ನಿಮದೇ ನೆನಪು ದಿನವು ಮನದಲ್ಲಿ


Team Udayavani, Feb 16, 2018, 11:18 AM IST

nimade-nenapu.jpg

ಬಹುಶಃ ಚಿ. ಉದಯಂಕರರು ಬದುಕಿದ್ದರೆ ನಾಡಿದ್ದು ಭಾನುವಾರಕ್ಕೆ (ಫೆಬ್ರವರಿ 18) 84 ಮುಗಿಸಿ 85ಕ್ಕೆ ಕಾಲಿಡುತ್ತಿದ್ದರು. ಆದರೆ, ಕನ್ನಡ ಚಿತ್ರರಂಗದ ಈ “ಸಾಹಿತ್ಯ ರತ್ನ’ ಅಗಲಿ 25 ವರ್ಷಗಳಾಗುತ್ತಿವೆ. ಈ 25 ವರ್ಷಗಳಲ್ಲಿ ಚಿ. ಉದಯಶಂಕರ್‌ ಅವರನ್ನು ಕನ್ನಡಿಗರು ನೆನಪಿಸಿಕೊಳ್ಳದ ದಿನವೇ ಇಲ್ಲ ಎಂದರೆ ತಪ್ಪಿಲ್ಲ. ಅವರ ಬರೆದಿಟ್ಟ ಹಾಡುಗಳು, ಅದರ ಅಪರೂಪದ ಸಾಲುಗಳು, ಅವರು ಬಳಸುತ್ತಿದ್ದ ರೂಪಕಗಳು … ಇವನ್ನೆಲ್ಲಾ ಮರೆಯುವುದಕ್ಕೆ ಸಾಧ್ಯವೇ ಇಲ್ಲ.

ಹಾಗಾಗಿ ಚಿ. ಉದಯಶಂಕರರು ಅಗಲಿ 25 ವರ್ಷಗಳಾದರೂ ಇನ್ನೂ ಕನ್ನಡಿಗರ ನೆನಪಿನಲ್ಲಿ ಹಸಿರಾಗಿಯೇ ಉಳಿದಿದ್ದಾರೆ. ಕನ್ನಡ ಚಿತ್ರ ಸಾಹಿತ್ಯದಲ್ಲಿ ಚಿ. ಉದಯಶಂಕರ್‌ ಹಚ್ಚಹಸಿರಾಗಿರಲು ಕಾರಣವೇನು ಎಂದು ಹುಡುಕಹೊರಟರೆ ಸಿಗುವುದು ಅವರ ಸರಳ ಸಾಹಿತ್ಯ. ಚಿ. ಉದಯಶಂಕರ್‌ ಕನ್ನಡದ ಚಿತ್ರಸಾಹಿತ್ಯದ ಮೂರನೆಯ ತಲೆಮಾರಿನವರು ಎಂದರೆ ತಪ್ಪಿಲ್ಲ.

ಅವರು ಚಿತ್ರಸಾಹಿತಿಯಾಗಿ ಗುರುತಿಸಿಕೊಳ್ಳುವ ಹೊತ್ತಿಗೆ ಜಿ.ವಿ. ಅಯ್ಯರ್‌, ಕು.ರಾ. ಸೀತಾರಾಮ ಶಾಸ್ತ್ರಿ, ಕಣಗಾಲ್‌ ಪ್ರಭಾಕರ ಶಾಸ್ತ್ರಿ, ಚಿ. ಸದಾಶಿವಯ್ಯ ಮುಂತಾದ ಹಲವು ದಿಗ್ಗಜರು ಕನ್ನಡ ಚಿತ್ರಸಾಹಿತ್ಯದಲ್ಲಿ ಬೆಳಗುತ್ತಿದ್ದರು. ಅಂತಹವರ ಮಧ್ಯೆ ನಿಲ್ಲುವುದು, ಗೆಲ್ಲುವುದು ಉದಯಶಂಕರ್‌ ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಹಾಗಿದ್ದೂ ಉದಯಶಂಕರ್‌ ನಿಂತಿದ್ದು ಮತ್ತು ಗೆದ್ದಿದ್ದು ತಮ್ಮ ಸರಳವಾದ ಸಾಹಿತ್ಯದಿಂದ.

