ಕಿರಿಯ ವಯಸ್ಸಿನ ಹಿರಿಯ ಸಾಧಕಿ
Team Udayavani, Feb 11, 2018, 12:03 PM IST
ಬೆಂಗಳೂರು: ಛಲದ ಜತೆ, ತಾಳ್ಮೆ ಸೇರಿದರೆ ಜಗತ್ತಿನಲ್ಲಿ ಎಲ್ಲವನ್ನೂ ಸಾಧಿಸಬಹುದು. ಅದಕ್ಕೆ ನಾನೇ ಸಾಕ್ಷಿ ಎನ್ನುತ್ತಾರೆ ಹೈದ್ರಾಬಾದ್‌ನ ನೈನಾ ಜೈಸ್ವಾಲ್. ಅದಕ್ಕೆ ಕಾರಣವೂ ಇದೆ. ಕಿರಿಯ ವಯಸ್ಸಿನಲ್ಲೇ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಹಿರಿಯರು ಮಾಡದಂತಹ ಸಾಧನೆ ಮಾಡಿ ಇಡೀ ದೇಶದ ಗಮನ ಸೆಳೆದಿರುವ ನೈನಾ ಉದಯವಾಣಿಯೊಂದಿಗೆ ತಮ್ಮ ಕನಸು ಹಂಚಿಕೊಂಡಿದ್ದಾರೆ.
8ನೇ ವಯಸ್ಸಿಗೆ ಎಸ್‌ಎಸ್‌ಎಲ್‌ಸಿ ತೇರ್ಗಡೆ. 15ಕ್ಕೆ ಸ್ನಾತಕೋತ್ತರ ಪದವಿ. 16ನೇ ವಯಸ್ಸಿಗೆ ಪಿಹೆಚ್‌ಡಿ ಕಲಿಕೆ!. ಇದರ ಜತೆ ಟೇಬಲ್ ಟೆನ್ನಿಸ್‌ನಲ್ಲಿ ರಾಷ್ಟ್ರೀಯ ಮಟ್ಟದ ಆಟಗಾರ್ತಿ ಎಂಬ ಹೆಗ್ಗಳಿಕೆ. ಐಎಎಸ್ ಮಾಡಬೇಕು ಎಂಬ ಕನಸ್ಸು ಕಾಣುತ್ತಿರುವ ನೈನಾ ಜೈಸ್ವಾಲ್, ನಗರದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪೋಷಕರೇ ಸ್ಫೂರ್ತಿ: ಇಷ್ಟಕ್ಕೆ ನಾನು ತೃಪ್ತಿ ಪಡುವುದಿಲ್ಲ. ಗುರಿ ಮುಟ್ಟುವ ತನಕ ಮಾಡಬೇಕೆಂದುಕೊಂಡಿರುವ ಸಾಧನೆಯನ್ನು ಮಾಡಿಯೇ ತೀರುತ್ತೇನೆ. ಇದಕ್ಕೆ ತಂದೆ-ತಾಯಿಗಳ ಪ್ರೋತ್ಸಾಹ ಇದ್ದೇಇದೆ. ಪೋಷಕರೇ ಈ ಸಾಧನೆಗೆ ಸ್ಪೂರ್ತಿ. ವಕೀಲ ವೃತ್ತಿಯ ನಡುವೆಯೂ ನಮ್ಮ ತಂದೆ ನನ್ನ ಬಗ್ಗೆ ಕೇರ್ ತೆಗೆದುಕೊಳ್ಳುತ್ತಾರೆ.ಇದಕ್ಕಾಗಿ ನಾನವರಿಗೆ ಚಿರಋಣಿ ಎಂದು ಹೇಳಿದರು.
ಪತ್ರಿಕೋದ್ಯಮದ ಪದವಿ: ಎಂಟನೇ ವಯಸ್ಸಿಗೆ ಪ್ರೌಢ ಶಿಕ್ಷಣವನ್ನು ಉನ್ನತ ದರ್ಜೆಯಲ್ಲಿ ತೆರ್ಗಡೆ ಮಾಡಿದೆ. ಓದಿಕೊಳ್ಳಲೆಂದೇ ಸಮಯ ಮೀಸಲಿಡುತ್ತಿದ್ದೆ ಓದಿನಲ್ಲಿದ್ದ ಉತ್ಸಾಹ ಮತ್ತಷ್ಟು ಸಾಧನೆಗೆ ಪ್ರೇರಣೆ ನೀಡಿತು. ಹೀಗಾಗಿ ಹೈದ್ರಾಬಾದ್‌ನ ಒಸ್ಮಾನಿಯ ವಿವಿಯಲ್ಲಿ ಪತ್ರಿಕೋದ್ಯಮ ಪದವಿ ಪಡೆದೆ. ಚಿಕ್ಕವಯಸ್ಸಿನಲ್ಲಿಯೇ ಪತ್ರಿಕೋದ್ಯಮದಲ್ಲಿ ಪದವಿ ಪಡೆದ ಶ್ರೇಯಸ್ಸು ನನ್ನದು. ಇದು ಮತ್ತಷ್ಟು ಖುಷಿ ತಂದಿದೆ ಎಂದು ಕಿರುನಗೆ ಬೀರಿದರು.
