ಕರ್ನಿರೆ ಜಾರಂದಾಯ ದೈವಸ್ಥಾನದ ಅಭಿವೃದ್ಧಿ: ಪೂರ್ವಭಾವಿ ಸಭೆ
Team Udayavani, Mar 13, 2018, 3:33 PM IST
ಮುಂಬಯಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸೀಮೆಯ ಕರ್ನಿರೆ ಗ್ರಾಮದಲ್ಲಿ ಗ್ರಾಮಸ್ಥರು ಆರಾಧಿಸಿಕೊಂಡು ಬಂದಿರುವ ಜಾರಂದಾಯ ದೈವಸ್ಥಾನದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆಯು ಮಾ.7ರಂದು ಗೋರೆಗಾಂವ್ ಪೂರ್ವದ ದಿಂಡೋಶಿ ಸನಿಹದ ಬೋಂಬೆ 63 ಹೊಟೇಲಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಶೆಟ್ಟಿ ಅವರು, ಗ್ರಾಮದ ಮತ್ತು ದೈವಸ್ಥಾನದ ಸಮಗ್ರ ಮಾಹಿತಿ ನೀಡುತ್ತ ಜಾರಂದಾಯ ದೈವವನ್ನು ನಂಬಿದ ಎಲ್ಲ ಗ್ರಾಮಸ್ಥರಿಗೆ ದೈವದ ಅನುಗ್ರಹ ಲಭಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಬಾರಿಯ ನೇಮೋತ್ಸವದಂದು ಒಂದು ಕೆ.ಜಿ. ತೂಕದ ಚಿನ್ನದ ಖಡ್ಸಲೆಯನ್ನು ನೀಡುವುದಾಗಿ ಗ್ರಾಮಸ್ಥರೆಲ್ಲರೂ ತೀರ್ಮಾನಿಸಿದ್ದೇವೆ. ಈ ಪುಣ್ಯ ಕಾರ್ಯಕ್ಕೆ ಮುಂಬಯಿಯಲ್ಲಿ ನೆಲೆಸಿರುವ ಕರ್ನಿರೆ ಗ್ರಾಮಸ್ಥರು ತಮ್ಮ ಶಕ್ತಿಯ ಅನುಸಾರ ಬಂಗಾರ ಅಥವಾ ಬಂಗಾರದ ಮೊಬಲಗನ್ನು ನೀಡಿ ಜಾರಂದಾಯ ದೈವಕ್ಕೆ ನೀಡಿದ ವಾಗ್ಧಾನ ಪೂರೈಸಿಕೊಡಬೇಕು ಎಂದರು.
ಆಡಳಿತ ಸಮಿತಿಯ ಕೋಶಾಧಿಕಾರಿ ಮೋಹನ್ ಶೆಟ್ಟಿ ಕಳೆದ ವರ್ಷದ ಉತ್ಸವದ ಲೆಕ್ಕ ಪತ್ರಗಳನ್ನು ವಿವರಿಸುತ್ತಾ, ದೈವಸ್ಥಾನದ ಅಭಿವೃದ್ಧಿಯಲ್ಲಿ ಗ್ರಾಮಸ್ಥರು ಒಗ್ಗಟ್ಟಿನಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿಯ ಅಭಿವೃದ್ಧಿ ಕಾರ್ಯದಲ್ಲಿ ಮುಂಬಯಿಯಲ್ಲಿ ನೆಲೆಸಿರುವ ಗ್ರಾಮಸ್ಥರು ವಿವಿಧ ರೀತಿಯ ಸೇವೆ ನೀಡಿ ದೈವ ಕಾರ್ಯ ಉತ್ತಮ ರೀತಿಯಲ್ಲಿ ನಡೆಯುವಂತೆ ಪ್ರೋತ್ಸಾಹ ನೀಡಿದ್ದಾರೆ. ಪ್ರತಿ ವರ್ಷ ವಿವಿಧ ಸೇವೆಗಳ ಜವಾಬ್ದಾರಿಯನ್ನು ಭಕ್ತರು ವಹಿಸಿಕೊಂಡಿರುವುದರಿಂದ ಯಾವುದೇ ರೀತಿಯ ಆರ್ಥಿಕ ತೊಂದರೆ ಸಂಭವಿಸಿಲ್ಲ. ಬಂಗಾರದ ಖಡ್ಸಲೆ ಒಪ್ಪಿಸುವುದಕ್ಕೆ ದೇಣಿಗೆಯನ್ನು ಇಚ್ಛಾನುಸಾರ ಸಮರ್ಪಿಸಿ ಎಂದರು.
