ಇಲ್ಲಿ ಮಕ್ಕಳೇ ರೈತರು! ; ಪುಟಾಣಿಗಳ ರಾಗಿ ಪ್ರಾಜೆಕ್ಟ್
Team Udayavani, Mar 3, 2018, 12:30 PM IST
ಈಗಿನ ಮಕ್ಕಳಿಗೆ “ಅಕ್ಕಿ ಎಲ್ಲಿಂದ ಬರುತ್ತೆ?’ ಅಂತ ಕೇಳಿದರೆ, ಗ್ರೋಸರಿ ಶಾಪ್‌ನಿಂದ ಅಥವಾ ಬಿಗ್ ಬಜಾರ್‌ನಿಂದ ಎಂಬ ಉತ್ತರ ಸಿಗಬಹುದು. ಯಾಕೆಂದರೆ, ನಾವು ತಿನ್ನುವ ಆಹಾರ ಎಲ್ಲಿಂದ ಬರುತ್ತದೆ, ಅದನ್ನು ಹೇಗೆ ಬೆಳೀತಾರೆ ಎಂಬುದನ್ನು ಮಕ್ಕಳಿಗೆ ಶಾಲೆಯಲ್ಲಿ ಪ್ರಾಯೋಗಿಕವಾಗಿ ಹೇಳುವುದಿಲ್ಲ. ಆದರೆ, ಬಾಗಲೂರು ಕ್ರಾಸ್ ಬಳಿಯ, ಸಾತನೂರಿನ ಪೂರ್ಣ ಲರ್ನಿಂಗ್ ಸೆಂಟರ್ ಇತರೆ ಶಾಲೆಗಳಿಗಿಂತ ಭಿನ್ನ. ವಿಶಿಷ್ಟ ಕಲಿಕಾಕ್ರಮದ ಮೂಲಕ ಮಕ್ಕಳಿಗೆ ಪರಿ”ಪೂರ್ಣ’ ಶಿಕ್ಷಣ ನೀಡುತ್ತಾ ಬಂದಿರುವ ಈ ಶಾಲೆ, ಮಕ್ಕಳಿಗೆ ಕೃಷಿಯ ಪರಿಚಯ ಮಾಡಿಕೊಡುವ ಸಲುವಾಗಿ “ರಾಗಿ ಪ್ರಾಜೆಕ್ಟ್’ ಕೈಗೊಂಡಿದೆ.
ಏನಿದು ರಾಗಿ ಪ್ರಾಜೆಕ್ಟ್?
ಪೂರ್ಣ ಲರ್ನಿಂಗ್ ಸೆಂಟರ್ ಮತ್ತು ಅಜೀಂ ಪ್ರೇಮ್‌ಜಿ ಯುನಿವರ್ಸಿಟಿ ಜಂಟಿಯಾಗಿ ನಡೆಸುತ್ತಿರುವ ಪ್ರಾಜೆಕ್ಟ್ ಇದು. ಇದರ ರೂವಾರಿ ಯುನಿವರ್ಸಿಟಿಯ ಫ್ಯಾಕಲ್ಟಿ ಪಲ್ಲವಿ ವರ್ಮ ಪಾಟೀಲ್. ಯಾವುದಾದರೊಂದು ಬೆಳೆ ಬೆಳೆಯುವುದರ ಮೂಲಕ, ಮಕ್ಕಳನ್ನು ಕೃಷಿಯಲ್ಲಿ ನೇರವಾಗಿ ತೊಡಗುವಂತೆ ಮಾಡಲು ನಿರ್ಧರಿಸಿದಾಗ, ಶುರುವಾಗಿದ್ದೇ “ರಾಗಿ ಪ್ರಾಜೆಕ್ಟ್’.
