ಹೊಸ ಯುಗಾದಿ ಬರುತಿದೆ!


Team Udayavani, Mar 17, 2018, 9:59 AM IST

4.jpg

ಯುಗಾದಿ ಅಂದ್ರೆ ಹೊಸದಿನ. ಯುಗಾದಿ ಅನ್ನೋದೇ ಹೊಸತನ.ಯುಗಾದಿ ಅಂದ್ರೆ ಬೇವು ಬೆಲ್ಲ. ಯುಗಾದಿಯೊಂದು ಹಬ್ಬ, ಆ ಖುಷಿಗೇ ಒಬ್ಬಟ್ಟು! ಇವೆಲ್ಲ ಸಂಭ್ರಮಗಳ ಒಟ್ಟು ರೂಪವಾದ ಯುಗಾದಿ, ತಮ್ಮ ಬಾಲ್ಯದ ದಿನಗಳಲ್ಲಿ ಹೇಗಿತ್ತು? ಈಗ ಹೇಗೆಲ್ಲಾ ಬದಲಾಗಿ ಹೋದೆ ಎಂಬುದನ್ನು ಹಿರಿಯ ಕವಿ ಎಚ್ಚೆಸ್ವಿ ಅವರು ಸುಮನೋಹರ ಶೈಲಿಯಲ್ಲಿ ವಿವರಿಸಿದ್ದಾರೆ. ಹಬ್ಬದ ಖುಷಿಗೆ ಪ್ರಬಂಧವಷ್ಟೇ ಅಲ್ಲ, ಒಂದು ಕವಿತೆಯನ್ನೂ ಕೊಟ್ಟಿದ್ದಾರೆ. 

“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂದು ಕವಿ ವಾಣಿ. ಆದರೆ ಹಾಗೆ ಮರಳಿ ಬರುವ ಯುಗಾದಿ ಹೋದವರ್ಷ ಬಂದ ಯುಗಾದಿಯೋ ಅಥವಾ ಈ ವರ್ಷವಷ್ಟೇ ಅವತರಿಸುತ್ತಿರುವ ಹೊಸ ಯುಗಾದಿಯೋ? ಹೋದ ಯುಗಾದಿ ಮತ್ತೆ ಮರಳಿ ಬರದು. ಪ್ರತಿವರ್ಷವೂ ಹೊಸ ಯುಗಾದಿಯೇ ಬರುವಂಥದ್ದು ಎಂಬುದು ಹೊಸ ಕವಿ ವಾಣಿ.

ಬೇಂದ್ರೆ ಪದ್ಯದಲ್ಲಿ ಹೊಂಗೆಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳುತಾ ಇತ್ತು. ಈವತ್ತು ನಮ್ಮ ಮಕ್ಕಳಿಗೆ ಹೊಂಗೆ ಮರ ಯಾವುದೋ ಗೊತ್ತಿಲ್ಲ. ಅಲ್ಲಿ ಕೂತು ಝೇಂಕಾರ ಮಾಡುವ ಭೃಂಗದ ವಿಷಯ ಮೊದಲೇ ತಿಳಿಯದು. ಭೃಂಗವೇ? ಏನದು ಹಾಗಂದರೆ? ಎನ್ನುತ್ತದೆ ನಮ್ಮ ಮೊಮ್ಮಗು. ಭೃಂಗ ಎಂದರೆ ಬೀ ಎಂದು ನಾವು ವಿವರಿಸಬೇಕಾಗುತ್ತದೆ. ಓಹೋ! Beeನೋ ಎಂದು ಮಗು ತನ್ನ ಅನುಭವ ಜಗತ್ತನ್ನು ವಿಸ್ತರಿಸಿಕೊಳ್ಳುತ್ತದೆ.