ಉದಯಶಂಕರರ ಸಾಹಿತ್ಯವನ್ನು ಸೂಕ್ಷವಾಗಿ ಗಮನಿಸಿ ನೋಡಿ. ವೇದಾಂತವಿರಲಿ, ಪ್ರೇಮ ನಿವೇದನೆ ಇರಲಿ, ಭಕ್ತಿ ಸಾಹಿತ್ಯವಿರಲಿ, ನಾಡು ನುಡಿಯ ಬಗ್ಗೆ ಇರಲಿ,  … ಅವೆಲ್ಲವನ್ನೂ ಬಹಳ ಸರಳವಾಗಿ ಬರೆದರು ಅವರು. ಬಹುಶಃ ಕನ್ನಡದಲ್ಲಿ ಜೀವನದ ಕುರಿತು ಅತ್ಯಂತ ಸರಳವಾಗಿ ಬರೆದವರು ಅವರೇ. “ಪ್ರೇಮದ ಕಾಣಿಕೆ’ ಚಿತ್ರದ “ಬಾನಿಗೊಂದು ಎಲ್ಲೆ ಎಲ್ಲಿದೆ …’ ಎಂಬ ಹಾಡು ಅದಕ್ಕೆ ಶ್ರೇಷ್ಠ ಉದಾಹರಣೆ.

“ಆಸೆ ಎಂಬ ಬಿಸಿಲು ಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ, ಅವನ ನಿಯಮ ಮೀರಿ ಇಲ್ಲಿ ಏನು ಸಾಗದು,  ನಾವು ನೆನೆಸಿದಂತೆ ಬಾಳಲೇನು ನಡೆಯದು, ವಿಷಾದವಾಗಲೀ ವಿನೋದವಾಗಲೀ, ಅದೇನೆ ಆಗಲಿ ಅವನೆ ಕಾರಣ …’ ಎಂಬ ಸಾಲುಗಳಲ್ಲಿ ಜೀವನದ ಫಿಲಾಸಫಿಯನ್ನು ಹೇಳುತ್ತಾ ಹೋಗುತ್ತಾರೆ. ಇನ್ನು “ಆಡಿಸಿ ನೋಡು ಬೀಳಿಸಿ ನೋಡು …’ ಹಾಡಿನಲ್ಲಿ “ಗುಡಿಸಲೆ ಆಗಲೀ ಅರಮನೆಯಾಗಲಿ ಆಟ ನಿಲ್ಲದು, ಹಿರಿಯರೆ ಇರಲಿ ಕಿರಿಯರೆ ಬರಲಿ ಬೇಧ ತೋರದು, ಕಷ್ಟವೊ ಸುಖವೋ ಅಳುಕದೆ ಆಡಿ ತೂಗತಿರುವುದು …’ ಸಾಲುಗಳ ಮೂಲಕ ಮನುಷ್ಯ, ಗೊಂಬೆಯ ತರಹ ಇರಬೇಕು ಮತ್ತು ಏನೇ ಆದರೂ ತಲೆ ಬಾಗಬಾರದು ಎಂಬುದನ್ನು ಬಹಳ ಅದ್ಭುತವಾಗಿ ಬಿಡಿಸಿಡುತ್ತಾರೆ.

