ಒತ್ತಾಯಕ್ಕೆ ಬರೆದರೆ ಕಾವ್ಯ ಮಾಯ!
Team Udayavani, Mar 3, 2018, 2:35 AM IST
ಹನಿಗವನ ಎಂದ ತಕ್ಷಣ ನೆನಪಾಗುವವರು ಡುಂಡಿರಾಜ್. ಅವರು ಸೃಷ್ಟಿಸುವ ಪನ್‌ಗೆ ಮರುಳಾಗದವರಿಲ್ಲ. ನಾಲ್ಕು ದಶಕಗಳಿಂದಲೂ ಕನ್ನಡಮ್ಮನಿಗೆ “ಹನಿ’ಸೇವೆ ಮಾಡುತ್ತಿರುವ ಅವರ ಚುಟುಕಗಳಲ್ಲಿ ಚಟಾಕಿ ಮಾತ್ರವಲ್ಲ, ಪಟಾಕಿಯೂ ಇರುತ್ತದೆ. ಹನಿಗಳನ್ನು ಸೇರಿಸಿದಷ್ಟೇ ಸೊಗಸಾಗಿ ಪ್ರಬಂಧಗಳ ಮಾಲೆಯನ್ನೂ ಕಟ್ಟಬಲ್ಲರು. ವಿಶಿಷ್ಟ ಪ್ರಾಸಗಳ ಮೂಲಕವೇ ಕೆಣಕುವ ಡುಂಡಿರಾಜ್, ತಮ್ಮ ಹೊಸ ಪ್ರಬಂಧ ಸಂಕಲನಕ್ಕೆ “ನೊಣಾನುಬಂಧ’ ಎಂಬ ವಿಚಿತ್ರ ಹೆಸರನ್ನಿಟ್ಟಿದ್ದಾರೆ. ಆ ಪುಸ್ತಕ ಬಿಡುಗಡೆಯ ಹೊತ್ತಿನಲ್ಲಿ “ಉದಯವಾಣಿ’ ಅವರ ಜೊತೆ ನಡೆಸಿದ ಮಾತುಕತೆ ಇಲ್ಲಿದೆ.
ನನ್ನಾಕೆಯನ್ನು ಮದುವೆಯಾಗುವ ಮುನ್ನ ಅವಳನ್ನು ನೋಡಲೆಂದು ಹೋಗಿದ್ದೆ. ಅವರ ಮನೆಯಲ್ಲಿ ಒಂದು ಕುರ್ಚಿ ಹಾಕಿ ಕೂರಿಸಿದರು. ಲೋಕಾಭಿರಾಮ ಮಾತುಕತೆಗಳೆಲ್ಲಾ ಸಾಂಗವಾಗಿ ನೆರವೇರಿದವು. ನನಗೋ ಹುಡುಗಿ ನೋಡುವ ತವಕ. ನನ್ನ ಅರ್ಜೆಂಟು ಅಲ್ಲಿ ಯಾರಿಗೂ ಅರ್ಥವಾಗುವಂತಿ ರಲಿಲ್ಲ. ಉಪ್ಪಿಟ್ಟು ಕೇಸರಿಬಾತು ಬಂತು. ಆದರೆ ಹುಡುಗಿ ಬರಲೇ ಇಲ್ಲ. ನಾನು ಕಾದಿದ್ದೇ ಬಂತು. ಈ ನಡುವೆ ಯಾರೋ ಒಬ್ಬರು ಹಾಲ್‌ಗೆ ಬಂದು ಹೋದರು. ಆಮೇಲೆಯೇ ಗೊತ್ತಾಗಿದ್ದು ಅವಳೇ ಹುಡುಗಿ ಅಂತ. ನನಗೆ ಅವಳನ್ನು ನೋಡುವ ತವಕ ಎಷ್ಟಿತ್ತೋ ಅದರ ಎರಡರಷ್ಟು ನಾಚಿಕೆ ಅವಳಿಗಿತ್ತು.
