ಸಂಕಷ್ಟ ಪರಿಹಾರ ಸೂತ್ರ ಇಲ್ಲದೆ ಆತಂಕ
Team Udayavani, Feb 17, 2018, 6:20 AM IST
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕನ್ನಡಿಗರಿಗೆ ಸಮಾಧಾನ ತಂದಿದೆಯಾದರೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆತಂಕ ಉಳಿದಿದೆ.
ಆದರೆ, ಅದಕ್ಕಿಂತಲೂ ದೊಡ್ಡ ಸಮಸ್ಯೆ ನೀರು ಹಂಚಿಕೆಯಲ್ಲಿ ಸಂಕಷ್ಟ ಪರಿಹಾರ ಸೂತ್ರದ ಬಗ್ಗೆ ಕೋರ್ಟ್ ಆದೇಶದಲ್ಲಿ ಸ್ಪಷ್ಟತೆ ಇಲ್ಲದೇ ಇರುವುದು. ನ್ಯಾಯಾಧಿಕರಣ ತನ್ನ ಅಂತಿಮ ಆದೇಶದಲ್ಲಿ ಸಂಕಷ್ಟ ಪರಿಹಾರ ಸೂತ್ರದ ಬಗ್ಗೆ ಪ್ರಸ್ತಾಪಿಸಿತ್ತಾದರೂ ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆಯಾದಾಗ ಅದನ್ನು ಆಧರಿಸಿ ತಮಿಳುನಾಡಿಗೆ ಹಂಚಿಕೆ ಮಾಡುವ ನೀರಿನ ಪ್ರಮಾಣವನ್ನೂ ಕಡಿಮೆ ಮಾಡಬಹುದು ಎಂದು ಹೇಳಿತ್ತು.
ಆದರೆ, ನಿರ್ದಿಷ್ಟವಾಗಿ ಯಾವುದೇ ಸೂತ್ರವನ್ನೂ ಹೇಳಿರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ತೀರ್ಪಿನಲ್ಲೂ ಇದೇ ಪರಿಸ್ಥಿತಿ ಆಗಿದೆ.
ಇದುವರೆಗೆ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ನಿರಂತರ ಕಾನೂನು
ಹೋರಾಟ ನಡೆಯಲು ಪ್ರಮುಖ ಕಾರಣವಾಗಿದ್ದು ಕೂಡ ನಿರ್ದಿಷ್ಟ ಸಂಕಷ್ಟ ಪರಿಹಾರ ಸೂತ್ರ ಇಲ್ಲದೇ ಇರುವುದು. ಇದರ ಪರಿಣಾಮ ರಾಜ್ಯದಲ್ಲಿ ಮಳೆ ಬೀಳದಿದ್ದರೂ ಆಯಾ ತಿಂಗಳು ನ್ಯಾಯಾಧಿಕರಣ ನಿಗದಿಪಡಿಸಿದ ನೀರನ್ನು ಬಿಡಬೇಕು ಎಂದು ತಮಿಳುನಾಡು ಕ್ಯಾತೆ ತೆಗೆಯುತ್ತಿತ್ತು. ಸುಪ್ರೀಂ ಕೋರ್ಟ್‌ನಿಂದ ಆದೇಶ ಪಡೆದು ನೀರು ಪಡೆದುಕೊಳ್ಳುತ್ತಿತ್ತು.
