ನೀರಿನ ನಿರ್ವಹಣೆಗೆ ಟ್ಯಾಂಕೇ ಇಲ್ಲ!
Team Udayavani, Mar 12, 2018, 10:34 AM IST
ಪಡುಪಣಂಬೂರು: ಗಾಂಧಿಗ್ರಾಮ ಪುರಸ್ಕಾರ ಪಡೆದಿರುವ ಪಡುಪಣಂಬೂರು ಗ್ರಾಮ ಪಂಚಾಯತ್‌ನಲ್ಲಿ ಒಂದು ಲಕ್ಷ ಲೀ. ಸಾಮರ್ಥ್ಯದ ಎರಡು ನೀರಿನ ಟ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಹೆದ್ದಾರಿ ವಿಸ್ತರಣೆಗಾಗಿ ಕೆಡವಲಾಗಿದೆ. ಇದರಿಂದಾಗಿ ಇಲ್ಲಿ ನೀರಿನ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ.
ಒಟ್ಟು ಮೂರು (ಪಡುಪಣಂಬೂರು, ಬೆಳ್ಳಾಯರು, ತೋಕೂರು) ಗ್ರಾಮದ 5 ವಾರ್ಡ್‌ಗಳಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್‌ನಲ್ಲಿ 3 ಸದಸ್ಯರ ಒಂದು ವಾರ್ಡ್‌ನಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಮೂಲಕ ಗ್ರಾಮದ ನೀರು ನಿರ್ವಹಣೆ ನಡೆಯುತ್ತಿದೆ. ಈ ಗ್ರಾಮದಲ್ಲಿ 1,326 ಗ್ರಾಮಸ್ಥರಿದ್ದಾರೆ. 3 ಪಂಪ್ ಶೆಡ್‌ಗಳಿದೆ. ಸುಮಾರು 520 ಮನೆಗೆ ನೀರಿನ ಸಂಪರ್ಕವಿದೆ. ಇಲ್ಲಿ ಎರಡು ದಿನಗಳಿಗೊಮ್ಮೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಸರಕಾರಿ ಶಾಲೆಗೆ ಉಚಿತ ಸಂಪರ್ಕ ನೀಡಲಾಗಿದೆ. ಪಕ್ಕದ ಬೆಳ್ಳಾಯರು ವಾರ್ಡ್‌ನ ಸುಮಾರು 60 ಮನೆಗಳಿಗೆ ನೀರು ಸರಬರಾಜು ಮಾಡುವುದರೊಂದಿಗೆ ಹಳೆಯಂಗಡಿ ಗಾ.ಪಂ. ನ 22 ಮನೆಗಳಿಗೆ ಸಂಪರ್ಕ ನೀಡಿರುವುದು ವಿಶೇಷವಾಗಿದೆ.
ಮುಂದೆ ಹೇಗೆ..?
ಈ ವ್ಯಾಪ್ತಿಗೆ ದಿನಕ್ಕೆ ಒಂದು ಲಕ್ಷ ಲೀ. ನೀರು ಅಗತ್ಯವಿದೆ. ಕಳೆದ ವರ್ಷ ಟ್ಯಾಂಕ್ ಇದ್ದುದರಿಂದ ಮೇ ತಿಂಗಳಿನವರೆಗೂ ಯಾವುದೇ ಸಮಸ್ಯೆ ಕಾಡಿಲ್ಲ. ಆದರೆ ಈ ಬಾರಿ ಟ್ಯಾಂಕ್ ಇಲ್ಲದೇ ಹಾಗೂ ನೀರು ಹೆಚ್ಚಾಗಿ ಪೋಲಾಗುತ್ತಿರುವುದರಿಂದ ಕೊನೆಯವರೆಗೂ ನೀರಿನ ಒರತೆ ಕಡಿಮೆಯಾದಲ್ಲಿ ಟ್ಯಾಂಕರ್
ಮೂಲಕವಾದರೂ ನೀರು ನೀಡುವ ಚಿಂತನೆ ಗ್ರಾ.ಪಂ.ನದ್ದಾಗಿದೆ.
ಟ್ಯಾಂಕ್ ಇಲ್ಲದೆ ಸರಬರಾಜು..!
ಗ್ರಾಮದಲ್ಲಿ ಒಂದು ಲಕ್ಷ ಲೀ. ಸಾಮರ್ಥ್ಯದ ಎರಡು ಟ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದು ಅದನ್ನು ಹೆದ್ದಾರಿ ವಿಸ್ತರಣೆಗಾಗಿ ಕೆಡವಲಾಗಿದ್ದು, ನೇರವಾಗಿ ಪಂಪ್‌ಹೌಸ್‌ನಿಂದಲೇ ಸಂಪರ್ಕ ನೀಡುತ್ತಿದೆ. ಆಗಾಗ ಅಲ್ಲಲ್ಲಿ ಪೈಪ್ ಗಳು ಒಡೆದಿರುವುದರಿಂದಾಗಿ ನೀರಿನ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.
ಟ್ಯಾಂಕ್ ನಿರ್ಮಾಣಕ್ಕೆ ಶೀಘ್ರ ಕ್ರಮ
ಟ್ಯಾಂಕ್ ಇದ್ದಾಗ ಹಾಗೂ ಇಲ್ಲದಿರುವಾಗ ಒಂದಷ್ಟು ವ್ಯತ್ಯಾಸ ಆಗಿರುವುದು ಸಹಜ. ಕನಿಷ್ಠ ಎರಡು ದಿನಕ್ಕಾದರೂ ನೀರು ಬರುತ್ತಿದೆ. ಆದರೆ ಇದನ್ನೇ ನೆಚ್ಚಿಕೊಳ್ಳದೆ ಟ್ಯಾಂಕ್ ನಿರ್ಮಾಣ ಮಾಡಲು ಪಂ. ಶೀಘ್ರ ಪ್ರಯತ್ನ ಮಾಡಬೇಕು.
– ರಾಜು, ಸ್ಥಳೀಯರು
ಸಮಸ್ಯೆ ಕಾಡುವ ಸಾಧ್ಯತೆ
ನೇರವಾಗಿ ಸಂಪರ್ಕ ನೀಡಿರುವುದರಿಂದ ನೀರು ಪೋಲಾಗುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆದರೂ ಆದಷ್ಟು ನಿರ್ವಹಣೆಯಲ್ಲಿ ದೋಷ ಬಾರದಿರಲು ಪ್ರಯತ್ನ ನಡೆಸುತ್ತಿದ್ದೇವೆ. ಟ್ಯಾಂಕ್ ನಿರ್ಮಾಣವಾದರೇ ಇದೆಲ್ಲಕ್ಕೂ ಪರಿಹಾರ ಸಿಗಬಹುದು. ಮೇ ತಿಂಗಳಿನ ವರೆಗೂ ಕಳೆದ ಬಾರಿ ಯಾವುದೇ ಸಮಸ್ಯೆ ಕಾಡಿಲ್ಲ.
– ಮೋಹನ್‌ದಾಸ್, ಅಧ್ಯಕ್ಷರು,
ಪಡುಪಣಂಬೂರು ಗ್ರಾ.ಪಂ.
ನರೇಂದ್ರ ಕೆರೆಕಾಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.