ಮಿಂಚಿನಂತೆ ಸುಳಿದು ಮಾಯವಾಗೋದು ಅಂದರೇನೆಂದು ನನಗೆ ತಿಳಿದಿದ್ದೇ ಆವಾಗ! ಹೀಗೆ ಬಂದು ಹಾಗೆ ಹೋದವಳು ಹಿಂತಿರುಗಿ ಬರುತ್ತಾಳ್ಳೋ ಎಂದು ಮತ್ತೆ ಕಾದೆ. ಟೀಪಾಯ್ ಮೇಲೆ ಕುಡಿದು ಉಳಿಸಿದ್ದ ಕಾಫಿ ಲೋಟಕ್ಕೆ ನೊಣಗಳು ಮುತ್ತಿಗೆ ಹಾಕಿದ್ದವು. ನನಗೂ ಕಾಯುವುದು ಬಿಟ್ಟು ಬೇರೇನೂ ಕೆಲಸವಿಲ್ಲದ್ದರಿಂದ ಅಲ್ಲೇ ಇದ್ದ ನ್ಯೂಸ್‌ಪೇಪರ್ ಕೈಗೆತ್ತಿಕೊಂಡು ನೊಣ ಓಡಿಸತೊಡಗಿದೆ. ಸಂಬಂಧ ಕೂಡಿ ಬರಲು ಋಣಾನುಬಂಧ ಬೇಕು ಅಂತ ಹೇಳುತ್ತಾರೆ. ನನ್ನ ವಿಷಯದಲ್ಲಿ “ನೊಣಾನುಬಂಧ’ ಬೇಕಾಯಿತು. ನಾಳೆ ಬಿಡುಗಡೆ ಕಾಣುತ್ತಿರುವ ಲಘುಪ್ರಬಂಧಗಳ ಸಂಕಲನಕ್ಕೆ “ನೊಣಾನುಬಂಧ’ ಎಂದೇ ಹೆಸರಿಟ್ಟಿದ್ದೇನೆ!
ನನ್ನ ಹನಿಗವನಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದವರೂ ಇದ್ದಾರೆ. ಚೆನ್ನಾಗಿ ಬರೆಯುತ್ತೀರಿ ಎಂದು ಮೆಚ್ಚುಗೆ ಸೂಚಿಸಿದವರೂ ಇದ್ದಾರೆ. ಅದೇ ರೀತಿ ಇದೂ ಒಂದು ಸಾಹಿತ್ಯವೇ? ಎಂದು ಅಸಹನೆ ತೋಡಿಕೊಂಡವರೂ ಇದ್ದಾರೆ. ನನ್ನ ಲೆಕ್ಕದಲ್ಲಿ ಅವರೆಲ್ಲರೂ ಪ್ರಾಮುಖ್ಯತೆ ಪಡೆಯುತ್ತಾರೆ. ಅವರೆಲ್ಲರನ್ನೂ ನೆನೆಸಿಕೊಳ್ಳುತ್ತೇನೆ. ನಾನು ಹನಿಗವನಗಳನ್ನು ಬರೆಯಲು ಶುರುಮಾಡಿದ ದಿನಗಳಲ್ಲಿ ಅನೇಕ ಸಲ ಹಿಂಜರಿದಿದ್ದೆ. ಹನಿಗವನ ಬರೆಯುವುದನ್ನು ನಿಲ್ಲಿಸಿಬಿಡೋಣ ವೆಂದು ಯೋಚಿಸಿದ್ದೂ ಇದೆ. ಆ ಸಂದರ್ಭದಲ್ಲಿ ಗೆಳೆಯ ಬಿ.