ಕುಷ್ಠ: ಕೇವಲ ಸೋಂಕುರೋಗ;ಶಾಪವಲ್ಲ!
Team Udayavani, Feb 18, 2018, 6:05 AM IST
ಹಿಂದಿನ ವಾರದಿಂದ– ಕುಷ್ಠ ಉಂಟಾಗಿದೆ ಎಂಬ ಸಂಶಯವಿದ್ದರೆ ಏನು ಮಾಡಬೇಕು?
ಮೊತ್ತಮೊದಲಾಗಿ, ಭಯ- ಆತಂಕ ಪಡದಿರಿ. ತತ್‌ಕ್ಷಣ ಚರ್ಮವೈದ್ಯರನ್ನು ಸಂಪರ್ಕಿಸಿ. ಬಹುತೇಕವಾಗಿ ನಿಮಗೆ ಉಂಟಾಗಿರುವುದು ಇಸುಬು ಅಥವಾ ಸಿಬ್ಬದಂತಹ ಶಿಲೀಂಧ್ರ ಸೋಂಕು ಆಗಿರಬಹುದು. ಕೈಗಳು ಮತ್ತು ಕಾಲುಗಳಲ್ಲಿ ಭಿನ್ನ ಸಂವೇದನೆ ಉಂಟಾಗುತ್ತಿದ್ದರೆ ನಿಮಗೆ ಮಧುಮೇಹ, ರಕ್ತಹೀನತೆಯಂತಹ ಪರೀಕ್ಷೆಗಳನ್ನು ನಡೆಸಬಹುದು; ನಿಮ್ಮ ನರವ್ಯವಸ್ಥೆಯನ್ನು ಪರೀಕ್ಷೆಗೊಳಪಡಿಸಬಹುದು, ಕೆಲವೊಮ್ಮೆ ನರವ್ಯವಸ್ಥೆಯ ಡಾಪ್ಲರ್ ಸ್ಕ್ಯಾನ್ ಕೂಡ ಮಾಡಬಹುದು. ಕುಷ್ಠದ ಬ್ಯಾಕ್ಟೀರಿಯಾ ಪತ್ತೆಗಾಗಿ ಸ್ಲಿಟ್ ಸ್ಕಿನ್ ಪರೀಕ್ಷೆ, ಶಿಲೀಂಧ್ರ ಪತ್ತೆಗಾಗಿ ಚರ್ಮ ಕೆರೆದು ಪರೀಕ್ಷೆ ಮತ್ತು ಚರ್ಮದ ಬಯಾಪ್ಸಿಯನ್ನೂ ರೋಗ ಪತ್ತೆಗಾಗಿ ನಡೆಸಬಹುದು.
ತಪಾಸಣೆಯಲ್ಲಿ ಕುಷ್ಠ ಉಂಟಾಗಿರುವುದು ದೃಢಪಟ್ಟರೆ, ಆಗ ಚಿಕಿತ್ಸೆಯನ್ನು ತತ್‌ಕ್ಷಣ ಆರಂಭಿಸಲಾಗುತ್ತದೆ. ಕುಷ್ಠವನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ಅತ್ಯಂತ ನಿಧಾನವಾಗಿ ಬೆಳೆಯುವ ಕಾರಣದಿಂದಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ಆ್ಯಂಟಿ ಬಯಾಟಿಕ್ ಔಷಧಗಳನ್ನು ದೀರ್ಘಕಾಲ- ಒಂದೆರಡು ವರ್ಷಗಳ ಅವಧಿಯಲ್ಲಿ ತೆಗೆದುಕೊಳ್ಳಬೇಕಾಗುವುದು. ಆದರೆ ಈ ಆ್ಯಂಟಿ ಬಯಾಟಿಕ್ ಔಷಧಗಳನ್ನು ಮಾಸಿಕ ಕ್ಯಾಲೆಂಡರ್ ಪೊಟ್ಟಣಗಳಾಗಿ ಸರಕಾರ ಉಚಿತವಾಗಿ ಒದಗಿಸುತ್ತದೆ. ನೀವು ಮಾಡಬೇಕಾಗಿರುವ ಒಂದೇ ಒಂದು ಕೆಲಸವೆಂದರೆ, ಈ ಪೊಟ್ಟಣಗಳನ್ನು ಪಡೆದುಕೊಂಡು, ಔಷಧಿಗಳನ್ನು ಯಾವಾಗ, ಹೇಗೆ ತೆಗೆದುಕೊಳ್ಳಬೇಕು ಎಂಬ ವೈದ್ಯರ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಸಾಮಾನ್ಯವಾಗಿ ಏನೂ ಸಂಭವಿಸುವುದಿಲ್ಲ; ಆದರೆ ಜ್ವರ, ಚರ್ಮದಲ್ಲಿ ಮಚ್ಚೆಗಳು ಹೆಚ್ಚು ಕೆಂಪಗಾಗುವುದು, ಪಾದಗಳು ಊದಿಕೊಳ್ಳುವುದು, ಮೊಣಕಾಲು ಮತ್ತು ಮೊಣಕೈಗಳಲ್ಲಿ ನೋವು ಇತ್ಯಾದಿ ಪ್ರತಿಕ್ರಿಯೆಗಳು ಕಾಣಿಸಿಕೊಂಡರೆ ತತ್‌ಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಯಾವತ್ತೂ ಗಾಬರಿಗೊಳ್ಳದಿರಿ. ಔಷಧ ಪ್ರತಿಕ್ರಿಯೆ ಎಂದರೆ ನಿಮ್ಮ ದೇಹ ಕಾಯಿಲೆಯ ವಿರುದ್ಧ ಹೋರಾಡಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತಿರುವುದರ ಸೂಚನೆಯಷ್ಟೇ. ಔಷಧ ಪ್ರತಿಕ್ರಿಯೆಗಳಿಗೂ ಚಿಕಿತ್ಸೆ ಇದೆ, ನೀವು ಕುಷ್ಠರೋಗಕ್ಕಾಗಿನ ಮಾತ್ರೆಗಳ ಜತೆಗೆ ಔಷಧ ಪ್ರತಿಕ್ರಿಯೆ ಶಮನಗೊಳಿಸುವ ಇನ್ನೂ ಕೆಲವು ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ.
ಇತರ ಮುನ್ನೆಚ್ಚರಿಕೆಗಳು
ನಿಮ್ಮ ಕುಟುಂಬ ಸದಸ್ಯರೊಬ್ಬರು ಕುಷ್ಠ ರೋಗಕ್ಕೆ ತುತ್ತಾದರೆ, ಅವರನ್ನು ಬಹಿಷ್ಕರಿಸಬೇಡಿ. ಕಾಯಿಲೆಗೀಡಾದ ವ್ಯಕ್ತಿ ಸಾಮಾನ್ಯವಾಗಿ ದುಃಖೀತರಾಗಿರುತ್ತಾರೆ, ಖನ್ನರಾಗಿರುತ್ತಾರೆ; ಹೆಚ್ಚು ಪ್ರೀತಿ ಮತ್ತು ಆರೈಕೆಯ ಅಗತ್ಯ ಅವರಿಗಿರುತ್ತದೆ. ಕುಷ್ಠ ರೋಗ ಸ್ಪರ್ಶದಿಂದ ಹರಡುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಆದರೆ ಮುನ್ನೆಚ್ಚರಿಕೆಯಾಗಿ ಕುಟುಂಬ ಸದಸ್ಯರೆಲ್ಲರೂ ಮಚ್ಚೆಗಳು, ನರ ದಪ್ಪಗಾಗುವುದು ಮತ್ತು ಇತರ ರೋಗ ಲಕ್ಷಣಗಳಿಗಾಗಿ ವೈದ್ಯರಿಂದ ತಪಾಸಣೆಗೆ ಒಳಗಾಗಬೇಕು. ಕುಷ್ಠರೋಗಿ ಔಷಧಗಳನ್ನು ಸರಿಯಾದ ಕ್ರಮದಲ್ಲಿ, ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಲು ನೀವು ನೆರವಾಗಿ.
ನರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವಾದ ಕಾರಣ ಕುಷ್ಠ ರೋಗಿಗೆ ಬಿಸಿ, ಶೈತ್ಯ, ನೋವು ಇತ್ಯಾದಿಗಳನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದೆ ಇರಬಹುದು. ಹೀಗಾಗಿ ಆತ/ಆಕೆ ಬಿಸಿ ಪಾತ್ರೆ ಹಿಡಿದುಕೊಳ್ಳುವಾಗ, ಬಿಸಿ ನೀರಿನಲ್ಲಿ ಸ್ನಾನ ಮಾಡುವಾಗ ಅಥವಾ ಬೆರಳುಗಳಿಂದ ನೀರಿನ ಬಿಸಿಯನ್ನು ಪರೀಕ್ಷಿಸುವಾಗ- ಇಂತಹ ಸಂದರ್ಭಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಅವರು ಯಾವಾಗಲೂ ಉತ್ತಮವಾದ, ಮೃದುವಾದ, ರಕ್ಷಕ ಬೂಟುಗಳನ್ನು ಧರಿಸಬೇಕಲ್ಲದೆ, ಅವರ ಪಾದಗಳು ಕಲ್ಲು-ಮುಳ್ಳುಗಳಿಗೆ ತಾಕಬಾರದು. ಕುಷ್ಠರೋಗಿಗಳು ದೀರ್ಘದೂರ ನಡೆಯಬಾರದು. ಪ್ರತೀ ಸುಮಾರು 200 ಮೀ. ದೂರ ನಡೆದ ಬಳಿಕ ಅವರು ಕಿರು ವಿಶ್ರಾಂತಿ ಪಡೆಯಬೇಕು.