ನನ್ನ ಬಾಲ್ಯದ ಯುಗಾದಿಗೂ, ಈವತ್ತಿನ ವರ್ತಮಾನದ ಯುಗಾದಿಗೂ ಅದೆಷ್ಟು ಅಂತರ! ಯುಗಾದಿಯ ಬೆಳಿಗ್ಗೆ ನಮ್ಮ ಅಜ್ಜ ತೋಟಕ್ಕೆ ಹೋಗಿ ಬಾಳೆ ಎಲೆ, ಮಾವಿನ ಸೊಪ್ಪು, ಬೇವಿನ ಕುಡಿ ನಮ್ಮ ಮನೆಗೆ ಎಷ್ಟು ಅಗತ್ಯವೋ ಅಷ್ಟನ್ನು ತೆಗೆದುಕೊಂಡು ಬರುತ್ತಾ ಇದ್ದರು. ಈಗ ಮಾವಿನ ಸೊಪ್ಪು , ಬೇವಿನ ಚಿಗುರು, ಗಾಂಧೀ ಬಜಾರಿಗೆ ಅದೆಲ್ಲಿಂದಲೋ ರಾಶಿ ರಾಶಿಯಾಗಿ ಬಂದು ಬಿದ್ದಿರುತ್ತದೆ. ಪರ್ವತದ ಹಾಗೆ ಬಿದ್ದಿರುವ ಮಾವಿನ ಟೊಂಗೆಗಳ ರಾಶಿ ನೋಡಿದರೆ, ಎಷ್ಟೆಷ್ಟು ಮರಗಳು ಈವತ್ತು ಬೋಳಾದವೋ ಎಂಬುದು ಭಯಹುಟ್ಟಿಸುವ ಸಂಗತಿ! ಕಿತ್ತು ತಂದ ಬೇವಿನ ಹೂವಿನ ಟೊಂಗೆಯಲ್ಲಿ ಭೃಂಗಗಳು ಇರುವ ಸಾಧ್ಯತೆಯೇ ಇಲ್ಲ. ಭೃಂಗಗಳಿಗೂ ಬೇವಿನ ಹೂವಿಗೂ ಒಂದೆರಡು ದಿನದ ಹಿಂದೆಯೇ ವಿಚ್ಛೇದನವಾಗಿಬಿಟ್ಟಿರುತ್ತದೆ. ಶಾಸ್ತ್ರಕ್ಕೆ ಎರಡು ಮಾವಿನ ಟೊಂಗೆ , ಒಂದು ಹಿಡಿ ಬೇವಿನ ಸೊಪ್ಪು ತರಲು ನಾನು ಗಾಂಧೀಬಜಾರಿಗೆ ಹೋಗುತ್ತೇನೆ.ಗಾಂಧೀಬಜಾರಿಗೆ ವಾಹನಗಳನ್ನು ಬಿಡುತ್ತಿಲ್ಲ. ನೆಟ್ಟಿಕಲ್ಲಪ್ಪ ಸರ್ಕಲ್ಲಲ್ಲೇ ವಾಹನ ಪಾರ್ಕ್‌ ಮಾಡಿ ನಾನೂ, ನನ್ನ ಮೊಮ್ಮಗಳೂ ಮಾವಿನ ಸೊಪ್ಪು-ಬೇವಿನ ಚಿಗುರಿಗಾಗಿ ಪಾದಯಾತ್ರಿಗಳಾಗಿಯೇ ಗಾಂಧೀಬಜಾರನ್ನು ಪ್ರವೇಶಮಾಡುತ್ತೇವೆ. ಮುಖ್ಯ ರಸ್ತೆಯ ಇಕ್ಕೆಲದಲ್ಲೂ ಆಂಜನೇಯ ಹೊತ್ತುತಂದ ಸಂಜೀವಿನೀ ಪರ್ವತದಂತೆ ಸಾಲು ಸಾಲಾಗಿ ಮಾವಿನ, ಬೇವಿನ ಟೊಂಗೆಗಳ ರಾಶಿ.

