ಭದ್ರನ ಆಟ ಮತ್ತು ಟೋಪಿ
Team Udayavani, Feb 16, 2018, 6:03 PM IST
ಅವನ ಹೆಸರು ಕೇಳಿದ್ರೆ ಸಾಕು, ಇಡೀ ಊರಿಗ್ ಊರೇ ಕಿಡಿಕಾರುತ್ತೆ. ಅದ್ರಲ್ಲೂ ಅವನು ನನ್ ಫ್ರೆಂಡ್ ಅಂತ ಯಾರಾದ್ರೂ ಕೇಳ್ಕೊಂಡ್ ಬಂದರಂತೂ, ಆ ಊರ ಜನ ಅವರನ್ನ ಅಟ್ಟಾಡಿಸಿಕೊಂಡು ಹೊಡೆಯೋವಷ್ಟು ಕಾಟ ಕೊಟ್ಟ ಆಸಾಮಿ ಅವನು. ಪಕ್ಕಾ ಲೋಕಲ್ ಹುಡುಗನ ಹೈ ಲೆವೆಲ್ ಸ್ಟೋರಿ ಹಿಂದೆ ಒಂದು ಪ್ರೇಮ್ ಕಹಾನಿ ಇದೆ. ಆ ಕಹಾನಿಯಲ್ಲೊಂದು ಟ್ವಿಸ್ಟ್ ಇದೆ. ಅದೇ ಚಿತ್ರದ ಹೈಲೆಟ್.
ಅಂದಹಾಗೆ, ಇದು “ಮಿಸ್ಟರ್ ಎಲ್‌ಎಲ್‌ಬಿ’ ಅಲಿಯಾಸ್ ಲ್ಯಾಂಡ್ ಲಾರ್ಡ್ ಭದ್ರ ಎಂಬ ಮಹಾನ್ ಪುಢಾರಿಯ ಒನ್‌ಲೈನ್ ಪರಿಚಯವಷ್ಟೇ. ಚಿತ್ರ ನೋಡಿದವರಿಗೆ, ಇಂಥಾ ವ್ಯಕ್ತಿತ್ವದವರೂ ಇರ್ತಾರ ಅನ್ನುವಷ್ಟರ ಮಟ್ಟಿಗೆ ಕಾಟ ಕೊಡುವ ಪಂಟ. ಇಲ್ಲಿ ಕಥೆಯಲ್ಲಿ ಹೇಳಿಕೊಳ್ಳುವಂತಹ ವಿಶೇಷವಿಲ್ಲದಿದ್ದರೂ, ಕಟ್ಟಿಕೊಟ್ಟಿರುವ ಚಿತ್ರಕಥೆಯಲ್ಲಿ ಒಂದಷ್ಟು ಹೊಸತನವಿದೆ, ಅಲ್ಲಲ್ಲಿ ಮಜವೂ ಇದೆ.
ಹಾಗಂತ, ಇಡೀ ಚಿತ್ರ ಒಂದೇ ವೇಗಮಿತಿಯಲ್ಲಿ ಸಾಗುತ್ತೆ ಅಂತ ಹೇಳುವುದು ಕಷ್ಟ. ಮಚ್ಚು, ಲಾಂಗು, ಆ್ಯಕ್ಷನ್, ಲವ್ವು, ಡವ್ವು ಇವುಗಳ ಸ್ವಾದ ಕಂಡಿರುವ ಪ್ರೇಕ್ಷಕನಿಗೆ “ಭದ್ರ’, ಒಂದರ್ಥದಲ್ಲಿ ಬೇರೆಯದ್ದೇ ಹಳ್ಳಿ ರುಚಿ ಉಣಬಡಿಸುವ ಪ್ರಯತ್ನ ಮಾಡಿದ್ದಾನೆ ಎಂಬ ಸಣ್ಣ ಸಮಾಧಾನ. ಮನರಂಜನೆ ಬಯಸಿ ಹೋದವರಿಗೆ ದೊಡ್ಡಮಟ್ಟದಲ್ಲದಿದ್ದರೂ, ತಕ್ಕಮಟ್ಟಿಗಾದರೂ ಕರುಣಿಸುವ ಮನಸ್ಸು ಮಾಡಿದ್ದಾರೆ. ಅದೇ “ಭದ್ರ’ ಬುನಾದಿ!
