ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ನಿರ್ಮಾಣವಾಗಲಿದೆ ವೃಕ್ಷ ಉದ್ಯಾನವನ
Team Udayavani, Feb 26, 2018, 11:32 AM IST
ಪುಂಜಾಲಕಟ್ಟೆ: ಸಚಿವ ಬಿ. ರಮಾನಾಥ ರೈ ಅವರು ಅರಣ್ಯ, ಪರಿಸರ ಸಚಿವರಾದ ಬಳಿಕ ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಅದಕ್ಕೆ ಮುಕುಟಪ್ರಾಯವಾಗಿ ತಮ್ಮ ಕ್ಷೇತ್ರದಲ್ಲಿ ಬೃಹತ್ ವೃಕ್ಷ ಉದ್ಯಾನವನ ನಿರ್ಮಾಣದ ಕನಸು ಹೊಂದಿದ್ದಾರೆ.
ಪಶ್ಚಿಮ ಘಟ್ಟ ವ್ಯಾಪ್ತಿಯ ಸಸ್ಯ ಸಂಕುಲ ಹಾಗೂ ತುಳುನಾಡಿನ ಗ್ರಾಮೀಣ ಜೀವನ ಶೈಲಿಯನ್ನು ಪರಿಚಯಿಸುವ ವೃಕ್ಷ ಉದ್ಯಾನವನ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಆಲಂಪುರಿಯಲ್ಲಿ ನಿರ್ಮಾಣ ಗೊಳ್ಳಲಿದೆ. ಕೊಡ್ಯಮಲೆ ಅರಣ್ಯ ತಪ್ಪಲಿನಲ್ಲಿರುವ 23.85 ಎಕ್ರೆ ಜಾಗ ವನ್ನು ಉದ್ಯಾನವನ ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ. ವೃಕ್ಷಮಾತೆ ಡಾ| ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ಈ ವೃಕ್ಷ ಉದ್ಯಾನವನ ನಿರ್ಮಾಣಗೊಳ್ಳಲಿದ್ದು, ಜನಾಕರ್ಷಣೆ ಪಡೆಯಲಿದೆ.
ಏನಿದು ವೃಕ್ಷ ಉದ್ಯಾನವನ?
ಅರಣ್ಯ ಇಲಾಖೆಯ ವತಿಯಿಂದ ಈ ವೃಕ್ಷ ಉದ್ಯಾನವನ ನಿರ್ಮಾಣಗೊಳ್ಳಲಿದೆ. ಆರಂಭಿಕ ಹಂತದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಪ್ರದೇಶ ಸ್ವಚ್ಛತಾ ಕಾರ್ಯ, ತಂತಿ ಬೇಲಿ ನಿರ್ಮಾಣ, ಕೊಳವೆ ಬಾವಿ ಅಳವಡಿಕೆ ಮೊದಲಾದ ಕಾರ್ಯಗಳು ನಡೆಯಲಿವೆ. ಆಕರ್ಷಕ ಪ್ರವೇಶ ದ್ವಾರ, ಟ್ರೀ ಪಾರ್ಕನ್ನು ಕುಳಿತು ವೀಕ್ಷಿಸಲು ಅನುಕೂಲವಾಗುವ ಪ್ಯಾರಗೋಲ, ಮಕ್ಕಳ ಆಟಿಕೆ ಕೇಂದ್ರ, ವಾಯು ವಿಹಾರಕ್ಕಾಗಿ ವಾಕ್ ಪಾತ್, ಅರಳೀಕಟ್ಟೆ ನಿರ್ಮಾಣ, ಸಿಮೆಂಟ್ ಬೆಂಚ್, ಹಣ್ಣಿನ ವನ, ಔಷಧ ವನ, ನವಗ್ರಹ ವನ, ನಕ್ಷತ್ರ ವನ, ರಾಶಿ ವನ, ಸಾರ್ವಜನಿಕರು ಸವಿ ನೆನಪಿಗಾಗಿ ಗಿಡ ನೆಡುವ ಸ್ಮೃತಿವನ ನಿರ್ಮಾಣಗೊಳ್ಳಲಿದೆ.
ಇಲ್ಲಿರುವ ಇಳಿ ಜಾರು ಪ್ರದೇಶಗಳಲ್ಲಿ ಮಣ್ಣಿನ ಸಂರಕ್ಷಣೆಗಾಗಿ ಇಂಗುಗುಂಡಿ, ಗಲ್ಲಿ ಚೆಕ್ಸ್, ಡ್ಯಾಂ ನಿರ್ಮಾಣ, ಸುತ್ತು ಪರಿವೀಕ್ಷಣ ಪಥ ನಿರ್ಮಾಣಗೊಳ್ಳಲಿವೆ. ನೇತ್ರಾವತಿ ನದಿಗೆ ಸೇರುವ ಕಿರು ತೊರೆಗಳು ಇಲ್ಲಿದ್ದು, ಅವುಗಳನ್ನು ಬಳಸಿ ಉದ್ಯಾನವನವನ್ನು ವಿಶಿಷ್ಟವಾಗಿ ರೂಪಿಸಲು ನಿರ್ಧರಿಸಲಾಗಿದೆ.
