ಜಗತ್ತಿನ ಏಕೈಕ ಡಾಂಬರ್ ಸರೋವರ
Team Udayavani, Mar 1, 2018, 12:05 PM IST
ಸರೋವರದ ನೀರು ನೀಲಿ, ಹಸಿರು ಬಣ್ಣದಿಂದ ಕಂಗೊಳಿಸುವುದು ಸಾಮಾನ್ಯ. ಆದರೆ, ಈ ಸರೋವರದ ನೀರಿನ ಬಣ್ಣ ಕಡುಗಪ್ಪು. ಅಷ್ಟಕ್ಕೂ, ಆ ಸರೋವರದಲ್ಲಿ ಇರುವುದು ನೀರೇ ಅಲ್ಲ!
ಪಶ್ಚಿಮ ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿರುವ ಪಿಂಕ್ ಲೇಕ್, ಕೆರೆಬಿಯನ್ ತೀರದ ಡೊಮಿನಿಕಾದಲ್ಲಿ “ಬಾಯ್ಲಿಂಗ್ ಲೇಕ್’ ಇದೆ. ಅಲ್ಲಿಯೇ ಅಚ್ಚರಿಗೆ ಕಾರಣವಾಗಿರುವ ಮತ್ತೂಂದು ಸರೋವರವಿದ್ದು, ಅದರ ನೀರು ಕಡುಕಪ್ಪು ಬಣ್ಣದಲ್ಲಿದೆ. ಇಲ್ಲಿ ಆಶ್ಚರ್ಯದ ಅಂಶವೆಂದರೆ ಅದು ನೀರು ಅಲ್ಲವೇ ಅಲ್ಲ, ಬದಲಿಗೆ ಡಾಂಬರು! ಕೆರೆಬಿಯನ್‌ನ ಟ್ರೆನಿಡಾಡ್ ಹಾಗೂ ಟೊಬಾಗೋದ ನೈಋತ್ಯ ಪ್ರಾಂತ್ಯದಲ್ಲಿರುವ ಈ ಸರೋವರ ತುಂಬಾ ವಿಚಿತ್ರವಾಗಿದ್ದು, ಸ್ಥಳೀಯರು ಇದನ್ನು ಜಗತ್ತಿನ ಎಂಟನೇ ಅದ್ಭುತ ಎನ್ನುವುದುಂಟು.
ನಿಸರ್ಗ ಸಹಜ ಸರೋವರ
ಈ ಸರೋವರವು ಬೃಹತ್ತಾದ ಅಂಡಾಕಾರದ ರಚನೆಯಂತಿದ್ದು, ಹತ್ತಿರದಿಂದ ನೋಡಿದರೆ ಕಡು ಜೇಡಿಮಣ್ಣಿನಿಂದ ರೂಪುಗೊಂಡಿರುವ ಕಂದಕಗಳ ಸಮೂಹದಂತೆ ಕಾಣಿಸುತ್ತದೆ. ಪ್ರಕೃತಿ ಸಹಜವಾಗಿ ಮೂಡಿರುವ ವಿಶ್ವದ ಏಕೈಕ ಡಾಂಬರು ಸರೋವರ ಇದಾಗಿದ್ದು, 46 ಲಕ್ಷ ಚದರ ಅಡಿ (106 ಎಕರೆ) ವಿಸ್ತೀರ್ಣ ಹಾಗೂ ಸುಮಾರು 250 ಅಡಿಗಳಷ್ಟು ಆಳವಿರುವ ಇದನ್ನು ನೋಡಲು ವಿಶ್ವದ ಮೂಲೆ ಮೂಲೆಯಿಂದ ಪ್ರವಾಸಿಗರು ಬರುತ್ತಾರೆ. ವಾರ್ಷಿಕ ಸರಾಸರಿ 20 ಸಾವಿರದಷ್ಟು ಪ್ರವಾಸಿಗರನ್ನು ಆಕರ್ಷಿಸುವ ಈ ಸರೋವರದಲ್ಲಿ ಡಾಂಬರಿನ ಗಣಿಗಾರಿಕೆಯನ್ನೂ ನಡೆಸಲಾಗುತ್ತಿದೆ.
16ನೇ ಶತಮಾನದ ಸರೋವರ
ಕ್ರಿ.ಶ.1595ರಲ್ಲಿ ದಂಡಯಾತ್ರೆ ಕೈಗೊಂಡಿದ್ದ ಸರ್.ವಾಲ್ಟರ್‌ರೆಲೈಯ್, ಈ ಸರೋವರವನ್ನು ಮೊದಲ ಬಾರಿಗೆ ಪತ್ತೆಹಚ್ಚಿದ. ಸೋರುತ್ತಿದ್ದ ತನ್ನ ನಾವೆಯ ತೂತುಗಳನ್ನು ಮುಚ್ಚಲು ಡಾಂಬರನ್ನು ಬಳಸಿ ಯಶಸ್ವಿಯಾಗಿದ್ದನಾತ.
