ಮಾವುತ-ಕವಾಡಿ ಮಕ್ಕಳ ಕಾನ್ವೆಂಟ್‌ಗೆ ಕಳುಹಿಸುವಂತಿಲ್ಲ!
Team Udayavani, Mar 20, 2018, 12:42 PM IST
ಮೈಸೂರು: ಆನೆ ಮಾವುತರು, ಕವಾಡಿಗಳೇ ನಿಮ್ಮ ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಕಳುಹಿಸಬೇಡಿ. ಇದರಿಂದ ಇಲಾಖೆ ಕೆಲಸಕ್ಕೆ ತೊಂದರೆಯಾಗುತ್ತಿದೆ! ಇಂತಹದೊಂದು ವಿಚಿತ್ರ ಸುತ್ತೋಲೆಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮುಖ್ಯಸ್ಥರು ಅರಣ್ಯಪಡೆ) ಪುನಟಿ ಶ್ರೀಧರ್ ಅವರು, ಮಾ.15ರಂದು ಹೊರಡಿಸಿದ್ದಾರೆ.
ಈ ಆದೇಶ ಜಾರಿಯಾದಲ್ಲಿ ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರ, ಕೊಡಗಿನ ದುಬಾರೆ, ಮತ್ತಿಗೋಡು, ಮೈಸೂರು ಜಿಲ್ಲೆಯ ಬಳ್ಳೆ, ದೊಡ್ಡ ಹರವೆ, ಚಾಮರಾಜ ನಗರ ಜಿಲ್ಲೆಯ ಬಿಆರ್‌ಟಿ, ಕೆ.ಗುಡಿ ಹಾಗೂ ಅಣಶಿ-ದಾಂಡೇಲಿ ಅರಣ್ಯದ ಆನೆ ಶಿಬಿರಗಳಲ್ಲಿನ ಮಾವುತರು, ಕವಾಡಿಗಳು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಕಳುಹಿಸುವಂತಿಲ್ಲ.
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ತಂದು ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂದು ಸರ್ಕಾರವೇ ಖಾಸಗಿ ಶಾಲೆಗಳಲ್ಲಿ ಆರ್‌ಟಿಇಯಡಿ ದಾಖಲಾಗುವ ಬಡ ವರ್ಗದ ಮಕ್ಕಳ ಶುಲ್ಕವನ್ನು ಭರಿಸುತ್ತಿದೆ. ಆದರೆ, ಈ ಸುತ್ತೋಲೆ ಮಾವುತರು, ಕವಾಡಿಗಳ ಮಕ್ಕಳು ಖಾಸಗಿ ಶಾಲೆಗೆ ಹೋಗುವಂತೆಯೇ ಇಲ್ಲ ಎಂದು ಹೇಳುತ್ತಿದೆ.
ಇಷ್ಟಕ್ಕೂ ಆನೆ ಶಿಬಿರಗಳಲ್ಲಿನ ಮಾವುತರು, ಕವಾಡಿಗಳ ಮಕ್ಕಳು ಭಾಷೆ ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ಶಾಲೆಗೆ ಹೋಗಲು ಹಿಂಜರಿಯುವುದೇ ಹೆಚ್ಚು. ಅದರ ಮಧ್ಯೆಯೂ ಗಿರಿಜನ ಆಶ್ರಮ ಶಾಲೆಗಳಿಗೆ ಮಕ್ಕಳನ್ನು ಕರೆತರುತ್ತಿರುವುದೇ ಹೆಚ್ಚು, ಎನ್ನುತ್ತಾರೆ ಆಶ್ರಮ ಶಾಲೆ ಶಿಕ್ಷಕರುಗಳು. ಪರಿಸ್ಥಿತಿ ಹೀಗಿರುವಾಗ ಪಟ್ಟಣದ ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕ ಪಾವತಿಸಿ ಮಾವುತರು, ಕವಾಡಿಗಳ ಮಕ್ಕಳು ದಾಖಲಿಸುವುದೆಲ್ಲಿಂದ ಬಂತು.
ಎಲ್ಲೋ ಕೆಲವರು ಆರ್‌ಟಿಇ ಸೀಟಿಗೆ ಅರ್ಜಿ ಹಾಕಿರಬಹುದು, ಅದಕ್ಕೇ ಈ ರೀತಿ ಹೇಳಿರಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಮಾವುತರು. ಸರ್ಕಾರಿ ಶಾಲೆಗಳಲ್ಲಿ ಓದಿಸಬೇಕು ನಿಜ. ಆದರೆ, ಎಷ್ಟು ಜನ ಐಎಫ್ಎಸ್ ಅಧಿಕಾರಿಗಳು, ಅರಣ್ಯಾಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ಎಂದು ಪ್ರಶ್ನಿಸುವ ಸಾಮಾಜಿಕ ಕಾರ್ಯಕರ್ತರು,
ಅಧಿಕಾರಿಗಳಿಗಿಲ್ಲದ ನಿರ್ಬಂಧ, ಮಾವುತರು-ಕವಾಡಿಗಳಿಗೇಕೆ? ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದಾಗ ಇಲಾಖಾ ಕೆಲಸಗಳಿಗೆ ತೊಂದರೆಯಾಗುವ ಪ್ರಶ್ನೆಯೇ ಬರುವುದಿಲ್ಲ. ಹೀಗಾಗಿ ಅರಣ್ಯಾಧಿಕಾರಿಗಳು ಕುಟುಂಬ ಸಮೇತ ಕೇಂದ್ರ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸುವಂತೆ ಮೊದಲು ಸುತ್ತೋಲೆ ಹೊರಡಿಸಲಿ ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸುತ್ತಾರೆ.
