ರಾಯಭಾರಿಯ ಕಥೆ-ವ್ಯಥೆ
Team Udayavani, Mar 3, 2018, 11:06 AM IST
ಎಲ್ಲರಿಗೂ ಫಸ್ಟ್ ಸೈಟ್‌ನಲ್ಲಿ ಲವ್ ಆದರೆ, ಅವರಿಬ್ಬರಿಗೂ ಜಗಳವಾಗುತ್ತದೆ. ಆ ಜಗಳ ಪರಿಚಯಕ್ಕೆ ತಿರುಗುತ್ತದೆ. ಆ ಪರಿಚಯ ಸ್ನೇಹಕ್ಕೆ ಮತ್ತು ಆ ಸ್ನೇಹ ಪ್ರೀತಿಗೆ ದಾರಿ ಮಾಡಿಕೊಡುತ್ತದೆ. ಇನ್ನೇನು ಪ್ರೇಮ ನಿವೇದನೆಯಾಗಿ, ಹಿರಿಯರೆಲ್ಲರೂ ಒಪ್ಪಿಕೊಂಡು ಅವರಿಬ್ಬರ ಮದುವೆಯಾಗಿ, ಎಲ್ಲರೂ ಸುಖ-ಸಂತೋಷಗಳಿಂದ ಇರಬೇಕು ಎನ್ನುವಷ್ಟರಲ್ಲೇ, ಒಂದು ಸಣ್ಣ ಗೊಂದಲದಿಂದಾಗಿ ಅವರಿಬ್ಬರೂ ದೂರವಾಗುತ್ತಾರೆ.
ಕೊನೆಗೆ ಅವರಿಬ್ಬರಲ್ಲಿದ್ದ ಕೋಪ, ತಾಪ, ಗೊಂದಲ, ಗದ್ದಲ ಎಲ್ಲವೂ ಬಗೆಹರಿದು, ಅವರಿಬ್ಬರೂ ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲೇ ಅದೊಂದು ಘಟನೆ ನಡೆದು ಹೋಗುತ್ತದೆ. ಡಾಮ್ ಬಳಿ ಅವರಿಬ್ಬರೂ ಕೂತು ಮಾತನಾಡುತ್ತಿದ್ದಾಗ, ಮೂವರು ಪುಂಡರು ಅವರ ಮೇಲೆ ದಾಳಿ ಮಾಡುತ್ತಾರೆ. ಆಗ ನಾಯಕ ಮತ್ತು ಅವರ ನಡುವೆ ಹೊಡೆದಾಟವಾದರೂ, ಅವರು ನಾಯಕನನ್ನು ಬಗ್ಗುಬಡಿಯುತ್ತಾರೆ.
ಅವನ ಎದುರಲ್ಲೇ, ಆ ಹುಡುಗಿಯ ಅತ್ಯಾಚಾರ ಮಾಡಿ ಪರಾರಿಯಾಗುತ್ತಾರೆ. ಕ್ರಮೇಣ ಸುದ್ದಿ ಪುಕಾರಾಗುತ್ತದೆ. ಇಡೀ ಘಟನೆಯ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತದೆ. ಹೀಗಿರುವಾಗಲೇ ಪುಂಡರಲ್ಲೊಬ್ಬ, ಆ ಊರಿನ ಶಾಸಕನ ಮಗ ಎಂದು ಗೊತ್ತಾಗುತ್ತದೆ. ಕ್ರಮೇಣ ಆ ಪ್ರಕರಣ ಬೇರೆ ತಿರುವು ಪಡೆಯುತ್ತದೆ. ತನಿಖೆ ಮಾಡುತ್ತಿದ್ದ ಅಧಿಕಾರಿ ಎತ್ತಂಗಡಿಯಾಗುತ್ತಾನೆ, ಹೋರಾಟ ಮಾಡುತ್ತಿದ್ದವರೆಲ್ಲಾ ತೆಪ್ಪಗಾಗುತ್ತಾರೆ,
