ಉಡುಪಿ: 6 ವರ್ಷ ಹಿಂದೆ ದರೋಡೆ ನಡೆದಿದ್ದ ಮನೆಯಲ್ಲಿ ಮತ್ತೆ ಕಳವು
Team Udayavani, Feb 19, 2018, 1:32 PM IST
ಉಡುಪಿ: ಆರು ವರ್ಷಗಳ ಹಿಂದೆ ಹಾಡಹಗಲೇ ದರೋಡೆ ನಡೆದಿದ್ದ ಉಡುಪಿಯ ವಾದಿರಾಜ ರಸ್ತೆಯ ಹಯಗ್ರೀವ ನಗರದ ಮನೆಯಲ್ಲಿ ನಗ, ನಗದು ಕಳವಾದ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಹಳೆಯ ನಾಣ್ಯಗಳ ಸಂಗ್ರಾಹಕರು ಮತ್ತು ಮಾರಾಟಗಾರರಾಗಿದ್ದ ಹಯಗ್ರೀವ ನಗರದ ಸೂರ್ಯ ಕುಮಾರ್ ಶೇಟ್ (72) ಅವರ ಮನೆಯಲ್ಲಿ ಕಳವು ನಡೆದಿದೆ.
ಸುಮಾರು 1,60,000 ರೂ. ನಗದು, 66,000 ರೂ. ಮೌಲ್ಯದ ಚಿನ್ನದ ನಾಣ್ಯಗಳು ಕಳವಾಗಿವೆ ಎಂದು ವಾದಿರಾಜ ಶೇಟ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮುಂಬಾಗಿಲ ಚಿಲಕವನ್ನು ಒಡೆದು ನುಸುಳಿ ಕಪಾಟುಗಳನ್ನು ಜಾಲಾಡಿ ಕಳವು ನಡೆಸಲಾಗಿದೆ. ಮನೆಮಂದಿ ಆಸ್ಪತ್ರೆಯಲ್ಲಿದ್ದರು
ಸೂರ್ಯಕುಮಾರ್ ಶೇಟ್ ಅವರು ಅನಾರೋಗ್ಯದ ಹಿನ್ನೆಲೆ ಯಲ್ಲಿ ಆಸ್ಪತ್ರೆಯಲ್ಲಿದ್ದ ಕಾರಣ ಮನೆ ಯಲ್ಲಿ ಯಾರೂ ಇದ್ದಿರಲಿಲ್ಲ. ಈ ಸಮಯವನ್ನು ನೋಡಿಕೊಂಡು ಶನಿವಾರ ರಾತ್ರಿ ಕಳವು ನಡೆಸಲಾಗಿದೆ.
ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂದು ಕೈಕಾಲು ಕಟ್ಟಿ ದರೋಡೆ
2012ರ ಜು. 13ರಂದು ಹಾಡಹಗಲಿನಲ್ಲೇ ನಾಣ್ಯ ಖರೀದಿಸುವ ನೆಪದಲ್ಲಿ ಬಂದಿದ್ದ ದರೋಡೆಕೋರರು ಸೂರ್ಯಕುಮಾರ್ ಶೇಟ್ ಮತ್ತು ಮನೆಕೆಲಸದ ಅನಂತ ಪೂಜಾರಿ ಅವರ ಕೈಕಾಲುಗಳನ್ನು ಕಟ್ಟಿ ಲಕ್ಷಾಂತರ ರೂ. ಮೌಲ್ಯದ ನಾಣ್ಯ ಹಾಗೂ ಚಿನ್ನಾಭರಣಗಳನ್ನು ದರೋಡೆಗೈದಿದ್ದರು. ಅಂದಿನ ಎಸ್‌ಪಿ ಡಾ| ಎಂ.ಬಿ. ಬೋರಲಿಂಗಯ್ಯ ಅವರ ನಿರ್ದೇಶನದಲ್ಲಿ ಈ ಪ್ರಕರಣವನ್ನು ಪೊಲೀಸರು ಎರಡೇ ವಾರದಲ್ಲಿ ಭೇದಿಸಿ 8 ಮಂದಿಯನ್ನು ಬಂಧಿಸಿ ಸುಮಾರು 8 ಲ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.