ಸಮಸ್ಯೆ ಏನು?:ತಮಿಳುನಾಡಿಗೆ ಪ್ರತಿ ವರ್ಷ 192 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಆದೇಶಿಸಿದ್ದ ನ್ಯಾಯಾಧಿಕರಣ, ಜೂನ್ ನಲ್ಲಿ 10 ಟಿಎಂಸಿ, ಜುಲೈ- 34 ಟಿಎಂಸಿ, ಆಗಸ್ಟ್- 50 ಟಿಎಂಸಿ, ಸೆಪ್ಟೆಂಬರ್- 40 ಟಿಎಂಸಿ, ಅಕ್ಟೋಬರ್- 22 ಟಿಎಂಸಿ, ನವೆಂಬರ್- 15 ಟಿಎಂಸಿ, ಡಿಸೆಂಬರ್- 8ಟಿಎಂಸಿ, ಜನವರಿ- 3 ಟಿಎಂಸಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಲಾ 2.5 ಟಿಎಂಸಿ ನೀರು ಬಿಡಬೇಕು ಎಂದು ನಿರ್ದಿಷ್ಟವಾಗಿ ಹೇಳಿತ್ತು. ಆದರೆ, ಮಳೆ ಕೊರತೆಯಾದಾಗ ಅದಕ್ಕೆ ಅನುಗುಣವಾಗಿ ತಮಿಳುನಾಡಿಗೆ ಬಿಡಬೇಕಾದ ನೀರನ್ನು ಕಡಿಮೆ ಮಾಡಬೇಕು ಎಂದು ಹೇಳಿತ್ತಾದರೂ ಅದಕ್ಕೆ ಸೂಕ್ತ ಮಾನದಂಡ ನಿಗದಿಪಡಿಸಿರಲಿಲ್ಲ. ಅಲ್ಲದೆ, ತಮಿಳುನಾಡಿನಲ್ಲಿ ಹಿಂಗಾರಿನಲ್ಲಿ ಬೀಳುವ ಮಳೆಯ ಬಗ್ಗೆಯೂ ಅದು ಪ್ರಸ್ತಾಪಿಸಿರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಬಿಡಬೇಕಾಗಿರುವ 192 ಟಿಎಂಸಿ ನೀರಿನ ಪ್ರಮಾಣವನ್ನು 177.25 ಟಿಎಂಸಿಗೆ ಇಳಿಸಿದೆ.
ಅದರಂತೆ ಪ್ರತಿ ತಿಂಗಳು ಬಿಡುಗಡೆ ಮಾಡ ಬೇಕಾದ ನೀರಿನ ಪ್ರಮಾಣ ಕೊಂಚ ಕಡಿಮೆಯಾಗುತ್ತದೆ. ಮಳೆ ಕೊರತೆಯಾದರೆ
ನೀರು ಹಂಚಿಕೆ ಯಾವ ರೀತಿ ಇರುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ.
ಸಂಕಷ್ಟ ಸೂತ್ರವಿದ್ದರೆ ಅನುಕೂಲವೇನು?: ರಾಜ್ಯದಲ್ಲಿ ಬೀಳುವ ಮಳೆ, ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ಹಾಗೂ
ತಮಿಳುನಾಡು ಜಲಾಶಯಗಳಲ್ಲಿ ಸಂಗ್ರಹವಾಗುವ ನೀರು ಆಧರಿಸಿ ಎಷ್ಟು ಕಡಿಮೆ ಮಳೆ ಬಿದ್ದರೆ ಇಂತಿಷ್ಟು ನೀರು ಕಡಿಮೆ ಬಿಡಬೇಕು ಎಂಬುದು ಸ್ಪಷ್ಟವಾಗುತ್ತದೆ. ಜೂನ್ ತಿಂಗಳಲ್ಲಿ ಶೇ. 25ರಷ್ಟು ಮಳೆ ಕೊರತೆಯಾದರೆ ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣ ಶೇ. 25ರಷ್ಟು ಕಡಿಮೆಯಾಗುತ್ತದೆ. ಇದು ಎಲ್ಲಾ ತಿಂಗಳಿಗೂ ಅನ್ವಯವಾಗುತ್ತದೆ. ಜತೆಗೆ ವಾರ್ಷಿಕ ಶೇ. 25ರಷ್ಟು ಮಳೆ ಕಡಿಮೆಯಾದರೆ ತಮಿಳುನಾಡಿಗೆ ಬಿಡಬೇಕಾದ ನೀರು ಅಷ್ಟೇ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಇಂತಹ ಸಂಕಷ್ಟ ಪರಿಹಾರ ಸೂತ್ರದ ಬಗ್ಗೆ ಕೋರ್ಟ್ ಸ್ಪಷ್ಟವಾಗಿ ಹೇಳದೇ ಇರುವುದು ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಸಮಸ್ಯೆ ತಂದೊಡ್ಡಬಹುದು.
