ಯುಗಾದಿ ಮರಳಿ ಬಂದಿದೆ
Team Udayavani, Mar 18, 2018, 7:30 AM IST
ಹಬ್ಬಗಳೆಂದರೆ ನಾನು ಕ್ಷಣಮಾತ್ರದಲ್ಲಿ ಬಾಲ್ಯದ ನೆನಪಿನೂರಿಗೆ ಹಾರಿ ಹೋಗುತ್ತೇನೆ. ಕತ್ತಲಲ್ಲಿ ಕಣ್ಮುಚ್ಚಿ ಕುಳಿತರೂ ಕನಸಿನೊಳಗೆ ಬೆಳಕಿರುವಂತೆ ಅದರ ಚಿತ್ರಕೂಟದ ಮಾಯೆಗೆ ಬೆರಗಾಗುತ್ತೇನೆ. ಯುಗಾದಿ ಹೊರತಾಗಿ ಉಳಿದೆಲ್ಲ ಹಬ್ಬಗಳಲ್ಲಿ ಅದೃಶ್ಯ ದೇವರು ಹೆಜ್ಜೆ ಗುರುತು ಮೂಡಿಸದೆ ನಮ್ಮೂರ ದಾರಿಯಲ್ಲಿ ಸದ್ದಿಲ್ಲದೆ ನಡೆದು ಹೋಗುವುದಿದೆ; ಗದ್ದೆಗೊ ಮನೆಗೊ ಗುಡಿಗೊ ಜಾತ್ರೆಗೊ ಉತ್ಸವಮೂರ್ತಿಯಾಗಿ ಭೇಟಿ ಕೊಡುವುದಿದೆ; ಪಲ್ಲಕಿ, ಮಂಟಪ ಮತ್ತು ಪೀಠಗಳಲ್ಲಿ ಅವನ ನೆರಳು ಮಾತ್ರ ಅರೆಗಳಿಗೆ ಕೂತು ಓಡುತ್ತದೆ. ಹಿರಿಯರಿಗೆ ಭಕ್ತಿಯ ಕನ್ನಡಿಯಲ್ಲಿ ಅವೆಲ್ಲ ಕಂಡರೆ ನಾವು ಮಕ್ಕಳು ಅಸಾಧಾರಣ ಕಲ್ಪನೆಯಲ್ಲೆ ನೋಡುತ್ತಿದ್ದೆವು. ತಳಿರ ಶೃಂಗಾರ ಮುಟ್ಟದೆ, ಹೂವ ಪರಿಮಳ ಮೂಸದೆ, ಆರತಿಯ ಶಾಖಕ್ಕೆ ಅಂಗೈ ಕಾಯಿಸದೆ ಕಥಾಶ್ರವಣ ಮಾಡದೆ, ಪ್ರಸಾದದ ರುಚಿ ನೋಡದೆ, ಅವೆಲ್ಲವೂ ಹೊಸ ಬಟ್ಟೆಯ ನಿಮಗಿರಲಿ ಎಂದು ಗಂಟೆಯ ನಾದದಲ್ಲಿ ಲೀನವಾಗುತ್ತಾನೆ. ಅವನು ಪ್ರಕೃತಿಯ ಛಂದಸ್ಸಿನಲ್ಲಿ ಕಾಲರೂಪಿಯಾಗಿ ಬರುವುದು ಇನ್ನಷ್ಟು ಚೆಂದ. ನಾಟಿ ಗದ್ದೆಯಲ್ಲಿ ಸುರಿವ ಪ್ರಳಯಾಂತಕ ಮಳೆಯಾಗಿ ನಾಗಪಂಚಮಿ, ಹೊಂಬಿಸಿಲ ಚೆಲುವಾಗಿ ಚೌತಿ, ಹಾಲು ಬಸರಿನ ಭತ್ತದ ಪೈರಾಗಿ ನವರಾತ್ರಿ, ನಕ್ಷತ್ರ ದೀಪವಾಗಿ ದೀಪಾವಳಿ- ಹೀಗೆ ಋತು ಜತೆಗೂಡಿ ಬರುತ್ತಾನೆ. ಈ ಹಬ್ಬಗಳೆಂದರೆ ನಮಗೆ ಶಾಲೆಯ ರಜೆ, ಹೊಸ ವಸ್ತ್ರ, ನೆಂಟರೊಂದಿಗೆ ಕಜ್ಜಾಯ, ಮನಸಾರೆ ಆಟ ಮತ್ತು ಪುಣ್ಯ ಕಥಾಶ್ರವಣ ಮಾತ್ರ. ಆದರೆ ಯುಗಾದಿ ಪ್ರತ್ಯಕ್ಷವಾಗುವ ರೀತಿಯೇ ಬೇರೆ. ನನ್ನ ಅಮ್ಮ ಪೇಟೆಗೆ ಹೋದಾಗ ಮರೆಯದೆ ಹೊಸ ಸಂವತ್ಸರದ ಪಂಚಾಂಗವನ್ನು ತಂದು ನಡು ಮನೆಯ ಮೊಳೆಗೆ ನೇತು ಹಾಕುತ್ತಿದ್ದಳು. ಹಿರಿಯ ಅಕ್ಕಂದಿರು ಪೈಪೋಟಿಯಲ್ಲಿ ತಮ್ಮ ತಮ್ಮ ರಾಶಿಯ ವರ್ಷಭವಿಷ್ಯವನ್ನು ಓದುತ್ತಿದ್ದರು; ಅದರ ಮಿಶ್ರಫಲಕ್ಕೆ ಬೇಸರ, ಸಂತಸಗೊಳ್ಳುತ್ತಿದ್ದರು. ತಾಯಿಯೂ ಸರಿಯಾಗಿ ಓದಲು ಬಾರದ ಎಳೆಯರಿಗೂ ಓದಿ ಹೇಳುತ್ತಿದ್ದರು. ಹಬ್ಬಗಳು ಬರುವ ಮಾಸ, ಘಟಿಸುವ ಶ್ರಾದ್ಧ ಕರ್ಮಗಳು ಮತ್ತು ಗ್ರಹಣಗಳ ಬಗ್ಗೆ ಲೆಕ್ಕ ಹಾಕುತ್ತಿದ್ದರು; ಕಾಶಿಯಾತ್ರೆಯ ಗೋಕರ್ಣದ ಜಾಹೀರಾತಿನ ಪುಟವನ್ನು ಮಡಚಿಡುತ್ತಿದ್ದರು. “ಗಂಗಾಷ್ಟಮಿಗೆ ಹೋಗಿ ತಂದ ಚಳಿಯನ್ನು ಶಿವರಾತ್ರಿಗೆ ಹೋಗಿ ಬಿಟ್ಟು ಬರುವುದು’ ಎಂದು ಗಾದೆ ಹೇಳುತ್ತಿದ್ದರು. ಹಗಲು ದೊಡ್ಡದಾಗುತ್ತ ಸೂರ್ಯನ ಬಿಸಿಲು ನೇರವಾಗುತ್ತ “ಸೆಕೆ ಸೆಕೆ’ ಎನ್ನುತ್ತ ಬರಿ ನೆಲಕ್ಕೊರಗುತ್ತಿದ್ದರು.
ಶಾಲೆಯ ಹೊರ ಗೋಡೆಯ ಬೋರ್ಡಿನ ಮೇಲೆ ನಿತ್ಯ ಪಂಚಾಂಗ ಬರೆಯಲು ಮನೆಯ ಪಂಚಾಂಗವನ್ನು ಉಪಯೋಗಿಸುತ್ತಿ¨ªೆವು. ಯುಗಾದಿಗೆ ಮಾಸ್ತರು ರಜೆ ನೀಡುತ್ತಾರೆಂದು ನಮಗೆ ಹಿಗ್ಗು. ವಿದ್ಯಾರ್ಥಿಗಳಾದ ನಮ್ಮನ್ನು ಮೇಜಿನ ಸುತ್ತ ನಿಲ್ಲಿಸಿ ತಾನು ನುಣ್ಣಗೆ ಸವೆದ ಸಾಗವಾನಿ ಕುರ್ಚಿಯ ಮೇಲೆ ಕುಳಿತು ಕನ್ನಡ ಪಠ್ಯದಲ್ಲಿದ್ದ ಬೇಂದ್ರೆಯವರ ಯುಗಾದಿ ಪದ್ಯವನ್ನು ಹಾಡುತ್ತಿದ್ದರು:
ಯುಗಯುಗಾದಿ ಕಳೆದರೂ/ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ/ಹೊಸತು ಹೊಸತು ತರುತಿದೆ.
