ಫಲಕದಿಂದಿಲ್ಲ ನಯಾಪೈಸೆ ಆದಾಯ
Team Udayavani, Mar 6, 2018, 12:24 PM IST
ಬೆಂಗಳೂರು: ನಗರದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಆಯುಕ್ತರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಪಕ್ಷಬೇಧ ಮರೆತು ಪಾಲಿಕೆಯ ಎಲ್ಲ ಸದಸ್ಯರು ಒತ್ತಾಯಿಸಿದರು.
ಸೋಮವಾರ ಬಿಬಿಎಂಪಿ ಬಜೆಟ್ ಮೇಲಿನ ಚರ್ಚೆಯ ವೇಳೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ಪಾಲಿಕೆಯ ಬಜೆಟ್‌ನಲ್ಲಿ ಜಾಹೀರಾತು ವಿಭಾಗದಿಂದ 75 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಆದರೆ, ಜಾಹೀರಾತು ಫಲಕಗಳಿಂದ ನೂರಾರು ಕೋಟಿ ರೂ. ಆದಾಯಕ್ಕೆ ಅವಕಾಶವಿದ್ದರೂ, ಜಾಹೀರಾತು ಮಾಫಿಯಾದಿಂದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ದೂರಿದರು.
ನಗರದ ರಾಜಕಾಲುವೆ, ಸ್ಮಶಾನ, ದೇವಾಲಯಗಳ ಆವರಣ, ಪಾದಚಾರಿ ಮಾರ್ಗಗಳು ಹೀಗೆ ಎಲ್ಲೆಂದರಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ. ಆದರೆ, ಇವುಗಳಿಂದ ಪಾಲಿಕೆಗೆ ನಯಾ ಪೈಸೆ ಆದಾಯ ಬರುತ್ತಿಲ್ಲ. ಹೀಗಾಗಿ ಮುಲಾಜಿಲ್ಲದೆ ಅವುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಅದಕ್ಕೆ ದನಿಗೂಡಿಸಿದ ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಮಾಜಿ ಮೇಯರ್‌ಗಳಾದ ಮಂಜುನಾಥ ರೆಡ್ಡಿ, ಕಟ್ಟೆ ಸತ್ಯಾನಾರಾಯಣ ಸೇರಿದಂತೆ ಹಲವು ಪಾಲಿಕೆ ಸದಸ್ಯರು, ನಮ್ಮ ಅಧಿಕಾರವನ್ನು ನಿಮಗೆ ನೀಡುತ್ತೇವೆ ಕೂಡಲೇ ಅಂತಹ ಫಲಕನಗಳನ್ನು ಕಿತ್ತುಹಾಕಿ ಎಂದು ಆಯುಕ್ತರನ್ನು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಆರ್.ಸಂಪತ್‌ರಾಜ್, ವಾಹನ ನಿಲುಗಡೆ, ಜಾಹೀರಾತು, ಒಎಫ್ಸಿ ಶುಲ್ಕ ಸಂಗ್ರಹದಲ್ಲಿಯೇ ದುಬೈ ಹಾಗೂ ಸಿಂಗಾಪುರ ಪಾಲಿಕೆಗಳು ಆಡಳಿತ ನಡೆಸುತ್ತಿದ್ದು, ಅಂತಹ ಮಾದರಿಗಳನ್ನು ಪಾಲಿಕೆ ಅಳವಡಿಸಿಕೊಳ್ಳಬೇಕಿದೆ ಎಂದರು. ಇದೇ ವೇಳೆ ಮಾಜಿ ಮೇಯರ್ ಮಂಜುನಾಥರೆಡ್ಡಿ,
ಕೈತಪ್ಪುತ್ತಿರುವ ಪಾಲಿಕೆ ಆಸ್ತಿ: ಕಾನೂನು ಕೋಶದ ವೈಫಲ್ಯದಿಂದಾಗಿ ಪಾಲಿಕೆಯ ಆಸ್ತಿಗಳು ಕೈತಪ್ಪುವ ಆತಂಕದಲ್ಲಿದ್ದು, ಪಾಲಿಕೆಯಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ 1,548 ಪ್ರಕರಣಗಳ ಪೈಕಿ 800ಕ್ಕೂ ಹೆಚ್ಚು ಕೇಸುಗಳನ್ನು ಒಂದೇ ಕೋಮಿನ 8 ವಕೀಲರಿಗೆ ನೀಡಲಾಗಿದೆ ಎಂದು ಪದ್ಮನಾಭರೆಡ್ಡಿ ದೂರಿದರು.