ಉದಯಶಂಕರರ ಸಾಹಿತ್ಯದಲ್ಲಿ ಸರಳತೆಯ ಜೊತೆಗೆ ಕಾಣುವ ಇನ್ನೊಂದು ಅಂಶವೆಂದರೆ, ಅದು ಪ್ರಕೃತಿ. ಪ್ರೀತಿ-ಪ್ರೇಮದ ಹಾಡುಗಳಿರಲಿ, ಜೀವನದ ಕುರಿತಾಗಿರಲಿ ಅಥವಾ ಯಾವುದೇ ರೀತಿಯ ಹಾಡುಗಳಿರಲಿ, ಅಲ್ಲಿ ಪ್ರಕೃತಿಯನ್ನು ಕಾಣಬಹುದು. ಆಕಾಶ, ಹಸಿರು, ನದಿ, ಸಾಗರ, ನೀರು, ಹಕ್ಕಿ, ಬೆಳದಿಂಗಳು, ಬಾನು, ಸೂರ್ಯ, ಚಂದ್ರ, ಮಲ್ಲಿಗೆ, ಕಮಲ, ಸಂಪಿಗೆ, ಚಂದ್ರಿಕೆ, ತಂಗಾಳಿ … ಇಂತಹ ಹಲವು ಪದಗಳು ಅವರ ಹಾಡುಗಳಲ್ಲಿ ಹುಡುಕಬಹುದು.

“ಆಕಾಶವೇ ಬೀಳಲಿ ಮೇಲೆ …’, “ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ ….’, “ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ …’, “ಓಡುವ ನದಿ ಸಾಗರವಾ ಸೇರಲೇಬೇಕು …’, “ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು …’, “ಸದಾ ಕಣ್ಣಲಿ ಒಲವಿನ ಕವಿತೆ ಹಾಡುವೆ …’, “ಬಾನಲ್ಲೂ ನೀನೆ ಬುವಿಯಲ್ಲೂ ನೀನೇ …’ ಹೀಗೆ ಹಲವು ಹಾಡುಗಳನ್ನು ಪಟ್ಟಿ ಮಾಡಬಹುದು.

ಇನ್ನು ಕೆಲವು ಹಾಡುಗಳಲ್ಲಿ ಅವರು ಮಾಡಿದ ಪ್ರಯೋಗಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. “ಉಪಾಸನೆ’ ಚಿತ್ರದ “ಭಾವವೆಂಬ ಹೂವು ಅರಳಿ …’ ಹಾಡಿನಲ್ಲಿ ಗಾನ ಎಂಬ ಪದದಿಂದಲೇ ಪ್ರತಿ ಸಾಲು ಶುರುವಾಗುತ್ತದೆ. “ಗಾನಕೆ ನಲಿಯದ ಮನಸೇ ಇಲ್ಲ, ಗಾನಕೆ ಮಣಿಯದ ಜೀವವೆ ಇಲ್ಲ, ಗಾನಕೆ ಒಲಿಯದ ದೇವರೆ ಇಲ್ಲ, ಗಾನವೆ ತುಂಬಿದೆ ಈ ಜಗವೆಲ್ಲಾ …’ ಅದಕ್ಕೊಂದು ಅದ್ಭುತ ಉದಾಹರಣೆ.

ಇನ್ನು “ಹೊಸ ಇತಿಹಾಸ’ ಚಿತ್ರದ “ಕಮಲದ ಮೊಗದೋಳೆ …’ ಹಾಡಿನ ಪಲ್ಲವಿಯ ಪ್ರತಿ ಪದ ಸಹ ಕಮಲದಿಂದ ಶುರುವಾಗುತ್ತದೆ. “ಕಮಲದ ಮೊಗದೋಳೆ, ಕಮಲದ ಕಣ್ಣೋಳೆ, ಕಮಲವ ಕೈಯಲ್ಲಿ ಹಿಡಿದೋಳೆ, ಕಮಲನಾಭನ ಹೃದಯ ಕಮಲದಲಿ ನಿಂತೋಳೆ, ಕಮಲೆ ನೀ ಕರ ಮುಗಿವೆ ಬಾಮ್ಮಾ, ಪೂಜೆಯ ಸ್ವೀಕರಿಸು ದಯಮಾಡಿಸಮ್ಮ …’ ಹೀಗೆ ಪ್ರತಿ ಸಾಲನ್ನೂ ಕಮಲದಿಂದ ಶುರು ಮಾಡಿದ ಅವರು, “ಬಯಲು ದಾರಿ ಚಿತ್ರದ “ಬಾನಲ್ಲೂ ನೀನೇ ಭುವಿಯಲ್ಲೂ ನೀನೇ …’ ಹಾಡಲ್ಲಿ ಪ್ರತಿ ಸಾಲೂ ಕಂಡೆ ಎಂಬ ಪದದಿಂದ ಮುಗಿಯುತ್ತದೆ.