ಪ್ರೇಮಿಗಳು ದೂರವಾಗುತ್ತಾರೆ, ಪ್ರಕರಣ ಹಳ್ಳ ಹಿಡಿಯುತ್ತದೆ … ಇಂಥದ್ದೊಂದು ಪ್ರಕರಣ ಹೇಗೆ ಅಂತ್ಯವಾಗುತ್ತದೆ ಮತ್ತು ತಪ್ಪಿತಸ್ಥರಿಗೆ ಹೇಗೆ ಶಿಕ್ಷೆಯಾಗುತ್ತದೆ ಎಂಬ ಕುತೂಹಲವಿದ್ದರೆ, “ಪ್ರೀತಿಯ ರಾಯಭಾರಿ’ ಚಿತ್ರವನ್ನು ನೋಡಬಹುದು. ಸಮಾಜದಲ್ಲಿ ದೊಡ್ಡ ಪಿಡುಗಾಗಿರುವ ಗ್ಯಾಂಗ್‌ರೇಪ್ ಕುರಿತು ಚಿತ್ರ ಮಾಡಿರುವ ನಿರ್ದೇಶಕ ಮುತ್ತು, ಯಾವುದೋ ಒಂದು ನಿರ್ಧಿಷ್ಟವಾದ ಘಟನೆಯನ್ನಾಧರಿಸಿ “ಪ್ರೀತಿಯ ರಾಯಭಾರಿ’ ಚಿತ್ರವನ್ನು ಮಾಡಿದ್ದಾರೆ ಎನ್ನುವುದಕ್ಕಿಂತ,
ರಾಷ್ಟ್ರಾದ್ಯಂತ ನಡೆದಿರುವ ಅಂತಹ ಹಲವು ಅಮಾನವೀಯ ಘಟನೆಗಳನ್ನಾಧರಿಸಿ ಈ ಚಿತ್ರ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ತರಹದ ಪ್ರಕರಣಗಳಿಗೆ ತಮ್ಮದೇ ಆದ ಅಂತ್ಯವೊಂದನ್ನು ಅವರು ಹಾಡಿದ್ದಾರೆ. ಅದೆಷ್ಟು ಸರಿ, ತಪ್ಪು ಎನ್ನುವ ಚರ್ಚೆ ನಂತರ. ಆದರೆ, ಅವರ ಕಳಕಳಿಯನ್ನು ಮೆಚ್ಚಬೇಕು. ಅದರಲ್ಲೂ ಇಂತಹ ಘಟನೆಗಳು ಆದಾಗ ಏನೆಲ್ಲಾ ಆಗುತ್ತವೆ, ದೊಡ್ಡವರ ಹಸ್ತಕ್ಷೇಪದ ನಂತರ ಏನೆಲ್ಲಾ ತಿರುವುಗಳು ಪಡೆಯುತ್ತವೆ,
ಇಂತಹ ಘಟನೆಗಳಿಂದೆ ಯಾರು ಹೇಗೆ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ, ಮನೆಯವರ ಅಸಹಾಯಕತೆ ಹೇಗಿರುತ್ತದೆ ಎಂಬುದನ್ನು ಮನಮುಟ್ಟುವಂತೆ ಅವರು ತೋರಿಸಿದ್ದಾರೆ. ಹಾಗೆ ನೋಡಿದರೆ, ಚಿತ್ರ ವಿಭಿನ್ನವಾಗಿ ನಿಲ್ಲುವುದೇ ದ್ವಿತೀಯಾರ್ಧದಿಂದ. ಮೊದಲಾರ್ಧ ಹುಡುಗ-ಹುಡುಗಿ ನಡುವಿನ ಕಣ್ಣಾಮುಚ್ಚಾಲೆ, ಗಲಾಟೆ, ಕಾಮಿಡಿಗಳೇ ತುಂಬಿವೆ. ಇವನ್ನೆಲ್ಲಾ ಸಾಕಷ್ಟು ನೋಡಿರುವ ಪ್ರೇಕ್ಷಕನಿಗೆ ಬೇಸರವಾಗಬಹುದು.