ಆರ್. ಲಕ್ಷ್ಮಣರಾವ್ ಆಡಿದ ಪ್ರೋತ್ಸಾಹದ ನುಡಿಗಳು ಇವತ್ತಿನ ತನಕವೂ ಬೆಚ್ಚಗೆ ಹೃದಯದಲ್ಲಿ ಕೂತುಬಿಟ್ಟಿದೆ. ಹಾಗೆಯೇ ಅಡಿಗರು ನನಗೆ ಕ್ಲಾಸ್ ತೆಗೆದುಕೊಂಡಿದ್ದನ್ನು ನಿಮಗೆ ಹೇಳಲೇಬೇಕು. ಅವರಿಗೆ ಹನಿಗವನ ಪ್ರಕಾರವೇ ಇಷ್ಟವಿರಲಿಲ್ಲ ಅಂತ ನನಗೆ ಗೊತ್ತಾಗಿದ್ದೇ ಅವತ್ತು. ಅವರು ನನ್ನ ಹನಿಗವನಗಳನ್ನು ಓದಿ ಅದರ ಸೂಕ್ಷ್ಮ ಹೊಳಹುಗಳನ್ನು ಇಷ್ಟಪಟ್ಟಿದ್ದರು. ಆದರೆ ದೀರ್ಘವಾಗಿ ಗದ್ಯರೂಪದಲ್ಲಿ ಬರೆಯಬಹುದಾಗಿದ್ದನ್ನು ಬೆರಳೆಣಿಕೆಯ ಸಾಲುಗಳಲ್ಲಿ ಮುಗಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆ ಸಂದರ್ಭದಲ್ಲಿ ಅವರಾಡಿದ ಮಾತು ಕೂಡಾ ಮನಸ್ಸಿನಲ್ಲಿ ಉಳಿದುಕೊಂಡು ಬಿಟ್ಟಿದೆ. ನನ್ನ ಹನಿಗವನಗಳನ್ನೋದಿ “ಐಡಿಯಾಸ್ ಆರ್ ವೇಸ್ಟೆಡ್’ ಎಂದಿದ್ದರು ಅಡಿಗರು.
ನಾನು ಹಿಂದೆಲ್ಲಾ ನಾಲ್ಕು ಸಾಲಿನ ಕವಿತೆಗಳನ್ನು ಮಾತ್ರ ಬರೆಯುತ್ತಿದ್ದೆ. ಆಗ ಒಂದು ಸೂಕ್ಷ್ಮವನ್ನು ಕವಿ ಸುಬ್ರಾಯ ಚೊಕ್ಕಾಡಿಯವರು ಹೇಳಿದ್ದು ನನಗೆ ವರದಾನವಾಗಿ ಪರಿಣಮಿಸಿತ್ತು. ನಾಲ್ಕು ಸಾಲಿನ ಪದ್ಯಗಳನ್ನು ಕವಿ ದಿನಕರ ದೇಸಾಯಿಯವರು ಅದಾಗಲೇ ಕನ್ನಡಿಗರಿಗೆ ಪರಿಚಯಿಸಿ ಮನೆಮಾತಾಗಿಸಿದ್ದರು. ನಾಲ್ಕು ಸಾಲಿನ ಪದ್ಯಗಳೆಂದರೆ ದಿನಕರನ ಚೌಪದಿ ಎನ್ನುವಷ್ಟರಮಟ್ಟಿಗೆ ಹೆಸರು ಮಾಡಿದ್ದವು. ಆದ್ದರಿಂದ 3, 5 ಅಥವಾ ಹೆಚ್ಚಿನ ಸಾಲುಗಳ ಪದ್ಯಗಳನ್ನು ಬರಿ ಎಂದು ನನಗೆ ಸಲಹೆ ನೀಡಿದ್ದು ಸುಬ್ರಾಯ ಚೊಕ್ಕಾಡಿಯವರು. ಅವರು ಹೇಳಿದ್ದು ತುಂಬಾ ಸಹಾಯವಾಯಿತು. ಹೀಗೆ ನನ್ನ ಹನಿಗವನ ಪಯಣದಲ್ಲಿ ತುಂಬಾ ಮಂದಿಯ ಕಾಣಿಕೆ ಇದೆ, ಸಹಕಾರವಿದೆ.