ಸರಿ, ಪ್ರಾಜೆಕ್ಟೇನೋ ಶುರು. ಆದರೆ, ರಾಗಿಯನ್ನು ಎಲ್ಲಿ ಬೆಳೆಯುವುದು? ಲರ್ನಿಂಗ್ ಸೆಂಟರ್‌ನ ಆಯಾ ರಾಧಮ್ಮ ಎಂಬುವರು, ಕೆಲ ವರ್ಷಗಳಿಂದ ಖಾಲಿ ಬಿಟ್ಟಿದ್ದ ತಮ್ಮ ಭೂಮಿಯನ್ನು ಪ್ರಾಜೆಕ್ಟ್ಗಾಗಿ ಬಿಟ್ಟುಕೊಟ್ಟರು. ಅರ್ಧ ಎಕರೆ ಜಾಗದಲ್ಲಿ “ರಾಗಿ ಪ್ರಾಜೆಕ್ಟ್’ ಶುರುವಾಯಿತು.
ನೀರಿಲ್ಲದ ಬಂಜರು ಭೂಮಿ!
ಮೊದಲ ಬಾರಿಗೆ ಆ ಭೂಮಿ ನೋಡಿದಾಗ ಎಲ್ಲರಿಗೂ ನಿರಾಸೆ. ಏಕೆಂದರೆ, ಆ ಜಾಗದಲ್ಲಿ ನೀರಿರಲಿಲ್ಲ. ಮಣ್ಣೂ ಫಲವತ್ತಾಗಿರಲಿಲ್ಲ. ಹತ್ತಿರದಲ್ಲಿ ಲೇಔಟ್‌ಗಳು ತಲೆ ಎತ್ತಿ ನಿಂತಿದ್ದು, ನೀರಿನ ವ್ಯವಸ್ಥೆ ಮಾಡುವುದೂ ಕಷ್ಟವಿತ್ತು. ಮಕ್ಕಳೆಲ್ಲ ಹೊಸ ಕೆಲಸದ ಬಗ್ಗೆ ಹೆಚ್ಚೇ ಉತ್ಸುಕರಾಗಿದ್ದರು. ಹಾಗಾಗಿ, ಹೆದರಿ ಹಿಂದೆ ಸರಿಯುವ ಬದಲು, ಇದನ್ನು ಚಾಲೆಂಜ್ ಆಗಿ ಸ್ವೀಕರಿಸೋಣ ಎಂದರು ಶಿಕ್ಷಕರು.
ಟ್ಯಾಂಕರ್‌ನಲ್ಲಿ ಬಂತು ನೀರು!
ರಾಗಿ ಬೆಳೆಗೆ ಜಾಸ್ತಿ ನೀರು ಬೇಕು. ಅಗತ್ಯವಿರುವಷ್ಟು ನೀರನ್ನು ಟ್ಯಾಂಕರ್ ಮೂಲಕ ಹಾಯಿಸಲು ನಿರ್ಧರಿಸಲಾಯ್ತು. ಭೂಮಿ ಹಸನು ಮಾಡುವಾಗ ಒಮ್ಮೆ ಹಾಗೂ ನಂತರ ಎರಡು ಬಾರಿ ಟ್ಯಾಂಕರ್‌ನಲ್ಲಿ ನೀರು ಹಾಯಿಸಿದರು. ಒಂದು ಟ್ಯಾಂಕ್ ನೀರಿಗೆ 300 ರೂ. ಸಣ್ಣ ರೈತರು ಏನೇನೆಲ್ಲಾ ಕಷ್ಟಪಡಬೇಕು ಎಂಬುದು ಅರ್ಥವಾಗಿದ್ದೇ ಆಗ ಎನ್ನುತ್ತಾರೆ ಪಲ್ಲವಿ. ನಂತರ ಶಿಕ್ಷಕಿಯೊಬ್ಬರು ರೈತರಿಂದ ಬಿತ್ತನೆ ಬೀಜಗಳನ್ನು ತಂದರು. ಆ ಬೀಜದ ವಿಶೇಷತೆಯೆಂದರೆ, ಅದು 15 ತಲೆಮಾರುಗಳಿಂದ ಕೈಯಿಂದ ಕೈಗೆ ಪಾಸ್ ಆಗುತ್ತಾ ಬಂದಿದೆ. ಇವರ ಅದೃಷ್ಟಕ್ಕೆ ಮುಂದೆ ಚೆನ್ನಾಗಿ ಮಳೆ ಬಂದು, ಟ್ಯಾಂಕರ್‌ನಿಂದ ನೀರು ಹಾಯಿಸುವ ಕಷ್ಟ ತಪ್ಪಿತು. ಮಿಶ್ರ ಕೃಷಿ ಮಾಡಿ ಎಂಬ ಸಲಹೆ ಬಂದಾಗ, ರಾಗಿ ಪೈರುಗಳ ಜೊತೆಯಲ್ಲಿ ಮಧ್ಯದ ಸಾಲುಗಳಲ್ಲಿ ಜೊತೆ ಜೊತೆಗೆ ತೊಗರಿ, ಬೀನ್ಸ್ ಹಾಗೂ ಚೆಂಡು ಹೂವನ್ನೂ ಬಿತ್ತನೆ ಮಾಡಿದರು.
