ಶೀಟಿ ಹೊಡೆದಿದ್ದೇ ತಡ, ಎಕ್ಸ್‌ಪ್ರೆಸ್ ಬಸ್ ನಿಂತಿತು!
Team Udayavani, Feb 20, 2018, 6:30 AM IST
ನನಗಾಗ 4 ವರ್ಷವಿರಬಹುದು. ಇನ್ನೂ ಬಾಲವಾಡಿಗೆ ಹೋಗುತ್ತಿದ್ದೆ. ಆ ವರ್ಷ ನಮ್ಮೂರಿನಲ್ಲೇ ಪ್ರಸಿದ್ಧ ನಂದೀಶ್ವರ ಜಾತ್ರಾ ಮಹೋತ್ಸವ ನಡೆದಿತ್ತು. ಅಂದು ನಮಗೆಲ್ಲ ಸಂಭ್ರಮ-ಸಡಗರ. ನಮ್ಮ ಪ್ರಿಯವಾದ ಆಟಿಕೆಸಾಮಾನುಗಳೆಲ್ಲ ಜಾತ್ರೆಯಲ್ಲಿ ಸಿಗುತ್ತಿದ್ದವು. ನಮಗಾಗಿಯೇ ಪಾಲಕರು ಒಂದು ತಿಂಗಳ ಮುಂಚಿತವಾಗಿ ಆಯವ್ಯಯದ ಬಜೆಟ್ ತಯಾರು ಮಾಡಿಕೊಳ್ಳುತ್ತಿದ್ದರು. ನಾವು ನಿರೀಕ್ಷಿಸಿದಂತೆ ಬಜೆಟ್ ಯಾವಾಗಲೂ ನಮ್ಮ ಪರವಾಗಿಯೇ ಇರುತ್ತಿತ್ತು.
ಯಾರಧ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತಾರಲ್ಲ, ಹಾಗೆ ನಾವು ದೊಡ್ಡವರ ದುಡ್ಡಿನಲ್ಲಿ ಜಾತ್ರೆ ಪೇಟೆ ಸುತ್ತುತ್ತಿದ್ದೆವು. ಜಾತ್ರೆಗೆ ದೂರದ ಊರಿನಿಂದ ಬಂಧು ಬಾಂಧವರೂ ಬರುತ್ತಿದ್ದರು. ಬೆಳಗ್ಗೆ ನಂದೀಶ್ವರನಿಗೆ ಅಭೀಷೇಕವಾಗಿ, ಸಂಜೆ ಗಡ್ಡಿತೇರಿನ ರಥೋತ್ಸವ ಜರುಗುವವರೆಗೂ ನಮ್ಮ ಎಲ್ಲ ಆಸೆಗಳನ್ನು ಅದುಮಿ ಹಿಡಿಯಲೇಬೇಕಾಗಿತ್ತು. ತೇರಿಗೆ ಉತ್ತತ್ತಿ-ಬಾಳೆಹಣ್ಣು ತೂರಿದ ಮೇಲೆಯೇ ನಮ್ಮ ಜಾತ್ರೆ ಶುರುವಾಗುತ್ತಿತ್ತು.
ರಥೋತ್ಸವ ಜರುಗುವವರೆಗೂ ಇರುವ ಗ್ಯಾಪಿನಲ್ಲಿ ನಮ್ಮ ಖಾಸಾ ಸಂಬಂಧಿಯಲ್ಲಿಯ ಒಂದೇ ವಯೋಮಿತಿಯುಳ್ಳವರ ಗುಂಪು ಕಟ್ಟಿಕೊಂಡು ಜಾತ್ರೆಪೇಟೆ ಸುತ್ತಿ ಎಲ್ಲ ಅಂಗಡಿಗಳ ಸರ್ವೇ ಮಾಡಿ ಇಟ್ಟಿರುತ್ತಿದ್ದೆವು. ತೇರಿಗೆ ಬಾಳೆ-ಉತ್ತತ್ತಿ ತೂರುವಾಗ ನಮ್ಮ ಹತ್ತಿರ ಬೀಳುವುದನ್ನು ಸಂಗ್ರಹಿಸುವುದೇ ಮೋಜಾಗಿತ್ತು! ನಾವು ತೇರಿಗೆ ಬಾಳೆಹಣ್ಣು-ಉತ್ತತ್ತಿ ತೂರಿದಾಗ ಅವು ಮುಂದಿದ್ದವರ ತಲೆಗೆ ಅರ್ಪಣೆಗೊಳ್ಳುತ್ತಿದ್ದವು.
ಅಂತೂ ಸಂಜೆಗೆ ಖರೀದಿ ಪರ್ವ ಶುರುವಾಗುತ್ತಿತ್ತು. ಆ ಬಾರಿ ನಾನು ಹಾರ್ಮೋನಿಯಂ ತಗೊಂಡಿದ್ದೆ, ಮತ್ತೂಬ್ಬ ಸಿಳ್ಳೆ ಹೊಡೆಯಲು ಸೀಟಿ ತಗೊಂಡಿದ್ದ. ಅಂತೂ ನಮಗೆ ಬೇಕಾದ ಬಲೂನ್, ಗಾಡಿ, ಪಿಸ್ತೂಲ್ ಜತೆ ಮೇಲಿನವೂ ಸೇರಿದ್ದವು. ಮನೆಗೆ ಬರುವ ಮಾರ್ಗ ಮಧ್ಯೆದಲ್ಲೇ ಬಲೂನ್ ಟಪ್ ಎಂದು ಒಡೆದಾಗ ಬಲೂನ್ ವಾರಸುದಾರರ ಮುಖ ನೋಡಬೇಕಿತ್ತು! ಊದೋದು ಕೊಟ್ಟು ಬಾರಿಸೋದು ತಗೊಂಡ ಅನ್ನೋ ಮಾತು ನನ್ನ ವಿಷಯದಲ್ಲಿ ವಿರುದ್ಧವಾಗಿತ್ತು.