ಕಾನೂನು ಕೋಶದಲ್ಲಿ 87 ವಕೀಲರಿದ್ದು, ಆ ಪೈಕಿ 8 ಮಂದಿಗೆ ಒಟ್ಟು 854 ಕೇಸುಗಳನ್ನು ಕೊಡಲಾಗಿದೆ. ಇನ್ನು 25 ವಕೀಲರಿಗೆ ಒಂದೇ ಒಂದು ಕೇಸೂ ಕೊಟ್ಟಿಲ್ಲ. ಉಳಿದವರಿಗೆ 1ರಿಂದ 9 ಕೇಸುಗಳನ್ನು ನೀಡಲಾಗಿದೆ. ಒಬ್ಬ ವ್ಯಕ್ತಿಗೆ ನೂರಾರು ಕೇಸುಗಳನ್ನು ನೀಡಿದರೆ ಇನ್ನೆಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾನೆಂದು ತಿಳಿಯಬಹುದು ಎಂದು ಟೀಕಿಸಿದರು.
ಭರತ್‌ಲಾಲ್ ಮೀನಾ ಅವರು ಆಯುಕ್ತರಾಗಿದ್ದ ವೇಳೆ ವಸತಿ ಸಮುತ್ಛಯ ನಿರ್ಮಾಣ ಮಾಡುವವರು ಶೇ.10ರಷ್ಟು ಜಾಗವನ್ನು ವಾಹನ ನಿಲುಗಡೆ ಮೀಸಲಿರಿಸಬೇಕು. ಇಲ್ಲವಾದಲ್ಲಿ ಶೇ.10ರಷ್ಟು ಮೊತ್ತವನ್ನು ಪಾಲಿಕೆಗೆ ಶುಲ್ಕವಾಗಿ ಪಾವತಿಸಬೇಕು ಎಂಬ ನಿಯಮ ಜಾರಿಗೊಳಿಸಲಾಗಿತ್ತು.
ಆ ಮೂಲಕ ಒಟ್ಟು 189 ಕೋಟಿ ರೂ. ಪಾಲಿಕೆಗೆ ಸಂಗ್ರಹವಾಗಿತ್ತು. ಆದರೆ, ಅದನ್ನು ಪ್ರಶ್ನಿಸಿದ ಬಿಲ್ಡರ್‌ಗಳು ನ್ಯಾಯಾಲಯದ ಮೊರೆ ಹೋಗಿದ್ದು, ಕಾನೂನು ಕೋಶದ ವೈಫಲ್ಯದಿಂದ ಅವರ ಪರವಾಗಿ ತೀರ್ಪುಬಂದಿದ್ದು, ಇದೀಗ 189 ಕೋಟಿ ರೂ. ಪಾವತಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷಮೆ ಕೋರಿದ ಮೇಯರ್: ಪಾಲಿಕೆಯ ಬಜೆಟ್ ಅಂದಾಜು ಪುಸ್ತಕದ ಮೇಲೆ ನಾಡಪ್ರಭು ಕೆಂಪೇಗೌಡರಿಗೆ ಅಪಮಾನವಾಗಿರುವುದಕ್ಕೆ ಮೇಯರ್ ಆರ್.ಸಂಪತ್‌ರಾಜ್ ಕ್ಷಮೆ ಯಾಚಿಸಿದರು. ಕೆಂಪೇಗೌಡರಿಗೆ ಅಪಮಾನ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯರು ಸಭಾತ್ಯಾಗ್ಯ ಮಾಡಿದ್ದರು. ಸೋಮವಾರವೂ ಅದನ್ನು ಪ್ರಸ್ತಾಪಿಸಿದಾಗ ಮೇಯರ್, ಸಣ್ಣ ಪುಟ್ಟ ದೋಷಗಳಿಂದ ಭಾವಚಿತ್ರ ತಪ್ಪಾಗಿ ಮುದ್ರಿತವಾಗಿದೆ. ಅದಕ್ಕೆ ಕ್ಷಮೆ ಕೋರುತ್ತಿದ್ದೇನೆ ಎಂದು ತಿಳಿಸಿದರು.
