ಯಾರದ್ದೋ ವಾಹನ, ಇನ್ಯಾರಿಗೋ ದಂಡ…!
Team Udayavani, Mar 6, 2018, 12:44 AM IST
ಉಡುಪಿ: ಆ ಮಹಿಳೆ ತನ್ನ ಸ್ಕೂಟರ್‌ನಲ್ಲಿ ಉಡುಪಿಗೆ ಬಂದಿದ್ದೇ ಒಂದು ಬಾರಿ. ಅದೂ ಸ್ಕೂಟರ್ ಸರ್ವೀಸ್‌ಗೆ. ಇನ್ನು ಮಂಗಳೂರು ನಗರಕ್ಕೆ? ಊಹುಂ! ಒಂದು ಬಾರಿಯೂ ಹೋಗಿಲ್ಲ! ಅಂಥದ್ದರಲ್ಲಿ ಮಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘಿಸಲಾಗಿದೆ ಎಂದು 2 ದಂಡದ ನೋಟಿಸ್ ನೀಡಿದರೆ? ಮಂಗಳೂರು ಸಂಚಾರಿ ಪೊಲೀಸರ ಎಡವಟ್ಟಿನಿಂದಾಗಿ ವೃಥಾ ದಂಡ ಹಾಕಿಸಿಕೊಂಡ ಉಡುಪಿ ಜಿಲ್ಲೆಯ ಚೇರ್ಕಾಡಿ ಗ್ರಾಮದ ಪೇತ್ರಿಯ ಮಹಿಳೆಯೊಬ್ಬರು ಈಗ ಪೊಲೀಸ್ ಠಾಣೆಗೆ ಅಲೆವಂತಾಗಿದೆ. ಕೇಸು ಹಾಕಿ ಎಡವಟ್ಟು ಮಾಡಿದ ಪೊಲೀಸರು ಮಾತ್ರ ತಣ್ಣಗೆ ಕೂತಿದ್ದಾರೆ.
ಪೇತ್ರಿಯ ಆ ಮಹಿಳೆ ಬಳಿ ಇರುವುದು ಕೆಎ 20 ಇಪಿ 1162 ನಂಬರಿನ ಹೋಂಡಾ ಆ್ಯಕ್ಟಿವಾ ಸ್ಕೂಟರ್. ಇದಕ್ಕೆ ನಂತೂರಿನಲ್ಲಿ ಜ.19ರಂದು ಸಂಜೆ 4.40ರಂದು ಟ್ರಾಫಿಕ್ ನಿಯಮ ಉಲ್ಲಂಘಿಸಲಾಗಿದೆ ಎಂದು (ಹಿಂಬದಿ ಸವಾರನಿಗೆ ಹೆಲ್ಮೆಟ್ ಇಲ್ಲ ಮತ್ತು ಡಿಫೆಕ್ಟಿವ್ ನಂಬರ್ ಪ್ಲೇಟ್) ಎಂದು ಕೇಸು ಹಾಕಲಾಗಿದೆ. ಇದಕ್ಕೆ ನೋಟಿಸ್ ಕೂಡ ಜಾರಿಯಾಗಿದೆ. ಅಚ್ಚರಿ ಎಂದರೆ, ಮಹಿಳೆ ಮಂಗಳೂರಿಗೆ ಹೋಗಿಯೇ ಇಲ್ಲ. ನೋಟಿಸ್ ಹಿನ್ನೆಲೆಯಲ್ಲಿ ಬೇಸರಿಸಿಕೊಂಡ ಅವರು ಪತಿಯನ್ನು ಕರೆದುಕೊಂಡು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಗೆ ಹೋಗಿ ತಪ್ಪು ದಂಡ ವಿಧಿಸಿದ್ದನ್ನು ಹೇಳಿದ್ದು, ಹಿಂಪಡೆವಂತೆ ಮನವಿ ಮಾಡಿದ್ದಾರೆ. ಮತ್ತೆ ಬನ್ನಿ ಎಂದಿದ್ದಾರಂತೆ!
