ಆಪತ್ಕಾಲದಲ್ಲಿ ಆ್ಯಂಬುಲೆನ್ಸ್ ಏರಿ ಬರುವ ರಾಧಿಕಾ
Team Udayavani, Mar 7, 2018, 8:15 AM IST
ಪುಟ್ಟ ಹುಡುಗಿಯೊಬ್ಬಳ ಹುಟ್ಟುಹಬ್ಬದ ಆಚರಣೆ ನಡೆಯುತ್ತಿತ್ತು. ಆ ದಿನಕ್ಕಾಗಿ ತಿಂಗಳುಗಳಿಂದ ಕಾದಿದ್ದಳಾಕೆ. ಅಂಗಡಿಯಿಂದ ಹೊಸ ಬಟ್ಟೆಯನ್ನು ಅಪ್ಪ ಅಮ್ಮನಿಂದ ಕೊಡಿಸಿಕೊಂಡಿದ್ದಳು. ಶಾಲೆಯ ಸ್ನೇಹಿತೆಯರು, ಅಕ್ಕಪಕ್ಕದ ಮನೆಯವರು ಎಲ್ಲರೂ ನೆರೆದಿದ್ದರು. ಪುಟ್ಟಿ ಕೇಕ್ ಕಟ್ ಮಾಡಿ ಸಂಭ್ರಮಾಚರಣೆಯ ಸಂದರ್ಭದಲ್ಲೇ ಕರ್ತವ್ಯದ ಕರೆ ಬಂದಿತ್ತು! ಆ ಕರೆಗೆ ಓಗೊಟ್ಟ ತಾಯಿ ತನ್ನ ಪುಟ್ಟ ಮಗಳ ಹುಟ್ಟಿದ ಹಬ್ಬದಂದು ಅವಳ ಜೊತೆ ಇರಲಾಗುತ್ತಿಲ್ಲವೆಂಬ ಒಂಚೂರು ದುಃಖದಿಂದಲೇ ಮನೆ ಬಿಟ್ಟಿದ್ದರು. ಉಡುಪು ಬದಲಾಯಿಸಿಕೊಂಡು ಸೀದಾ ಆ್ಯಂಬುಲೆನ್ಸ್ ಚಲಾಯಿಸಿಕೊಂಡು ಹೋಗಿಬಿಟ್ಟರಾಕೆ.
ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ ಜರುಗಿತ್ತು. ಮಂಗಳೂರಿನ ಒಂದೇ ಕುಟುಂಬದ 5 ಮಂದಿ ಮೃತ ಪಟ್ಟಿದ್ದರು. ಆ ಮೃತ ದೇಹಗಳನ್ನು ತಂದು ಮನೆಯವರಿಗೆ ತಲುಪಿಸುವಷ್ಟರಲ್ಲಿ ರಾತ್ರಿ ಕಳೆದಿತ್ತು. ಈ ಘಟನೆ ನಡೆದು ಕೆಲ ವರ್ಷಗಳೇ ಕಳೆದಿದ್ದರೂ ಮಗಳ ಪ್ರತಿ ಹುಟ್ಟಿದ ಹಬ್ಬದ ದಿನದಂದು ಆ ಒಂದು ಕರಾಳ ನೆನಪು ಮತ್ತೆ ಮತ್ತೆ ಕಾಡುತ್ತದೆ. ಅಂದು ಮಗಳ ಹುಟ್ಟುಹಬ್ಬದಾಚರಣೆಯ ಮಧ್ಯದಲ್ಲೇ, ಅರ್ಧ ರಾತ್ರಿಯಲ್ಲಿ ಆ್ಯಂಬುಲೆನ್ಸ್ ಚಲಾಯಿಸಿಕೊಂಡು ಹೋದ ಚಾಲಕಿ ಸಿ.ಎಸ್. ರಾಧಿಕಾ. ತಮ್ಮ ವೃತ್ತಿಜೀವನದಲ್ಲಿ, ಮೇಲೆ ಹೇಳಿದಕ್ಕೂ ತುರ್ತಿನ, ಸಂದಿಗ್ದ ಸನ್ನಿವೇಶಗಳನ್ನು ರಾಧಿಕಾ ಎದುರಿಸಿದ್ದಾರೆ.
ಅದೊಂದು ದುರ್ಘಟನೆಯಲ್ಲಿ ಮಂಗಳೂರಿನಲ್ಲಿ ಮಗುವೊಂದು ಮೃತಪಟ್ಟಿತ್ತು. ಮಗುವಿನ ಹೆತ್ತವರು ಇದ್ದಿದ್ದು ಬಳ್ಳಾರಿಯಲ್ಲಿ.
ಹೀಗಾಗಿ ಮಗುವಿನ ಶವವನ್ನು ಮನೆಯವರಿಗೆ ತಲುಪಿಸುವ ಜವಾಬ್ದಾರಿ ರಾಧಿಕಾ ಹೆಗಲೇರಿತು. ಅವರು ಆ್ಯಂಬುಲೆನ್ಸ್
ಚಲಾಯಿಸಿಕೊಂಡು ಮಗುವನ್ನು ಅಷ್ಟು ದೂರ ಕರೆದೊಯ್ದು ಮನೆಯವರಿಗೆ ತಲುಪಿಸಿದರೆ ಅವರು ಸ್ವೀಕರಿಸಲಿಲ್ಲ. ಪ್ರತಿಭಟನೆ ನಡೆಯುವ ಪರಿಸ್ಥಿತಿ ತಲೆದೋರಿತ್ತು. ಇವರ ಜಗಳದಲ್ಲಿ ಮಗು ಅನಾಥವಾಗುವುದು ಬೇಡ ಎಂದು ಕೊಂಡ ರಾಧಿಕಾ ತಾನೇ ಆ ಮಗುವನ್ನು ವಾಪಸ್ ಮಂಗಳೂರಿಗೆ ಕರೆ ತಂದು ತನ್ನ ಸ್ವಂತ ಖರ್ಚಿನಲ್ಲಿ ಶವಸಂಸ್ಕಾರ ನೆರವೇರಿಸಿದರು.