ಗ್ರಾಮದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡುತ್ತ, ನಮ್ಮೆಲ್ಲರ ಕಾರ್ಯ ಚಟುವಟಿಕೆಗಳ ಹಿಂದೆ ಜಾರಂದಾಯ ದೈವದ ಶಕ್ತಿಯಿದೆ ಎಂದು ನಂಬಿದವರು ನಾವು. ದೈವದ ಮೇಲೆ ನಂಬಿಕೆಯಿರಿಸಿ ನಾವೆಲ್ಲರೂ ಒಗ್ಗಟ್ಟಿನಲ್ಲಿ ಕರ್ನಿರೆ ಗ್ರಾಮದ ಸೇವೆ ಮಾಡಬೇಕು. ದೈವಕ್ಕೆ ಬಂಗಾರದ ಖಡ್ಸಲೆ ಒಪ್ಪಿಸಲು ಮಂಗಳೂರಿನ ಕೆನರಾ ಜ್ಯುವೆಲ್ಲರ್ನಲ್ಲಿ ಈಗಾಗಲೇ ಬಂಗಾರದ ಕುಸುರಿ ಕೆಲಸ ನಡೆಯುತ್ತಿದೆ. ಕರ್ನಿರೆ ಗ್ರಾಮಸ್ಥರಾದ ನಾವೆಲ್ಲರೂ ಶ್ರದ್ಧೆ, ಭಕ್ತಿಯಿಂದ ಸಹಕಾರ ನೀಡೋಣ ಎಂದು ತಿಳಿಸಿದರು.
ದೈವಸ್ಥಾನದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡುತ್ತಿರುವ ಬಿಲ್ಲವ ಚೇಂಬರ್ ಆಫ್ ಕಾಮರ್ಸ್‌ನ ನಿರ್ದೇಶಕ, ಉದ್ಯಮಿ ಗಂಗಾಧರ್ ಎನ್. ಅಮೀನ್ ಕರ್ನಿರೆ ಮಾತನಾಡುತ್ತ, ದೈವಸ್ಥಾನದ ಪುಣ್ಯದ ಕಾರ್ಯಕ್ಕೆ ಮುಂಬಯಿಯಲ್ಲಿ ನೆಲೆಸಿರುವ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ಸಂತಸ ತಂದಿದೆ. ದೈವಕ್ಕೆ ಅರ್ಪಿಸುವ ಬಂಗಾರದ ಖಡ್ಸಲೆಗೂ ಎಲ್ಲರೂ ದೇಣಿಗೆ ನೀಡಿ, ದೈವದ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು.
ದಹಿಸರ್ ರವೀಂದ್ರ ಹೊಟೇಲ್‌ನ ಮಾಲಕ ದಿ| ಕರ್ನಿರೆ ಸಾಧು ಶೆಟ್ಟಿ ಅವರ ಪುತ್ರ, ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ ಮಾತನಾಡುತ್ತ, ತಂದೆಯವರು ನೀಡುತ್ತಿದ್ದ ಸಹಕಾರದಂತೆ ಮುಂದಿನ ದಿನಗಳಲ್ಲೂ ಗ್ರಾಮದ ಮತ್ತು ದೈವಸ್ಥಾನದ ಸೇವಾ ಕಾರ್ಯಗಳಲ್ಲಿ ನಮ್ಮ ಕುಟುಂಬ ಭಾಗಿಯಾಗುತ್ತದೆ. ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಸೇವೆಗೈಯುವುದು ನಿಜಕ್ಕೂ ಸಂತಸದ ವಿಷಯ ಎಂದರು. ಪ್ರಭಾಕರ ಶೆಟ್ಟಿ (ಅಣ್ಣು) ಬೈಲುಮನೆ ಕರ್ನಿರೆ ಉಪಸ್ಥಿತರಿದ್ದರು. ಸಭೆಯಲ್ಲಿ ಕರ್ನಿರೆ ಗ್ರಾಮದ ಗ್ರಾಮಸ್ಥರು ಸೇರಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.