ಸುತ್ತೋಲೆಯ ಅಂಶಗಳಿವು: ಆನೆ ಶಿಬಿರಗಳಲ್ಲಿ ಹಾಗೂ ಮತ್ತಿತರ ಅರಣ್ಯ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆನೆ ಕವಾಡಿ ಮತ್ತು ಆನೆ ಮಾವುತರುಗಳು ಕರ್ತವ್ಯ ನಿರ್ವಹಿಸುತ್ತಿರುವ ಸಮೀಪದಲ್ಲಿ ಬಹಳಷ್ಟು ಸರ್ಕಾರಿ ಶಾಲೆಗಳಿದ್ದರೂ ಸಹ ತಮ್ಮ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗಳಿಗೆ ದಾಖಲು ಮಾಡದೆ, ಕರ್ತವ್ಯ ನಿರ್ವಹಿಸುತ್ತಿರು ಅಥವಾ ವಾಸಸ್ಥಳದಿಂದ ದೂರವಿರುವ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದು,
ಇದರಿಂದಾಗಿ ದಿನನಿತ್ಯದ ಸರ್ಕಾರಿ ಕೆಲಸ-ಕಾರ್ಯಗಳ ಮೇಲೆ ಹಾಗೂ ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವುದು ತಿಳಿದು ಬಂದಿರುತ್ತದೆ. ಆದುದರಿಂದ ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಆನೆ ಶಿಬಿರಗಳು ಹಾಗೂ ಮತ್ತಿತರ ರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆನೆ ಕವಾಡಿಗಳು
ಮತ್ತು ಆನೆ ಮಾವುತರುಗಳು ತಮ್ಮ ಮಕ್ಕಳನ್ನು ಅವರುಗಳು ಕರ್ತವ್ಯ ನಿರ್ವಹಿಸುತ್ತಿರುವ ಅಥವಾ ವಾಸಸ್ಥಳಕ್ಕೆ ಸಮೀಪವಿರುವ ಸರ್ಕಾರಿ ಶಾಲೆಗಳಿಗೆ ಮಾತ್ರ ದಾಖಲಿಸಬೇಕೆಂದು ಆದೇಶಿಸಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್ ಅವರು, ಈ ಆದೇಶವನ್ನು ಎಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೆ ತಂದು ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ತಮ್ಮ ಮಕ್ಕಳನ್ನು ಯಾವ ಶಾಲೆಯಲ್ಲಿ ಓದಿಸಬೇಕು ಎಂಬುದನ್ನು ಪೋಷಕರು ನಿರ್ಧರಿಸಬೇಕೇ ಹೊರತು, ಅಧಿಕಾರಿಗಳಲ್ಲ. ಇದು ಸರಿಯಾದ ನಿರ್ಧಾರವಲ್ಲ. ಮಾವುತರು, ಕವಾಡಿಗಳು ಈ ಆದೇಶವನ್ನು ವಿರೋಧಿಸಿ ಪ್ರತಿಭಟನೆ ಮಾಡಬೇಕು.
-ಡಾ.ಎಸ್.ಶ್ರೀಕಾಂತ್, ಸಂಚಾಲಕರು, ರಾಜ್ಯ ಗಿರಿಜನ ಕ್ರಿಯಾಕೂಟ
ಬಹಳಷ್ಟು ಐಎಫ್ಎಸ್ ಅಧಿಕಾರಿಗಳು ಅರಣ್ಯ, ವನ್ಯಜೀವಿ ಕಾಯುವ ಬದಲಿಗೆ ಬೆಂಗಳೂರಿನ ಅರಣ್ಯಭವನ ಕಾಯುತ್ತಿದ್ದು, ಅವರ ಮಕ್ಕಳೆಲ್ಲಾ ಅರಣ್ಯ ಭವನ ಸಮೀಪದ ಸರ್ಕಾರಿ ಶಾಲೆಗಳಲ್ಲೇ ಓದುತ್ತಿದ್ದಾರೆಯೇ? ಮಾವುತರು, ಕವಾಡಿಗಳ ಮಕ್ಕಳಿಗೇಕೆ ಈ ನಿರ್ಬಂಧ. ಇದೊಂದು ಪ್ರಗತಿವಿರೋಧಿ ಧೋರಣೆ.
-ಎಂ.ಬಿ.ಪ್ರಭು, ಸಾಮಾಜಿಕ ಕಾರ್ಯಕರ್ತ.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.