ವೈಜ್ಞಾನಿಕ ಕಾರಣ
ಭೂಗರ್ಭದಲ್ಲಿನ ರಾಳದಲ್ಲಿ ಮೇಲ್ಪದರವು ಕೆಳಪದರದ ಕಡೆಗೆ ಚಲಿಸಲು ಪ್ರಾರಂಭಿಸಿದಾಗ ಅದರ ಮೇಲೆ ಉಂಟು ಮಾಡಬಹುದಾದ ಒತ್ತಡದಿಂದಾಗಿ ಈ ಸರೋವರವು ಸೃಷ್ಟಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಭಾಗದ ಭೂಪದರಗಳಲ್ಲಿ ಇರುವ ಸಂದುಗಳ ಮೂಲಕ ಭಾರವಾದ ವಸ್ತುಗಳನ್ನು ಕೆಳಕ್ಕೆ ಸರಿಸಿ ಹಗುರವಾದ ತೈಲವು ಹೊರಬಂದು, ಸೂರ್ಯನ ಶಾಖದಿಂದಾಗಿ ತೈಲವು ಆವಿಯಾಗಿ, ನಂತರ ಕೆಳಭಾಗದಲ್ಲಿ ಸೇರಿದ್ದ ಡಾಂಬರು ಹೊರಬರುತ್ತದಂತೆ. ಕಡಿಮೆ ಒತ್ತಡದ ಸಂದರ್ಭಗಳಲ್ಲಿ ಭೂಗರ್ಭದಲ್ಲಿನ ಬ್ಯಾಕ್ಟೀರಿಯಾಗಳು ಡಾಂಬರನ್ನು ಪೆಟ್ರೋಲಿಯಂ ಆಗಿ ಪರಿವರ್ತಿಸುತ್ತಿದ್ದವು ಎಂಬುದು ಸಂಶೋಧನೆಗಳಿಂದ ಧೃಡಪಟ್ಟಿದೆ.
ಮೊಗೆದಷ್ಟೂ ಡಾಂಬರು!
ಇಲ್ಲಿ ದೊರೆಯುವ ಡಾಂಬರು ಉತ್ತಮ ಗುಣಮಟ್ಟದ್ದೆಂದು ಹೆಸರು ಪಡೆದಿದೆ. ಇದುವರೆಗೂ ಸುಮಾರು 50ಕ್ಕೂ ಅಧಿಕ ರಾಷ್ಟ್ರಗಳ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಹಾಗೂ ವಿಮಾನ ನಿಲ್ದಾಣಗಳ ರನ್‌ವೇಗಳನ್ನು ಈ ಡಾಂಬರಿನಿಂದಲೇ ಸಿದ್ಧಪಡಿಸಲಾಗಿದೆ. ಅಲ್ಲದೆ ಇಂಗ್ಲೆಂಡ್‌ನ ಬಕಿಂಗ್ ಹ್ಯಾಂ ಅರಮನೆಯ ರಸ್ತೆ, ನ್ಯೂಯಾರ್ಕ್‌ನ ಲಾ..ಗಾರ್ಡಿಯಾ ವಿಮಾನ ನಿಲ್ದಾಣಕ್ಕೂ ಸಹ ಇಲ್ಲಿನ ಡಾಂಬರನ್ನು ಬಳಸಲಾಗಿದೆ. 1867ರಿಂದ ಪ್ರಾರಂಭಿಸಿ ಇದುವರೆಗೂ ಹತ್ತು ಮಿಲಿಯನ್ ಟನ್‌ಗಳಷ್ಟು ಡಾಂಬರನ್ನು ಹೊರತೆಗೆಯಲಾಗಿದ್ದು, ಇದೇ ಪ್ರಮಾಣದಲ್ಲಿ ಹೊರತೆಗೆದರೂ ಇನ್ನೂ 400 ವರ್ಷಗಳಷ್ಟು ಕಾಲ ಈ ಸರೋವರದಿಂದ ಡಾಂಬರು ಸಿಗುತ್ತದೆ.
ಸ್ನಾನದಿಂದ ಕೀಲುನೋವು ಮಾಯ!
ಸರೋವರದ ಡಾಂಬರಿನ ಮೇಲ್ಮೆ„ ಮೇಲೆ ಜನ ನಡೆದಾಡಬಹುದು. ಜೂನ್ ಹಾಗೂ ಡಿಸೆಂಬರ್ ಮಧ್ಯದಲ್ಲಿ ಮಳೆಗಾಲವಿದ್ದು ಆ ಸಮಯದಲ್ಲಿ ಇಲ್ಲಿನ ಸರೋವರಗಳಲ್ಲಿ ಗಂಧಕದ ಕೊಳಗಳು ನಿರ್ಮಾಣಗೊಳ್ಳುತ್ತವೆ. ಆ ದಿನಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರವಾಸಿಗರು ಇಲ್ಲಿನ ಕೊಳಗಳಲ್ಲಿ ಸ್ನಾನ ಮಾಡುತ್ತಾರೆ. ಇದರಿಂದಾಗಿ ಚರ್ಮಸಂಬಂಧಿ ಕಾಯಿಲೆಗಳು ಹಾಗೂ ಕೀಲುನೋವು ದೂರಾಗುತ್ತವೆಯೆಂಬ ನಂಬಿಕೆಯಿದೆ.
-ಪ.ನಾ.ಹಳ್ಳಿ.ಹರೀಶ್ ಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.