ಮತ್ತೆ ಚಿಗುರಿದ ಅನುಭವ ಮಂಟಪ ಕನಸು
Team Udayavani, Feb 25, 2018, 12:30 PM IST
ಬೀದರ: ಬಹು ನಿರೀಕ್ಷಿತ ಅನುಭವ ಮಂಟಪದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸದೇ ಬಸವಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ಸಿದ್ದರಾಮಯ್ಯ, ಬಜೆಟ್ ಮೇಲಿನ ಚರ್ಚೆ ವೇಳೆ ಅನುದಾನ ಒದಗಿಸಲು ಬದ್ಧ ಎಂದು ಘೋಷಿಸಿದ್ದಾರೆ. ಬಜೆಟ್‌ನಲ್ಲಿ 100 ಕೋಟಿ ರೂ. ತೆಗೆದಿಡುವ ಭರವಸೆ ನೀಡಿರುವುದು ಅನುಭವ ಮಂಟಪ ನಿರ್ಮಾಣದ ಕನಸಿಗೆ ರೆಕ್ಕೆ ಬಂದಂತಾಗಿದೆ.
ಬಸವಕಲ್ಯಾಣದಲ್ಲಿ ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿಸಿದ್ದ ಅನುಭವ ಮಂಟಪ ಒಂದು ಸಾಮಾಜಿಕ, ಧಾರ್ಮಿಕ ಸಂಸತ್ತು. ಇದು ವಿಶ್ವದ ಮೊದಲ ಪಾರ್ಲಿಮೆಂಟ್ ಎಂದೆನಿಸಿಕೊಂಡಿದೆ. ಬಸವಾದಿ ಪ್ರಮಥರ ಚಿಂತನೆಗಳ ಪ್ರಚಾರ, ಪ್ರಸಾರದ ಉದ್ದೇಶದಿಂದ ರಾಜ್ಯ ಸರ್ಕಾರ ಅನುಭವ ಮಂಟಪದ ಪುನರ್ ನಿರ್ಮಾಣಕ್ಕೆ ನಿರ್ಧರಿಸಿ, ಹಿರಿಯ ವಿದ್ವಾಂಸ ಗೋ.ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿತ್ತು. ಸಮಿತಿಯು 600 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡಬೇಕೆಂದು ಇತ್ತೀಚೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
ಮೂಡಿದ ಹೊಸ ಭರವಸೆ: ಅನುಭವ ಮಂಟಪ ರಚನೆಗೆ ಸಂಬಂಧಿತ ನೀಲನಕ್ಷೆಯೂ ಸಿದ್ಧವಾಗಿತ್ತು. ಆದರೆ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಇದಕ್ಕೆ ಅನುದಾನ ನೀಡುವ ವಿಷಯವೇ ಪ್ರಸ್ತಾಪವಾಗಿರಲಿಲ್ಲ. ಇದು ಬಸವಾನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೂ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅನುದಾನ ಮೀಸಲಿಡುವಲ್ಲಿ ಯಶಸ್ವಿಯಾಗಿದ್ದಾರೆ. 100
ಕೋಟಿ ರೂ. ಅನುದಾನ ಒದಗಿಸಲಾಗುವುದು ಮತ್ತು ಬಜೆಟ್ ಅಂಗೀಕಾರದ ವೇಳೆ ಈ ಅಂಶವನ್ನು ಅಡಕ ಮಾಡಲಾಗಿದೆ
ಎಂದು ಬಿಕೆಡಿಬಿ ಅಧ್ಯಕ್ಷರೂ ಆಗಿರುವ ಸಿಎಂ ಸ್ಪಷ್ಟಪಡಿಸಿರುವುದು ಹೊಸ ಭರವಸೆ ಮೂಡಿಸಿದೆ. ಬಸವ ಕಲ್ಯಾಣದ ತ್ರಿಪುರಾಂತರ ಕೆರೆ ದಂಡೆಯ 25 ಎಕರೆ ಜಾಗದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡಬೇಕು ಮತ್ತು ಆ ಪ್ರದೇಶವನ್ನು “ಮಹಾಮನೆ ಕ್ಷೇತ್ರ’
ಎಂದು ಕರೆಯಬೇಕು. ಅನುಭವ ಮಂಟಪ ಅಸ್ತಿತ್ವದ ಬಗ್ಗೆ ಯಾವುದೇ ಐತಿಹಾಸಿಕ ದಾಖಲೆಗಳು ದೊರೆಯದ ಹಿನ್ನೆಲೆಯಲ್ಲಿ ಹೊಸ ಕಟ್ಟಡವನ್ನು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ (ಸಂಪೂರ್ಣ ಶಿಲೆ) ಬೃಹತ್ ಕಟ್ಟಡ ನಿರ್ಮಾಣ ಮಾಡಬೇಕೆಂದು ತಜ್ಞರ ಸಮಿತಿಯು ತನ್ನ ವರದಿಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದೆ. ಬೆಂಗಳೂರಿನ ನೇಚರ್ ಆ್ಯಂಡ್ ನರ್ಚರ್ ಎಂಟರ್ ಪ್ರ„ಸಸ್ ಸಂಸ್ಥೆ ಕಟ್ಟಡದ ವಿನ್ಯಾಸ
ರೂಪಿಸಿದೆ.