ಕ್ಷಮೆ ಕೇಳಬೇಕು: ಕೆಂಪೇಗೌಡರ ಭಾವಚಿತ್ರ ತಪ್ಪಾಗಿ ಮುದ್ರಣವಾಗಿರುವುದಕ್ಕೆ ನಾವು ಕ್ಷಮೆ ಕೇಳಿದ್ದು, ಬಿಜೆಪಿಯವರು ಬೆಂಗಳೂರು ರಕ್ಷಿಸಿ ಪಾದಯಾತ್ರೆ ವೆಬ್‌ಸೈಟ್‌ನಲ್ಲಿ ಬೇರೆ ರಾಜ್ಯಗಳ ರಸ್ತೆ ಹಾಗೂ ಕಸದ ಫೋಟೋ ಹಾಕಿ ಬೆಂಗಳೂರಿಗೆ ಅಪಮಾನ ಮಾಡಿರುವುದಕ್ಕೆ ಬಿಜೆಪಿಯವರು ನಗರದ ಜನತೆಯಲ್ಲಿ ಕ್ಷಮೆ ಕೇಳಬೇಕು ಎಂದು ಮಾಜಿ ಮೇಯರ್ ಮಂಜುನಾಥ ರೆಡ್ಡಿ ಒತ್ತಾಯಿಸಿದರು.
ಅದಕ್ಕೆ ಉತ್ತರಿಸಿದ ಪದ್ಮನಾಭರೆಡ್ಡಿ, ಪಾವಗಡದ ಸೋಲಾರ್ ಪಾರ್ಕ್ ಉದ್ಘಾಟನೆ ವೇಳೆ ವಿದೇಶದ ಫೋಟೋದ ಜತೆ ಮುಖ್ಯಮಂತ್ರಿಗಳ ಫೋಟೋ ಹಾಕಿದ್ದೀರಾ ಎಂದಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಬೇರೆ ಊರಿನ ಕಸದ ಹಾಗೂ ರಸ್ತೆ ಗುಂಡಿಗಳ ಫೋಟೋ ಹಾಕಿ ಬೆಂಗಳೂರಿಗೆ ಅಪಮಾನ ಮಾಡಿರುವುದರಿಂದ ನೀವು ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುವುದು ಮಂಜುನಾಥ ರೆಡ್ಡಿ ಎಚ್ಚರಿಕೆ ನೀಡಿದರು.
ಆಯುಕ್ತರಿಗಾಗಿ ಒಂದು ಸಿನಿಮಾ!: ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಟ್ಟಡಗಳಿಂದ ಸೇವಾ ಶುಲ್ಕ ಸಂಗ್ರಹಿಸುವಲ್ಲಿ ಪಾಲಿಕೆ ಅಧಿಕಾರಿಗಳು ವಿಫಲವಾಗಿರುವ ಕುರಿತು ವ್ಯಂಗ್ಯವಾಡಿ ಮಾತನಾಡಿದ ಪದ್ಮನಾಭರೆಡ್ಡಿ, “ನಾನೊಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ.
ಅದಕ್ಕೆ ಪಾಲಿಕೆಯ ಆಯುಕ್ತರೇ ನಾಯಕರಾಗಿದ್ದು, ಸಿನಿಮಾಗೆ “ವಿಧಾನಸೌಧಕ್ಕೆ ಬೀಗ ಹಾಕಿ, ಮಂಜುನಾಥಪ್ರಸಾದ್ ಐಎಎಸ್’ ಎಂದು ಹೆಸರಿಡುತ್ತೇನೆ,’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, “ಆ ಚಿತ್ರಕ್ಕೆ ನಾನೇ ನಾಯಕ, ನೀವೇ ವಿಲನ್,’ ಎಂದು ಕುಟುಕಿದರು. ಪದ್ಮನಾಭರೆಡ್ಡಿ ಪ್ರತಿಕ್ರಿಯಿಸಿ, “ಚಿತ್ರದಲ್ಲಿ ನಿಮ್ಮ ಪಾತ್ರವಿಲ್ಲ. ಆಯುಕ್ತರೇ ನಾಯಕ. ಅವರು ಒಪ್ಪಿದ ಕೂಡಲೇ ಚಿತ್ರಕಥೆ ಸಿದ್ಧಪಡಿಸುತ್ತೇನೆ,’ ಎಂದು ಕಿಚಾಯಿಸಿದರು.