ಮಕ್ಕಳೇ ರೈತರು…
ಹಾnಂ, ಈ ಎಲ್ಲಾ ಕೆಲಸಗಳನ್ನು ಕೆಲಸದವರಿಂದ ಮಾಡಿಸಲಾಯ್ತು ಎಂದು ತಿಳಿಯಬೇಡಿ. ಬಿತ್ತನೆಯಿಂದ ಹಿಡಿದು, ನೀರು ಹಾಯಿಸುವುದು, ಕಳೆ ಕೀಳುವುದು, ಗೊಬ್ಬರ ಹಾಕುವುದನ್ನೆಲ್ಲ ಮಾಡಿದವರು 4, 5 ಮತ್ತು 6ನೇ ತರಗತಿಯ ಮಕ್ಕಳೇ. ಶಾಲೆಯಿಂದ ಒಂದು ಕಿ.ಮೀ. ದೂರದ ಹೊಲಕ್ಕೆ ಮಕ್ಕಳು ಕೆಲವೊಮ್ಮೆ ಶಾಲಾ ಬಸ್‌ಗೂ ಕಾಯದೆ ನಡೆದುಕೊಂಡೇ ಹೋಗುತ್ತಿದ್ದರಂತೆ. ಹೈಸ್ಕೂಲ್ ಮಕ್ಕಳು ಕೂಡ, ಆಗಾಗ ಹೊಲಕ್ಕೆ ಬಂದು ಕೆಲಸದಲ್ಲಿ ಕೈ ಜೋಡಿಸುತ್ತಿದ್ದರು. ಪ್ರತಿ ಬುಧವಾರ ಒಂದೆರಡು ಗಂಟೆಗಳನ್ನು ಈ ಪ್ರಾಜೆಕ್ಟ್ ಕಲಿಕೆಗಾಗಿಯೇ ಮೀಸಲಿಡಲಾಗುತ್ತಿತ್ತು.
