ಸೀನ್ ಅಬೋಟ್‌ವಿಲ್ ಪುಕೋವ್‌ಸ್ಕಿಗೆ ಬೌನ್ಸರ್ ಏಟು
Team Udayavani, Mar 5, 2018, 6:05 AM IST
ಮೆಲ್ಬರ್ನ್: ಆಸ್ಟ್ರೇಲಿಯದ ವೇಗಿ ಸೀನ್ ಅಬೋಟ್ ಮತ್ತೂಂದು ಘಾತಕ ಬೌನ್ಸರ್ ಮೂಲಕ ಸುದ್ದಿಯಾಗಿದ್ದಾರೆ. 2014ರ ನವೆಂಬರ್‌ನಲ್ಲಿ ಆಸೀಸ್ ಆರಂಭಕಾರ ಫಿಲಿಪ್ ಹ್ಯೂಸ್ ಅವರ ದುರ್ಮರಣಕ್ಕೆ ಕಾರಣವಾದ ಅಬೋಟ್ ಅವರ ಬೌನ್ಸರ್ ಈ ಬಾರಿ ವಿಕ್ಟೋರಿಯಾದ 20ರ ಹರೆಯದ ಬ್ಯಾಟ್ಸ್‌ಮನ್ ವಿಲ್ ಪುಕೋವ್‌ಸ್ಕಿ ಅವರ ತಲೆಗೆ ಬಂದು ಅಪ್ಪಳಿಸಿದೆ. ಆದರೆ ಪುಕೋವ್‌ಸ್ಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮೆಲ್ಬರ್ನ್ನ “ಜಂಕ್ಷನ್ ಓವಲ್’ನಲ್ಲಿ ನಡೆಯುತ್ತಿರುವ ಶೆಫೀಲ್ಡ್ ಶೀಲ್ಡ್ ಕೂಟದ ವೇಳೆ ಈ ದುರ್ಘಟನೆ ಸಂಭವಿಸಿದೆ. ರವಿವಾರ ವಿಕ್ಟೋರಿಯಾ ತಂಡದ ದ್ವಿತೀಯ ಇನ್ನಿಂಗ್ಸಿನ 19ನೇ ಓವರ್ ವೇಳೆ ಪುಕೋವ್‌ಸ್ಕಿ ಬೌನ್ಸರ್ ಏಟಿಗೆ ಸಿಲುಕಿದರು. ನ್ಯೂ ಸೌತ್ ವೇಲ್ಸ್ ತಂಡದ ವೇಗಿ ಸೀನ್ ಅಬೋಟ್ ಅವರ ಬೌನ್ಸರ್ ಒಂದನ್ನು ತಡೆಯುವಾಗ ಚೆಂಡು ಹೆಲ್ಮೆಟ್‌ಗೆ ಹೋಗಿ ಅಪ್ಪಳಿಸಿತು. ಏಟಿನ ರಭಸಕ್ಕೆ ಪುಕೋವ್‌ಸ್ಕಿ ಮೊಣಕಾಲೂರಿ ಕುಸಿದರು. ಕೂಡಲೇ ಅಬೋಟ್, ಅಂಪಾಯರ್ ಹಾಗೂ ವೈದ್ಯರು ಧಾವಿಸಿ ಬಂದರು. “ಕ್ರಿಕೆಟ್ ವಿಕ್ಟೋರಿಯಾ’ದ ಸಿಬಂದಿಗಳು ಪುಕೋವ್‌ಸ್ಕಿ ಅವರನ್ನು ಮೈದಾನದಿಂದ ಕರೆದೊಯ್ದರು.
ಈ ಘಟನೆಯಿಂದ ತತ್ತರಿಸಿದ ಸೀನ್ ಅಬೋಟ್, ಸಹಜ ಸ್ಥಿತಿಗೆ ಮರಳಲು ಬಹಳ ವೇಳೆ ಹಿಡಿಯಿತು. ಪುಕೋವ್‌ಸ್ಕಿ ನಿವೃತ್ತರಾದ ಬಳಿಕ ಕ್ರೀಸಿಗೆ ಬಂದ ವಿಕ್ಟೋರಿಯಾ ನಾಯಕ ಆರನ್ ಫಿಂಚ್, ಘಟನೆಗೆ ಕಾರಣರಾದ ಅಬೋಟ್ ಅವರನ್ನು ಸಮಾಧಾನಪಡಿಸುತ್ತಿರುವ ದೃಶ್ಯ ಕಂಡುಬಂತು.
“ಪುಕೋವ್‌ಸ್ಕಿಗೆ ಗಂಭೀರ ಏಟು ಬಿದ್ದಿಲ್ಲ. ಅವರ ಸ್ಥಿತಿಯನ್ನು ನಾವು ಮುಂದಿನ ಕೆಲವು ದಿನಗಳ ಕಾಲ ಪರಿಶೀಲಿಸಬೇಕಾಗುತ್ತದೆ. ಹೀಗಾಗಿ ಪುಕೋವ್‌ಸ್ಕಿ ಸದ್ಯ ತಂಡಕ್ಕೆ ಮರಳುವುದಿಲ್ಲ…’ ಎಂದು ಕ್ರಿಕೆಟ್ ವಿಕ್ಟೋರಿಯಾದ ವೈದ್ಯ ಟ್ರೆಫರ್ ಜೇಮ್ಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಲ್ ಪುಕೋವ್‌ಸ್ಕಿ ಬದಲು ಡೇನಿಯಲ್ ಕ್ರಿಸ್ಟಿಯನ್ ಅವರನ್ನು ವಿಕ್ಟೋರಿಯಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇದು ಪುಕೋವ್‌ಸ್ಕಿಗೆ ಬಿದ್ದ 2ನೇ ಚೆಂಡಿನೇಟು. 2017ರಲ್ಲಿ, ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ವರ್ಷದಂದೇ, ತನ್ನ ಹುಟ್ಟುಹಬ್ಬದ ದಿನವೇ ಮಿಡ್-ಆಫ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಬ್ಯಾಟ್ಸ್‌ಮನ್ ಬಾರಿಸಿದ ಚೆಂಡು ತಲೆಗೆ ಬಡಿದಿತ್ತು. ಈ ಘಟನೆಯಿಂದ ಅವರು 3 ತಿಂಗಳು ವಿಶ್ರಾಂತಿ ಪಡೆಯಬೇಕಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.