ಕುಟುಂಬದವರ ಹೆಸರಲ್ಲಿ ಅಕ್ರಮ: ಅಕ್ರಮ ಫಲಕ ತೆರವುಗೊಳಿಸಬೇಕಾದ ಪಾಲಿಕೆಯ ಕಂದಾಯ ಅಧಿಕಾರಿಗಳೇ ತಮ್ಮ ಕುಟುಂಬದವರ ಹೆಸರಲ್ಲಿ ಫಲಕಗಳನ್ನು ಅಳವಡಿಸಿದ್ದಾರೆ. ಅಲ್ಲದೆ, ಜಾಹೀರಾತು ಮಾಫಿಯಾದವರ ಜತೆಗೆ ಸೇರಿ ಬಿಬಿಎಂಪಿಗೆ ಮೋಸ ಮಾಡುತ್ತಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮೇಯರ್ ಸಂಪತ್‌ರಾಜ್ ಪ್ರತಿಕ್ರಿಯಿಸಿ, ಅಕ್ರಮ ಜಾಹೀರಾತು ಮಾಫಿಯಾ ತಡೆಯಲು ಬಿಬಿಎಂಪಿ ಸದಸ್ಯರು ಸಹಕರಿಸಬೇಕು.
ತಮ್ಮ ವಾರ್ಡ್‌ನಲ್ಲಿನ ಫಲಕಗಳ ಬಗ್ಗೆ ವಿವರ ನೀಡಿದರೆ, ಅಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು. “ಬಿಬಿಎಂಪಿ ಸದಸ್ಯರು ಫಲಕಗಳನ್ನು ಲೆಕ್ಕ ಹಾಕಲು ಹೊರಟರೆ ಕೂಡಲೆ ಜೀವ ಬೆದರಿಕೆ ಬರುತ್ತದೆ. ಅದರ ಬದಲು ಅಧಿಕಾರಿಗಳನ್ನು ಹೊಣೆ ಮಾಡುವ ಮೂಲಕ ಕ್ರಮಕ್ಕೆ ಮುಂದಾಗಬೇಕಿದೆ,’ ಎಂದು ಕಟ್ಟೆ ಸತ್ಯನಾರಾಯಣ ಸಲಹೆ ನೀಡಿದರು.
ಜಾಹೀರಾತು ನೋಡಿ ಮಗು ಮೂರ್ಛೆ ಹೋಯ್ತು!: ಇದೇ ವೇಳೆ ಗಿರಿನಗರ ವಾರ್ಡ್ ಸದಸ್ಯೆ ನಂದಿನಿ ವಿಜಯ ವಿಠuಲ ಮಾತನಾಡಿ, “ನಮ್ಮ ವಾರ್ಡ್‌ನಲ್ಲಿ ಜಾಹೀರಾತು ಫಲಕದಲ್ಲಿನ ದೆವ್ವದ ಚಿತ್ರ ನೋಡಿ ಮಗುವೊಂದು ಮೂರ್ಛೆ ಬಿದ್ದ ಪ್ರಸಂಗ ನಡೆದಿದ್ದು, ಈ ರೀತಿಯ ಭಯ ಹುಟ್ಟಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕು,’ ಎಂದು ಆಗ್ರಹಿಸಿದರು. ಅದಕ್ಕೆ ದನಿಗೂಡಿಸಿದ ಕೆಲ ಸದಸ್ಯರು, ನಗರದಲ್ಲಿ ಅಶ್ಲೀಲ ಜಾಹೀರಾತುಗಳನ್ನು ತೆರವು ಮಾಡಬೇಕಿದ್ದು, ಅಂತಹ ಫಲಕಗಳಿದ್ದರೆ ಮುಲಾಜಿಲ್ಲದೆ ತೆರವು ಮಾಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.