ವರುಷಕೊಂದು ಹೊಸತು ಜನ್ಮ/ಹರುಷಕೊಂದು ಹೊಸತು ನೆಲೆಯು/ಅಖೀಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ/ಒಂದೆ ಬಾಲ್ಯ ಒಂದೆ ಹರೆಯ/ನಮಗದಷ್ಟೆ ಏತಕೆ?
ಕೊನೆಯ ಸಾಲುಗಳನ್ನು ಪ್ರಶ್ನಿಸಿ ವಿವರಿಸುತ್ತಿದ್ದರು. ನಮಗೆ ಪೂರ್ತಿ ಅರ್ಥವಾಗುತ್ತಿರಲಿಲ್ಲ. ಬೆಳಿಗ್ಗೆ ರೇಡಿಯೊದಲ್ಲಿ ಇದೇ ಹಾಡನ್ನು ಕೇಳಿ ಬಂದ ನನಗೆ ಮಾಸ್ತರರ ಲಯವಿಲ್ಲದ ಹಾಡುಗಾರಿಕೆ ಕೇಳಿ ನಗು ಬರುತ್ತಿತ್ತು. ಹಬ್ಬ ಪದ್ಯದ ಮೂಲಕ ಹರಿದು ಬರುತ್ತಿರುವುದು ಅಚ್ಚರಿ ಎನಿಸಿತ್ತು. ರಜೆಯ ಮರುದಿನ ಶಾಲೆಗೆ ಬರುವಾಗ ಕಹಿಬೇವಿನ ಸುಳಿಎಲೆಗಳನ್ನೂ ಆಲೆಮನೆಯ ಜೋನಿಬೆಲ್ಲವನ್ನೂ ತರಲು ನಮಗೆ ತಾಕೀತು ಮಾಡುತ್ತಿದ್ದರು.
ಹಬ್ಬಕ್ಕಿನ್ನೂ ವಾರವಿರುವಾಗ ಊರ ವೈದಿಕ ಗಪ್ಪು ಭಟ್ಟರು ಪ್ರತಿ ಮನೆಗೆ ಬಂದು ಸಂಕ್ರಮಣ ಫಲ ಹೇಳಿ ಹೋಗುತ್ತಿದ್ದರು. ಅಷ್ಟು ದೂರ ಗ¨ªೆಯ ಬಯಲ ಡೊಂಕು ದಾರಿಯಲ್ಲಿ ಅವರು ನಡೆದು ಬರುತ್ತಿರುವುದು ಪವಿತ್ರ ದರ್ಶನದಂತಿರುತ್ತಿತ್ತು. ಹಸಿರು ಕಂಬಿಯ ಅಡ್ಡ ಪಂಜಿಯ ಮೇಲೆ ಗುಂಡಿಯಿಲ್ಲದ ಹತ್ತಿಯ ಪಾರದರ್ಶಕ ಬಿಳಿ ಜುಬ್ಬ; ಬಗಲಲ್ಲಿ ಗಂಟು ಹಾಕಿದ ಖಾಕಿ ಜೋಳಿಗೆ; ನೆರೆತ ಕೂದಲ ಎದೆಯ ಮೇಲೆ ರುದ್ರಾಕ್ಷಿ ಸರ; ಹಣೆಯಲ್ಲಿ ಮೂರು ಪಟ್ಟೆಯ ಭಸ್ಮ; ಚಾಣಾಕ್ಯನ ಶಿಖೆಯಂಥ ಜುಟ್ಟು . ಯುಗಾದಿ ಪುರುಷನ ದೂತನಿರಬಹದು. ಅವರು ವಿಶ್ಲೇಷಿಸುವ ವರ್ಷಭವಿಷ್ಯದ ಬಗ್ಗೆ ನಮಗೆ ಕುತೂಹಲ. ಮನೆ ಜನರೆಲ್ಲ ಎದ್ದು ನಿಂತು ಅವರನ್ನು ಬರಮಾಡಿಕೊಂಡೆವು. “”ಹೊಸ ಕಾಲ ಪುರುಷ ಬಂದಿºಟ್ಟ. ಬೆಳಿಗ್ಗೆಯೇ ಬಿಸಿಲಪ್ಪ” ಎನ್ನುತ್ತ ಹಣೆಯ ಬೆವರು ಮಣಿಗಳನ್ನು ಒರೆಸಿ ಜಮಖಾನೆ ಹಾಸಿದ ಮಂಚದ ಮೇಲೆ ಕುಳಿತರು. ಹಿರಿಯಕ್ಕ ತಾಮ್ರ ತಂಬಿಗೆಯ ನೀರಿಟ್ಟು ಅವರ ಪಾದದೆದುರು ಹಣೆಯಿಟ್ಟು ವಂದಿಸಿದಳು. ಶಾಲೆಯ ಮಾಸ್ತರಂತೆ, “”ಎಲ್ಲ ಕೂತ್ಕಳಿ” ಎಂದರು. ನಾವು ನಿಂತಲ್ಲೇ ಕುಸಿದು ವಿರಮಿಸಿದೆವು.
ಭಟ್ಟರು ಕನ್ನಡಕ ಧರಿಸಿ, ಜೋಳಿಗೆಯಿಂದ ನವ ಸಂವತ್ಸರದ ಪಂಚಾಂಗವನ್ನು ತೆರೆದಿಟ್ಟು ದೇವವಾಣಿಯ ಸಂದೇಶ ಪಡೆಯುವಂತೆ ಕಣ್ಮುಚ್ಚಿ ಧ್ಯಾನಿಸಿ, ಅಥ ಸಂಕ್ರಮಣ ಫಲಂ ಎಂದು ಸಂಸ್ಕೃತ ಶ್ಲೋಕವನ್ನು ಪಠಿಸಿದರು. ಅವರ ಅನುನಾಸಿಕ ರಾಗ ಮಧುರವಾಗಿತ್ತು. ಶ್ಲೋಕದ ಕನ್ನಡ ಭಾಷಾಂತರವನ್ನು ಆಲಿಸಲು ಕೈಮುಗಿದು ಸಿದ್ಧರಾದೆವು.
“”ಈ ವರ್ಷ ಧ್ವಾಂಕ್ಷೀ ಎಂಬ ಹೆಸರಿನ ಕಾಲಪುರುಷನು ಚೈತ್ರ ಶುಕ್ಲ ಚತುರ್ದಶಿ ಸೋಮವಾರ ಬೆಳಿಗ್ಗೆ ಘಂಟೆ 7.56ಕ್ಕೆ ಮೇಷ ಸಂಕ್ರಾಂತಿಯನ್ನು ಪ್ರವೇಶಿಸುವನು. ಮೇಷಸಂಕ್ರಮಣವು ಹಗಲಾದ್ದರಿಂದ ಲೋಕದಲ್ಲಿ ಅನರ್ಥವೂ ಕಲಹವೂ ಉಂಟಾಗುತ್ತದೆ. ಈ ಕಾಲಪುರುಷನು ಕರ್ಪೂರ ತೈಲವನ್ನು ಮೈಗೆ ತಿಕ್ಕಿಕೊಂಡು ಸರಸ್ವತೀ ನದಿಯಲ್ಲಿ ಸ್ನಾನ ಮಾಡಿ ಕಂಬಳಿವಸ್ತ್ರವನ್ನು ಧರಿಸಿ ಮುತ್ತಿನ ಆಭರಣದಿಂದ ಅಲಂಕೃತನಾಗಿ ಗಂಧವನ್ನು ಹಚ್ಚಿ ಪಾಟಲಪುಷ್ಪಗಳಿಂದ ಅಲಂಕೃತನಾಗಿ ಜೋಳದ ಅಕ್ಷತೆಯನ್ನು ಹಣೆಗೆ ಲೇಪಿಸಿ ತವರಿನ ಪಾತ್ರೆಯಲ್ಲಿ ಮೊಸರನ್ನು ಕುಡಿಯುತ್ತ ತಾಳೆ ಹಣ್ಣನ್ನು ಕೈಯಲ್ಲಿ ಹಿಡಿದು ಎಮ್ಮೆಯ ಮೇಲೆ ಕುಳಿತು ಮುತುಕಲ ಮರದ ಕೊಡೆಯನ್ನೂ ತೋಮರ ಆಯುಧವನ್ನೂ ಹಿಡಿದು ಪಿನಾಕಿ ವಾದ್ಯಗಳೊಂದಿಗೆ ಗೋವಳರನ್ನು ಮುಂದೆ ಮಾಡಿ ನಡುಗುವ ಮುಖದಿಂದ ಉತ್ತರ ದಿಕ್ಕಿನಿಂದ ಆಗಮಿಸಿ ಈಶಾನ್ಯ ದಿಕ್ಕಿನತ್ತ ನೋಡುತ್ತ ಉತ್ತರ ದಿಕ್ಕಿಗೆ ಹೋಗುವನು”