ವೃಥಾ ಅಲೆದಾಟ
ಮನವಿ ಹಿನ್ನೆಲೆಯಲ್ಲಿ ಸಿಸಿ ಟಿವಿ ಕೆಮರಾ ಪರಿಶೀಲಿಸಿದ ಟ್ರಾಫಿಕ್ ಪೊಲೀಸರು ದಂಡ ಕಟ್ಟೋದು ಬೇಡ. ಮತ್ತೆ ನೋಟಿಸ್ ಬಂದರೆ ದಾಖಲೆ ಸಮೇತ ಬನ್ನಿ ಎಂದಿದ್ದಾರೆ. ನಮ್ಮ ಸ್ಕೂಟರ್‌ಗಿದ್ದ ನಂಬರನ್ನೇ ಬೇರೆ ಗಾಡಿ ಹಾಕಿ ಓಡಾಡುತ್ತಿದ್ದಿರಬಹುದಾ ಎಂಬ ಭಯದಿಂದ ಠಾಣೆ ಮೆಟ್ಟಿಲೇರಿದ್ದೆವು. ದೂರಿಗೆ ಮಂಗಳೂರುವರೆಗೆ ಹೋಗಿ ಬಂದಿದ್ದೇವೆ. ಈಗ ಮತ್ತೆ ನೋಟಿಸ್ ಬಂದರೆ ಬನ್ನಿ ಎಂದಿದ್ದಾರೆ. ನಾವು ಮಾಡದ ತಪ್ಪಿಗೆ ವೃಥಾ ಅಲೆದಾಟ, ಸಾವಿರಾರು ರೂ. ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಮಹಿಳೆಯ ಪತಿ ನಾರಾಯಣ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಶೀಲಿಸಿ ಪ್ರಕರಣ ವಾಪಾಸ್
ಸಿಸಿಟಿವಿ ಕೆಮೆರಾದಲ್ಲಿ ಪರಿಶೀಲಿಸಿ, ಅವರ ವಾಹನವಲ್ಲ ಎಂದು ಖಾತರಿಯಾದರೆ ದಂಡ ಪ್ರಕರಣ ವಾಪಸ್ ಪಡೆಯುತ್ತೇವೆ. ದಂಡದಲ್ಲಿ ನಮೂದಿಸಿದ ಸಂಖ್ಯೆ, ಕೆಮರಾದಲ್ಲೂ ಸರಿಯಾಗಿದ್ದರೆ, 2ನೇ ನೋಟಿಸ್ ಬರುತ್ತದೆ. ನಮ್ಮ ಕಡೆಯಿಂದ ತಪ್ಪಾಗಿದ್ದಾರೆ ಮತ್ತೆ ನೋಟಿಸ್ ಬರುವುದೇ ಇಲ್ಲ. ಒಂದು ವೇಳೆ ಬಂದರೆ, ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪೊಲೀಸರು ಹೇಳಿದ್ದಾರೆ.
ಒಂದೇ ಬಾರಿ ಮೂರು ಕೇಸ್!