ಒಂದು ಹಿಡಿ ಮಾವಿನ ಟೊಂಗೆಗೆ ಚೌಕಾಶಿ ಮಾಡಿ ಇಪ್ಪತ್ತು ರೂಪಾಯಿ ತೆತ್ತು, ಬಾಡಿಹೋದ ಸೊಪ್ಪಿನ ಸಮೇತ ಮನೆಗೆ ಹಿಂದಿರುಗಬೇಕಾಗುತ್ತದೆ. ಅಬ್ಟಾ! ಅದೇನು ಜನ ಗಾಂಧಿಬಜಾರಿನ ರಾಜರಸ್ತೆಯಲ್ಲಿ? ಡಿವಿಜಿ ರಸ್ತೆಯಿಂದ ಗಾಂಧೀಬಜಾರಿಗೆ ಹೋಗಲು ನಾವು ಹರಸಾಹಸ ಮಾಡಬೇಕಾಗುತ್ತದೆ. ಯುಗಾದಿ ಬೆಂಗಳೂರಿಗೆ ಬರುವಾಗ ಮೊದಲು ಪೇಟೆಬೀದಿಗಳಿಗೆ ಬರುತ್ತದೆ. ಆ ಹೂವುಗಳು, ಆ ತರಕಾರಿ. ತರಕಾರಿ ಹೂವಿನ ಬೆಲೆಯೂ ದುಪ್ಪಟ್ಟಾಗಿ ಕುಳಿತಿದೆ. ಇವತ್ತು ಹಬ್ಬ ಅಲ್ಲವಾ? ದುಡ್ಡು ಕೊಟ್ಟರೂ, ಹೂ ಹಣ್ಣು, ತರಕಾರಿ ಸಿಗೋದು ಕಷ್ಟ! ಹಳೇ ಗಿರಾಕಿ ಅಂತ ನಾನು ಹೇಗೋ ಅಡ್ಜಸ್ಟ್‌ ಮಾಡಿ ಕೊಡುತ್ತಿದ್ದೇನೆ ಎಂದು ವ್ಯಾಪಾರಸ್ಥರೂ ಗುರುಕಾಯಿಸುತ್ತಾರೆ. ಎಷ್ಟಪ್ಪಾ ಈ ಮಾವಿನ ಟೊಂಗೆಗೆ ಅಂತ ನೀವು ಚೌಕಾಶಿ ಮಾಡಿದರೆ ವ್ಯಾಪಾರಿಗೆ ರೇಗಿ ಹೋಗುತ್ತದೆ. “ಮಡಗಿ ಸ್ವಾಮಿ ಕೆಳಗೆ’ ಎಂದು ಅವನು ಕಣ್ಣು ಕೆಂಪುಮಾಡುತ್ತಾನೆ!

ದೋಸೆಯ ಮಾತು ಹಾಳಾಗಲಿ ಒಂದು ಕಾಫಿಯಾದರೂ ಕುಡಿಯೋಣ ಅಂತ ಹೋಟೆಲ್‌ ಬಳಿ
ಹೋದರೆ ಅಲ್ಲಿ ಜನ ಕ್ಯೂ ಹಚ್ಚಿ ನಿಂತಿದ್ದಾರೆ. ಬಾಗಿಲಲ್ಲಿ ನಿಮ್ಮ ಹೆಸರು ಬರೆದುಕೊಂಡು ಅದನ್ನು ಕೇವಲ ಸಂಖ್ಯೆಯಾಗಿ ಪರಿವರ್ತಿಸುವ ಮಾಯಾವಿದನೊಬ್ಬ ನಿಂತುಕೊಂಡಿದ್ದಾನೆ! ನೀವು ಪರಿಚಯದ ನಗೆ ನಕ್ಕರೆ, ಆ ಮನುಷ್ಯ ಇದೇ ಮೊಟ್ಟ ಮೊದಲಿಗೆ ನಿಮ್ಮನ್ನು ನೋಡುತ್ತಿರುವಂತೆ ಮೇಲೆ ಕೆಳಗೆ ನೋಡುತ್ತಾನೆ. ಕಾಫಿ ಬೇಡ ಎಂದು ನಿರ್ಧರಿಸಿ ನೀವು ತರಕಾರಿ, ಹೂ, ಹಣ್ಣಿನ ಬ್ಯಾಗ್‌ ಹಿಡಿದು ಜನಸಮುದ್ರದಲ್ಲಿ ಹೇಗೋ ತೂರಿಕೊಂಡು ನೆಟ್ಟಿಕಲ್ಲಪ್ಪ ಸರ್ಕಲ್‌ಗೆ, ಬಂದರೆ ನಿಮ್ಮ ಸ್ಕೂಟರ್ರಿನ ಹಿಂದೆ ಮುಂದೆ ಅಡ್ಡಾದಿಡ್ಡಿಯಾಗಿ ಹತ್ತಾರು ವೆಹಿಕಲ್ಲುಗಳನ್ನು ನಿಲ್ಲಿಸಿಬಿಟ್ಟಿದ್ದಾರೆ. ಆ ವೆಹಿಕಲ್ಲಿನ ಮಾಲೀಕರು ಬರುವತನಕ ನಿಮ್ಮ ವೆಹಿಕಲ್ಲಿಗೆ ಬಂಧಮೋಕ್ಷವಿಲ್ಲ. ಇದು ಗಾಂಧಿಬಜಾರಿನ ಸಮಾಚಾರವಾದರೆ ಇನ್ನು ಭಗವದ್ಭಕ್ತೆಯರಾದ ನಮ್ಮ ಹೆಣ್ಣುಮಕ್ಕಳು ದೇವಸ್ಥಾನಕ್ಕೆ ಕ್ಯೂ ಹಚ್ಚಿದ್ದಾರೆ. ಅವರ ಹಿಂದೆ ಕುಂಕುಮಾಂಕಿತರೂ ಪಂಕಜ ಲೋಚನರೂ ಆದ ನಮ್ಮ ಪುರುಷ ಸಿಂಹರು!ಈ ಹೆಮ್ಮಕ್ಕಳಿಗೆ ದೇವರ ದರ್ಶನ ಆಗುವುದು ಯಾವಾಗ? ಅವರು ಮನೆ ತಲಪುವುದು ಯಾವಾಗ? ಮನೆಗೆ ಹೋಗಿ ಒಲೆ ಹಚ್ಚಿ ಹೋಳಿಗೆ ಬೇಯಿಸುವುದು ಯಾವಾಗ?