ಹೀಗಿರಲಿದೆ ಅನುಭವ ಮಂಟಪ: ವೃತ್ತಾಕಾರದ ಸುಮಾರು 182 ಅಡಿ ಎತ್ತರವಿರುವ 6 ಅಂತಸ್ತುಗಳ ಈ ಕಟ್ಟಡದಲ್ಲಿ ಸಾಂಸ್ಕೃತಿಕ, ಸಂಶೋಧನೆ, ಪ್ರಚಾರ, ಪ್ರಸಾರದ ಆರು ವಿಭಾಗಗಳನ್ನು ಆರಂಭಿಸಿ, ಶರಣರ ಚಿಂತನೆಗೆ ಸಂಬಂಧಿಸಿದ ಮಂಟಪಗಳು, ಅನುಷ್ಠಾನ ಗವಿಗಳು, ವಚನಗಳು, ಕೊರೆದ ಕಂಬಗಳು, ಧ್ವನಿ ಬೆಳಕಿನ ವಚನ ಸಂಗೀತ, ಭಿತ್ತಿ ಚಿತ್ರಗಳು, ಶರಣರ ಉಬ್ಬು ಚಿತ್ರಗಳನ್ನು ಬಿಡಿಸಲಾಗುವುದು.
ಲಿಂಗಾಕಾರದ ಗೋಪುರದ ಕಟ್ಟಡವುಳ್ಳ ಮೊದಲ ಅಂತಸ್ತಿನಲ್ಲಿ 770 ಅಮರ ಗಣಂಗಳ ಸಂಕೇತವಾಗಿ 770 ಆಸನಗಳ ಸಭಾಭವನ, ಕೆಳ ಅಂತಸ್ತಿನಲ್ಲಿ ಒಟ್ಟಿಗೆ 1500 ಜನ ಪ್ರಸಾದಕ್ಕೆ ಅವಕಾಶವಿರುವ ದಾಸೋಹ ಭವನ ನಿರ್ಮಾಣ. ಇದರ ಜತೆಗೆ ಅತ್ಯಾಧುನಿಕ ಗ್ರಂಥಾಲಯ, ಯೋಗ- ಧ್ಯಾನ ಕೇಂದ್ರ, ನಿರ್ಮಾಣ ಮಾಡಲು ಶಿಫಾರಸ್ಸು ಮಾಡಲಾಗಿದೆ ಕೆಲಸ ಶೀಘ್ರ ಆರಂಭಗೊಳ್ಳಲಿ 600 ಕೋಟಿ ರೂ.ಗಳ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಶಿಫಾರಸ್ಸು ಮಾಡಲಾಗಿದೆ. ಇದು ಕೇವಲ ಧಾರ್ಮಿಕ ಕೇಂದ್ರ ಆಗದೆ, ವಿಶ್ವ ಮಟ್ಟದ ಪ್ರವಾಸಿ ತಾಣವಾಗಬೇಕು. ಕಟ್ಟಡ ನಿರ್ಮಾಣಕ್ಕೆ ನಾಲ್ಕೈದು ವರ್ಷ ಆಗುವುದರಿಂದ ಪ್ರತಿವರ್ಷ 100 ಕೊಟಿ ರೂ. ಬಜೆಟ್‌ನಲ್ಲಿ ತೆಗೆದಿಡಲು ಸರ್ಕಾರಕ್ಕೆ ಮನವಿ ಮಾಡಿದ್ದೇ. ಅದರಂತೆ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಒದಗಿಸಿರುವುದು ಖುಷಿ ಆಗಿದೆ. ಶೀಘ್ರ ಶಂಕು ಸ್ಥಾಪನೆ ನೆರವೇರಿಸಿ ಮಹತ್ವದ ಕಾರ್ಯ ಆರಂಭಿಸುತ್ತಾರೆಂಬ ವಿಶ್ವಾಸ ಇದೆ. ಈ ಬಗ್ಗೆ ಸಿಎಂಗೆ ಶುಕ್ರವಾರ ಪತ್ರವೂ ಬರೆದಿದ್ದೇನೆ. ಮಂಟಪ ಇಂಥದ್ದೇ ಸ್ಥಳದಲ್ಲಿತ್ತು ಎಂಬುದಕ್ಕೆ ನಿರ್ದಿಷ್ಟ ದಾಖಲೆಗಳಿಲ್ಲ. ಕೆರೆ ದಂಡೆ ಮೇಲೆ ಇರುವ ಸಾಧ್ಯತೆ ಬಗ್ಗೆ ದಿ| ಕಲುಬುರ್ಗಿ ಇನ್ನಿತರ ವಿದ್ವಾಂಸರು ಅಭಿಪ್ರಾಯವೂ ಆಗಿತ್ತು. ಈ ಸ್ಥಳವೇ ಸೂಕ್ತ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಗೋ.ರು. ಚನ್ನಬಸಪ್ಪ, ಅಧ್ಯಕ್ಷರು, ತಜ್ಞರ ಸಮಿತಿ
ಅನುಭವ ಮಂಟಪ ಮೂಲ ಸ್ಥಳದಲ್ಲೇ ಸ್ಥಾಪಿಸಲಿ