ಈ ಪ್ರಾಜೆಕ್ಟ್ಗೂ ಮುನ್ನ ಯಾರಿಗೂ ಕೃಷಿಯ ಬಗ್ಗೆ ಸರಿಯಾದ ತಿಳಿವಳಿಕೆ ಇರಲಿಲ್ಲ. ಹಾಗಾಗಿ, ಕಡೆಗೆ ಈ ಕೆಲಸ ಏನಾಗುತ್ತೋ ಅನ್ನುವ ಅಂಜಿಕೆಯೂ ಇವರಲ್ಲಿತ್ತು. ಆದರೆ, ಮಕ್ಕಳ ಪರಿಶ್ರಮಕ್ಕೆ ತಕ್ಕ ಪ್ರತಿಫಲವೇ ಸಿಕ್ಕಿದೆ. ಈಗಾಗಲೇ ಫಸಲಿನ ಕಟಾವು ಮುಗಿದಿದ್ದು, 50 ರೂ. ಕೊಟ್ಟು ತಂದ 100 ಗ್ರಾಂ ಬಿತ್ತನೆ ಬೀಜದಿಂದ ಅವರು 30 ಕೆ.ಜಿ. ರಾಗಿ ಬೆಳೆದಿದ್ದಾರೆ. ಕಸ- ಕಡ್ಡಿ ತೆಗೆದ ಮೇಲೆ ಸ್ವತ್ಛವಾದ 20 ಕೆ.ಜಿ ರಾಗಿ ಅವರ ಕೈ ಸೇರಿದೆ. ಕಟಾವು ಹಾಗೂ ಧಾನ್ಯದ ಸ್ವತ್ಛತೆಯನ್ನೂ ಮಕ್ಕಳೇ ಮುಗಿಸಿರುವುದು ವಿಶೇಷ.
ಕಮ್ಯುನಿಟಿ ಲಂಚ್
ಮೊದಲಿನಿಂದಲೂ ಪ್ರತಿ ಬುಧವಾರ ಪೂರ್ಣ ಶಾಲೆಯಲ್ಲಿ ಕಮ್ಯುನಿಟಿ ಲಂಚ್ ನಡೆಯುತ್ತದೆ. ಪ್ರತಿ ವಾರ ಒಂದೊಂದು ತರಗತಿಯ ಮಕ್ಕಳು, ಇಡೀ ಶಾಲೆಗೆ ಅಡುಗೆ ಮಾಡಿ, ಬಡಿಸುತ್ತಾರೆ. ಯಾವ ಅಡುಗೆ ಮಾಡೋದು, ಹೇಗೆ ಮಾಡೋದು ಅನ್ನೋದನ್ನು ಮಕ್ಕಳೇ ನಿರ್ಧರಿಸುತ್ತಾರೆ. ಶಾಲೆಯ ಆವರಣದಲ್ಲಿ ತರಕಾರಿಗಳನ್ನು ಬೆಳೆದು, ಅದನ್ನೂ ಅಡುಗೆಗೆ ಬಳಸಲಾಗುತ್ತದೆ. ಪ್ರಾಜೆಕ್ಟ್ ಶುರುವಾದ ನಂತರ ಮಕ್ಕಳು ರಾಗಿಯಿಂದ ವಿವಿಧ ಖಾದ್ಯಗಳನ್ನು ಮಾಡಿದರು. ರಾಗಿಯ 16 ಬೇರೆ ಬೇರೆ ರೆಸಿಪಿಗಳನ್ನು ಸೇರಿಸಿ ಒಂದು ಅಡುಗೆ ಪುಸ್ತಕವನ್ನೂ ಬರೆಯಲಾಗಿದೆ.
ಕಥೆ, ಹಾಡು, ಕ್ರಾಫ್ಟ್…
ರಾಗಿ ಬೆಳೆಯುವುದನ್ನಷ್ಟೇ ಅಲ್ಲ, ರಾಗಿಯ ಜೊತೆಗೆ ಮಿಳಿತವಾಗಿರುವ ಜನಪದ ಕಥೆ- ಹಾಡು, ರಾಗಿಯಿಂದ ಮಾಡಬಹುದಾದ ಕ್ರಾಫ್ಟ್ ವರ್ಕ್, ರಾಗಿ ತೆನೆಯ ಕಿವಿಯೋಲೆ, ರೆಸಿಪಿ, ಧಾನ್ಯದ ಉಪಯೋಗಗಳ ಚಾರ್ಟ್… ಹೀಗೆ ಹತ್ತು ಹಲವು ಸಂಗತಿಗಳನ್ನು ಮಕ್ಕಳು ಕಲಿತುಕೊಂಡಿದ್ದಾರೆ. ಗಾಯಕ ವಸು ದೀಕ್ಷಿತ್ ಅವರು ಬಂದು, ಪುರಂದರದಾಸರ “ರಾಗಿ ತಂದೀರಾ…’ ಕೀರ್ತನೆ ಹಾಡಿದರೆ, ನೀನಾಸಂ ತಂಡದವರು ಕಟಾವಿನ ದಿನ ಸುಗ್ಗಿ ಗೀತೆಗಳನ್ನು ಹಾಡಿ ಮಕ್ಕಳಿಗೆ ಜನಪದ ಗೀತೆಗಳ ಪರಿಚಯ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ, ಸಾವಯವ ಕೃಷಿಕ ನಾರಾಯಣ ರೆಡ್ಡಿಯವರನ್ನು ಸಹ ಮಕ್ಕಳು ಭೇಟಿ ಮಾಡಿ, ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.
