ದುಷ್ಟ ದನಿಗಳ ಹುಟ್ಟಡಗಿಸಿ
Team Udayavani, Feb 26, 2018, 12:02 PM IST
ಬೆಂಗಳೂರು: “ಮಠ-ಮಂದಿರಗಳ ಮೇಲೆ ದಾಳಿ ಮಾಡುವ ಪ್ರಯತ್ನ ಹೆಚ್ಚಾಗಿದ್ದು, ಈ ಹುನ್ನಾರದ ವಿರುದ್ಧ ಹೋರಾಡುವ ಮೂಲಕ ನಮ್ಮ ರಕ್ತದ ಗುಣ ಉಳಿಸಿಕೊಳ್ಳಬೇಕು. ದುಷ್ಟರ ಪರ ಕೇಳಿಬರುತ್ತಿರುವ ದನಿಗಳ ಹುಟ್ಟಡಗಿಸಬೇಕು,’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ವಿಪ್ರ ಸಮುದಾಯಕ್ಕೆ ಕರೆ ನೀಡಿದರು.
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಮ್ಮಿಕೊಂಡಿದ್ದ “ಬೆಂಗಳೂರು ಮಹಾನಗರ ವಿಪ್ರರ ಬೃಹತ್ ಸಮಾವೇಶ-2018’ರ ಸಮಾರೋಪದಲ್ಲಿ ಅವರು ಮಾತನಾಡಿದರು.
ಮಠ-ಮಂದಿರಗಳು ನಮ್ಮ ನಂಬಿಕೆ, ಅಸ್ತಿತ್ವದ ಪ್ರಶ್ನೆಗಳಾಗಿವೆ. ಅವುಗಳ ಮೇಲೆಯೇ ದಾಳಿ ಮಾಡುವ ಪ್ರಯತ್ನ ನಡೆದಿದೆ. ಈ ಷಡ್ಯಂತ್ರ ವಿರುದ್ಧದ ಹೋರಾಟದಲ್ಲಿ ನಾನೇ ಮುಂಚೂಣಿಯಲ್ಲಿರುತ್ತೇನೆ. ಬೇರೆ ಮತ-ಪಂಥಗಳ ಬಗ್ಗೆ ಈ ರೀತಿಯ ನಿಲುವುಗಳನ್ನು ಯಾವ ರಾಜಕೀಯ ಪಕ್ಷ ಅಥವಾ ಸರ್ಕಾರವೂ ತೆಗೆದುಕೊಳ್ಳುವುದಿಲ್ಲ. ಒಬ್ಬ ಕೇಂದ್ರ ಸಚಿವನಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದರು.
ಒಂದು ಕಣ್ಣಿಗೆ ಬೆಣ್ಣೆ; ಮತ್ತೂಂದು ಕಣ್ಣಿಗೆ ಸುಣ್ಣ: ಸಾಮಾಜಿಕ ನ್ಯಾಯ ಮತ್ತು ಸರ್ವಧರ್ಮ ಸಮಭಾವ ಕೇವಲ ಹಿಂದೂ ಧರ್ಮಕ್ಕೆ ಅನ್ವಯಿಸುವುದೇ? ಬೇರೆ ಮತ-ಧರ್ಮಗಳಿಗೆ ಅನ್ವಯವಾಗುವುದಿಲ್ಲವೇ? ನಮ್ಮ ಸಮಾಜದ ಆಚಾರ-ವಿಚಾರಗಳು, ನಂಬಿಕೆಗಳು ನಿಮಗೆ ಮೂಢನಂಬಿಕೆಗಳಾಗಿ ಕಾಣುತ್ತವೆ. ಆದರೆ, ಬೇರೆ ಧರ್ಮದ ಆಚಾರ-ವಿಚಾರಗಳು ಅಲ್ಲವೇ ಎಂದು ಪ್ರಶ್ನಿಸಿದ ಕೇಂದ್ರ ಸಚಿವ, ಸುಧಾರಣೆ ತರುವುದಾದರೆ ಎಲ್ಲ ಮತ-ಸಂಪ್ರದಾಯಗಳಲ್ಲೂ ತರಬೇಕು. ಒಂದು ಕಣ್ಣಿಗೆ ಬೆಣ್ಣೆ ಮತ್ತೂಂದು ಕಣ್ಣಿಗೆ ಸುಣ್ಣ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಸಮಾನತೆ ದೊರಕಿಸಿಕೊಡುವ ನಿಟ್ಟಿನಲ್ಲಿ “ತಲಾಕ್’ ರದ್ದುಗೊಳಿಸುವ ವಿಚಾರದಲ್ಲೂ ಇಂದು ವಿರೋಧದ ದನಿಗಳು ಕೇಳಿಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇತ್ತೀಚಿನ ದಿನಗಳಲ್ಲಿ ನಕ್ಸಲ್, ಉಗ್ರ ಕಸಬ್, ಅಫjಲ್ ಗುರು, ಪಾಕಿಸ್ತಾನದ ಪರವಾದ ದನಿಗಳು ಕೇಳಿಬರುತ್ತಿವೆ. ಈ ದನಿಗಳ ಹುಟ್ಟಡಗಿಸಬೇಕು. ಇದು ನಮ್ಮ ಆದ್ಯಕರ್ತವ್ಯ ಕೂಡ ಎಂದು ಹೇಳಿದರು.