ನಮ್ಮ ಪಕ್ಕದಮನೆಯ (ಅವರ ಹೆಸರು ಶ್ರೀನಿವಾಸೋ, ತಿರುಮಲೇಶೋ ಏನೋ ಇರಬೇಕು)ಗೃಹಸ್ಥರು “ಹೋಳಿಗೆ ಮನೆ’ಗೆ ಹೋಗಿ ಕ್ಯೂ ಹಿಡಿದು ಒಂದು ಕೆ.ಜಿ ಹೋಳಿಗೆ ತರುವಲ್ಲಿ ಸಾಕಾಗಿಹೋಯಿತು ಸ್ವಾಮಿ ಎಂದು ಉದ್ಗರಿಸುತ್ತಾರೆ. ಅಂಗಡಿಯಿಂದ ತಂದ ಹೋಳಿಗೆಯ ಮೇಲೆ ಮಡಿನೀರು ಚಿಮುಕಿಸಿ ಪವಿತ್ರ ಮಾಡಿಕೊಂಡು ನನ್ನ ಸೊಸೆ ದೇವರಿಗೆ ನೈವೇದ್ಯ ಸಿದ್ಧಪಡಿಸುತ್ತಾಳೆ! ಮೊಮ್ಮಕ್ಕಳು ಹೊಸ ಜೀನ್ಸು, ಟೀಷರ್ಟು ಹಾಕಿಕೊಂಡು ಟಿ.ವಿ. ನೋಡುತ್ತಾ ಕೂತಿದ್ದಾರೆ! ಯುಗಾದಿ ಮಾಡಬೇಕೇ ಬೇಡವೇ ಎಂದು ಒಂದು ಪ್ಯಾನಲ್‌ ಡಿಸ್ಕಷನ್‌ ಒಂದು ಚಾನಲ್ಲಲ್ಲಿ. ಅಲ್ಲಿ ಇಬ್ಬರು ರೋಷಾವೇಶದಿಂದ ಕಂದಾಚಾರಗಳನ್ನು ಮನಸೋಕ್ತ ಖಂಡಿಸುತ್ತಾ ಇದ್ದಾರೆ. ಅವರನ್ನು ನಿಯಂತ್ರಿಸುವುದು ಅಸಾಧ್ಯವಾದಾಗ ಆಂಕರ್‌ ಸೋದರಿ ಈಗ ಕೊಂಚ ವಿರಾಮ. ಮತ್ತೆ ಬರುತ್ತೇನೆ ಎಂದು ಟೀವೀ ಪರದೆಯಿಂದಲೇ ಅಂತರ್ಧಾನಳಾಗಿಬಿಡುತ್ತಾಳೆ!