ಮತ್ತೂಂದು ಪ್ರಕರಣದಲ್ಲಿ 2017ರ ನ.2ರ ಸಂಜೆ ಬೈಕ್ ಸವಾರರೊಬ್ಬರು 5.30ಕ್ಕೆ ಬಪ್ಪನಾಡು ಜಂಕ್ಷನ್‌ನಲ್ಲಿ ಸಂಚರಿಸುತ್ತಿದ್ದಾಗ ಸಂಚಾರಿ ನಿಯಮ ಉಲ್ಲಂಘಿಸಿದ ಬಗ್ಗೆ 3 ನೋಟಿಸ್ ಪಡೆದಿದ್ದಾರೆ. ಇಲ್ಲಿ ಸವಾರರು ಹೆಲ್ಮೆಟ್ ಹಾಕದೇ ಚಾಲನೆ ಮಾಡಿದ್ದು, ಅವರ ಮೇಲೆ ಒಂದು ಪ್ರಕರಣ ಮಾತ್ರ ದಾಖಲಿಸಬೇಕಿತ್ತು. ಆದರೆ ಓವರ್ ಸ್ಪೀಡ್‌ಗೆ 200 ರೂ., ಟ್ರಾಫಿಕ್ ನಿಯಮ ಉಲ್ಲಂಘನೆಗೆ 200 ರೂ., ಹೆಲ್ಮೆಟ್ ರಹಿತ ಚಾಲನೆಗೆ 100 ರೂ. ಎಂದು ಮೂರು ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘನೆ ಬಗ್ಗೆ ದಾಖಲೆ ಕೇಳಿದರೆ ಪೊಲೀಸರು ಅದನ್ನು ನೀಡಿಲ್ಲ. ಯಾವುದೋ ವಾಹನ, ಯಾವುದೋ ನಂಬರ್ ನೋಡಿ ಮನಬಂದಂತೆ ಪೊಲೀಸರು ನೋಟಿಸ್ ಜಾರಿ ಮಾಡುತ್ತಾರೆ ಎಂದು ಬೈಕಿನ ಸವಾರ ಹೇಳಿದ್ದಾರೆ.
ಪೊಲೀಸರದ್ದೇ ತಪ್ಪಿದ್ದರೆ ಏನು ಮಾಡಬೇಕು?
ಸಂಚಾರ ನಿಯಮ ಉಲ್ಲಂಘನೆ ಕುರಿತಾಗಿ ಚಾಲಕರು ತಪ್ಪು ಮಾಡದೇ ಪೊಲೀಸರು ದಂಡ ವಿಧಿಸಿದ್ದರೆ, ಎನ್‌ಫೋರ್ಸ್ ಮೆಂಟ್ ಆಫೀಸ್‌ಗೆ ತೆರಳಿ ದೂರು ಕೊಡಬಹುದು. ದಂಡ ಪ್ರಕರಣ ಹಿಂಪಡೆಯುವಂತೆ ಮಾಡಬಹುದು. ಜತೆಗೆ ಈ ವಿಚಾರದಲ್ಲಿ ನ್ಯಾಯಾಲಯ ಮೆಟ್ಟಿಲೇರುವ ಅವಕಾಶವೂ ಇದೆ.
‘ತಪ್ಪು ಆಗದಂತೆ ಸೂಚಿಸಿದ್ದೇನೆ’
ನೋಟಿಸ್ ಜಾರಿಗೆ ಮುನ್ನ ವಾಹನದ ನೋಂದಣಿ ಸಂಖ್ಯೆ ಸರಿಯಾಗಿ ಪರಿಶೀಲಿಸಿ ದಾಖಲು ಮಾಡುವಂತೆ ಸೂಚಿಸಿದ್ದೇನೆ. ವಾಹನ ಸಾಗುತ್ತಿರುವ ವೇಳೆ ನಂಬರ್ ಸರಿಯಾಗಿ ಕಾಣದಿದ್ದ ಸಂದರ್ಭ ಅದನ್ನು ದಾಖಲು ಮಾಡುವ ವೇಳೆ ಅಂಕೆ ಬರೆದದ್ದು ತಪ್ಪಾದರೆ ಸಮಸ್ಯೆಯಾಗುತ್ತದೆ. ದಾಖಲೆ ಇಲ್ಲದೆ ಪ್ರಕರಣ ದಾಖಲಿಸಿಕೊಳ್ಳದಂತೆ ಪೊಲೀಸರಿಗೆ ಸೂಚಿಸಿದ್ದೇನೆ. ತಮ್ಮಿಂದ ನಿಯಮ ಉಲ್ಲಂಘನೆಯಾಗಿಲ್ಲ ಎಂಬ ಖಾತ್ರಿಯಿದ್ದರೆ, ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬಹುದು.
– ಉಮಾಪ್ರಶಾಂತ್, ಮಂಗಳೂರು ಸಂಚಾರ ಡಿಸಿಪಿ
– ಚೇತನ್ ಪಡುಬಿದ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.