“ಹೂವಲ್ಲಿ ನಿನ್ನ ಮೊಗವನ್ನು ಕಂಡೆ, ಮೊಗದಲ್ಲಿ ನಿನ್ನ ಹೂನಗೆಯ ಕಂಡೆ, ನಗುವಲ್ಲಿ ನಿನ್ನ ಚೆಲುವನ್ನು ಕಂಡೆ, ಚೆಲುವಲ್ಲಿ ನಿನ್ನ ಒಲವನ್ನು ಕಂಡೆ, ಒಲವಿಂದ ಬಾಳ ಹೊಸದಾರಿ ಕಂಡೆ …’ ಹೀಗೆ ಪ್ರತಿ ಸಾಲೂ “ಕಂಡೆ’ಯಿಂದ ಮುಗಿಯುತ್ತದೆ. ಇದೇ ತರಹದ ಇನ್ನೊಂದು ಪ್ರಯೋಗವೆಂದರೆ, “ಆನೆಯ ಮೇಲೆ ಅಂಬಾರಿ ಕಂಡೆ …’ ಹಾಡು. ಇಲ್ಲೂ “ಕಂಡೆ’ ಎಂಬ ಪದದಿಂದ ಪ್ರತಿ ಸಾಲು ಮುಗಿಯುವುದನ್ನು ಗಮನಿಸಬಹುದು.

“ಆನೆಯ ಮೇಲೆ ಅಂಬಾರಿ ಕಂಡೆ …’ ಹಾಡಿನಲ್ಲೂ ಇದೇ ತರಹದ ಪ್ರಯೋಗವಿದೆ. “ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿಯೊಳಗೆ ನಿನ್ನನ್ನು ಕಂಡೆ, ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಅರಮನೆ ನಾನು ಕಂಡೆ, ಒಳಗಡೆ ನಿನ್ನ ಕಂಡೆ, ಜೊತೆಯಲ್ಲಿ ನನ್ನನ್ನೇ ನಾನು ಕಂಡೆ …’ ಹೀಗೆ ಪ್ರತಿ ಸಾಲು ಸಹ ಕಂಡೆ ಎಂಬ ಪದದಿಂದು ಮುಗಿಯುವುದು ವಿಶೇಷ. 

ಇದೆಲ್ಲಾ ಕೆಲವು ಉದಾಹರಣೆಗಳಷ್ಟೇ. ಚಿ. ಉದಯಶಂಕರ್‌ ಅವರ ಹಾಡುಗಳ ಬಗ್ಗೆ, ಪದ ಪ್ರಯೋದದ ಬಗ್ಗೆ, ಪ್ರಾಸ ಪ್ರಯೋಗದ ಬಗ್ಗೆ ಎಷ್ಟು ಹೇಳಿದರೂ ಸಾಲದು, ಎಷ್ಟು ಬರೆದರೂ ಕಡಿಮೆಯೇ. ಇದೇ ಕಾರಣಕ್ಕೇ ಚಿ. ಉದಯಶಂಕರ್‌ ಯಾವತ್ತೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ. ಅವರ ಹುಟ್ಟುಹಬ್ಬದ ನೆನಪಿನಲ್ಲಿ, “ಸುಚಿತ್ರಾ’ದ ಒಂದು ಸಣ್ಣ ಅಕ್ಷರ ನಮನ ಇದು.