ಸಂಬಂಧಿಕರಿಗೆ ನಾನು ಬರೆಯೋದೇ ಗೊತ್ತಿರಲಿಲ್ಲ
ಈಗ ಹೇಗಾಗಿದೆಯೆಂದರೆ ಮಜಭರಿತವಾದ ಹನಿಗವನಗಳನ್ನು ಎಲ್ಲಿ ಓದಿದರೂ ಅದನ್ನು ಬರೆದಿದ್ದು ನಾನೇ ಎನ್ನುವ ಅಭಿಪ್ರಾಯಕ್ಕೆ ಜನರು ಬರುತ್ತಾರೆ. ಹೀಗೆ ನನ್ನದಲ್ಲದ ಅನೇಕ ಹನಿಗವನಗಳನ್ನು ನನ್ನದೆಂದುಕೊಂಡು, ನಿಮ್ಮ ಆ ಹನಿಗವನ ಚೆನ್ನಾಗಿದೆ ಎಂದು ಹೇಳಿದಾಗ ಅವರಿಗೆ ಅದನ್ನು ಬರೆದಿದ್ದು ನಾನಲ್ಲ, ಇಂಥವರು ಅಂತ ಹೇಳಿಬಿಡುತ್ತೇನೆ. ಅಂದರೆ, ಹನಿಗವನ ಎಂದರೆ ಡುಂಡಿರಾಜ್ ಎಂದೇ ತಿಳಿದಿರುವುದು. ಇದು ಖುಷಿ ನೀಡುತ್ತೆ. ಅದೇ ಸಮಯದಲ್ಲಿ ದಿಗಿಲೂ ಆಗುತ್ತೆ. ನಮ್ಮ ಕುಟುಂಬದಲ್ಲಿ ನಾನು ಹನಿಗವನಗಳನ್ನು ಬರೆಯುತ್ತೇನೆಂದು ಗೊತ್ತಿಲ್ಲದವರಿದ್ದಾರೆ. ಈಗೀಗ ವಾಟ್ಸಾéಪ್, ಫೇಸ್‌ಬುಕ್‌ನ ಶೇರ್ ಮಾಡುವ ಪರಿಪಾಠದಿಂದಾಗಿ ನನ್ನ ಕವನಗಳು ಅಲ್ಲಿಲ್ಲಿ ಓಡಾಡಲು ಶುರುವಾದ ಮೇಲೆ ನೆಂಟರೇ ಆಗೊಮ್ಮೆ ಈಗೊಮ್ಮೆ ಫೋನು ಮಾಡುತ್ತಾರೆ. “ನಿನ್ನ ಕವನವೊಂದನ್ನು ನಮ್ಮ ವಾಟ್ಸಾéಪ್ ಗ್ರೂಪಿನಲ್ಲಿ ಯಾರೋ ಒಬ್ಬರು ಶೇರ್ ಮಾಡಿದ್ದರು ಮಾರಾಯ. ಚೆನ್ನಾಗಿದೆ. ತುಂಬಾ ಮಂದಿ ಅದನ್ನು ಇಷ್ಟಪಟ್ಟಿದ್ದಾರೆ.’ ಎಂದು ಹೇಳುತ್ತಾರೆ. ಇಷ್ಟು ಸಮಯವಾದ ಮೇಲಾದರೂ ಗೊತ್ತಾಯ್ತಲ್ಲ ಎಂದು ನಾನೂ ನಕ್ಕು ಸುಮ್ಮನಾಗಿಬಿಡುತ್ತೇನೆ.