ಇದು ರಾಗಿ ತಂಡ
ಪೂರ್ಣ ಲರ್ನಿಂಗ್ ಸೆಂಟರ್‌ನ ಶಿಕ್ಷಕಿಯರಾದ ರೋಶನಿ, ವಸಂತ, ಮಧು, ಜಲಜ, ಅಶ್ವಿನಿ, ಸಮ್ಮಿತಾ, ಇಂದು, ಕಲ್ಯಾಣಿ, ಪದ್ಮ, ಆಶಾ, ಶ್ರೀಜ ಹಾಗೂ ಜಾಗದ ಒಡತಿ ರಾಧಮ್ಮ ಈ ಪ್ರಾಜೆಕ್ಟ್‌ನ ಮುಖ್ಯ ಶಕ್ತಿಯಾಗಿ ಕೆಲಸ ಮಾಡಿದವರು.
ಸಿಟಿಯಲ್ಲಿ ಹುಟ್ಟಿ, ಬೆಳೆದ ನನಗೆ ಕೃಷಿಯ ಬಗ್ಗೆ ಹೆಚ್ಚಿನ ಜ್ಞಾನ ಇರಲೇ ಇಲ್ಲ. ಈ ಪ್ರಾಜೆಕ್ಟ್ನಿಂದಾಗಿ ಮಕ್ಕಳ ಜೊತೆ ಸೇರಿ ನಾನೂ ಬಹಳ ವಿಷಯಗಳನ್ನು ಕಲಿತಿದ್ದೇನೆ. ರಾಗಿಯಷ್ಟು ಸುಲಭದ ಬೆಳೆ ಮತ್ತೂಂದಿರಲಿಕ್ಕಿಲ್ಲ. ಅಷ್ಟೇನೂ ಫಲವತ್ತಾಗಿರದ ಜಾಗದಲ್ಲಿ, ಮಕ್ಕಳೆಲ್ಲರ ಪರಿಶ್ರಮದಿಂದ ಹುಲುಸಾಗಿ ಬೆಳೆಯಿತು. ಒರಿಸ್ಸಾದಲ್ಲಿ ನಡೆದ ಆಹಾರ ಮೇಳದಲ್ಲಿ ರಾಗಿಯನ್ನು ಪ್ರದರ್ಶನಕ್ಕಿಟ್ಟಿದ್ದೆವು. ಒಂದು ವರ್ಷದ ಪ್ರಾಜೆಕ್ಟ್‌ನ ಮುಂದಿನ ಭಾಗವಾಗಿ ಸಜ್ಜೆ ಬೆಳೆಯುವ ಕುರಿತು ಯೋಚಿಸುತ್ತಿದ್ದೇವೆ.
– ಪಲ್ಲವಿ ವರ್ಮಾ ಪಾಟೀಲ್, (ಅಜೀಂ ಪ್ರೇಮ್‌ಜಿ ವಿ.ವಿ) ರಾಗಿ ಪ್ರಾಜೆಕ್ಟ್‌ನ ರೂವಾರಿ
ಪ್ರಿಯಾಂಕಾ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.