ಕಾಸರಗೋಡು ಕನ್ನಡಿಗರ ಒಗ್ಗಟ್ಟಿನ ಹೋರಾಟಕ್ಕೆ ಕರೆ
Team Udayavani, Mar 3, 2018, 2:27 PM IST
ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೀತಿಸುವ ಕಾಸರಗೋಡಿನ ಸಮಸ್ತ ಕನ್ನಡಿಗರ ಅವಗಾಹನೆಗಾಗಿ ಮತ್ತು ಪ್ರತಿಕ್ರಿಯೆಗಾಗಿ ಈ ಮನವಿಯನ್ನು ಸಲ್ಲಿಸುತ್ತಿದ್ದೇನೆ.
ತಮಗೆಲ್ಲ ಗೊತ್ತಿರುವ ಹಾಗೆ ಕಾಸರಗೋಡಿನಲ್ಲಿ ಅನೇಕ ಪ್ರತಿಕೂಲಗಳ ನಡುವೆ ಬದುಕಬೇಕಾದ ಪರಿಸ್ಥಿತಿ ನಮಗೆ ಅನಿವಾರ್ಯವಾಗಿ ಪ್ರಾಪ್ತವಾಗಿದೆ. ಇದಕ್ಕೆ ರಾಜ್ಯ ಪುನರ್ ವಿಂಗಡಣೆ ಸಂದರ್ಭದಲ್ಲಿ ನಡೆದ ಪ್ರಮಾದವೇ ಮುಖ್ಯವಾದ ಕಾರಣವಾಗಿದ್ದು, ಈಗ ನಮ್ಮ ಮುಂದಿರುವ ಜ್ವಲಂತ ಪ್ರಶ್ನೆ ಎಂದರೆ – To be or Not to be ಎಂಬ ಹಾಗೆ – ಬಂದದ್ದನ್ನೆಲ್ಲ ಪ್ರಾರಬ್ಧವೆಂದು ಭಾವಿಸಿ ಅದನ್ನು ಅನುಭವಿಸುತ್ತಾ ಬರುವುದೇ ಅಥವಾ ಈ ಸಮಸ್ಯೆಯಿಂದ ಹೊರ ಬರುವುದಕ್ಕೆ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕೆ ರಚನಾತ್ಮಕವಾದ ಹೋರಾಟದಲ್ಲಿ ನಿರತರಾಗವುದೇ?
ಮೊದಲನೆಯದ್ದು ನಮ್ಮ ಪ್ರಯತ್ನ ಇಲ್ಲದೆಯೇ ತಾನಾಗಿ ಸಂಭವಿಸುತ್ತವೆ. ಎರಡನೆಯದ್ದು ನಮ್ಮ ಆಯ್ಕೆಯಾದರೆ ಈ ನಿಟ್ಟಿನಲ್ಲಿ ಸಂಘಟಿತ ಪರಿಶ್ರಮಕ್ಕೆ ನಾವು ಕಟಿಬದ್ಧರಾಗಬೇಕು.
ಮಹಾಜನ ವರದಿಯನ್ನು ಅನುಷ್ಠಾನಗೊಳಿಸುವ ಮೂಲಕ ಈ ಪ್ರದೇಶವನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸುವುದು ನಮ್ಮ ಸಮಸ್ಯೆಗೆ ಶಾಶ್ವತವಾದ ಪರಿಹಾರವಾದರೂ ಹೀಗೆ ಹೇಳಿದಾಗ ಅದೆಲ್ಲ ಆಗುವ ಹೋಗುವ ಮಾತಲ್ಲ ಎನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾವು ಮಾತ್ರವಲ್ಲ ಕರ್ನಾಟಕ ಸರಕಾರವೂ ಸೇರಿದ ಹಾಗೆ ಸಮಸ್ತ ಕನ್ನಡಿಗರು ಮಹಾಜನ ವರದಿಯನ್ನೇ ಮರೆತಂತಿದೆ. ಆದರೆ ಆ ವರದಿ ಇನ್ನೂ ಸಂಸತ್ತಿನಲ್ಲಿ ಜೀವಂತವಾಗಿಯೇ ಇದೆ ಎನ್ನುವುದನ್ನು ನಾವು ಮರೆಯಬಾರದು. ಅದರ ಅನುಷ್ಠಾನಕ್ಕಾಗಿ ಹಕ್ಕೊತ್ತಾಯವನ್ನು ಮಂಡಿಸುವ ಪೂರ್ಣ ಸ್ವಾತಂತ್ರ್ಯ ನಮಗೂ ಇದೆ. ಕರ್ನಾಟಕಕ್ಕೂ ಇದೆ. ಕರ್ನಾಟಕದ ಸಂಸದರು ಮನಸ್ಸು ಮಾಡಿದರೆ ಈ ಪ್ರಶ್ನೆಯನ್ನು ಸಂಸತ್ತಿನಲ್ಲಿ ಮತ್ತೆ ಎತ್ತಿಕೊಳ್ಳುವುದಕ್ಕೆ ಸಾಧ್ಯವಿದೆ. ಆದರೆ ಅಂತಹ ಸಾಮರ್ಥ್ಯ ಮತ್ತು ಹೃದಯವಂತಿಕೆ ಅವರಲ್ಲಿ ಇರಬೇಕು ಅಷ್ಟೆ. ಕಾಸರಗೋಡೂ ಸೇರಿದಂತೆ ಕನ್ನಡ ಜನತೆ ಅವರನ್ನು ಈ ಕುರಿತು ಆಗ್ರಹಿಸಬೇಕು.
