ಕಂಪನಿ ಸಂಕಷ್ಟಕ್ಕೆ ಸೊರಗಿದ ಕಾಮಗಾರಿ
Team Udayavani, Feb 24, 2018, 12:48 PM IST
ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಯ ಮೈಸೂರು ರಸ್ತೆ- ಕೆಂಗೇರಿ ವಿಸ್ತರಿಸಿದ ಮಾರ್ಗದ ಕಾಮಗಾರಿ ವಿಳಂಬವಾಗುವ ಸಾಧ್ಯತೆಯಿದೆ. ಕಾರಣ, ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
6.46 ಕಿ.ಮೀ ಹಳಿ ಮತ್ತು ಡಿಪೋ ನಿರ್ಮಾಣ ಸೇರಿದಂತೆ ಒಟ್ಟಾರೆ 8.8 ಕಿ.ಮೀ ಉದ್ದದ ಮೈಸೂರು ರಸ್ತೆ- ಕೆಂಗೇರಿ ಮಾರ್ಗದಲ್ಲಿ ಆರು ನಿಲ್ದಾಣಗಳು ಬರುತ್ತವೆ. ಈ ಪೈಕಿ ಪಟ್ಟಣಗೆರೆಯಿಂದ ಚಲ್ಲಘಟ್ಟ ಡಿಪೋವರೆಗೆ ಮೆಟ್ರೋ ಎತ್ತರಿಸಿದ ಮಾರ್ಗಗಳ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ಪಡೆದ ಕಂಪನಿಯೊಂದು ಆರ್ಥಿಕ ಸಂಕಷ್ಟದಲ್ಲಿದೆ.
ಇದು ಯೋಜನೆ ಮೇಲೆ ಪರಿಣಾಮ ಬೀರುತ್ತಿದ್ದು, 332 ಕೋಟಿ ರೂ. ವೆಚ್ಚದ ಕಾಮಗಾರಿ, ಅದಕ್ಕೆ ಬೇಕಾದ ವಸ್ತುಗಳ ಖರೀದಿ, ಕಾರ್ಮಿಕರ ವೇತನ ಪಾವತಿ ಸೇರಿ ಹತ್ತಾರು ಸಮಸ್ಯೆಗಳಾಗುತ್ತಿವೆ. ಪರಿಣಾಮ, ಉದ್ದೇಶಿತ ಯೋಜನೆ ಅನುಷ್ಠಾನದಲ್ಲಿ ಒಂದು ವರ್ಷ ವಿಳಂಬವಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ಉನ್ನತ ಮೂಲಗಳು ತಿಳಿಸಿವೆ.
ಗುತ್ತಿಗೆ ರದ್ದು ಕಡೆಯ ಆಯ್ಕೆ: ಗುತ್ತಿಗೆ ಪಡೆದ ಕಂಪನಿಯಿಂದ ಕಾಮಗಾರಿ ವಿಳಂಬವಾಗುತ್ತಿರುವ ಕಾರಣ, ಅಗತ್ಯಬಿದ್ದರೆ ಕಂಪನಿಗೆ ನೀಡಿರುವ ಟೆಂಡರ್ ರದ್ದುಪಡಿಸುವ ಚಿಂತನೆಯಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಜಾಗತಿಕ ಟೆಂಡರ್ ಪ್ರಕ್ರಿಯೆ ಮೂಲಕ ಕಾಮಗಾರಿ ಗುತ್ತಿಗೆ ಪಡೆದಿದ್ದರಿಂದ ಏಕಾಏಕಿ ಗುತ್ತಿಗೆ ರದ್ದುಗೊಳಿಸಲಾಗದು. ಅಷ್ಟಕ್ಕೂ ಹೊಸ ಗುತ್ತಿಗೆದಾರರಿಗೆ ನೀಡಿದರೆ, ಕಾಮಗಾರಿ ಪ್ರಕ್ರಿಯೆ ಮತ್ತೆ ಮೊದಲಿನಿಂದ ಶುರುವಾಗುತ್ತದೆ. ಆಗ, ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ರದ್ದುಗೊಳಿಸುವ ಆಯ್ಕೆ ಕೊನೆಯದಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.