ಹಬ್ಬದ ದಿನ. ಬೀದಿಯ ಕಸ ತೆಗೆಯುವವರೂ ಬಂದಿಲ್ಲ! ಅವರು ಹಬ್ಬ ಮಾಡುವುದು ಬೇಡವೇ? ಎರಡು ದಿನವಾಯಿತು ಬೀದಿ ಗುಡಿಸಿ. ಹಾಗಾಗಿ ರಾಶಿ ರಾಶಿ ತರಗು ಬೀದಿ ತುಂಬ. ನಾನು ಅಂಗಳವಷ್ಟನ್ನೂ ಗುಡಿಸಿ ಕೊಟ್ಟರೆ ಮೊಮ್ಮಗಳು ರಂಗವಲ್ಲಿ ಇಕ್ಕುವ ಶಾಸ್ತ್ರಮಾಡಿಯಾಳು! ಕುರ್ಚಿಹಾಕಿಕೊಂಡು ಮಾವಿನ ತೋರಣ ಬೇರೆ ಕಟ್ಟಬೇಕು. ಎಲೆಯೆಲ್ಲ ಬತ್ತಿ ಹೋಗಿದೆ. ಹೋದವರ್ಷದ್ದಾ ಮಾವಿನೆಲೆ ಎಂಬ ಆಕ್ಷೇಪ ಮನೆಯ ಹೆಮ್ಮಕ್ಕಳಿಂದ. ಈಗೀಗ ಮರದ ಮೇಲೇ ಚಿಗುರು ಬತ್ತಿ ಹೋಗಿರುತ್ತೆ! ಎಂದು ನನ್ನ ಸಮಾಧಾನ.

ದೇವರ ಮನೆಯಲ್ಲಿ ಘಂಟಾನಾದ ಕೇಳುತ್ತಾ ಇದೆ. ಅರ್ಜುನನು ದೇವದತ್ತವನ್ನೂ, ಕೃಷ್ಣನು ಪಾಂಚಜನ್ಯವನ್ನೂ , ಭೀಮನು ಪೌಂಡ್ರವನ್ನೂ ಜೋರಾಗಿ ಊದತೊಡಗಿದ್ದಾರೆ. ಈ ಶಂಖಗಳನ್ನು ಊದುವುದು ಅಷ್ಟು ಸುಲಭ ಸಾಧ್ಯವಲ್ಲ! ಕೆನ್ನೆಯೆಲ್ಲಾ ನೋವು ಬರುತ್ತದೆ. ಕೆಲವು ಸಾರಿ ಫ‌ುರ್‌ ಫ‌ುರ್‌ ಎಂದು ವಿಚಿತ್ರ ಧ್ವನಿ ಬರುತ್ತದೆಯೇ ವಿನಾ ಶಂಖದ ಮಂಗಳ ಘೋಷ ಹೊರಬರದು. “ಅಯ್‌ ವಿಲ್‌ ಟ್ರೈ ! ಅಯ್‌ ವಿಲ್‌ ಟ್ರೈ ! ‘ಎಂದು ಚೋಟ ಆವುಟಮಾಡುತ್ತಿದ್ದಾನೆ! ಅವನು ಅಮೆರಿಕೆಯಲ್ಲಿ ಇರುವ ಮೂರನೆಯ ಮಗಳ ಏಕಮಾತ್ರ ಪುತ್ರ. ಅವನಿಗೆ ಇಂಗ್ಲಿಷ್‌ ಅಲ್ಲದೆ ಬೇರೆ ಭಾಷೆ ಬರದು. ಅವನ ಅಜ್ಜಿಗೆ ಕನ್ನಡವಲ್ಲದೆ ಇನ್ನೊಂದು ಭಾಷೆ ಬರದು. ಈ ಅಜ್ಜಿ, ಮೊಮ್ಮಗ ನಡೆಸುವ ಸಂವಾದದ್ದೇಒಂದು ಸೊಗಸು! ಕನ್ನಡದ ಕಥೆಗಳಿಗೆ ಇಂಗ್ಲಿಷ್‌ ಸ್ಕರ್ಟ್‌ ತೊಡಿಸುವುದರಲ್ಲಿ ಈ ಅಜ್ಜಿಗೆ ಸುಸ್ತೋಸುಸ್ತು!