ಇಂಟರ್‌ವೆಲ್ ಹೊತ್ತಿಗೆ ಚಿತ್ರಕ್ಕೊಂದು ಮಹತ್ತರವಾದ ಟ್ವಿಸ್ಟ್ ಸಿಗುತ್ತದೆ. ಆ ನಂತರ ಚಿತ್ರ ಎಲ್ಲೂ ಪುರುಸೊತ್ತು ಕೊಡದಂತೆ ನೋಡಿಸಿಕೊಂಡು ಹೋಗುತ್ತದೆ. ಅದರಲ್ಲೂ ಒಂದು ಹಂತದಲ್ಲಿ ಚಿತ್ರದಲ್ಲಿನ ಚೀರಾಟ, ಕೂಗಾಟ ಇವೆಲ್ಲವೂ ವಿಪರೀತ ಹಿಂಸಿಸುತ್ತದೆ. ಅದರ ಜೊತೆಗೆ ಒಟ್ಟಾರೆ ಇಂತಹ ಪ್ರಕರಣದಲ್ಲಿ ಕಾಣದ ಕೈಗಳು ಹೇಗೆಲ್ಲಾ ಕೆಲಸ ಮಾಡುತ್ತವೆ ಎಂಬುದನ್ನು ಚೆನ್ನಾಗಿಯೇ ತೋರಿಸಲಾಗಿದೆ.
ಚಿತ್ರದ ಮೊದಲಾರ್ಧವನ್ನು ನಕುಲ್ ಮತ್ತು ಅಂಜನಾ ಆವರಿಸಿಕೊಳ್ಳುತ್ತಾರೆ. ಈ ಪೈಕಿ ಇಬ್ಬರೂ ನಟನೆಯಲ್ಲಿ ಒಂದಿಷ್ಟು ಪಕ್ವವಾಗಬೇಕು. ಅದರಲ್ಲೂ ನಾಯಕ ಕುಡಿದು ಮಾತನಾಡುವ, ನಾಯಕಿ ಸಿಟ್ಟಿನಿಂದ ಬೈದಾಡುವ ದೃಶ್ಯಗಳನ್ನು ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟವೇ.
ಇನ್‌ಸ್ಪೆಕ್ಟರ್ ಪಾತ್ರ ಮಾಡಿರುವ ಮುನಿ ಮತ್ತು ರಾಜಕಾರಣಿಯಾಗಿ ಕಾಣಿಸಿಕೊಂಡಿರುವ ಚರಣ್ ರಾಜ್ ಅವರ ಪಾತ್ರಗಳು ಚಿಕ್ಕದಾಗಿದ್ದರೂ, ಇಬ್ಬರೂ ಬಹಳ ಚೆನ್ನಾಗಿ ನಟಿಸಿದ್ದಾರೆ. ಗಿರಿ, ಸುಚೀಂದ್ರ ಪ್ರಸಾದ್, ರಾಕ್‌ಲೈನ್ ಸುಧಾಕರ್ ಎಲ್ಲರೂ ತಮ್ಮ ಕೆಲಸ ನೀಟ್ ಆಗಿ ಮಾಡಿದ್ದಾರೆ. ಸಾಧು ಕೋಕಿಲ ಕಾಮಿಡಿಗೂ, ಚಿತ್ರಕ್ಕೂ ಸಂಬಂಧವಿಲ್ಲ. ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಚೆನ್ನಾಗಿವೆ.
ಚಿತ್ರ: ಪ್ರೀತಿಯ ರಾಯಭಾರಿ
ನಿರ್ದೇಶನ: ಮುತ್ತು
ನಿರ್ಮಾಣ: ವೆಂಕಟೇಶ್ ಗೌಡ
ತಾರಾಗಣ: ನಕುಲ್, ಅಂಜನಾ ದೇಶಪಾಂಡೆ, ಗಿರಿ, ಚರಣ್‌ರಾಜ್, ಸುಚೇಂದ್ರ ಪ್ರಸಾದ್, ಪದ್ಮಜಾ ರಾವ್, ಸಾಧು ಕೋಕಿಲ, ರಾಕ್‌ಲೈನ್ ಸುಧಾಕರ್ ಮುಂತಾದವರು
* ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.