ಮಹಿಳೆಯರಿಗೆ ಸ್ಥಾನಮಾನ ಸಿಗುವ ವಾತಾವರಣ ನಿರ್ಮಾಣ ಅಗತ್ಯ
Team Udayavani, Mar 14, 2018, 12:08 PM IST
ಬೆಂಗಳೂರು: ಮುಂದಿನ ಪೀಳಿಗೆಯ ಮಹಿಳೆಯರು ತಮ್ಮ ಕನಸನ್ನು ನನಸಾಗಿಸಿಕೊಳ್ಳುವ, ನಿರ್ಣಾಯಕ ಹಾಗೂ ಸ್ವತಂತ್ರ ನಿರ್ಧಾರ ಕೈಗೊಳ್ಳುವ ವಾತಾವರಣ ನಿರ್ಮಿಸುವತ್ತ ಎಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಎಸ್‌ಬಿಐ ಬೆಂಗಳೂರು ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕರಾದ ಅರ್ಚನಾ ರಸ್ತೋಗಿ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದ ಮಹತ್ವದ ಜವಾಬ್ದಾರಿಯುತ ಶೇ.80ರಷ್ಟು ಹುದ್ದೆಗಳಲ್ಲಿ ಮಹಿಳೆಯರೇ ಇದ್ದಾರೆ.
ಯುದ್ದ ವಿಮಾನವನ್ನೂ ಹಾರಿಸಿ ಸೈ ಎನಿಸಿಕೊಂಡಿದ್ದಾರೆ. ಇಷ್ಟಾದರೂ ಮಹಿಳೆಗೆ ಮಹತ್ವದ ಹುದ್ದೆ, ಜವಾಬ್ದಾರಿ, ಗುರಿ ನಿರ್ವಹಿಸುವ ಅವಕಾಶ ಬಂದಾಗ ಕಾರ್ಯ ನಿರ್ವಹಣಾ ಸಾಮರ್ಥಯದ ಬಗ್ಗೆ ಸಂಶಯ ವ್ಯಕ್ತಪಡಿಸುವುದು ದುರದೃಷ್ಟಕರ ಎಂದು ಹೇಳಿದರು. ಕಾರ್ಪೊರೇಟ್ ಕಂಪನಿಗಳ ನಿರ್ದೇಶಕ ಮಂಡಳಿಯಲ್ಲಿ ಮಹಿಳಾ ಪ್ರಾತಿನಿಧ್ಯ ನಾಮ್‌ಕೆವಾಸ್ತೆ ಎಂಬಂತಾಗಿದೆ.
ಬಹಳಷ್ಟು ಕಡೆ ತಮ್ಮ ಸಂಬಂಧಿಗಳನ್ನೇ ಮಹಿಳಾ ನಿರ್ದೇಶಕರನ್ನಾಗಿ ನೇಮಿಸಿರುವುದು ಕಂಡುಬಂದಿದೆ. ಯಾವುದೇ ಜವಾಬ್ದಾರಿ, ಸವಾಲನ್ನು ಮಹಿಳೆ ಸಮರ್ಥವಾಗಿ ಎದುರಿಸುವಂತ ವಾತಾವರಣವನ್ನು ಸಮಾಜವೇ ನಿರ್ಮಿಸಬೇಕು. ಬ್ಯಾಂಕಿಂಗ್ ವಲಯದಲ್ಲಿ ಮಹಿಳೆಯರಿಗೆ ಅಗತ್ಯವಿರುವ ಎಲ್ಲ ನೆರವು, ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳಾದ ಡಾ.ಸಿ.ಪುಷ್ಪಲತಾ, ಅರುಣಾ ರವಿ, ಸಿ.ಜಿ.ಸುಶೀಮಾ ವಿದ್ಯಾರತ್ನರಾಜ್, ಡಾ.ಪಿ.ವಿ.ಪದ್ಮಜಾ, ಪದ್ಮಾ ಶೇಷಾದ್ರಿ, ರೇವತಿ ವೆಂಕಟರಾಮನ್, ದೀಪ್ತಿ ರಾಮ್‌ಕುಮಾರ್, ಡಾ.ಮಧುರಾ ಎಂ.ಛತ್ರಪತಿ ಅವರನ್ನು ಸನ್ಮಾನಿಸಲಾಯಿತು. ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ, ಮಹಿಳಾ ಉದ್ಯಮಿಗಳ ಸಮಿತಿ ಅಧ್ಯಕ್ಷೆ ಜೆಸ್ಸಿ ಲಾರೆನ್ಸ್, ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಎಂ.ಸಿ.ದಿನೇಶ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.