ 10 ಸಾವಿರ ಕೋಟಿ ರೂ. ದಾಟುವ ಸಾಧ್ಯತೆಯಿದೆ.
ಈಗಾಗಲೇ ಅಧಿಕಾರಿಗಳು ಸಲ್ಲಿಸಿರುವ ಕರಡು ಬಜೆಟ್ ಗಾತ್ರ 9 ಸಾವಿರ ಕೋಟಿ ರೂ. ತಲುಪಿದೆ ಎನ್ನಲಾಗಿದ್ದು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯಿಂದ ಮತ್ತಷ್ಟು ಯೋಜನೆಗಳು ಸೇರ್ಪಡೆಯಾಗಲಿವೆ. ಆಗ ಬಜೆಟ್ ಗಾತ್ರ 10 ಸಾವಿರ ಕೋಟಿ ರೂ. ದಾಟಲಿದೆ ಎನ್ನುತ್ತವೆ ಉನ್ನತ ಮೂಲಗಳು.
ಫೆ.23ರಂದು ಬಜೆಟ್ ಮಂಡನೆ: ಬಿಬಿಎಂಪಿ ಅಧಿಕಾರಿಗಳು ಕರಡು ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಫೆ.23ರಂದು ಬಜೆಟ್ ಮಂಡಿಸಲು ಉದ್ದೇಶಿಸಲಾಗಿದೆ. ಅದರಂತೆ ಫೆ.26 ಮತ್ತು 27ರಂದು ಬಜೆಟ್ ಮೇಲೆ ಕೌನ್ಸಿಲ್‌ನಲ್ಲಿ ಚರ್ಚೆ ನಡೆಸಿ ಫೆ.28ರಂದು ಕೌನ್ಸಿನ್‌ನಿಂದ ಬಜೆಟ್‌ಗೆ ಅನುಮೋದನೆ ಪಡೆದು ಸರ್ಕಾರದ ಒಪ್ಪಿಗೆ ಕಳುಹಿಸಲು ಸಿದ್ಧತೆ ನಡೆದಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಮಂಡಿಸುತ್ತಿರುವ ಮೂರನೇ ಬಜೆಟ್ ಜನಪರ ಹಾಗೂ ವಾಸ್ತವಕ್ಕೆ ಹತ್ತಿರವಾಗಿರಲಿದೆ. ನಗರದ ಬಡ ಹಾಗೂ ಮಧ್ಯಮ ವರ್ಗದವರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಪಾಲಿಕೆಯ ಸಂಪನ್ಮೂಲಗಳಿಗೆ ಅನುಗುಣವಾಗಿ ಬಜೆಟ್ ಮಂಡಿಸಲಾಗುವುದು.
-ಮಹದೇವ್, ಅಧ್ಯಕ್ಷರು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.