“”ಈತ ಧರಿಸಿದ ಹಾಗೂ ಉಪಯೋಗಿಸಿದ ವಸ್ತುಗಳೆಲ್ಲವೂ ತುಟ್ಟಿಯಾಗುವವು. ಅವನು ಹೋದ ಮತ್ತು ನೋಡಿದ ದಿಕ್ಕಿಗೆ ಹಾನಿಯುಂಟುಮಾಡುತ್ತಾನೆ. ಅವನು ಬಂದ ದಿಕ್ಕಿಗೆ ಶುಭವನ್ನುಂಟು ಮಾಡುತ್ತಾನೆ” ಭಟ್ಟರು ಕನ್ನಡಕವನ್ನು ತೆಗೆದು, ಪಂಚಾಂಗವನ್ನು ಬದಿಗಿರಿಸಿ, ಓದಿದ ಲೋಕವಾರ್ತೆಯನ್ನು ಸರಳ ಮಾತಿನಲ್ಲಿ ನಿರೂಪಿಸಿದರು: “”ಈ ವರ್ಷ ದುರ್ಭಿಕ್ಷೆ! ಹಗಲಿನಲ್ಲಿ ಕಲಹ ಎಂದರೆ ಸಮಾಜ ಮತ್ತು ಕುಟುಂಬಗಳಲ್ಲಿ ಸದಾ ಅಶಾಂತಿ. ನದಿಯಲ್ಲಿ ಮೀಯುತ್ತಾನೆಂದರೆ ನೀರಿಗೆ ಹಾಹಾಕಾರ. ಕಂಬಳಿ ಧರಿಸುವುದು ತುಟ್ಟಿಯಾಗಲಿರುವ ಕೃಷಿ ಕೆಲಸದ ಸೂಚನೆ; ಶ್ರಮ ಜೀವಿಗಳಿಗೆ ಕಷ್ಟ. ಮುತ್ತಿನ ಆಭರಣ ತೊಟ್ಟು ಮದುವೆ ಮಾಂಗಲ್ಯಕ್ಕೆ ಸಂಕಷ್ಟ ತರುತ್ತಾನೆ. ಜೋಳದ ಅಕ್ಷತೆ ಹಚ್ಚಿ ಮೊಸರು ಕುಡಿಯುವ ಪುರುಷ ಅನ್ನ, ಹಾಲುಹೈನಕ್ಕೆ ಮಾರಕವಾಗಿ¨ªಾನೆ. ಭೀಕರ ಬರಗಾಲ ಎನ್ನುತ್ತಾನೆ ಯುಗಾದಿ ಪುರುಷ”
ನನ್ನ ತಾಯಿಯ ಮುಖಕ್ಕೆ ರಾವು ಬಡಿದಿತ್ತು. ಲೋಕಕ್ಕೆ ಎರಗಲಿರುವ ಆಪತ್ತನ್ನು ಕಲ್ಪಸಿಕೊಂಡು “ಶಿವ ಶಿವ’ ಎಂದಳು. ಭಟ್ಟರ ನಿರೂಪಣೆ ಬಿಡಿಸಿದ ಕಾಲಪುರುಷನ ಚಿತ್ರ ನನ್ನ ಚಿತ್ತದಲ್ಲಿ ಅಚ್ಚೊತ್ತಿಹೋಗಿತ್ತು. ಬೇರೆ ಯಾವ ಹಬ್ಬವೂ ಇಷ್ಟೊಂದು ಭಯಾನಕವಾಗಿರಲಿಲ್ಲ. ಬೇಂದ್ರೆಯವರ ಪದ್ಯ ಹೊಸ ಅರ್ಥಗಳನ್ನು ಧ್ವನಿಸಿತು.