ನನ್ನದೇ ಕವನ, ಬೇರೆಯವರ ಹೆಸರು
ಇತ್ತೀಚೆಗೆ ಒಂದು ಪ್ರತಿಷ್ಟಿತ ವಿದ್ಯಾಸಂಸ್ಥೆಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಕರೆದಿದ್ದರು, ಹೋಗಿದ್ದೆ. ಸ್ವರಚಿತ ಕವನ ವಾಚನ ಸ್ಪರ್ಧೆಗೆ ತೀರ್ಪುಗಾರ ನಾನಾಗಿದ್ದೆ. ಪುಟ್ಟ ಪುಟ್ಟ ಮಕ್ಕಳು ಮುದ್ದು ಮುದ್ದಾಗಿ ತಮ್ಮ ಕವನಗಳನ್ನು ವಾಚಿಸಿದರು. ಮಕ್ಕಳು ಮಾತಾಡುವುದನ್ನು ಕೇಳಲೇ ತುಂಬಾ ಸಂತಸವಾಗುತ್ತೆ, ಅಂಥದ್ದರಲ್ಲಿ ಮಕ್ಕಳು ಕವನ ವಾಚಿಸುವುದನ್ನು ಕೇಳುವುದೇ ಸೊಗಸು. ಅದರಲ್ಲೂ ಅವರೇ ರಚಿಸಿದ ಕವನಗಳು! ಆವಾಗ ಒಂದು ಘಟನ ನಡೆಯಿತು. ಒಬ್ಬಳು ಪುಟ್ಟ ಹುಡುಗಿ ಓದಿದ ನಾಲ್ಕಾರು ಕವನಗಳಲ್ಲಿ ನಾನೇ ಬರೆದಿದ್ದ ಒಂದು ಕವನವೂ ಸೇರಿ ಹೋಗಿತ್ತು. ಕಾರ್ಯಕ್ರಮ ಮುಗಿದ ಮೇಲೆ ಆ ಪುಟ್ಟ ಹುಡುಗಿ ಸಿಕ್ಕಾಗ ಕೇಳಿದೆ, ಆಕೆ ವಾಚಿಸಿದ ಕವನಗಳನ್ನು ಬರೆದಿದ್ದು ಯಾರೆಂದು. ಅವನ್ನು ಅಕ್ಕ ಬರೆದುಕೊಟ್ಟಿದ್ದೆಂದು ಯಾವ ಮುಚ್ಚುಮರೆಯೂ ಇಲ್ಲದೆ ಆ ಬಾಲೆ ಒಪ್ಪಿಕೊಂಡಳು, ಪಾಪ. ನಾನು ಈ ಘಟನೆಯನ್ನು ಹಂಚಿಕೊಂಡಿ ದ್ದೇಕೆಂದರೆ, ಈಗಿನ ಸೋಷಿಯಲ್ ಮೀಡಿಯಾ ಭರಾಟೆಯಲ್ಲಿ ಬಹಳಷ್ಟು ಮಂದಿ ತಮ್ಮ ಸ್ನೇಹಿತರ ವಲಯದಲ್ಲಿ ಶಹಬ್ಟಾಸ್‌ಗಿರಿ ಗಿಟ್ಟಿಸಿಕೊಳ್ಳಲೇಬೇಕೆಂಬ ಧಾವಂತದಲ್ಲಿ ಇನ್ನೊಬ್ಬರ ರಚನೆಗಳನ್ನು ತಮ್ಮ ಹೆಸರಿನಲ್ಲಿ ಶೇರ್ ಮಾಡಿಕೊಳ್ಳುವ ಗೀಳೊಂದು ಹರಡುತ್ತಿದೆ. ಮಜ ಅಂದರೆ ನನ್ನದೇ ಕವನಗಳು ಬೇರೆ ಯಾರದೋ ಹೆಸರಿನಲ್ಲಿ ನನ್ನ ಮೊಬೈಲಿಗೇ ಬರುತ್ತಿರುವುದು!
ಯಡವಟ್ಟಾಯ್ತು!