ಇದು ಕಷ್ಟ ಸಾಧ್ಯವಾದರೆ ಕರ್ನಾಟಕ-ಕೇರಳಗಳ ಎಲ್ಲ ಅಧಿಕೃತ ರಾಜಕೀಯ ಪಕ್ಷಗಳೂ ಕಾಸರಗೋಡಿನ ಪ್ರತಿನಿಧಿಗಳೂ ಒಂದೆಡೆಯಲ್ಲಿ ಸೇರಿ ಒಂದಕ್ಕಿಂತ ಹೆಚ್ಚು ಬಾರಿ ಚರ್ಚಿಸಿ ಸರ್ವಾನುಮತದ ನಿರ್ಣಯವೊಂದನ್ನು ಅಂಗೀಕರಿಸಲು ಪ್ರಯತ್ನಿಸಬಹುದು. ಈಗ ಪ್ರಶ್ನೆಯ ಇತ್ಯರ್ಥಕ್ಕೆ ಅಡ್ಡ ಬರುತ್ತಿರುವ ಓಟು ಬ್ಯಾಂಕ್ ರಾಜಕೀಯವನ್ನು ಇದರಿಂದ ನಿವಾರಿಸಬಹುದು. ನಿರ್ಣಯಕ್ಕೆ ಎಲ್ಲ ಪಕ್ಷಗಳೂ ಸಮಾನವಾಗಿ ಬದ್ಧರಾಗಿದ್ದರಿಂದ ಯಾರೂ ಯಾರನ್ನು ಆಕ್ಷೇಪಿಸುವ ಹಾಗಿಲ್ಲ. ಈ ಕುರಿತೂ ನಾವು ಗಂಭೀರವಾಗಿ ಪ್ರಯತ್ನಿಸಬೇಕು.
ಅಲ್ಲಿಯವರೆಗೆ ಇಲ್ಲಿನ ಸಂಸ್ಕೃತಿಯನ್ನು ಉಳಿಸುವುದಕ್ಕೆ ಬೇಕಾದ ಒಂದೇ ಒಂದು ಸೂತ್ರವೆಂದರೆ ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲೀನೀಕರಣವನ್ನು ಸಾಧಿಸುವುದು. ಶಾಸನಾತ್ಮಕವಾಗಿ ಇದು ಸಂಭಾವ್ಯವಾದರೆ ಈ ಯೋಜನೆಯಂತೆ ಕಾಸರಗೋಡನ್ನು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಕರ್ನಾಟಕದ ಒಳನಾಡು ಎಂಬಂತೆ ನಡೆಸಿಕೊಳ್ಳಬೇಕು. ಮಾತ್ರವಲ್ಲ ಗಡಿನಾಡು ಎಂಬ ನೆಲೆಯಲ್ಲಿ ವಿಶೇಷವಾದ ಸೌಲಭ್ಯಗಳಿಗೆ ಅವಕಾಶವನ್ನು ಕಲ್ಪಿಸಬೇಕು. ಇದಕ್ಕಾಗಿ ಕಾಸರಗೋಡು ಸಾಂಸ್ಕೃತಿಕ ಪ್ರಾಧಿಕಾರವೊಂದನ್ನು ಕರ್ನಾಟಕ ಸರಕಾರ ಸ್ಥಾಪಿಸಬೇಕು. ಅದರ ಉಸ್ತುವಾರಿಯನ್ನು ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಿಗೆ ವಹಿಸಿ ಎಲ್ಲ ಅಕಾಡೆಮಿಗಳ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುಸ್ತಕ ಪ್ರಾಧಿಕಾರಗಳ ಅಧ್ಯಕ್ಷರು ಅಥವಾ ಪ್ರತಿನಿಧಿಗಳು ಅದರಲ್ಲಿ ಸದಸ್ಯರಾಗಬೇಕು. ಕಾಸರಗೋಡಿನಿಂದಲೂ ಅರ್ಹತೆಯ ಮೇಲೆ ಪ್ರತಿನಿಧಿಗಳ ಸೇರ್ಪಡೆ ಯಾಗಬೇಕು. ಕರ್ನಾಟಕದ ಬಜೆಟಿನಲ್ಲಿ ಪ್ರತ್ಯೇಕ ಅನುದಾನವನ್ನು ಕಾಸರಗೋಡು ಪ್ರಾಧಿಕಾರಕ್ಕೆ ನೀಡಿ ಅದರ ಮೂಲಕ ಕಾಸರಗೋಡಿನ ಸಾಂಸ್ಕೃತಿಕ, ಶೈಕ್ಷಣಿಕ ಸಮೃದ್ಧಿಯನ್ನು ಸಾಧಿಸುವುದಕ್ಕೆ ಸರಕಾರ ಬದ್ಧವಾಗಬೇಕು.