ಕಾರ್ಮಿಕರ ವಲಸೆ ಸಾಧ್ಯತೆ: ಕಾಮಗಾರಿ ವಿಳಂಬದಿಂದ ಸಹಜವಾಗಿ ಯೋಜನಾ ವೆಚ್ಚ ಹೆಚ್ಚಲಿದೆ. ಅಷ್ಟೇ ಅಲ್ಲ, ಮೆಟ್ರೋ ಯೋಜನೆಗೆ ಬೇರೆ ಬೇರೆ ಕಡೆಯಿಂದ ಎಂಜಿನಿಯರ್‌ಗಳು, ಮೇಲ್ವಿಚಾರಕರು, ಕಾರ್ಮಿಕರ ತಂಡಗಳು ಬಂದಿರುತ್ತವೆ. ಅವರೆಲ್ಲಾ ಪ್ರಧಾನ ಗುತ್ತಿಗೆದಾರರ ಬಳಿ ಇರುವ ಉಪ ಗುತ್ತಿಗೆದಾರರ ಕೆಳಗೆ ಕೆಲಸ ಮಾಡುತ್ತಿರುತ್ತಾರೆ.
ಹಾಗೊಂದು ವೇಳೆ ಹಣ ಪಾವತಿ ಸಮರ್ಪಕವಾಗಿ ಆಗದಿದ್ದರೆ ಅವರೆಲ್ಲಾ ವಿಮುಖರಾಗುವ ಸಾಧ್ಯತೆ ಇದೆ. ಅದರಲ್ಲೂ ಈಗ ಪುಣೆ, ಅಹಮದಾಬಾದ್, ನಾಗ್ಪುರ ಸೇರಿ ಹಲವೆಡೆ ಯೋಜನೆಗಳು ಪ್ರಗತಿಯಲ್ಲಿದ್ದು, ಅವಕಾಶಗಳೂ ಹೆಚ್ಚಿವೆ ಎಂದು ಯೋಜನೆಯ ಮುಖ್ಯ ಎಂಜಿನಿಯರೊಬ್ಬರು ತಿಳಿಸುತ್ತಾರೆ.
ಬೆನ್ನಲ್ಲೇ ಮತ್ತೂಂದು ತಂಡ ಇಲ್ಲಿಗೆ ಸೇರ್ಪಡೆ ಆಗಬಹುದು. ಆದರೆ, ನುರಿತ ಕಾರ್ಮಿಕರು ಬಿಟ್ಟುಹೋಗುತ್ತಾರೆ. ಆಗ, ಪುನಃ ಹೊಸದಾಗಿ ಸೇರ್ಪಡೆಗೊಂಡ ಕಾರ್ಮಿಕರಿಗೆ ತರಬೇತಿ ನೀಡಿ, ತಯಾರು ಮಾಡಲು ಸಮಯ ಬೇಕಾಗುತ್ತದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ. ಈಗಾಗಲೇ ಕಾಮಗಾರಿ ಗುತ್ತಿಗೆ ಪಡೆದು 20ರಿಂದ 22 ತಿಂಗಳಾಗಿವೆ.
27 ತಿಂಗಳಲ್ಲಿ ಈ ಯೋಜನೆ ಮುಗಿಸಬೇಕಿದ್ದು, ಅಕ್ಟೋಬರ್-ನವೆಂಬರ್ ವೇಳೆಗೆ ಸಿವಿಲ್ ಸೇರಿದಂತೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಆದರೆ, ಈವರೆಗೆ ಆಗಿರುವ ಪ್ರಗತಿ ಶೇ.50 ಮಾತ್ರ. ವಿಸ್ತರಿಸಿದ ನಾಲ್ಕು ಮಾರ್ಗಗಳ ಪೈಕಿ ಕೆಂಗೇರಿ ಮಾರ್ಗ ಕಾಮಗಾರಿ ವೇಗವಾಗಿ ಸಾಗುತ್ತಿತ್ತು. ಆದರೆ, ಒಂದೆರಡು ತಿಂಗಳಿಂದ ಆಮೆ ಗತಿಗೆ ತಿರುಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಿಂದೆಯೂ ಆಗಿತ್ತು?: ಈ ಹಿಂದೆ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿದ್ದ ಕೋಸ್ಟಲ್ ಕಂಪೆನಿ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಬಿಎಂಆರ್‌ಸಿ ಮಧ್ಯಪ್ರವೇಶಿಸಿ, ನೇರವಾಗಿ ಉಪ ಗುತ್ತಿಗೆದಾರರಿಂದ ಕಾಮಗಾರಿ ಪೂರ್ಣಗೊಳಿಸಿತ್ತು.
