ಮುದ್ದಿನ ಬೆಕ್ಕಿನ ಜಾಣ್ಮೆ
Team Udayavani, Mar 15, 2018, 4:39 PM IST
ಜಯನಗರದಲ್ಲಿ ಒಂದು ಪುಟ್ಟಕುಟುಂಬವಿತ್ತು. ಮನೆಯ ಯಜಮಾನನೇ ಕುಟುಂಬಕ್ಕೆ ಆಸರೆಯಾಗಿದ್ದ. ಹೀಗಿರುವಾಗ ಯಜಮಾನ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದನು. ಆಗ ಜಮೀನಿನ ಕೆಲಸ ನೋಡಿಕೊಳ್ಳಲು ಯಾರೂ ಇಲ್ಲದಂಥ ಪರಿಸ್ಥಿತಿ ತಲೆದೋರುತ್ತದೆ. ಮನೆಯಲ್ಲಿ ಕೂಡಿಟ್ಟಿದ್ದ ಆಹಾರದ ದಾಸ್ತಾನು ಮುಗಿಯುತ್ತಾ ಬಂದಾಗ ಮನೆಯೊಡತಿಗೆ ಅದೇ ದೊಡ್ಡ ಚಿಂತೆಯಾಗಿಬಿಡುತ್ತದೆ. ಆ ಮನೆಯಲ್ಲಿ ಒಂದು ಪುಟ್ಟ ಬೆಕ್ಕು ಇತ್ತು.
ತುಂಬಾ ಸೋಮಾರಿ ಅದು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಹಾಲು- ಮೊಸರು ಇತ್ಯಾದಿಗಳನ್ನ ಕದ್ದುತಿಂದು ದವಸ ಧಾನ್ಯಗಳಿದ್ದ ಕೋಣೆಯಲ್ಲಿ ಮಲಗುತ್ತಿತ್ತು. ಅದು ಗಡದ್ದಾಗಿ ತಿಂದು ಮಲಗಿರುವ ಹೊತ್ತಿನಲ್ಲಿ ಇಲಿಗಳ ಸೈನ್ಯ ಆಹಾರವನ್ನು ಇಷ್ಟಿಷ್ಟೇ ಖಾಲಿ ಮಾಡುತ್ತಿತ್ತು. ಮನೆಯ ಬಡತನದ ಪರಿಸ್ಥಿತಿ ಬೆಕ್ಕಿಗೂ ತಟ್ಟಿತು. ಎಂದಿನಂತೆ ಈಗ ಅಡುಗೆ ಮನೆಯಲ್ಲಿ ಹಾಲು- ಮೊಸರು ಇರುತ್ತಿರಲಿಲ್ಲ. ಹೀಗೆ ಹಸಿವಿನಿಂದ ಮೀಯಾಂವ್ ಎಂದು ಕೂಗುತ್ತಾ ಬೆಕ್ಕು ಮನೆ ತುಂಬಾ ಅಡ್ಡಾಡತೊಡಗಿತು.
ಒಂದು ದಿನ ಬೆಕ್ಕಿಗೆ ಇಲಿಗಳ ಸೈನ್ಯ ಎದುರಾಯಿತು. ಇಲಿಗಳಿಗೆ ಬೆಕ್ಕನ್ನು ಕಂಡರೆ ಭಯವಿರಲಿಲ್ಲ. ಏಕೆಂದರೆ ಇಷ್ಟು ದಿನ ಅದು ಒಂದೇ ಒಂದು ಇಲಿಯನ್ನೂ ಹಿಡಿದಿರಲಿಲ್ಲ. ಅಡುಗೆ ಮನೆಯಿಂದ ಹಾಲು- ಮೊಸರು ಕದ್ದು ತಿಂದು ಹಾಯಾಗಿದ್ದಿದ್ದರಿಂದ ಇಲಿಗಳೂ ಇದೂ ಸಸ್ಯಾಹಾರಿ
ಬೆಕ್ಕು ಎಂದು ತಿಳಿದು ನಿಶ್ಚಿಂತೆಯಿಂದ ಇದ್ದವು. ಈ ಸ್ವಾತಂತ್ರ್ಯವನ್ನೇ ಬಳಸಿಕೊಂಡ ಬೆಕ್ಕು ತನ್ನ ಹೊಟ್ಟೆ ತುಂಬಿಸಲು ಇಲಿಗಳ ಮೊರೆ ಹೋಯಿತು. ತನಗೆ ಪ್ರತಿನಿತ್ಯ ಹಾಲು ತಂದುಕೊಡಬೇಕೆಂದು ಅಪ್ಪಣೆ ಹೊರಡಿಸಿತು. ಇಲಿಗಳು ಒಪ್ಪಿಕೊಂಡವು.
ಒಪ್ಪಂದದಂತೆ ಪ್ರತಿ ನಿತ್ಯ ಮೂರು ಇಲಿಗಳು ಹಿತ್ತಲಿನಲ್ಲಿ ಹಾಲು ತಂದಿಟ್ಟು ಹೋಗುತ್ತಿದ್ದವು. ಬೆಕ್ಕು ಬಾಯಿ ಚಪ್ಪರಿಸಿ ಸುಮ್ಮನಿರುತ್ತಿತ್ತು. ಮೂರು ದಿನ ಸುಮ್ಮನಿದ್ದ ಬೆಕ್ಕು ನಾಲ್ಕನೇ ದಿನದಿಂದ ಇಲಿಗಳನ್ನು ಹಿಡಿಯಲು ಪ್ರಾರಂಭಿಸಿತು. ಮಿಕ್ಕ ಇಲಿಗಳಿಗೆ ಅನುಮಾನವೇ ಬರಲಿಲ್ಲ. ವಾರಗಳ ಕಾಲ ಬೆಕ್ಕಿನ ಉಪಾಯ ಮುಂದುವರಿದಾಗ ಇಲಿಗಳ ಸಂಖ್ಯೆ ಕಡಿಮೆಯಾಗತೊಡಗಿತು. ಇದರಿಂದ ಮಿಕ್ಕ ಇಲಿಗಳಿಗೆ ಅನುಮಾನ ಬರತೊಡಗಿತು. ಆದರೆ ಅಷ್ಟರಲ್ಲಾಗಲೇ ಬರೀ ಬೆರಳೆಣಿಕೆಯಷ್ಟು ಇಲಿಗಳು ಮಾತ್ರ ಉಳಿದಿದ್ದವು.
ಬೆಕ್ಕಿನ ಉಪಾಯ ಮನೆಯವರಿಗೂ ಗೊತ್ತಾಯಿತು. ಎಲ್ಲರೂ ಬೆಕ್ಕನ್ನು ಹೊಗಳಿ ಮುದ್ದಾಡಿದರು. ಬೆಕ್ಕಿನಿಂದಾಗಿ ದಾಸ್ತಾನಿನಲ್ಲಿ ತಿಂಗಳಿಗಾಗುವಷ್ಟು ಇದ್ದ ಆಹಾರ ಇಲಿಯ ಪಾಲಾಗುವುದು ತಪ್ಪಿತ್ತು. ಅಷ್ಟರಲ್ಲಿ ಮನೆಯ ಯಜಮಾನನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತು. ಮನೆಯ ಪರಿಸ್ಥಿತಿ ಉತ್ತಮವಾಗಿ ಬೆಕ್ಕಿಗೆ ಮತ್ತೆ ಯಥೇಚ್ಚವಾಗಿ ಹಾಲು- ಮೊಸರು ಸಿಗತೊಡಗಿತು.
*ಮಧುಕುಮಾರ್ ಬಿಳಿಚೋಡು
ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.