ಟ್ರಾಫಿಕ್, ಅಡೆತಡೆ ಏನೇ ಇದ್ದರೂ ಚಾಣಾಕ್ಷತನದಿಂದ ಆ್ಯಂಬುಲೆನ್ಸ್ ಚಲಾಯಿಸುವ ವೃತ್ತಿ ಹೆಣ್ಮಕ್ಕಳಿಗಲ್ಲ ಎನ್ನುವ ಅಭಿಪ್ರಾಯವನ್ನು ಸುಳ್ಳಾಗಿಸಿರುವ ರಾಧಿಕಾ ಇದಕ್ಕೆ ಮೊದಲು ಅಂಗನವಾಡಿ ಸಹಾಯಕಿಯಾಗಿದ್ದರು! ಮುಂದೊಂದು ದಿನ ಆ್ಯಂಬುಲೆನ್ಸ್ ಚಾಲಕ ಹುದ್ದೆಯಂಥ ಸವಾಲಿನ ವೃತ್ತಿಯನ್ನು ಆರಿಸಿಕೊಳ್ಳುತ್ತೇನೆಂದು ಅವರು ಯಾವತ್ತೂ ಎಣಿಸಿರಲಿಲ್ಲ. ವೃತ್ತಿಯಷ್ಟೇ ಸವಾಲುಗಳನ್ನು ಆಕೆ ಬದುಕಿನಲ್ಲೂ ಎದುರಿಸಿದ್ದಾರೆ. ಪತಿ ಸುರೇಶ್ ಆ್ಯಂಬುಲೆನ್ಸ್ ಚಾಲಕರಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು, ಗಂಡ- ಹೆಂಡತಿಯಿದ್ದ ಪುಟ್ಟ ಸಂಸಾರಕ್ಕೆ ಬರ ಸಿಡಿಲು ಬಂದು ಅಪ್ಪಳಿಸಿತು. ಪತಿ ಕ್ಯಾನ್ಸರ್ ನಿಂದ ಮೃತ ಪಟ್ಟರು. ರಾಧಿಕಾ ಏಕಾಂಗಿಯಾಗಿದ್ದರು. ಅನಿರೀಕ್ಷಿತ ತಿರುವುಗಳು, ಸಂಕಷ್ಟಗಳು ಇವ್ಯಾವುದಕ್ಕೂ ಅವರು ಹಿಂಜರಿದವರೇ ಅಲ್ಲ. ಬಿಡುವಿನ ವೇಳೆಯಲ್ಲಿ ಪತಿಯಿಂದ ಕಲಿತಿದ್ದ ಆ್ಯಂಬುಲೆನ್ಸ್ ಚಾಲನೆ ಕೈ ಹಿಡಿದಿತ್ತು. ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ಎಲ್ಲವನ್ನೂ ಧೈರ್ಯವಾಗಿ ಎದುರಿಸಿ ಮುನ್ನುಗ್ಗಿದರು.
ಮಂಗಳೂರಿನ ಕುಳಾಯಿಗುಡ್ಡೆಯಲ್ಲಿ ವಾಸವಾಗಿರುವ ರಾಧಿಕಾ 7 ನೇ ತರಗತಿಗೇ ಶಿಕ್ಷಣ ಕೊನೆಗೊಳಿಸಿದ್ದರೂ, ಜೀವನದಿಂದ
ಕಲಿತದ್ದು ಸಾಕಷ್ಟು. ಈಗ ಅವರ ಬಳಿ 11 ಆ್ಯಂಬುಲೆನ್ಸ್‌ಗಳಿವೆ. ಅವರ ಕೈ ಕೆಳಗೆ 7 ಮಂದಿ ಚಾಲಕರು ಕೆಲಸ ಮಾಡುತ್ತಿದ್ದಾರೆ.
ಕೆ.ಎಂ.ಸಿ ಸೇರಿ ಹಲವು ಆಸ್ಪತ್ರೆಗಳಿಗೆ ಸೇವೆ ಒದಗಿಸುತ್ತಿದ್ದಾರೆ. 2010ರಲ್ಲಿ ಮಂಗಳೂರಿನಲ್ಲಿ ವಿಮಾನ ಅಪಘಾತದ ವೇಳೆ
ಗಾಯಾಳುಗಳನ್ನು ತಮ್ಮ ಆ್ಯಂಬುಲೆನ್ಸ್‌ನಲ್ಲೇ ಆಸ್ಪತ್ರೆಗಳಿಗೆ ಸಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.
ಪ್ರತಿಯೊಬ್ಬ ಮಹಿಳೆಯಲ್ಲೂ ಅದಮ್ಯ ಶಕ್ತಿ ಇದೆ. ಆದರೆ, ಅದನ್ನು ಗುರುತಿಸಬೇಕಾದವರು ನಾವೇ. ಧೈರ್ಯ ಒಂದಿದ್ದರೆ ಮಹಿಳೆಗೆ
ಅಸಾಧ್ಯವಾದ ಕೆಲಸ ಯಾವುದೂ ಇಲ್ಲ.
● ಸಿ.ಎಸ್. ರಾಧಿಕಾ, ಆ್ಯಂಬುಲೆನ್ಸ್ ಚಾಲಕಿ
ವಿದ್ಯಾ ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.