ಪ್ರಾಧಿಕಾರ ನಿರ್ಧರಿಸಬಹುದು: ಈ ಸಮಸ್ಯೆಯನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಬಗೆಹರಿಸಬಹುದು
ಎನ್ನುತ್ತಾರೆ ಕಾನೂನು ತಜ್ಞರು. ರಾಜ್ಯದಲ್ಲಿ ಮಳೆ ಕೊರತೆ, ಕರ್ನಾಟಕ ಮತ್ತು ತಮಿಳುನಾಡಿನ ಜಲಾಶಯಗಳಲ್ಲಿ ನೀರಿನ ಲಭ್ಯತೆ ಮತ್ತು ಎರಡೂ ರಾಜ್ಯಗಳಲ್ಲಿ ನೀರಿನ ಅವಶ್ಯಕತೆ ಆಧರಿಸಿ ಆಯಾ ತಿಂಗಳ ನೀರು ಹಂಚಿಕೆ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂಬುದು ಅವರ ವಾದ. ಆದರೆ, ಪ್ರಾಧಿಕಾರಕ್ಕೆ ಆ ಅಧಿಕಾರ ಇದೆಯೇ ಎಂಬುದು ಕೇಂದ್ರ ಸರ್ಕಾರ ಪ್ರಾಧಿಕಾರ ರಚನೆ ಮಾಡಿದ ಬಳಿಕವೇ ಗೊತ್ತಾಗುತ್ತದೆ.
ರಾಜ್ಯಸರ್ಕಾರಕ್ಕೆ ಪೂರ್ಣಪ್ರಮಾಣದಲ್ಲಿ ಜಯ ಸಿಗದಿದ್ದರೂ, ತೃಪ್ತಿದಾಯಕ ಪಾಲು ಪಡೆದುಕೊಳ್ಳುವಲ್ಲಿ ರಾಜ್ಯ ಸಫಲವಾಗಿದೆ. ನೀರು ಹಂಚಿಕೆ ವಿಚಾರದಲ್ಲಿ ಎರಡೂ ರಾಜ್ಯಗಳಿಗೆ ಸಹಕಾರ ತತ್ವದ ಅಡಿಯಲ್ಲಿ ನ್ಯಾಯಯುತ ತೀರ್ಪು ದೊರೆತಿದೆ. ತಮಿಳುನಾಡಿಗೆ ಬಿಡುವ ನೀರಿನಲ್ಲಿ 14. 75 ಟಿಎಂಸಿ ಕಡಿತ, ಬೆಂಗಳೂರಿನ ಕುಡಿಯುವ ನೀರಿಗೆ 4.75 ಮೀಸಲು ನೀಡಿರುವುದರಿಂದ ರಿಲೀಫ್ ದೊರೆತಂತಾಗಿದೆ. ಎರಡೂ ರಾಜ್ಯಗಳ ತಜ್ಞರು ಸೇರಿ ರೈತರು ಕಡಿಮೆ ನೀರು ಬಳಸಿ ಕೃಷಿ ಮಾಡುವುದು ಹೇಗೆ ಮತ್ತು ನೀರು ಸಂರಕ್ಷಿಸುವ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ.