ನನಗೆ ಅಷ್ಟಿಷ್ಟು ಸಂಗೀತಜ್ಞಾನ ಇದೆ ಅಂತಲೇ ನಾನು ಅಂದುಕೊಳ್ಳೋದು. ಆದರೆ ನನ್ನ ಗಾಯನಕ್ಕೆ ಸಾಕ್ಷಿಯಾದವರು ಮಾತ್ರ ನನ್ನ ಅಭಿಪ್ರಾಯ ತಪ್ಪೆಂದು ಸಾಬೀತು ಪಡಿಸುತ್ತಲೇ ಇದ್ದಾರೆ. ಅಂದ ಹಾಗೆ, ನಾನೊಬ್ಬ ಒಳ್ಳೆ ಬಾತ್‌ರೂಮ್ ಸಿಂಗರ್. ಸದ್ಯಕ್ಕೆ ಅಲ್ಲಿ ನನ್ನ ಹಾಡು ಕೇಳುವವರು ಯಾರೂ ಇರುವುದಿಲ್ಲ. ನಾನೇ ಹಾಡುಗಾರ, ನಾನೇ ಕೇಳುಗ. ಹೀಗಾಗಿ ತುಂಬು ವಿಶ್ವಾಸದಿಂದ ನಾನೊಬ್ಬ ಒಳ್ಳೆ ಬಾತ್‌ರೂಮ್ ಗಾಯಕ ಎಂದು ಹೇಳಿಕೊಳ್ಳಬಹುದು ಅಂದುಕೊಂಡಿದ್ದೇನೆ. ಯಾರೇನೇ ಹೇಳಲಿ, ನನಗೆ ಮಾತ್ರ ನಾನು ಹಾಡೋವಾಗ ಸಿ.ಅಶ್ವತ್ಥ್, ಕಾಳಿಂಗರಾವ್ ಥರ ಹಾಡುತ್ತಿದ್ದೇನೆ ಅನ್ನೋ ಭಾವನೆ ಆವರಿಸಿಕೊಳ್ಳುತ್ತದೆ. ಈ ನನ್ನ ಸಂಗೀತಪ್ರೇಮ ಇಂದು ನೆನ್ನೆಯದಲ್ಲ. ಬಾಲ್ಯದಿಂದಲೂ ಇದೆ. ಚಿಕ್ಕಂದಿನಲ್ಲಿ ನಾನು ಕುಟ್ಟು ಪ್ರವೀಣ. ಅಂದರೆ ಕೈಗೆ ಏನು ಸಿಗುತ್ತದೆ ಅದನ್ನೇ ವಾದ್ಯವೆಂದು ತಿಳಿದು ಬಾರಿಸುತ್ತಿದ್ದೆ. ಅದನ್ನು ಸಂಗೀತವೆಂದು ತಪ್ಪು ತಿಳಿದ ನನ್ನ ತಾಯಿ, ನನ್ನನ್ನು ಮನೆ ಪಕ್ಕದ ತಬಲಾ ಗುರುಗಳ ಬಳಿ ಸೇರಿಸಿದರು. ಅಮ್ಮ ಮಾಡಿದ್ದೊಂದು ಯಡವಟ್ಟಾದರೆ, ಆಮೇಲೆ ನಾನು ಮಾಡಿಕೊಂಡಿದ್ದು ಇನ್ನೊಂದು ಯಡವಟ್ಟು. ಆ ತಬಲಾ ಗುರುಗಳು ಪಕ್ಕಾ ಸಂಪ್ರದಾಯವಾದಿ. ತರಗತಿ ಶುರು ಮಾಡುವ ಮೊದಲು ತೆಂಗಿನಕಾಯಿ, ವೀಳ್ಯ ಹಿಡಿದು ಕಾಲಿಗೆ ಅಡ್ಡ ಬಿದ್ದು ದೀರ್ಘ ದಂಡ ನಮಸ್ಕಾರ ಹಾಕಬೇಕು ಎನ್ನುವವರು. ನಾನಿನ್ನೂ ಹುಡುಗ, ಅದಕ್ಕಿಂತ ಹೆಚ್ಚಾಗಿ ಕ್ರಾಂತಿಕಾರಿ ಯೆಂದೇ ಗೆಳೆಯರ ಬಳಗದಲ್ಲಿ ಗುರುತಿಸಿಕೊಂಡಿದ್ದವನು. ಆ ಗುರುಗಳ ಆಚಾರ ಯಾಕೋ ಅತಿಯಾಯಿತೆಂದು ತೋರಿ ತಬಲಾ ಕಲಿಕೆಗೆ ತಿಲಾಂಜಲಿ ಇಟ್ಟೆ.