“ಬ್ರಾಹ್ಮಣ ನಿಗಮ ಸ್ಥಾಪನೆ ಆಗಬೇಕು. ಅಷ್ಟೇ ಅಲ್ಲ, ಅದಕ್ಕೆ ಅಖೀಲ ಭಾರತ ಮಟ್ಟದ ಚೌಕಟ್ಟು ಕಲ್ಪಿಸಬೇಕು. ಈ ಸಂಬಂಧ ಬ್ರಾಹ್ಮಣ ಮಹಾಸಭಾದ ನಿಯೋಗ ದೆಹಲಿಗೆ ಆಗಮಿಸಿದರೆ, ಅದರ ನೇತೃತ್ವ ಸ್ವತಃ ನಾನೇ ವಹಿಸುತ್ತೇನೆ. ಬ್ರಾಹ್ಮಣರ ಸಮುದಾಯ ಭವನಕ್ಕೆ ಸಂಸದರ ನಿಧಿಯಿಂದ 25 ಲಕ್ಷ ರೂ. ನೀಡುತ್ತೇವೆ,’ ಎಂದರು.
ಯಾವ ಸರ್ಕಾರ ಬಂದ್ರೂ ಬಿಡಲ್ಲ: ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ಯಾವುದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಮಠ-ಮಂದಿರಗಳ ಸ್ವಾಯತ್ತತೆಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ಅಲ್ಲದೆ, ಬ್ರಾಹ್ಮಣರ ಸಮುದಾಯ ಭವನಕ್ಕೆ ಶಾಸಕರ ನಿಧಿಯಿಂದ 25 ಲಕ್ಷ ರೂ. ನೀಡುವುದಾಗಿ ಹೇಳಿದರು. ಸಚಿವ ಎಂ. ಕೃಷ್ಣಪ್ಪ, ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಡಾ.ಅಶ್ವತ್ಥನಾರಾಯಣ, ರವಿ ಸುಬ್ರಹ್ಮಣ್ಯ, ಮಾಜಿ ಸಚಿವ ರಾಮದಾಸ್, ಉದ್ಯಮಿಗಳಾದ ಯು.ಬಿ. ವೆಂಕಟೇಶ್, ಸದಾನಂದ ಮಯ್ಯ ಮಾತನಾಡಿದರು.
ನೀವು ಹೇಳ್ಳೋದೆಲ್ಲಾ ಸುಳ್ಳು..!: ವಿಪ್ರ ಬೃಹತ್ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ, “ನಮ್ಮದು ನುಡಿದಂತೆ ನಡೆಯುವ ಸರ್ಕಾರ…’ ಘೋಷಣೆಗೆ ತೀವ್ರ ಆಕ್ಷೇಪ ವ್ಯಕ್ತವಾದ ಪ್ರಸಂಗ ನಡೆಯಿತು. ಬ್ರಾಹ್ಮಣರಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆ ಅಂಶವನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ನಮ್ಮದು ನುಡಿದಂತೆ ನಡೆವ ಸರ್ಕಾರವಾಗಿದ್ದರಿಂದ ನಂತರದ ದಿನಗಳಲ್ಲಿ ಅದನ್ನು ಜಾರಿಗೆ ತರಲಾಗುವುದು ಎಂದರು. ತಕ್ಷಣ ಸಮಾವೇಶದಲ್ಲಿದ್ದ ವಿಪ್ರರು, “ಇಲ್ಲ, ನೀವು ಹೇಳ್ಳೋದೆಲ್ಲಾ ಸುಳ್ಳು…’ ಎಂದು ಕೈ ಎತ್ತಿ ನಿರಾಕರಿಸಿದರು.
ರಾಜಕೀಯ ಬೆರೆಸಬೇಡಿ ಎಂಬ ಕೂಗು ಕೂಡ ಕೇಳಿಬಂತು. ಆಗ, “ನಾನು ರಾಜಕೀಯ ಬೆರೆಸುತ್ತಿಲ್ಲ. ಇರುವುದನ್ನು ಹೇಳುತ್ತಿದ್ದೇನೆ. ಪ್ರಣಾಳಿಕೆಯಲ್ಲಿ ಈ ಬೇಡಿಕೆಯನ್ನು ಸೇರಿಸುತ್ತೇನೆ’ ಎಂದು ಸಮಜಾಯಿಷಿ ನೀಡಿದರು. ಇದರಿಂದ ಒಂದೆರಡು ನಿಮಿಷ ಭಾಷಣಕ್ಕೂ ಅಡ್ಡಿಯಾಯಿತು. ನಂತರ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಮಧ್ಯಪ್ರವೇಶಿಸಿ ಸಭಿಕರನ್ನು ಸಮಾಧಾನಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.