ಏಕೆಂದರೆ ನಾನು ಬಾರಿಸೋದು ಕೊಟ್ಟು ಊದೋದು ತಗೊಂಡಿದ್ದೆ. ಅದರ ಪರಿಣಾಮ ಏನಾಯಿತೆಂದರೆ, ಜಾತ್ರೆ ಮುಗಿಸಿಕೊಂಡು ಹೊರಟ ಮಾವ ನನ್ನನ್ನೂ ಊರಿಗೆ ಕರೆದುಕೊಂಡು ಹೋಗುವವರಿದ್ದರು. ನಾನೂ ಖುಷಿಯಿಂದಲೇ ಆಟಿಕೆಯೊಂದಿಗೆ ತಯಾರಾಗಿ ನಿಂತೆ. ಹುಬ್ಬಳ್ಳಿ ಟು ಹಾವೇರಿ ಎಕ್ಸ್‌ಪ್ರೆಸ್ ಬಸ್ ಹತ್ತಿದೆವು. ಸ್ವಲ್ಪ ಹೊತ್ತಿನ ನಂತರ ಮಾವ ನಿದ್ದೆಗೆ ಜಾರಿದರು. ನನಗೋ ಕಿಟಕಿ ಕಡೆಗೆ ಕಣ್ಣಗಲಿಸಿ ನೋಡಿ ಸಾಕಾಗಿ ಹೋಗಿತ್ತು.
ಕಿಸೆಯನ್ನೊಮ್ಮೆ ತಡಕಾಡಿದೆ. ಪುಟ್ಟ ಕಿಸೆಯಲ್ಲಿ ಸೀಟಿ ಇತ್ತು. ನಿಶ್ಶಬ್ದವಾಗಿದ್ದ ಬಸ್ಸು ವೇಗವಾಗಿ ಓಡುತ್ತಿತ್ತು. ಎಲ್ಲರೂ ನಿದ್ದೆಗೆ ಶರಣಾಗಿದ್ದರು. ನಾನು ಜೋರಾಗಿ ಸೀಟಿಯನ್ನು ಊದಿ ಮೆಲ್ಲನೆ ಕಿಸೆಯಲ್ಲಿ ಇಳಿಸಿಕೊಂಡೆ. ಡ್ರೆ„ವರ್ ಒಮ್ಮೆಲೆ ವೇಗ ತಗ್ಗಿಸಿ ಬ್ರೇಕ್ ಹಾಕಿ ಕಂಡಕ್ಟರನತ್ತ ಪ್ರಶ್ನಾರ್ಥಕವಾಗಿ ನೋಡಿದ. ಆತ ತಡಬಡಿಸಿ “ಯಾರ್ರೀ ನಡುದಾರಿಯಲ್ಲಿ ಸೀಟಿ ಹೊಡೆದದ್ದು?’ ಎಂದು ಗದರಿದಾಗ, ಕಳ್ಳ ಕಂಡಕ್ಟರ್ ಆದ ನಾನು ಸಿಕ್ಕಿಬಿದ್ದೆ. ಮಾವ ಇದ್ದುದ್ದರಿಂದ ನನಗೆ ಪೆಟ್ಟು ಬೀಳಲಿಲ್ಲ.
ಕಂಡಕ್ಟರ್ ನನಗೆ ಬೈದು “ಇನ್ನೊಮ್ಮೆ ಊದಿದರೆ ನಿನ್ನ ಸೀಟಿ ಕಸಿದುಕೊಳ್ಳುತ್ತೇನೆ’ ಎಂದರು. ಅವರ ಖಾಕಿ ಡ್ರೆಸ್ ನೋಡಿ ನಾನು ಇವರು ಬಸ್ಸಲ್ಲಿರೋ ಪೊಲೀಸರು ಅಂತಲೇ ತಿಳಿದಿದ್ದೆ. ಆ ಘಟನೆ ನಡೆದು ಎರಡು ದಶಕಗಳೇ ಆಗಿವೆ. ಈಗಲೂ ಮಾವ, “ಸಣ್ಣಾಂವ ಇದ್ದಾಗ ಸೀಟಿ ಹೊಡೆದು ಎಕ್ಸ್‌ಪ್ರೆಸ್ ಬಸ್ಸು ನಿಲ್ಲಿಸಿದ್ದಾಂವ ನೀನು’ ಎನ್ನುತ್ತಿರುತ್ತಾರೆ. ಸಣ್ಣಮಕ್ಕಳು ಸೀಟಿ ಊದುವಾಗ ಅಂದು ಜಾತ್ರೆಯಲ್ಲಿ ಕೊಂಡ ಸೀಟಿಯ ನೆನಪು ಈಗಲೂ ಕಾಡುತ್ತದೆ.
* ಹನುಮಂತ ಮ.ದೇಶಕುಲಕರ್ಣಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.