ಚಿಕ್ಕ ಸಂಗತಿಗಳೇ ಹೆಚ್ಚು ಖುಷಿ ಕೊಡುವುದು
ಚಿಕ್ಕಂದಿನಲ್ಲಿ ನಾನು ಬರೆದ ಪದ್ಯವೊಂದು ನನ್ನಲ್ಲಿ ಈಗಲೂ ಅಚ್ಚರಿ ಹುಟ್ಟಿಸುತ್ತೆ.
ಮೋಟು ಕಾಲು ಬೇಟೆ ನಾಯಿ
ಪೇಟೆಗೆ ಹೋಯಿತು
ಪೇಟೆಗೆ ಹೋಗಿ
ಎರಡು ಜೊತೆ ಬೂಟು ತಂದಿತು
ಈ ಪದ್ಯ ಓದಿದರೆ ಈ ದಿನವೂ ಸೋಜಿಗ ಮತ್ತು ಖುಷಿ. ತುಂಬಾ ಸರಳವಾಗಿರುವಂತೆ ಕಂಡರೂ, ನಾಲ್ಕು ಕಾಲಿನ, ನಾಯಿ ಎರಡು ಜೊತೆ ಬೂಟು ಕೊಳ್ಳುವ ಸಂಗತಿ ನನಗೆ ತುಂಬಾ ಇಷ್ಟ. ಅಷ್ಟು ಚಿಕ್ಕ ವಿವರವನ್ನು ಚಿಕ್ಕ ವಯಸ್ಸಿನಲ್ಲೇ ಗ್ರಹಿಸಿದ್ದು ನನ್ನ ಅಚ್ಚರಿಗೆ ಕಾರಣ. ಹನಿಗವನ ಬರೆಯೋದು ತುಂಬಾ ಸುಲಭ, ನಾಲ್ಕೈದು ಸಾಲುಗಳಲ್ಲವೇ ಅಂತ ಕೆಲವರು ಹೇಳುತ್ತಾರೆ. ಆದರೆ ಇದನ್ನು ಬರೆಯೋಕೆ ಶಿಸ್ತು ಬೇಕು, ವಿಶಿಷ್ಟ ಆಲೋಚನಾ ವಿಧಾನ ಬೇಕು. ಅದಿಲ್ಲದಿದ್ದರೆ ಸ್ವಾರಸ್ಯವೇ ಇರೋದಿಲ್ಲ. ಒಂದೇ ಮಾತಿನಲ್ಲಿ ಹೇಳ್ಳೋದಾದರೆ ಇರೋದನ್ನು ಇದ್ದ ಹಾಗೆ ಹೇಳಿದರೆ ಅದರಲ್ಲಿ ಚಮತ್ಕಾರ ಇರುವುದಿಲ್ಲ. ಅದನ್ನು ಬೇರೆಯದೇ ಚೌಕಟ್ಟಿನೊಳಗೆ ಸೇರಿಸಿದಾಗ ಆ ಚಮತ್ಕಾರ ಸಾಧ್ಯವಾಗುತ್ತದೆ. ಅದು ಬಿಟ್ಟು ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿಯೋ, ಫೇಸ್‌ಬುಕ್‌ನಲ್ಲಿ ಹೆಚ್ಚು ಲೈಕುಗಳನ್ನು ಸಂಪಾದಿಸುವ ಉದ್ದೇಶದಿಂದಲೋ ಬರೆದದ್ದರಲ್ಲಿ ಸ್ವಾರಸ್ಯ ಇರದು. ಬರವಣಿಗೆಯ ಹಿಂದೆ ಒಂದು ಹೊಳಹು ಇರಬೇಕು. ಅದನ್ನೇ ನಾನು ನನ್ನ ಇನ್ನೊಂದು ಪದ್ಯದಲ್ಲಿ ಹೇಳಿದ್ದೇನೆ.