ಚಿ ಉದಯಶಂಕರ್‌ ಬರೆದ ಕೆಲವು ಅಪರೂಪದ ಸಾಲುಗಳು
ಜೇನಿನ ಹೊಳೆಯೊ
ಕವಿ ನುಡಿ ಕೋಗಿಲೆ ಹಾಡಿದ ಹಾಗೆ 
ಸವಿ ನುಡಿ ತಣ್ಣನೆ ಗಾಳಿಯ ಹಾಗೆ 
ಒಲವಿನ ಮಾತುಗಳಾಡುತಲಿರಲು 
ಮಲ್ಲಿಗೆ ಹೂಗಳು ಅರಳಿದ ಹಾಗೆ 
ಮಕ್ಕಳು ನುಡಿದರೆ ಸಕ್ಕರೆಯಂತೆ 
ಅಕ್ಕರೆ ನುಡಿಗಳು ಮುತ್ತುಗಳಂತೆ 
ಪ್ರೀತಿಯ ನೀತಿಯ ಮಾತುಗಳೆಲ್ಲ 
ಸುಮಧುರ ಸುಂದರ ನುಡಿಯೊ … ಆಹ

ನಾವಿರುವ ತಾಣವೆ ಗಂಧದ ಗುಡಿ
ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು
ಅಹಹಾ ಓ ಹೋ ಹೋ ಆಆ ಓ ಹೋ
ಹರಿಯುವ ನದಿಯಲಿ ಈಜಾಡಿ; ಹೂಬನದಲಿ ನಲಿಯುತ ಓಲಾಡಿ
ಚೆಲುವಿನ ಬಲೆಯ ಬೀಸಿದಳು; ಈ ಗಂಧದಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫ‌ಲವೋ; ಈ ಕಂಗಳು ಮಾಡಿದ ಪುಣ್ಯವೋ ಓ ಹೊ ಹೋ … ಹಾಹ

ಬಾನಿಗೊಂದು ಎಲ್ಲೆ ಎಲ್ಲಿದೆ
ಹುಟ್ಟು-ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷ ಒಂದೆ ಯಾರಿಗುಂಟು ಹೇಳು ಜಗದಲಿ
ಹೂವು-ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ ನಿರಾಸೆ ಏತಕೆ
ಅದೇನು ಬಂದರೂ ಅವನ ಕಾಣಿಕೆ

ಆಕಾಶವೆ ಬೀಳಲಿ ಮೇಲೆ
ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳ ಘೋಷವು
ಸಪ್ತಪದಿ ಈ ನಡೆಯಾಯ್ತು; ಸಂಜೆ ರಂಗು ಆರತಿಯಾಯ್ತು
ಇನ್ನೀಗ ಎರಡೂ ಜೀವ ಬೆರೆತೂ ಸ್ವರ್ಗವಾಯ್ತು

ಆಡಿಸಿ ನೋಡು ಬೀಳಿಸಿ ನೋಡು
ಮೈಯ್ಯನೆ ಹಿಂದಿ ನೊಂದರು ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು, ದೀಪ ಬೆಳಕ ತರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ
ನಿನ್ನಾಸೆಯ ನೋಟದ ಕಥೆ ಏನು
ಸೆರೆ ಮೀರದ ಯೌವ್ವನ ಜತೆ ಏನು
ಬೆಳದಿಂಗಳ ಹುಣ್ಣಿಮೆ ಮಾತೇನು
ಆ ಹುಣ್ಣಿಮೆ ಮಾತನಾಡಿತು
ನನ್ನ ಕಣ್ಣಲಿ ಮನೆಯ ಮಾಡಿತು
ಸರಿ ತೂಗುವ ಬೆಳಕಲಿ ಕೋಡಿಯಾಡಿತು

ಬಾಡಿ ಹೋದ ಬಳ್ಳಿಯಿಂದ
ನೀರಿನಲ್ಲಿ ದೋನಿ ಮುಳುಗೆ ಈಜಿ ದಡುವೆ ಸೇರುವೆ
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೇ
ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರೂ
ನೆಡೆಸುವಾತ ಬೇರೆ ಅವನ ಇಚ್ಛೆ ಯಾರು ಬಲ್ಲರು