ಪ್ರಧಾನ ಗುತ್ತಿಗೆದಾರರ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗುವ ಸುಳಿವು ಸಿಗುತ್ತಿದ್ದಂತೆ ಬಿಎಂಆರ್‌ಸಿ ಸ್ವತಃ ಮುಂದೆನಿಂತು, ಉಪ ಗುತ್ತಿಗೆದಾರರಿಗೆ ಬಿಎಂಆರ್‌ಸಿ ಹಣ ಪಾವತಿ ಮಾಡುತ್ತಿತ್ತು. ಅದಕ್ಕೆ ಪ್ರತಿಯಾಗಿ ನಿಗದಿತ ಅವಧಿಯಲ್ಲಿ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು. ನಂತರದ ಕಾಮಗಾರಿ ಚುರುಕುಗೊಂಡು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಎಂಜಿನಿಯರೊಬ್ಬರು ಮಾಹಿತಿ ನೀಡಿದರು.
ಮೈಸೂರು ರಸ್ತೆ-ಕೆಂಗೇರಿ ಮಾರ್ಗದ ಮೆಟ್ರೋ ಕಾಮಗಾರಿ ವಿಚಾರದಲ್ಲೂ ಬಿಎಂಆರ್‌ಸಿ ಈ ಹೆಜ್ಜೆ ಇಡುವ ಅವಶ್ಯಕತೆ ಇದೆ. ಇದರಿಂದ ಕಾಮಗಾರಿ ಮತ್ತೆ ಚುರುಕುಗೊಂಡು, ವರ್ಷಾಂತ್ಯದ ಒಳಗೆ ಪೂರ್ಣಗೊಳ್ಳಲು ಸಾಧ್ಯವಿದೆ ಎಂದೂ ಅವರು ಅಭಿಪ್ರಾಯಪಟ್ಟರು. ಅಷ್ಟಕ್ಕೂ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿ, ಸಿಡಿಆರ್ ವ್ಯಾಪ್ತಿಗೆ ಒಳಪಟ್ಟಿರುವ ಕಂಪೆನಿಗಳು ದೇಶದಲ್ಲಿ ಅನೇಕ. ತದನಂತರ ಚೇತರಿಸಿಕೊಂಡಿದ್ದೂ ಇದೆ.
ವಿಸ್ತರಿಸಿದ ಮಾರ್ಗ ರೀಚ್-2: ಮೈಸೂರು ರಸ್ತೆ- ಕೆಂಗೇರಿ
ಡಿಪೋ ಸೇರಿ ಮಾರ್ಗದ ಉದ್ದ: 8.8 ಕಿ.ಮೀ. (ಅಂದಾಜು)
ರೀಚ್-2 ಎ ಮಾರ್ಗ: 3.945 ಕಿ.ಮೀ. (ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ ನಿಲ್ದಾಣ)
ಗುತ್ತಿಗೆದಾರ: ಐಎಲ್ ಆಂಡ್ ಎಫ್ಎಸ್ ಎಂಜಿನಿಯರಿಂಗ್ ಕನ್‌ಸ್ಟ್ರಕ್ಷನ್ ಕಂ. ಲಿ.,
ಯೋಜನಾ ವೆಚ್ಚ: 327 ಕೋಟಿ ರೂ.
ರೀಚ್-2 ಬಿ ಮಾರ್ಗ: 4.869 ಕಿ.ಮೀ. (ಮೈಲಸಂದ್ರ ನಿಲ್ದಾಣ, ಕೆಂಗೇರಿ ನಿಲ್ದಾಣ, ಚಲ್ಲಘಟ್ಟ ಡಿಪೋ ಆರಂಭದವರೆಗೆ)
ಗುತ್ತಿಗೆದಾರ: ಮೆ: ಸೋಮ ಎಂಟರ್‌ಪ್ರೈಸಸ್ ಲಿ.,
ಯೋಜನ ವೆಚ್ಚ: 332 ಕೋಟಿ ರೂ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.