ಯಾವುದೋ ಹಳ್ಳಿಯಲ್ಲಿ ಕಂಡ ಘಟನೆಗಳೇನೋ ಎಂಬಂತೆ ಇಲ್ಲಿ ಕೆಲ ದೃಶ್ಯಗಳು ಬಿಂಬಿತವಾಗಿವೆಯಾದರೂ, ಅಲ್ಲಲ್ಲಿ ಸಣ್ಣಪುಟ್ಟ ಎಡವಟ್ಟುಗಳು ಇಣುಕಿ ನೋಡುತ್ತವೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಒಂದು ಹಳ್ಳಿ, ಅಲ್ಲಿನ ಜನ ಜೀವನ, ಆ ಗ್ರಾಮೀಣ ಭಾಷೆ, ಕಾಣಸಿಗುವ ಹಾಸ್ಯಲಾಸ್ಯ ಇವೆಲ್ಲವೂ ನೋಡುಗರ “ತಾಳ್ಮೆ’ ಕೆಡಿಸುವುದಿಲ್ಲ. ಆದರೆ, ಭದ್ರ ಮಾಡಿದ ಕೀಟಲೆಗಳನ್ನೆಲ್ಲಾ ಫ್ಲ್ಯಾಶ್‌ಬ್ಯಾಕ್‌ನಲ್ಲಿ ತೋರಿಸಿರುವ ರೀತಿ ಕೊಂಚ ತಾಳ್ಮೆ ಪರೀಕ್ಷಿಸುವುದಂತೂ ಸುಳ್ಳಲ್ಲ.
ಅತಿರೇಕವೆನಿಸುವ ಆ ದೃಶ್ಯಗಳಿಗೆ ಸ್ವಲ್ಪ ಮಟ್ಟಿಗೆ ಕತ್ತರಿ ಹಾಕುವ ಮನಸ್ಸು ಮಾಡಿದ್ದರೆ, ಮಿಸ್ಟರ್ ಲ್ಯಾಂಡ್ ಲಾರ್ಡ್ ಇನ್ನಷ್ಟು “ಭದ್ರ’ಗೊಳ್ಳುತ್ತಿದ್ದನೇನೋ, ಆದರೆ, ನಿರ್ದೇಶಕರು ಹೆಚ್ಚು ಹಾಸ್ಯ ಪಸರಿಸಬೇಕೆಂಬ ಧಾವಂತದಲ್ಲಿ ಸ್ವಲ್ಪ ಆ ಭಾಗವನ್ನು ಎಳೆದಾಡಿದ್ದಾರೆ. ಎಲ್ಲೋ ಒಂದು ಕಡೆ ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆಯಾದರೂ, ಅತಿಯಾದ ಮಾತುಕತೆಗಳಿಂದಾಗಿ ನೋಡುಗ ಇನ್ನೇನು ಸೀಟಿಗೆ ಒರಗಿಕೊಳ್ಳಬೇಕೆನ್ನುವಷ್ಟರಲ್ಲಿ “ಚಾಂದಿನಿ…’ ಎಂಬ ಜೋಶ್‌ಫುಲ್ ಹಾಡು ಕಾಣಿಸಿಕೊಂಡು, ನೋಡುಗನನ್ನು ರೀಫ್ರೆಶ್ ಮಾಡುತ್ತದೆ.
ಒಂದು ಸಾಮಾನ್ಯ ಕಥೆಗೆ, ಎಷ್ಟು ಬೇಕೋ ಅಷ್ಟು ರುಚಿಕಟ್ಟಾದ ಚಿತ್ರಕಥೆಯ ಹೂರಣ ತುಂಬಿರುವ ನಿರ್ದೇಶಕರು, ಇಲ್ಲಿ ಪ್ರೀತಿ ಮತ್ತು ಸಂಬಂಧದ ಮೌಲ್ಯಗಳನ್ನು ಸಾರಿದ್ದಾರೆ. ಆ ಮೌಲ್ಯ ತಿಳಿದುಕೊಳ್ಳುವ ಕುತೂಹಲವಿದ್ದರೆ, ಮಿಸ್ಟರ್ ಎಲ್‌ಎಲ್‌ಬಿ ಕೊಡುವ ಕ್ವಾಟ್ಲೆ ಸಹಿಸಿಕೊಂಡು, ಚಿತ್ರ ನೋಡಲು ಯಾವುದೇ ಅಭ್ಯಂತರವಿಲ್ಲ. ಭದ್ರ (ಶಿಶಿರ್)ನನ್ನು ಎಲ್ಲರೂ ಮಿಸ್ಟರ್ ಎಲ್‌ಎಲ್‌ಬಿ ಅಂತಾನೇ ಕರೀತಾರೆ. ಅದು ಅವನೇ ಇಟ್ಟುಕೊಂಡ ಹೆಸರು.