ಬೀದರ: ಬಸವಕಲ್ಯಾಣದಲ್ಲಿ ಬಸವಣ್ಣ ಸ್ಥಾಪಿಸಿದ್ದ ಅನುಭವ ಮಂಟಪದ ಮೂಲ ಸ್ಥಳವನ್ನು ಸಂಶೋಧನೆ ಮೂಲಕ ಹುಡುಕಿ ಆ ಸ್ಥಳದಲ್ಲೇ ಸರ್ಕಾರದ ಉದ್ದೇಶಿತ ನೂತನ ಅನುಭವ ಮಂಟಪ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿರುವ ದೆಹಲಿಯ ಜಗದ್ಗುರು ಶ್ರೀ ಚನ್ನಬಸವಾನಂದ ಸ್ವಾಮೀಜಿ, ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಲ್ಕಿಯ ಲಿಂ| ಚನ್ನಬಸವ ಪಟ್ಟದ್ದೇವರು ಹಿಂದೆ ಅನುಭವ ಮಂಟಪ ಸಂಸ್ಥೆಯನ್ನು ಕಟ್ಟಿದ್ದಾರೆ. ಶ್ರೀಗಳ ಬಗ್ಗೆ ಅಪಾರ ಅಭಿಮಾನ ಇದೆ. ಆದರೆ, ಮೂಲ ಅನುಭವ ಮಂಟಪ ಬೇರೆ ಸ್ಥಳದಲ್ಲಿದೆ. ಪರುಷ ಕಟ್ಟೆ, ಬಸವ ಧರ್ಮ ಪೀಠದ ಹಿಂಬದಿಯ ಸ್ಥಳದಲ್ಲಿತ್ತು ಎಂಬುದು ಶರಣರ ಮತ್ತು ಬಸವಕಲ್ಯಾಣ ನಿವಾಸಿಗಳ ಅಭಿಪ್ರಾಯ. ಹಾಗಾಗಿ ಈ ಬಗ್ಗೆ ಮೂಲ ಸ್ಥಳವನ್ನು ಗುರುತಿಸಿ ಜನರಲ್ಲಿ ಮೂಡಿರುವ ಸಂಶಯವನ್ನು ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅನುಭವ ಮಂಟಪ ಸ್ಥಳದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂಬ ತಜ್ಞರ ಸಮಿತಿಯ ಹೇಳಿಕೆ ಒಪ್ಪುವಂಥದಲ್ಲ. ಕಲ್ಯಾಣದಲ್ಲಿ ಹಲವು ಶರಣರ ಮೂಲ ಸ್ಥಳ ಸಿಕ್ಕಿದೆ. ಕೆಲವೇ ವ್ಯಕ್ತಿಗಳು ನಿರ್ಧಾರ ಮಾಡುವುದು ಬೇಡ. ಸಂಶೋಧನೆ ಕಾರ್ಯ ಆಗಬೇಕಷ್ಟೇ. ಕೇಂದ್ರ ಪುರಾತತ್ವ ಇಲಾಖೆಯ ಸಹಾಯ ಪಡೆಯಲಿ. ಇದು ಸಾವಿರಾರು ಜನರ ಅಭಿಪ್ರಾಯವಾಗಿದೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ
“ಮೂಲ ಅನುಭವ ಮಂಟಪ ಹೋರಾಟ ಸಮಿತಿ’ ಹೆಸರಿನಲ್ಲಿ ಸರ್ಕಾರ, ರಾಜಕೀಯ ಪಕ್ಷಗಳಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕೂ ಓಗೊಡದಿದ್ದರೆ ಕೋರ್ಟ್‌ಗೆ ಮೋರೆ ಹೋಗಲಾಗುವುದು ಎಂದು ಹೇಳಿದರು.
ಅನುಭವ ಮಂಟಪ ಅಂತಾರಾಷ್ಟ್ರೀಯ ಮಟ್ಟದ ಧಾರ್ಮಿಕ ಕೇಂದ್ರವಾಗಿ ಬೆಳೆಯಬೇಕೆಂಬುದು ನಮ್ಮ ಉದ್ದೇಶ. ಎಲ್ಲ ಜಾತಿಯ ಮಠಾಧೀಶರು, ಪ್ರತಿನಿಧಿಗಳು ಅದರ ಸದಸ್ಯರಾಗಬೇಕು. ಎಲ್ಲ ಸಮಾಜದ ಮಠಾಧೀಶರು ವರ್ಷಕ್ಕೊಮ್ಮೆ ಅಲ್ಲಿ ಸೇರುವಂತಾಗಬೇಕು ಎಂದು ಶ್ರೀ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.