ನೈವೇದ್ಯದ ಶಾಸ್ತ್ರ ಮುಗಿದು ಮಹಾಮಂಗಳಾರತಿಯೂ ಆಯಿತು! ಊಟಕ್ಕೆ ಎಲೆ ಹಾಕಿ ಎಂದು ಅಜ್ಜಿ ಕೂಗುತ್ತಾಳೆ. ಕೆಲವರು ಊಟದ ಟೇಬಲ್ಲಿನ ಮೇಲೆ. ಕೆಲವರು ಟಿ.ವಿ. ನೋಡುತ್ತಾ ಊಟದ ಸೋಫಾದಲ್ಲಿ ಕೂತು ಊಟದ ಶಾಸ್ತ್ರ ಮಾಡುತ್ತಾರೆ! ಸೊಸೆ ಓಡಾಡಿಕೊಂಡೇ ತನ್ನ ಊಟ ಮುಗಿಸುತ್ತಾಳೆ! ಎಲೆಯ ಮುಂದೆ ಕೂತವನು ನಾನೊಬ್ಬನೇ! ಈಗೀಗ ಊಟಕ್ಕೆ ಕೂಡಬಹುದು! ಊಟ ಮುಗಿಸಿ ಏಳುವುದಿದೆಯಲಾ, ಅದು ಮಹಾ ಫ‌ಜೀತಿಯ ಕೆಲಸ! ಒಂದು ಕೈ ಎಂಜಲಾಗಿರುತ್ತೆ. ಎಡಗೈ ಊರಿ ಬ್ಯಾಲೆನ್ಸ್‌ ಮಾಡುತ್ತಾ ಮೇಲೇಳಬೇಕು. ಕಾಲು ಬೇರೆ ಜವ್‌ ಹಿಡಿದಿರುತ್ತದೆ!

ಊರಲ್ಲಿ ನಾನು ಚಿಕ್ಕವನಾಗಿದ್ದಾಗ ಅಜ್ಜಿ ಮನೆಯಲ್ಲೆ ಮಾಡಿದ ಬಿಸಿಬಿಸಿ ಹೋಳಿಗೆ ತಟ್ಟೆಯಲ್ಲಿಟ್ಟುಕೊಂಡು, ಮೇಲೆ ಬಾಳೆ ಎಲೆ ಮುಚ್ಚಿಕೊಂಡು ನಾನೂ ನಮ್ಮ ಅಜ್ಜನೂ ಹನುಮಂತನ ಹಾಳುಗುಡಿಗೆ ನೈವೇದ್ಯಕ್ಕೆ ಹೋಗುತ್ತಾ ಇದ್ದಿವಿ!ಬೆಂಗಳೂರಲ್ಲಿ ದೇವಸ್ಥಾನಕ್ಕೆ ಹೋಗೋದೇ ಒಂದು ಕಾರ್ಯಕ್ರಮ ಆಗುತ್ತದೆ. ಇಲ್ಲಿಂದಲೇ ಕೈ ಮುಗಿಯುವೆ ! ಅಲ್ಲಿಂದಲೇ ಹರಸು ಎನ್ನುತ್ತಾ ಮನೆಯಲ್ಲಿ ಕೂತೇ ದೇವರ ಗುಡಿ ಇರುವ ದಿಕ್ಕಿಗೆ ಒಂದು ನಮಸ್ಕಾರ ಹಾಕುವುದು! ಟೆನ್ನಿಸ್‌ ಕೋರ್ಟಿಗೆ ಹೋಗಿರುವ ಮಗ ಇನ್ನೂ ಬಂದಿಲ್ಲ. ಅವರನ್ನು ಕಾಯುವುದು ಬೇಡ ಎಂಬುದು ಅವನ ಶ್ರೀಮತಿಯ ಉವಾಚ. ಹಬ್ಬ ಹರಿದು ಹಂಚಿ ಹೋಗಿದೆ. ಹರಿದ ಪ್ಯಾಂಟಿನಲ್ಲಿ ಒಬ್ಬಳು ಚೆಲುವೆ ಟಿ.ವಿಯಲ್ಲಿ “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂದು ಬೇಂದ್ರೆಯ ಹಾಡನ್ನು ಉಲಿಯುತ್ತಿದ್ದಾಳೆ! 