ಕಾಲಪುರುಷ ತನ್ನ ಮಂತ್ರಿಮಂಡಲವನ್ನು ಹೇಗೆ ರಚಿಸಿದ್ದಾನೆಂದು ನೋಡೋಣ. ಭಟ್ಟರು ಮುಂದುವರಿಸಿದರು: “”ಮಿಥುನದಲ್ಲಿ ಗುರು ಇರುವುದರಿಂದ ಪ್ರಜೆಗಳಿಗೆ ಮಂತ್ರಿಗಳಿಂದ ಉಗ್ರವಾದ ಭೀತಿ; ರವಿಯು ಸೈನ್ಯಾಧಿಪತಿಯಾದ್ದರಿಂದ ರಾಜರು ಪರಸ್ಪರ ವೈರವುಳ್ಳವರಾಗುವರು; ಕುಜನು ಧಾನ್ಯಾಧಿಪತಿಯಾದ್ದರಿಂದ ಧಾನ್ಯವಿಲ್ಲದೆ ಕಂದಮೂಲಗಳು ಕಡಿಮೆಯಾಗಿ ದೇಶದಲ್ಲಿ ಯುದ್ಧ ಸಂಭವ ಮತ್ತು ರೋಗ ಸಾಧ್ಯತೆ ಇದೆ. ಈ ವರ್ಷ ರವಿಯು ಲೇಖಕನಾದ್ದರಿಂದ ಪ್ರಜೆಗಳ ಕ್ಷೊàಭೆಯಿಂದ ದೇಶ ಅಸಹಿಷ್ಣುತೆಯಿಂದ ತೊಳಲಾಡುತ್ತದೆ. ರಾಜ ಚಂದ್ರನಾದ್ದರಿಂದ ತುಸು ಮಂಗಲಕಾರ್ಯಗಳು ಗೋಚರಿಸುತ್ತವೆ. ಆದರೂ ಗ್ರಾಮಾಧಿಪತಿ ಶನಿಯಾದ್ದರಿಂದ ನೀಚರ ಬಲವು ಅಧಿಕವಾಗಿ ಗ್ರಾಮ-ಪಟ್ಟಣಗಳು ಹಗಲು ದರೋಡೆಗೆ ತುತ್ತಾಗುತ್ತವೆ; ಮಂತ್ರಿಗಳೇ ಪ್ರಜೆಗಳನ್ನು ವಂಚಿಸುತ್ತಾರೆ” ಒಟ್ಟಾರೆ ಈ ವರ್ಷ ಅನಿಷ್ಟಗಳೇ ಅಧಿಕ ಎಂದು ಮುಗಿಸಿದರು.