ಗ್ರಾಮೀಣ ಸೊಗಡಿನ ಅನಾವರಣ
ವೃಕ್ಷ ಉದ್ಯಾನವನದೊಳಗೆ ತುಳು ನಾಡಿನ ಜಾನಪದ ವೈಭವವನ್ನು ಪ್ರತಿಬಿಂಬಿ ಸುವ ಕಲಾಕೃತಿಗಳು ಗಮನ ಸೆಳೆಯಲಿವೆ. ಕಂಬಳದ ಕೋಣ, ಭೂತದ ಕೋಲ, ಎಣ್ಣೆಯ ಗಾಣ, ಮೀನು ಮಾರುವ ಮಹಿಳೆಯರ ಗುಂಪು, ಬುಟ್ಟಿ ತಯಾರಿಸುವ ಅರಣ್ಯವಾಸಿಗಳು, ದೋಣಿಯಲ್ಲಿ ಮೀನು ಹಿಡಿಯುವ ದೃಶ್ಯ, ಏತದಲ್ಲಿ ನೀರು ಎತ್ತುವುದು, ದನದ ಹಟ್ಟಿ, ಯಕ್ಷಗಾನ, ಕಾಡುಪ್ರಾಣಿಗಳು ಮೊದಲಾದ ಕಲಾಕೃತಿಗಳು ವೃಕ್ಷ ಉದ್ಯಾನವನಕ್ಕೆ ವಿಶೇಷ ಆಕರ್ಷಣೆ ನೀಡಲಿದೆ. ಪರಿಸರ ಸಂಬಂಧಿ ಫಲಕಗಳು, ಸೂಚನ ಫಲಕಗಳು, ನಾಮಫಲಕಗಳು, ಸಣ್ಣ ದ್ವಾರಗಳು, ಕಲ್ಲಿನ ಬೆಂಚುಗಳು, ರಾಣಿ ಅಬ್ಬಕ್ಕ ಕಲಾಕೃತಿ ನಿರ್ಮಾಣಗೊಳ್ಳಲಿವೆ.
ಪ್ರವಾಸಿ ತಾಣ
ಪ್ರಕೃತಿಯ ರಮಣೀಯ ಪರ್ವತ ಕ್ಷೇತ್ರ, ಭೂ ಕೈಲಾಸವೆಂದು ಪ್ರತೀತಿಯ ಕಾರಿಂಜೇಶ್ವರ ಕ್ಷೇತ್ರದಿಂದ ಕೇವಲ 2 ಕಿ.ಮೀ. ದೂರದಲ್ಲಿದೆ. ಕಾರಿಂಜದಲ್ಲಿ ಅರಣ್ಯ ಇಲಾಖೆ ವತಿಯಿಂದ ದೈವೀವನ, ಸ್ವಸ್ಥ ಪಥ ಮೊದಲಾದವುಗಳನ್ನು ನಿರ್ಮಿಸಿ ಪ್ರೇಕ್ಷಣೀಯ ಸ್ಥಳವನ್ನಾಗಿಸಿದೆ. ಇಲ್ಲೇ ಪಕ್ಕದಲ್ಲಿ ವಗ್ಗದ ಬಳಿಯಿರುವ ಆಲಂಪುರಿಯಲ್ಲಿ ವೃಕ್ಷ ಉದ್ಯಾನ ವನ ನಿರ್ಮಾಣಗೊಂಡರೆ ಈ ಪ್ರದೇಶ ಪ್ರವಾಸಿ ತಾಣವಾಗಿ ಜಿಲ್ಲೆಯ ಗಮನ ಸೆಳೆಯಲಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ತೆರಳುವ ಯಾತ್ರಿಕರನ್ನೂ ಇದು ಆಕರ್ಷಿಸಬಲ್ಲದು.
ಸಚಿವ ರಮಾನಾಥ ರೈ ಕನಸು
ಬಿ.ಸಿ. ರೋಡ್‌ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ತ್ಯಾಜ್ಯ ರಾಶಿ ತುಂಬಿದ್ದ ಸ್ಥಳ ಜೋಡುಮಾರ್ಗ ಉದ್ಯಾನವನವಾಗಿ ಮಾರ್ಪಟ್ಟಿದೆ. ಬಂಟ್ವಾಳ ನಿರೀಕ್ಷಣ ಮಂದಿರದ ಬಳಿ ಕುರುಚಲು ಗಿಡಗಳಿದ್ದ ಸ್ಥಳ ಈಗ ಸುಂದರ ಉದ್ಯಾನವನವಾಗಿ ಪರಿವರ್ತನೆ ಗೊಂಡಿದೆ. ಇದೀಗ ನೈಸರ್ಗಿಕ ಸೌಂದ ರ್ಯದ ಆಲಂಪುರಿಯಲ್ಲಿಯೂ ವಿಶಿಷ್ಟ ಮಾದರಿಯ ಉದ್ಯಾನವನ ರೂಪುಗೊಳ್ಳ ಲಿದೆ. ಅರಣ್ಯ ಸಚಿವ ಬಿ. ರಮಾನಾಥ ರೈ ಅವರ ಕನಸಿನ ಯೋಜನೆಗಳಾಗಿ ಮೊದಲ 2 ಉದ್ಯಾನವನಗಳು ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದರೆ, ವೃಕ್ಷ ಉದ್ಯಾನವನ ಗ್ರಾಮೀಣ ಭಾಗದಲ್ಲಿ ಧರ್ಮಸ್ಥಳ-ಬಂಟ್ವಾಳ ಸಂಪರ್ಕ ರಾ.ಹೆ. ಬಳಿ ನಿರ್ಮಾಣಗೊಳ್ಳಲಿದೆ. ಜಮಖಂಡಿ, ಬೆಳಗಾವಿಯಲ್ಲಿ ನಿರ್ಮಾಣವಾಗಿರುವ ಸುಂದರ ಸಸ್ಯೋದ್ಯಾನಗಳ ಮಾದರಿ ಯಲ್ಲೇ ಈ ವೃಕ್ಷ ಉದ್ಯಾನವನವೂ ನಿರ್ಮಾಣಗೊಳ್ಳಬೇಕೆಂಬುದು ಸಚಿವ ರೈ ಅವರ ಆಶಯವಾಗಿದೆ.
ರತ್ನದೇವ್ ಪುಂಜಾಲಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.