ಓಡುವ ನದಿ ಸಾಗರವಾ ಸೇರಲೇಬೇಕು
ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ
ಹರುಷದಲ್ಲಿ ದುಃಖದಲ್ಲಿ ಭಾಗಿ ಆಗುವೆ
ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ
ಬಳ್ಳಿ ಮರವ ಹಬ್ಬಿದಂತೆ ನಿನ್ನೊಡನಿರುವೆ, ಬಯಕೆ ಪೂರೈಸುವೆ

ಯಾವ ಕವಿಯು ಬರೆಯಲಾರ
ಪ್ರೇಮ ಸುಮವು ಅರಳುವಂತೆ
ಪ್ರಣಯ ಗಂಧ ಚೆಲ್ಲುವಂತೆ
ಕಂಗಳೆರಡು ದುಂಬಿಯಾಗಿ
ಭ್ರಮರಗೀತೆ ಹಾಡುವಂತೆ
ಜೇನಿಗಾಗಿ ತುಟಿಗಳೆರಡು
ಸನಿಹ ಸೇರುವಂತೆ

ಬೆಳದಿಂಗಳಾಗಿ ಬಾ
ಕಣ್ಣಲ್ಲಿ ತುಂಬಿ ಚೆಲುವಾ, ಎದೆಯಲ್ಲಿ ತುಂಬಿ ಒಲವಾ
ಬಾಳಲಿ ತುಂಬಿದೇ ಉಲ್ಲಾಸವಾ
ನನ್ನೆದೆಯ ತಾಳ ನೀನು, ನನ್ನುಸಿರ ರಾಗ ನೀನು
ನನ್ನೊಡಲ ಜೀವನೀ ಸಂತೋಷವೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ
ಬೆಳದಿಂಗಳಾಗಿ ಬಾ

ಏನೆಂದು ನಾ ಹೇಳಲೀ?
ಪ್ರಾಣಿಗಳೇನು ಗಿಡ ಮರವೇನು
ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲ ಉಳಿಸುವುದಿಲ್ಲ
ತನ್ನ ಹಿತಕಾಗೆ ಹೋರಾಡುವ
ನುಡಿಯುವುದೊಂದು ನಡೆಯುವುದೊಂದು
ಪಡೆಯುವುದೊಂದು ಕೊಡುವುದು ಒಂದು
ಸ್ವಾರ್ಥಿ ತಾನಾಗೆ ಮೆರೆದಾಡುವ

ಯಾರೇ ಕೂಗಾಡಲಿ
ಪ್ರಾಣಿಗಳೇ ಗುಣದಲಿ ಮೇಲು
ಮಾನವದನಕ್ಕಿಂತ ಕೀಳು
ಉಪಕಾರ ಮಾಡಲಾರ, ಬದುಕಿದರೆ ಸೈರಿಸಲಾರ
ಸತ್ಯಕ್ಕೆ ಗೌರವವಿಲ್ಲ; ವಂಚನೆಗೆ ಪೂಜ್ಯತೆ ಎಲ್ಲ
ಇದೇ ನೀತಿ ಇದೇ ರೀತಿ
ಇನ್ನೆಲ್ಲಿ ಗುರುಹಿರಿಯರ ಭೀತಿ

ಎಂದೆಂದೂ ನಿನ್ನನು ಮರೆತೂ
ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಓಹೋ … ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ

ತೆರೆಯೋ ಬಾಗಿಲನು
ಮೋಡದ ಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯಧಾರತಿ ಉಷೆ ತಂದಿಹಳು
ತಾಮಸವೇಕಿನ್ನು ಸ್ವಾಮೀ
ತೆರೆಯೋ ಬಾಗಿಲನು