ಊರ ಜನರನ್ನು ಯಾಮಾರಿಸಿ, ಕಾಲ ಕಳೆಯೋ ಭದ್ರನನ್ನೇ ಆ ಊರ ಜನ ಊರಿಂದ ಹೊರ ಹಾಕುತ್ತಾರೆ. ಊರ ಜನರ ಒತ್ತಾಯಕ್ಕೆ ಮಣಿಯುವ ಭದ್ರನ ಅಪ್ಪ ಗೌಡ, “ನೀನು, ಬದಲಾಗಿದ್ದೇನೆ ಅಂತ ಅನಿಸಿದ ಕೂಡಲೇ ಈ ಊರಿಗೆ ಕಾಲಿಡು. ಅಲ್ಲಿಯವರೆಗೆ ಬರಲೇಬೇಡ’ ಅಂತ ಹೇಳಿ ಮಗನನ್ನು ಊರ ಹೊರ ಹಾಕುತ್ತಾನೆ. ಹಳ್ಳಿ ಜನರ ಕೋಪಕ್ಕೆ ತುತ್ತಾಗಿ, ಊರು ಬಿಡುವ ಭದ್ರ, ಸಿಟಿಗೆ ಹೋಗಿ, ಅಲ್ಲಿಂದ ಮೂರೇ ದಿನದಲ್ಲಿ ಹಿಂದಿರುಗುತ್ತಾನೆ.
ಆದರೆ, ಬಂದಾಗ, ಅವನು ಬದಲಾಗಿರುತ್ತಾನಾ, ಇಲ್ಲವಾ ಅನ್ನೋದೇ ಕಥೆ. ಅವನು ಸಡನ್ ಆಗಿ ಯಾಕೆ ಬಂದ ಅನ್ನುವುದಕ್ಕೊಂಡು ಟ್ವಿಸ್ಟ್ ಕೊಟ್ಟು ಟೆಸ್ಟ್ ಮಾಡಲಾಗಿದೆ. ಅದೇ ಕಥೆಯ “ತಿರುವು’. ಆ ತಿರುವಿನಲ್ಲಿ ನಿಂತು ನೋಡುವ ಮನಸ್ಸಿದ್ದರೆ, ಭದ್ರನ ಯೋಗ, ಕ್ಷೇಮ ವಿಚಾರಿಸಿ ಬರಬಹುದು. ಶಿಶಿರ್ ಪಕ್ಕಾ ಹಳ್ಳಿಯವನಂತೆ ಕಾಣುವುದು ಕಷ್ಟ. ಆದರೆ, ಡ್ಯಾನ್ಸ್ ಮತ್ತು ನಟನೆಯಲ್ಲಿ ಯಾವುದೇ ದೂರುಗಳಿಲ್ಲ. ಲೇಖಚಂದ್ರ ಗ್ಲಾಮರ್‌ಗೆ ಕೊಟ್ಟ ಕಾಳಜಿ ನಟನೆಗೆ ಕೊಟ್ಟಿಲ್ಲ.
ಸಿಕ್ಕ ಪಾತ್ರವನ್ನು ಇನ್ನಷ್ಟು ಅಚ್ಚುಕಟ್ಟಾಗಿ ನಿರ್ವಹಿಸಬಹುದಿತ್ತು. ಉಳಿದಂತೆ ಗಿರೀಶ್ ಜತ್ತಿ, ಶ್ರೀನಿವಾಸ್‌ಗೌಡ, ಕೆಂಪೇಗೌಡ ಮತ್ತೆ ಆ ಹಳ್ಳಿ ಪರಿಸರದಲ್ಲಿ ಕಾಣಸಿಗುವ ಪಾತ್ರಗಳೆಲ್ಲವೂ ಇದ್ದಷ್ಟು ಕಾಲ ಗಮನಸೆಳೆಯುತ್ತವೆ. ರಾಜು ಬೆಳಗೆರೆ ಸಂಭಾಷಣೆಯಲ್ಲಿ ತೂಕ ಕಡಿಮೆ ಇದ್ದರೂ, ಆಗಾಗ ಮೌಲ್ಯಕ್ಕೆ ಒತ್ತು ಕೊಟ್ಟಿವೆ. ಪೂರಕ ಹಿನ್ನೆಲೆ ಸಂಗೀತ ನೀಡಲು ಮಂಜು ಚರಣ್ ಮನಸ್ಸು ಮಾಡಿಲ್ಲ. ಸುರೇಶ್‌ಬಾಬು ಕ್ಯಾಮೆರಾ ಕೈ ಚಳಕದಲ್ಲಿ ಹಳ್ಳಿಯ ಸೊಬಗಿದೆ, ಭದ್ರನ ಆಟಾಟೋಪದ ಸೊಗಸಿದೆ.
ಚಿತ್ರ: ಮಿಸ್ಟರ್ ಎಲ್‌ಎಲ್‌ಬಿ
ನಿರ್ಮಾಣ: ಆರ್.ವಿ.ಕ್ರಿಯೇಷನ್ಸ್
ನಿರ್ದೇಶನ: ರಘುವರ್ಧನ್
ತಾರಾಗಣ: ಶಿಶಿರ್, ಲೇಖಚಂದ್ರ, ಸುಜಯ್ ಹೆಗಡೆ, ನಂದಿನಿ, ಕೆಂಪೇಗೌಡ, ಶ್ರೀನಿವಾಸ್ ಗೌಡ, ಗಿರೀಶ್ ಜತ್ತಿ, ನಾರಾಯಣ ಸ್ವಾಮಿ ಮುಂತಾದವರು
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.