ಜೈವಿಕ ಮಿಥನೀಕರಣ ಘಟಕಕ್ಕೆ ಶಂಕುಸ್ಥಾಪನೆ
Team Udayavani, Feb 13, 2018, 12:02 PM IST
ಬೆಂಗಳೂರು: ನಗರದಿಂದ ಇನ್ನೂ ನಾಲ್ಕು ಕಡೆ ಕಸದಿಂದ ಜೈವಿಕ ಇಂಧನ ಉತ್ಪಾದಿಸುವ “ಜೈವಿಕ ಮಿಥನೀಕರಣ ಘಟಕ’ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನಗರದ ಕೋರಮಂಗಲ ಕೈಗಾರಿಕಾ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ “ಜೈವಿಕ ಮಿಥನೀಕರಣ ಘಟಕ’ಕ್ಕೆ ಸೋಮವಾರ ಶಂಕುಸ್ಥಾಪನೆ ಹಾಗೂ ನಿರ್ಮಾಣಗೊಂಡಿರುವ “ಎಲೆ ತ್ಯಾಜ್ಯ ವಿಲೇವಾರಿ ಘಟಕ’ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ಆಡುಗೋಡಿ ಪೊಲೀಸ್ ವಸತಿಗೃಹ, ಕೆಎಸ್‌ಆರ್‌ಪಿ, ಮಡಿವಾಳ, ಮಾರುಕಟ್ಟೆ ಸೇರಿದಂತೆ ಇನ್ನೂ ನಾಲ್ಕು ಕಡೆ “ಜೈವಿಕ ಮಿಥನೀಕರಣ ಘಟಕ’ ಸ್ಥಾಪಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ಮೊದಲ ಘಟಕದ ನಿರ್ವಹಣೆಯನ್ನು 15 ವರ್ಷ ಕಾಲಮಿತಿ ಅಡಿ ಕಾರ್ಬನ್ ಲೈಟ್ಸ್ ಸಂಸ್ಥೆಗೆ ವಹಿಸಲಾಗಿದ್ದು, ಸಂಸ್ಥೆಯವರು ಸುಮಾರು 2.5 ಕೋಟಿ ರೂ. ಭರಿಸಿದ್ದಾರೆ. ಉಳಿದ 14 ಕೋಟಿ ರೂ.ಗಳನ್ನು ಸರ್ಕಾರ ನೀಡಲಿದೆ. ಈ ಘಟಕಗಳಿಂದ ಕ್ಷೇತ್ರದಲ್ಲಿ ತ್ಯಾಜ್ಯ ವಿಲೇವಾರಿ ಸೇರಿದಂತೆ ಇನ್ನಿತರ ಖರ್ಚುಗಳ ಪೈಕಿ ಸುಮಾರು 15 ವರ್ಷಗಳಲ್ಲಿ ಪಾಲಿಕೆಗೆ 7 ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆ ಇದೆ ಎಂದರು.
ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ನಿತ್ಯ 220 ಟನ್‌ನಷ್ಟು ಕಸ ಸಂಗ್ರಹವಾಗುತ್ತಿದೆ. ಇದರಲ್ಲಿ 130 ಟನ್ ಹಸಿತ್ಯಾಜ್ಯ ಇರುತ್ತದೆ. ಈ ಹಸಿ ತ್ಯಾಜ್ಯವನ್ನು ಜೈವಿಕ ಮಿಥನೀಕರಣ ಘಟಕಗಳಿಗೆ ವಿಲೇವಾರಿ ಮಾಡಿ, ಅನಿಲ ಉತ್ಪಾದನೆ ಮಾಡಲಾಗುವುದು ಎಂದು ಹೇಳಿದರು.
ತಗ್ಗಲಿದೆ ವಿಲೇವಾರಿ ವೆಚ್ಚ: ಅದೇ ರೀತಿ, ಈಗಾಗಲೇ ನಿರ್ಮಾಣಗೊಂಡ ಎಲೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮರದ ಎಲೆ, ರೆಂಬೆಕೊಂಬೆಗಳನ್ನು ಸಂಗ್ರಹಿಸಿ ಅದನ್ನು ಪುಡಿ ಮಾಡಿ, ನಂತರ ಸಾಲಿಡ್ ಹಾಗೂ ಚಾರ್ಕೋಲ್ ತಯಾರಿಸಿ ಅದರಲ್ಲಿ ವಿದ್ಯುತ್ ತಯಾರಿಸಲಾಗುವುದು.
ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಇನ್ನೂ ಐದು ಘಟಕಗಳನ್ನು ನಗರದಲ್ಲಿ ಸ್ಥಾಪಿಸಲಾಗುವುದು. ಇದರಿಂದ ತ್ಯಾಜ್ಯ ವಿಲೇವಾರಿಗೆ ತಗಲುವ ಸಾಕಷ್ಟು ವೆಚ್ಚ ಕಡಿಮೆ ಆಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಷ, ಮಾಜಿ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.