ಪ್ರತೀ ದಿನ ರಾತ್ರಿ ಕನ್ನಡಿಯ ಸಹಾಯದಿಂದ ಕಾಲು-ಕೈಗಳನ್ನು ಪರೀಕ್ಷಿಸಿ ಯಾವುದೇ ಗಾಯ ಉಂಟಾಗಿದೆಯೇ ಎಂದು ನೋಡಿಕೊಳ್ಳಬೇಕು. ಪಾದಗಳನ್ನು ಗಟ್ಟಿಯಾಗಿ ಒತ್ತಿ ಎಲ್ಲಾದರೂ ಆಳವಾದ ನೋವಿದೆಯೇ ಅಥವಾ ಊದಿಕೊಂಡಿದೆಯೇ ಎಂಬುದನ್ನು ಪರೀಕ್ಷಿಸಿ ತಿಳಿಯಬೇಕು. ಗಾಯ ಉಂಟಾಗಿದ್ದರೆ ಅಥವಾ ನೋವು – ಊತ ಇದ್ದರೆ ಕೂಡಲೇ ವೈದ್ಯಕೀಯ ಆರೈಕೆ ಪಡೆಯಬೇಕು.
ದುರದೃಷ್ಟವಶಾತ್, ಗಾಯ ಅಥವಾ ಹಾನಿ ಉಂಟಾದರೆ ಗಾಬರಿಗೊಳ್ಳಬೇಕಿಲ್ಲ; ಬದಲಾಗಿ ಭವಿಷ್ಯದಲ್ಲಿ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಬೇಕು. ವೈದ್ಯರ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಚಿಕಿತ್ಸೆಯನ್ನು ಅನುಸರಿಸಲು ಬದ್ಧರಾಗಿರಬೇಕು, ಗಾಯಕ್ಕೆ ಪಟ್ಟಿ ಹಾಕಿಸಿಕೊಳ್ಳಬೇಕು, ನಡಿಗೆ ಅಥವಾ ಒತ್ತಡ ಬೀಳುವುದನ್ನು ತಪ್ಪಿಸಬೇಕು. ಸಮತೋಲಿತ ಆಹಾರವನ್ನು ಸೇವಿಸಬೇಕು. ತೀವ್ರ ಕೋಪ, ದುಃಖ ಅಥವಾ ಖನ್ನತೆ – ಉದ್ವಿಗ್ನತೆ ಉಂಟಾದರೆ ವೈದ್ಯಕೀಯ ಆರೈಕೆ ಪಡೆಯಿರಿ. ನಿಮಗೆ ಉಂಟಾಗಿರುವ ಕಾಯಿಲೆ ನಿಮ್ಮನ್ನು ಗೆಲ್ಲಲು, ಆಳಲು ಬಿಡಬೇಡಿ.
ಯಾವಾಗಲೂ ಉಲ್ಲಾಸದಿಂದಿರಿ, ಧನಾತ್ಮಕವಾಗಿ ಆಲೋಚಿಸಿ ಮತ್ತು ಮಾನವ ಕುಲ ಕುಷ್ಠರೋಗದ ಮೇಲೆ ವಿಜಯ ಸಾಧಿಸಿದೆ ಎಂಬುದನ್ನು ಸದಾ ನೆನಪಿನಲ್ಲಿಡಿ.
ಕುಷ್ಠ ರೋಗವನ್ನು ನಿರ್ಮೂಲನೆಗೊಳಿಸಲು ನಾವು ಕೈಜೋಡಿಸೋಣ. ಭಯ ಪಡಬೇಡಿ, ಧೀರರಾಗಿ ಹೋರಾಡಿ ಮತ್ತು ಒಂದು ಕಾಲದಲ್ಲಿ ಭೀಕರ ರೋಗವಾಗಿ ಮನುಷ್ಯ ಕುಲವನ್ನು ಬಾಧಿಸಿದ್ದ, ಈಗ ಸೋತಿರುವ ಈ ರೋಗವನ್ನು ಇನ್ನಿಲ್ಲವಾಗಿಸಲು ಜತೆಗೂಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.