– ಬಿ.ವಿ ಆಚಾರ್ಯ, ಮಾಜಿ ಅಡ್ವೋಕೆಟ್
ಜನರಲ್, ಹಿರಿಯ ವಕೀಲರು
ತೀರ್ಪು ರಾಜ್ಯದ ಅಹವಾಲುಗಳನ್ನು ಭಾಗಶಃ ಒಪ್ಪಿದೆ. ನಮ್ಮ ರೈತರಿಗೆ, ಜನರ ಕುಡಿಯುವ ನೀರಿಗೆ ಹೆಚ್ಚುವರಿ ನೀರು ದೊರಕುವಂತಾಗಿರುವುದು ಸ್ವಲ್ಪ ಸಮಾಧಾನ ತಂದಿದೆ. ತಮಿಳುನಾಡಿನ ಅಂತರ್ಜಲ ಪರಿಗಣಿಸಬೇಕೆಂಬ ರಾಜ್ಯದ ವಾದವನ್ನು ಸುಪ್ರೀಂ ಒಪ್ಪಿರುವುದು ನಮಗೆ ಅನುಕೂಲಕರವಾಗಿದೆ. ಆದರೆ, 1892 ಮತ್ತು 1924ರ ಒಪ್ಪಂದಗಳನ್ನು ಎತ್ತಿ ಹಿಡಿರುವುದು, ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ಕೇಂದ್ರ ಸರ್ಕಾರದ ದಾಯಿತ್ವಕ್ಕೆ ಒಪ್ಪಿಸಿರುವುದು ಮೊದಲಾದ ತೀರ್ಪಿನಲ್ಲಿ ಉಲ್ಲೇಖವಾಗಿರುವ ಸಂಗತಿಗಳ ಬಗ್ಗೆ ಇನ್ನೂ ಆಳವಾಗಿ ಅಧ್ಯಯನ ನಡೆಸಬೇಕಾದ ಅವಶ್ಯಕತೆ ಇದೆ.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ದೊರೆತಿದೆ. ನಾವು 42 ಟಿಎಂಸಿ ನೀರು ಕೇಳಿದ್ದೆವು. ಬೆಂಗಳೂರಿಗೆ 20 ಟಿಎಂಸಿ ನೀರು ಪ್ರತ್ಯೇಕವಾಗಿ ಕೇಳಿದ್ದೆವು. ಬೆಂಗಳೂರಿಗೆ ಕುಡಿಯಲು 4.75 ಟಿಎಂಸಿ ದೊರೆತಿದೆ. ಇನ್ನೂ ಹೆಚ್ಚಿಗೆ ನೀರು ಸಿಗಬೇಕಿತ್ತು. ಕಾನೂನು ತಜ್ಞರ ಜೊತೆ ಚರ್ಚಿಸಿ ರಾಜ್ಯ ಸರ್ಕಾರದ ಮುಂದಿನ ನಡೆ ನಿರ್ಧರಿಸುತ್ತೇವೆ.
– ಎಂ.ಬಿ.ಪಾಟೀಲ್, ಜಲಸಂಪನ್ಮೂಲ ಸಚಿವ
ತೀರ್ಪಿನಿಂದ ರಾಜ್ಯಕ್ಕೆ ಯಾವುದೇ ಲಾಭವಾಗಿಲ್ಲ. ಹಿಂದಿನ ಟ್ರಿಬ್ಯುನಲ್ ಆದೇಶದಲ್ಲಿ ಮಾರ್ಪಾಡಾಗಿಡಿಲ್ಲ. 6 ವಾರಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಹೇಳಿದೆ. ಒಂದು ವೇಳೆ ಮಂಡಳಿ ರಚನೆಯಾದರೆ ಟ್ರಿಬ್ಯುನಲ್ ಆದೇಶ ಪಾಲಿಸಬೇಕೆ ಬೇಡವೇ ಎಂಬ ಬಗ್ಗೆ ಹೇಳಿಲ್ಲ. ಹೀಗಾಗಿ ತೀರ್ಪು ಸಾಕಷ್ಟು ಗೊಂದಲಗಳಿಂದ ಕೂಡಿದೆ.
– ಪ್ರೊ. ರವಿವರ್ಮ ಕುಮಾರ್, ಮಾಜಿ ಎಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.