ಇಷ್ಟಪಟ್ಟು ಬರೆದರೆ ಕಾವ್ಯಮಯ
ಒತ್ತಾಯಕ್ಕೆ ಬರೆದರೆ ಕಾವ್ಯ ಮಾಯ
ಕವಿತೆ ಕಟ್ಟಿ ಹೇಳಿದೆ
ನನ್ನ ಕವಿತೆಗಳನ್ನು ಮೆಚ್ಚಿದವರು ಎದುರು ಸಿಕ್ಕಾಗ “ಎಲ್ಲಿ ಈಗೊಂದು ಕವಿತೆಯನ್ನು ಸೃಷ್ಟಿ ಮಾಡಿ ಹೇಳಿ ನೋಡೋಣ’ ಅಂತ ಚಾಲೆಂಜ್ ಮಾಡಿದ್ದಾರೆ. ಈ ಪ್ರೀತಿ ಎಷ್ಟೋ ಸಲ ಖುಷಿಯನ್ನೂ ಕೊಟ್ಟಿದೆ, ಸಂಕಟವನ್ನೂ ಕೂಡ. ಇದೇ ಕಾರಣಕ್ಕೆ ಬ್ಲಾÂಕ್‌ವೆುàಲ್‌ಗೂ ಒಳಗಾಗಿದ್ದೇನೆ. ಬ್ಲಾಕ್‌ವೆುàಲ್ ಎಂಬ ಪದ ಕೇಳಿ ಅನ್ಯಥಾ ಭಾವಿಸಬೇಡಿ. ನಾನು ವರ್ಗಾವಣೆಗೊಂಡಿದ್ದೆ. ನನ್ನ ಬ್ಯಾಂಕ್ ಖಾತೆಯ ಮುಖ್ಯ ಶಾಖೆ ಇನ್ನೊಂದು ಊರಲ್ಲಿತ್ತು. ಆ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಉಳಿದಿದೆ ಎಂದು ನನಗೆ ತಿಳಿದುಕೊಳ್ಳಬೇಕಿತ್ತು. ಈಗಿನಂತೆ ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯ ಮುಂದುವರಿದಿರಲಿಲ್ಲ. ಹೀಗಾಗಿ ಬ್ಯಾಂಕ್‌ಗೆ ದೂರವಾಣಿ ಕರೆ ಮಾಡಿದೆ. ಫೋನೆತ್ತಿದವರು ನನ್ನ ಪರಿಚಯಸ್ಥರೇ ಆಗಿದ್ದರು. ಅವರು ಬ್ಯಾಂಕ್ ಬ್ಯಾಲೆನ್ಸ್ ಹೇಳಲು ಒಂದು ಕರಾರು ವಿಧಿಸಿದರು. ಅದೇನೆಂದರೆ ನಾನೊಂದು ಹನಿಗವನ ವಾಚಿಸಬೇಕು, ನಂತರವೇ ಅವರು ಬ್ಯಾಂಕ್ ಬ್ಯಾಲೆನ್ಸ್ ಹೇಳುತ್ತೇನೆಂದು ಬ್ಲಾÂಕ್‌ವೆುàಲ್ ಮಾಡಿದರು. ಹನಿಗವನ ವಾಚಿಸುವ ಮೂಡಲ್ಲೇ ನಾನೂ ಇದ್ದುದರಿಂದ ಸ್ಥಳದಲ್ಲೇ ಒಂದು ಕವಿತೆ ಕಟ್ಟಿ ಹೇಳಿದೆ ಅನ್ನಿ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.