ವರ್ಷಕ್ಕೊಮ್ಮೆ ಮಂತ್ರಿಮಂಡಲದ ಪುನರ್ ಸಂಘಟನೆಯಾಗುತ್ತದೆ. ಅನೇಕ ಸಲ ಪ್ರತೀ ಗ್ರಹಕ್ಕೆ ಎರಡು-ಮೂರು ಖಾತೆಗಳ ಜವಾಬ್ದಾರಿ; ಅಥವಾ ಒಂದೇ ಖಾತೆಗೆ ಇಬ್ಬರು ಉಸ್ತುವಾರಿಗಳಿರುತ್ತಾರೆ. ರಾಜ ಮನೆತನದ ಆಡಳಿತ ಸಂಪ್ರದಾಯವಿದ್ದರೂ ಪ್ರಜಾಪ್ರಭುತ್ವದ ಮಾದರಿಯಲ್ಲಿ ಸಮಾನ ಅಧಿಕಾರ ಅವಕಾಶಗಳ ಹಂಚಿಕೆ ಇದೆ. ಪಾಳಿಯಂತೆ ಜವಾಬ್ದಾರಿಯ ನಿರ್ವಹಣೆಗೆ ಆದ್ಯತೆ ಇದೆ. ರಾಜ್ಯಪಾಲನೆಯನ್ನು ಮಂತ್ರಿಗಳ ಸ್ವಭಾವಕ್ಕಿಂತಲೂ ಕಾಲಧರ್ಮ ನಿರ್ಣಾಯಕ ನಿಯಂತ್ರಕವಾಗುತ್ತದೆ. ಎಲ್ಲವೂ ಹೈಕಮಾಂಡಾದ ಕಾಲಪುರುಷನ ಅಧೀನ. ವಿದ್ಯಾರ್ಥಿಗಳ ಸಚಿವ ಸಂಪುಟವನ್ನು ರಚಿಸುವ ನಮ್ಮ ಶಾಲಾ ಮಾಸ್ತರು ನನಗೆ ಕಾಲಪುರುಷನಂತೆ ಕಾಣುತ್ತಿದ್ದರು. ಆಕಾಶ ಆಸ್ಥಾನದಲ್ಲಿದ್ದುಕೊಂಡೇ ದರಬಾರು ನಡೆಸುವ ಸರಕಾರ ಮಂಡಿಸಿದ ಮುಂಗಡ ಪತ್ರಾನುಸಾರ ಅಮ್ಮ ಕುಟುಂಬದ ವಾರ್ಷಿಕ ಆರ್ಥಿಕ ಯೋಜನೆಯನ್ನು ರೂಪಿಸುತ್ತಿದ್ದಳು. ಮಳೆ, ಬೆಳೆ, ರೋಗ-ರುಜಿನ, ವ್ಯಾಪಾರ, ಮದುವೆ ಎಲ್ಲವೂ ಮುಂಜಾಗ್ರತಾ ಕ್ರಮಾನುಸಾರ ಜರುಗುತ್ತಿದ್ದವು.
ಗಪ್ಪು ಭಟ್ಟರು ಅಕ್ಕಿ, ತೆಂಗಿನ ಫಲವನ್ನು ಜೋಳಿಗೆಯಲ್ಲಿ ಸುರುವಿಕೊಂಡು ಕಾಣಿಕೆಯನ್ನು ಕಿಸೆಗೆ ಸೇರಿಸಿ “ಶುಭವಾಗಲಿ’ ಎಂದು ಹರಸಿ ಕೇರಿಯ ದಾರಿ ಹಿಡಿದರು. ಅಮ್ಮ ಮನೆಯ ವರಮಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಕುರಿತು ಯೋಚಿಸುತ್ತ ಒಳಗೆ ನಡೆದರೆ ನಾನು ಕಂಬಳಿ ಹೊದ್ದ ಎಮ್ಮೆ ಸವಾರ ಕಾಲಪುರುಷನನ್ನು ಚಿತ್ರಿಸಿಕೊಳ್ಳುತ್ತ ಅವನ ವಿರಾಟ ದರ್ಶನ ಶಾಲೆಯ ಹಾದಿಯಲ್ಲಿ ಆಗಬಹುದೆ ಎಂದು ಆಲೋಚಿಸುತ್ತ ಹೊರಗೆ ಬಂದೆ.
ಶ್ರೀಧರ ಬಳಗಾರ
ಫೊಟೊ : ಸತೀಶ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.