ನಿತ್ಯದ ಬೆಡಗಿ
ನಿತ್ಯದ ನಡೆಗೆ ನರ್ತನ ಗತಿಯ
ನೀಡುವ ಗೆಳೆಯ ಯುಗಾದಿ
ಯಾವುದು ಮೊದಲೊ? ಯಾವುದು ಕಡೆಯೊ?
ಪ್ರತಿವರ್ಷಕು ಇದೇ ಆದಿ
ಬಾಗಿಲ ತೋಳಿಗೆ ಮಾವಿನ ತೋರಣ
ಮರೆಗಿದೆ ಬೇವಿನ ಚಿಗುರು
ನೋವಿನ ಜೊತೆಗೇ ನಲಿವಿದೆ ಕಥೆಗೆ
ಹೊಂಗೆಯ ತುಂಬಾ ಹಸಿರು
ಬಿಸಿಲಿನ ಜೋಡಿ ನೆರಳಿನ ಮೋಡಿ
ಬಾಳಿನ ತಿರುಳು ಯುಗಾದಿ
ತಾಯಿಯ ಸೆರಗು ಹಬ್ಬುವ ವರೆಗು
ಕಂದಗೊ ನೆಮ್ಮದಿ ಹಾದಿ
ಹೋದವ ಮರಳಲು ಬಂದವ ತೆರಳಲು
ಚಂದ್ರಮ ಆ ಕಿರುಬೆರಳು
ಮಾವಿನ ತೊಂಗಲು ಕೋಗಿಲೆ ತಂಗಲು
ಮೊಲ್ಲೆಗೆ ನಲ್ಲೆಯ ಹೆರಳು

 ಎಚ್‌.ಎಸ್‌.ವೆಂಕಟೇಶಮೂರ್ತಿ

ನಲ್ಮೆಯ ಕವಿ ಎಚ್ಚೆಸ್ವಿ ಬರೆದ ಕವನ , ಅವರದೇ ದನಿಯಲ್ಲಿ ಕೇಳಲು ಲಿಂಕನ್ನು  ಟೈಪ್‌ ಮಾಡಿ  http://bit.ly/2pjYJrf 

ಟಾಪ್ ನ್ಯೂಸ್

Marsh-webster

Border-Gavaskar Trophy: ಮಿಚೆಲ್‌ ಮಾರ್ಷ್‌ ಗಾಯಾಳು; ವೆಬ್‌ಸ್ಟರ್‌ ಬ್ಯಾಕಪ್‌ ಆಟಗಾರ

Bajarang-Poonia

Doping Test: ಕುಸ್ತಿಪಟು ಬಜರಂಗ್‌ ಪೂನಿಯಾಗೆ ನಾಲ್ಕು ವರ್ಷ ನಿಷೇಧ

ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

MNG-Falnir

Mangaluru: ಬೊಲೆರೋ ವಾಹನಕ್ಕೆ ಆಕಸ್ಮಿಕ‌ ಬೆಂಕಿ

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Marsh-webster

Border-Gavaskar Trophy: ಮಿಚೆಲ್‌ ಮಾರ್ಷ್‌ ಗಾಯಾಳು; ವೆಬ್‌ಸ್ಟರ್‌ ಬ್ಯಾಕಪ್‌ ಆಟಗಾರ

Bajarang-Poonia

Doping Test: ಕುಸ್ತಿಪಟು ಬಜರಂಗ್‌ ಪೂನಿಯಾಗೆ ನಾಲ್ಕು ವರ್ಷ ನಿಷೇಧ

ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

MNG-Falnir

Mangaluru: ಬೊಲೆರೋ ವಾಹನಕ್ಕೆ ಆಕಸ್ಮಿಕ‌ ಬೆಂಕಿ

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.