ಕೇರಳ ಸರಕಾರದಿಂದ ಸಂವಿಧಾನಬದ್ಧವಾಗಿ ಸಿಗಲೇ ಬೇಕಾದ ಸವಲತ್ತು ಸೌಲಭ್ಯಗಳನ್ನು ಪಡೆಯುವುದಕ್ಕಿರುವ ಎಲ್ಲ ಪ್ರಯತ್ನಗಳನ್ನೂ ಸಂವಾದಿಯಾಗಿ ಮುಂದುವರಿಸುತ್ತಲೇ ಇರಬೇಕು. ಯಾವ ಕಾರಣಕ್ಕೂ ನಾವಿಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳಾಗಿ ಬದುಕುವ ದಯನೀಯ ಪರಿಸ್ಥಿತಿ ಉಂಟಾಗಬಾರದು.
ಹೀಗೆ ರಚನಾತ್ಮಕವಾಗಿ-ಪ್ರಾಯೋಗಿಕವಾಗಿ ಮುಂದುವರಿಯ ಬೇಕಾದರೆ ಕಾಸರ ಗೋಡಿನಿಂದ ಒಕ್ಕೊರಲಿನ ಒಗ್ಗಟ್ಟಿನ ಕರೆಯೊಂದು ಮೂಡಿಬರಬೇಕು. ಈ ವಿಷಯಗಳಲ್ಲಿ ನಾವೆಲ್ಲರೂ ಒಂದು ಎನ್ನುವ ಸಂದೇಶ ಕೇರಳಕ್ಕೂ ಕರ್ನಾಟಕಕ್ಕೂ ಪರಿಣಾಮಕಾರಿಯಾದ ರೀತಿಯಲ್ಲಿ ಮುಟ್ಟಬೇಕು. ಸಮಸ್ತ ಕನ್ನಡಿಗರ ಹೃದಯವನ್ನು ಅದು ತಟ್ಟಬೇಕು.
ಭಿನ್ನತೆಯಲ್ಲಿ ಏಕತೆ – ಪ್ರತ್ಯೇಕತೆಯಲ್ಲಿ ಏಕತೆ ಎನ್ನುವುದು ನಮ್ಮ ರಾಷ್ಟ್ರದ ಸಂಸ್ಕೃತಿಯೇ ಆಗಿರುವುದರಿಂದ ವಿವಿಧ ಸಂಘಟನೆಗಳಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲಿ ಹಂಚಿಹೋದ ಕನ್ನಡಿಗರೆಲ್ಲ ತಮ್ಮ ಐಡೆಂಟಿಟಿಯನ್ನು ಉಳಿಸಿಕೊಂಡೇ ಪ್ರತ್ಯೇಕತೆಯನ್ನು ಬದಿಗಿರಿಸಿ ಒಂದು ಉದ್ದೇಶಕ್ಕಾಗಿ ಏಕತೆಯನ್ನು ಐಕ್ಯಮಂತ್ರದ ಅಡಿಗಲ್ಲಿನಲ್ಲಿ ಸ್ವೀಕರಿಸಬೇಕು. ಕಾಸರಗೋಡಿನ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಒಗ್ಗಟ್ಟಿನಿಂದ ಸಂಘಟಿತರಾಗಬೇಕು.
ಸಂಬಂಧಿಸಿದವರೆಲ್ಲ ಪರಸ್ಪರ ಪ್ರೀತಿ ವಿಶ್ವಾಸದಿಂದ ಈ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನನ್ನ ಕಳಕಳಿಯ ವಿನಂತಿ. ತಮ್ಮಿಂದ ಪೂರಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುವ.
ಡಾ| ರಮಾನಂದ ಬನಾರಿ, ಮಂಜೇಶ್ವರ
ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಲೇಖಕರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್ ಅವ್ಯವಹಾರ ಉಲ್ಲೇಖ: ದಿನೇಶ್ ಗುಂಡೂರಾವ್
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್.ರಾಜಣ್ಣ
MUST WATCH
ಹೊಸ ಸೇರ್ಪಡೆ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.