ಸದಾ ಕಣ್ಣಲಿ
ಕಣ್ಣೆರಡು ಕಮಲಗಳಂತೆ
ಮುಂಗುರುಳು ದುಂಬಿಗಳಂತೆ
ನಾಸಿಕವು ಸಂಪಿಗೆಯಂತೆ
ನೀ ನಗಲು ಹೂಬಿರಿದಂತೆ
ನಡೆಯುತಿರೆ ನಾಟ್ಯದಂತೆ
ರತಿಯೇ ಧರೆಗಳಿದಂತೆ
ಈ ಅಂದಕೆ ಸೋತೆನು ಸೋತೆ ನಾನು

ಎಂಥ ಸೌಂದರ್ಯ ಕಂಡೆ
ಹೊಳೆಯುವ ಕಣ್ಣುಗಳ್ಳೋ ಬೆಳಗುವ ದೀಪಗಳ್ಳೋ
ತುಂಬಿದ ಕೆನ್ನೆಗಳ್ಳೋ ಹೊನ್ನಿನ ಕಮಲಗಳ್ಳೋ
ಅರಳಿದ ಹೂ ನಗೆಯಾಯೊ¤à
ಚಂದ್ರಿಕೆಯೇ ಹೆಣ್ಣಾಯೊ¤à
ನನಗಾಗಿ ಧರೆಗಿಳಿದ ದೇವತೆಯೋ ಏನೊ ಕಾಣೆನಾ

ಮುತ್ತಿನಂಥಾ ಮಾತೊಂದು
ಕಪ್ಪನೆ ಮೋಡ ಕರಗಲೆ ಬೇಕು; ಆಗಸದಿಂದ ಇಳಿಯಲೆ ಬೇಕು
ಕೋಟೆ ಕಟ್ಟಿ ಮೆರೆದೋರೆಲ್ಲಾ ಏನಾದರು
ಮೀಸೆ ತಿರುವಿ ಕುಣಿದೊರೆಲ್ಲಾ ಮಣ್ಣಾದರು
ಇನ್ನು ನೀನ್ಯಾವ ಲೆಕ್ಕ ಹೇಳೇ ಸುಕುಮಾರಿಯೋ, ಅಯ್ಯೋ ಹೆಮ್ಮಾರಿಯೇ ಹೇ …

ಬಾನಲ್ಲು ನೀನೇ ಭುವಿಯಲ್ಲು ನೀನೇ
ಹೂವಲ್ಲಿ ನಿನ್ನ ಮೊಗವನ್ನು ಕಂಡೆ
ಮೊಗದಲ್ಲಿ ನಿನ್ನ ಹೂನಗೆಯ ಕಂಡೆ
ನಗುವಲ್ಲಿ ನಿನ್ನ ಚೆಲುವನ್ನು ಕಂಡೆ
ಚೆಲುವಲ್ಲಿ ನಿನ್ನ ಒಲವನ್ನು ಕಂಡೆ
ಒಲವಿಂದ ಬಾಳ ಹೊಸದಾರಿ ಕಂಡೆ

ನಿನ್ನ ಕಣ್ಣ ಕನ್ನಡಿಯಲ್ಲಿ
ಬಾನ ಹಕ್ಕಿ ಹಾಡೋ ವೇಳೆ
ಉದಯರವಿಯು ಮೂಡುವ ವೇಳೆ
ನೀನು ಬರುವ ದಾರಿಯಲ್ಲಿ ಹೃದಯ ಹಾಸಿ ನಿಲ್ಲುವೆ ಆಆಆ
ಮರದ ನೆರಳ ತಂಪಿನಲ್ಲಿ
ನಿನ್ನ ಮಡಿಲ ಹಾಸಿಗೆಯಲ್ಲಿ
ತಲೆಯನಿಟ್ಟು ಮಲಗಿರುವಾಗ ಸ್ವರ್ಗ ಅಲ್ಲೇ ಕಾಣುವೆ

* ಚೇತನ್ ನಾಡಿಗೇರ್

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.