ಕ್ರೀಡಾ ಸಾಧನೆ: ಯಾವತ್ತೂ ಒಂದೇ ಕ್ಷೇತ್ರಕ್ಕೆ ನಾವು ಸಿಮೀತವಾಗಿರಬಾರದು. ಸಾಧ್ಯವಾದಷ್ಟು ಎಲ್ಲಾ ಕ್ಷೇತ್ರಗಳಲ್ಲಿ ಕಾಣಿಸಿಕೊಂಡು ಸಾಧನೆ ಮಾಡುವತ್ತ ಗಮನ ಹರಿಸಿಬೇಕು. ಹೀಗಾಗಿ ಓದಿನ ಜತೆಗೆ ಕ್ರೀಡೆಯಲ್ಲಿ ಹೆಜ್ಜೆ ಇರಿಸಿದ್ದೇನೆ. ಇಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದೇನೆ. 15ನೇ ವಯಸ್ಸಿನಲ್ಲಿ ಟೇಬಲ್ ಟೆನ್ನಿಸ್‌ನಲ್ಲಿ ರಾಷ್ಟ್ರೀಯ ಮತ್ತು ದಕ್ಷಿಣ ಏಷ್ಯಾ ಚಾಂಪಿಯನ್ ಆಗಿ ದೇಶಕ್ಕೆ ಕೀರ್ತಿ ತಂದಿರುವುದು ಮತ್ತೂಂದು ಅನುಪಮ ಕ್ಷಣ ಎಂದು ತಮ್ಮ ಕ್ರೀಡಾ ಸಾಧನೆಗಳ ಹಿನ್ನೋಟವನ್ನು ಮೆಲಕು ಹಾಕಿದರು.
ಬಿರಿಯಾನಿ ತಯಾರಿಕೆ: ಅಡುಗೆ ಮಾಡುವುದು ಎಂದರೆ ನನಗೆ ಅಚ್ಚುಮೆಚ್ಚು. ಹೈದ್ರಬಾದ್ ಬಿರಿಯಾನಿ ಮಾಡುವುದರಲ್ಲಿ ನಾನು ಸಿದ್ಧಹಸ್ತ. ಕೇವಲ 25 ನಿಮಿಷಗಳಲ್ಲಿ ರುಚಿಕಟ್ಟಾದ ಬಿರಿಯಾನಿ ಮಾಡುವುದನ್ನು ಕರಗತ ಮಾಡಿಕೊಂಡಿದ್ದೇನೆ. ಅಮ್ಮನ ಜತೆ ಸೇರಿ ಆಂದ್ರ ಶೈಲಿಯ ಕೆಲವು ರೀತಿಯ ಅಡುಗೆ ಮಾಡುವುದನ್ನು ಕರಗತ ಮಾಡಿಕೊಂಡಿದ್ದೇನೆ ಎಂದು ನಸುನಕ್ಕರು.
ಸಾಧನೆ ಎಲ್ಲರೂ ಮಾಡಬಹುದು. ಇದಕ್ಕೆ ಕಠಿಣ ಶ್ರಮ, ಅಭ್ಯಾಸ ಮತ್ತು ತಾಳ್ಮೆ ಮುಖ್ಯ. ಸೋಲನ್ನು ಯಾವತ್ತೂ ಒಪ್ಪಿಕೊಳ್ಳಬಾರದು. ಗೆದ್ದಾಗಲೂ ಅಹಂಕಾರ ಪಡಬಾರದು. ಸರಳವಾಗಿರುವುದನ್ನು ಮೊದಲು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಭವಿಷ್ಯತ್ತಿನಲ್ಲಿ ಜನಸೇವೆ ಮಾಡಲು ಹಿರಿಯ ಐಎಎಸ್ ಅಧಿಕಾರಿ ಕಿರಣ್ ಬೇಡಿ ನನಗೆ ರೋಲ್‌ಮಾಡೆಲ್. ಮುಂದೊಂದು ದಿನ ಐಎಎಸ್ ಅಧಿಕಾರಿಯಾಗಿ ಇಡೀ ದೇಶವೇ ಹೆಮ್ಮೆಪಡುವಂತ ಕೆಲಸವನ್ನು ಮಾಡುತ್ತೇನೆ.
–ನೈನಾ ಜೈಸ್ವಾಲ್, ಸಾಧಕಿ
ಚಿಕ್ಕ ವಯಸ್ಸಿನಲ್ಲಿ ಪಿಎಚ್‌ಡಿ: ಇದೀಗ ಹೈದ್ರಾಬಾದ್‌ನ ಆದಿ ಕವಿ ನಾನಯ್ಯ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಮಾಡುತ್ತಿದ್ದೇನೆ. ಈ ಮೂಲಕ ದೇಶದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿ ಪಡೆದ ಹಿರಿಮೆ ಕೂಡ ನನ್ನದಾಗಲಿದೆ. ಇದಕ್ಕಾಗಿ ಹಲವು ಸಿದ್ಧತೆ ಮಾಡಿಕೊಂಡಿದ್ದೆನೆ ಎನ್ನುತ್ತಾರೆ. ಹೈದ್ರಾಬಾದ್‌ನ ನೈನಾ ಜೈಸ್ವಾಲ್.
* ದೇವೇಶ್ ಸುರಗುಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.